ನೂರು ವರ್ಷ ಜತೆಯಾಗಿ ಬಾಳಬೇಕೆನ್ನುವ ನಿರೀಕ್ಷೆ ಇಟ್ಟುಕೊಂಡು ಮದುವೆಯಾಗುವ ಜೋಡಿ ಕೆಲವೇ ವರ್ಷಗಳಲ್ಲಿ ವಿಚ್ಛೇದನಕ್ಕೆ ಮುಂದಾಗುವುದು ಕಂಡುಬರುತ್ತದೆ. ಇದಕ್ಕೆ ಹಲವು ಕಾರಣ. ದಂಪತಿಯಲ್ಲಿ ಯಾರಾದರೂ ಒಬ್ಬರು ಮಾಡುವ ತಪ್ಪು ಇಬ್ಬರನ್ನೂ ದೂರ ಮಾಡುತ್ತದೆ.
ದಂಪತಿಯಲ್ಲಿ (Couple) ಜಗಳವಾಗುವುದು ಸಾಮಾನ್ಯ. ಯಾವುದೋ ಒಂದು ವಿಚಾರಕ್ಕೆ ಜಗಳ ಮಾಡಿಕೊಳ್ಳುವುದು, ಪರಸ್ಪರ ಭಿನ್ನಾಭಿಪ್ರಾಯಗಳನ್ನು (Difference) ಹಂಚಿಕೊಂಡು ಬಳಿಕ ಅಲ್ಲಿಯೇ ಅದನ್ನು ಬಿಡುವುದು ಸಾಮಾನ್ಯ. ಆದರೆ, ಕೆಲವೊಮ್ಮೆ ಈ ಭಿನ್ನಾಭಿಪ್ರಾಯಗಳು ಅಷ್ಟಕ್ಕೇ ನಿಲ್ಲುವುದಿಲ್ಲ, ವಿಚ್ಛೇದನದವರೆಗೂ (Divorce) ಹೋಗಿಬಿಡುತ್ತವೆ. ಚಿಕ್ಕಪುಟ್ಟ ವಿಷಯಗಳಿಗೆ ಕಚ್ಚಾಡುತ್ತ, ಯಾವಾಗ ನೋಡಿದರೂ ಪರಸ್ಪರ ದೂರುಗಳ (Complaint) ಸುರಿಮಳೆ ಸುರಿಸುತ್ತ, ಮನೆಯವರನ್ನೂ ಇಕ್ಕಟ್ಟಿಗೆ ಸಿಲುಕಿಸುವ ಜೋಡಿಗಳು ಒಂದು ರೀತಿ. ಅವರಿಗೆ ಪ್ರಬುದ್ಧತೆ ಇರುವುದಿಲ್ಲ. ಆದರೆ, ಎಲ್ಲ ಜೋಡಿಗಳೂ ಹಾಗಿರುವುದಿಲ್ಲ. ಸಾಕಷ್ಟು ಪ್ರಬುದ್ಧರಾಗಿರುತ್ತಾರೆ. ಆದರೂ ಅವರು ವಿಚ್ಛೇದನದ ಮೊರೆ ಹೋಗುವುದನ್ನು ನಾವು ನೋಡಬಹುದು. ಮದುವೆಯಾದ 4-5 ವರ್ಷಗಳಲ್ಲಿ ವಿಚ್ಛೇದನವಾಗುವ ದಂಪತಿ ಹೆಚ್ಚು.
ವಿಚ್ಛೇದನಕ್ಕೆ ಕಾರಣವಾಗುವ ಕೆಲವು ಗಂಭೀರ ವಿಚಾರಗಳಿವೆ. ದಂಪತಿಯಲ್ಲಿ ಯಾರಿಗೋ ಒಬ್ಬರು ಇಂತಹ ತಪ್ಪುಗಳನ್ನು ಮಾಡಿದರೂ ಸಾಕು, ದಾಂಪತ್ಯ ಮುರಿದುಬೀಳುತ್ತದೆ. ಹೀಗೆ ವಿಚ್ಛೇದನವಾದ ಅನೇಕರು, “ಸಾಕಷ್ಟು ಸಮಯ ನೀಡಿದೆ. ಆದರೂ ಸುಧಾರಿಸಿಕೊಳ್ಳಲಿಲ್ಲ. ನಾನು ಜೀವನಪೂರ್ತಿ ಹೇಗೆ ಹೊಂದಾಣಿಕೆ ಮಾಡಿಕೊಂಡಿರಲಿ?’ಎಂದು ಪ್ರಶ್ನಿಸುವುದನ್ನು ಕಾಣಬಹುದು. ಹೀಗಾಗಿ, ಅಂತಹ ತಪ್ಪುಗಳನ್ನು ಯಾರೂ ಮಾಡಬಾರದು. ಅಷ್ಟಕ್ಕೂ ಆ ತಪ್ಪುಗಳು ಯಾವುವು ಎಂದು ನೋಡೋಣ.
• ವಿವಾಹೇತರ ಸಂಬಂಧ (Extra Marital Affairs)
ಪತಿಯಾಗಲೀ ಪತ್ನಿಯಾಗಲೀ ವಿವಾಹೇತರ ಸಂಬಂಧ ಹೊಂದಿದ್ದಾಗ ದಾಂಪತ್ಯ ಮುರಿದು ಬೀಳುವುದು ಸಹಜ. ಬಹಳಷ್ಟು ಜೋಡಿ ಬೇರೆಯಾಗುವುದು ಇದೇ ಕಾರಣಕ್ಕೆ. ವಿವಾಹೇತರ ಸಂಬಂಧ ಹೊಂದಿರುವ ವ್ಯಕ್ತಿಯ ಮೇಲೆ ನಂಬಿಕೆ, ಭರವಸೆ ಮೂಡುವುದಿಲ್ಲ.
ದಾಂಪತ್ಯದಲ್ಲಿ ಹೀಗಾದ್ರೆ ಡಿವೋರ್ಸ್ ಪಕ್ಕಾ
• ಹಣಕಾಸು ಸಮಸ್ಯೆ (Financial Problem)
ಇಂದಿನ ದಿನಗಳಲ್ಲಿ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳೂ ವಿಚ್ಛೇದನಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿವೆ. ಮದುವೆಗೆ ಮುನ್ನ ತಿಳಿಸಿದಷ್ಟು ಸಂಬಳ ಪತಿಗೆ ಇಲ್ಲದಿರುವುದು, ಸ್ವತಃ ಪತಿಯೇ ಹಣಕಾಸಿಗಾಗಿ ಇನ್ನೊಬ್ಬರನ್ನು ಅವಲಂಬಿಸಿರುವ ಸನ್ನಿವೇಶಗಳಲ್ಲಿ ಸಾಕಷ್ಟು ಹೆಣ್ಣುಮಕ್ಕಳು ವಿಚ್ಛೇದನಕ್ಕೆ ಮುಂದಾಗುತ್ತಾರೆ. ಪತ್ನಿ (Wife) ಹೆಚ್ಚು ದುಡಿದು, ಪತಿ (Husband) ಕಡಿಮೆ ದುಡಿಯುತ್ತಿರುವಾಗ ಕೀಳರಿಮೆ ಮೂಡುವುದೂ ಇನ್ನೊಂದು ಕಾರಣ.
• ಯಾವುದಾದರೂ ಚಟ (Addiction)
ಆಲ್ಕೋಹಾಲ್, ಧೂಮಪಾನ, ಡ್ರಗ್ಸ್, ಜೂಜು ಯಾವುದಾದರೊಂದು ಚಟದಲ್ಲಿರುವ ವ್ಯಕ್ತಿಯಿಂದ ಅವರ ಸಂಗಾತಿ ದೂರವಾಗುವುದು ಹೆಚ್ಚು. ಅಂಥವರನ್ನು ಎಷ್ಟು ಪ್ರಯತ್ನಿಸಿದರೂ ಸುಧಾರಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ಅನೇಕರ ಅನುಭವ.
• ಸರಿಯಾದ ಸಂವಹನದ (Communication) ಕೊರತೆ
ಎಷ್ಟೋ ಬಾರಿ ದಂಪತಿಗಳಲ್ಲಿ ಸೂಕ್ತ ಸಂವಹನ ಇರುವುದಿಲ್ಲ. ಈ ಸಮಯದಲ್ಲಿ ಮನೆಯ ಇತರ ಸದಸ್ಯರಿಂದಾಗುವ ಗೊಂದಲ, ಅವರ ಮಧ್ಯಪ್ರವೇಶದಿಂದಾಗುವ ಅನಗತ್ಯ ಕೋಲಾಹಲದಿಂದಾಗಿ ಮದುವೆ ಮರಿದುಬೀಳುವುದು ಹೆಚ್ಚು. ಹೀಗಾಗಿ, ದಂಪತಿಳಲ್ಲಿ ಪರಸ್ಪರ ಉತ್ತಮ ಸಂವಹನ, ಪಾರದರ್ಶಕತೆ ಇರಬೇಕು.
• ಅಧಿಕ ನಿರೀಕ್ಷೆ (Over Expectation)
ಅತಿಯಾದ ನಿರೀಕ್ಷೆಯೂ ವಿಚ್ಛೇದನಕ್ಕೆ ಕಾರಣ ಎಂದರೆ ಅಚ್ಚರಿಯಾಗಬಹುದು. ಸಾಮಾನ್ಯವಾಗಿ ಪತಿ-ಪತ್ನಿ ಪರಸ್ಪರರಿಂದ ಅತಿಯಾದ ನಿರೀಕ್ಷೆ ಹೊಂದಿರುತ್ತಾರೆ. ನಿರೀಕ್ಷೆ ಎಂದಿಗೂ ವಾಸ್ತವವಾಗಿದ್ದರೆ ಚೆಂದ. ಆದರೆ, ಸಿನಿಮಾದಲ್ಲಿ ತೋರಿಸುವಂತಹ ರೋಮ್ಯಾನ್ಸ್, ಅಷ್ಟೇ ಅದ್ದೂರಿಯ ಜೀವನಶೈಲಿ ಅನುಸರಿಸುವುದು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ಭ್ರಮನಿರಸನಕ್ಕೆ ಒಳಗಾಗುವ ಮಂದಿ ವಿಚ್ಛೇದನಕ್ಕೂ ಮುಂದಾಗುತ್ತಾರೆ.
ಮದ್ವೆಯಾಗಿ ವರ್ಷ ಆರಾದರೂ ಆಗಿಲ್ಲವಿನ್ನೂ ಫಸ್ಟ್ ನೈಟ್
• ಕೌಟುಂಬಿಕ ಜವಾಬ್ದಾರಿಯೂ (Family Responsibility) ಕಾರಣ
ಬಹಳಷ್ಟು ದಂಪತಿ ಕುಟುಂಬದ ಜವಾಬ್ದಾರಿಗಳ ಕಾರಣದಿಂದಲೂ ದೂರವಾಗುತ್ತಾರೆ. ಪತಿ-ಪತ್ನಿ ಇಬ್ಬರೂ ಕೆಲಸದಲ್ಲಿರುವಾಗ ಮನೆಯ ಜವಾಬ್ದಾರಿಗಳನ್ನು ಹಂಚಿಕೆ ಮಾಡಿಕೊಳ್ಳುವುದು ಉತ್ತಮ. ಯಾರಾದರೂ ಒಬ್ಬರು ತೀರ ಸೋಮಾರಿಗಳಾಗಿದ್ದು, ಸರಿಯಾದ ಜೀವನಶೈಲಿ ಅನುಸರಿಸದೆ ಇದ್ದಾಗ ಮತ್ತೊಬ್ಬರು ವಿಚ್ಛೇದನ ಬಯಸುವುದು ಸಹಜ. ಹಾಗೆಯೇ, ಪತ್ನಿಗೆ ಆಕೆಯ ತವರಿನ ಜವಾಬ್ದಾರಿ ಇರುವಾಗ, ಪತಿಗೆ ಆತನ ಪಾಲಕರ ಜವಾಬ್ದಾರಿ ಇರುವ ಕಾರಣದಿಂದಲೂ ಕುಟುಂಬದಲ್ಲಿ ವಿರಸ ಮೂಡಿ, ದೂರವಾಗುವವರೂ ಇದ್ದಾರೆ. ಸರಿಯಾದ ಮಾತುಕತೆಯ ಮೂಲಕ, ಇಂತಹ ಜವಾಬ್ದಾರಿ ನಿರ್ವಹಿಸುತ್ತಲೇ ಸಂಸಾರವನ್ನೂ ಸುಂದರವಾಗಿಟ್ಟುಕೊಳ್ಳಲು ಸಾಧ್ಯ.
• ಮನೆಯಲ್ಲಿ ಗೌರವ (Respect) ಇಲ್ಲದಿರುವುದು
ಕೆಲವು ಕುಟುಂಬಗಳಲ್ಲಿ ಮಹಿಳೆಯರ ಸ್ಥಾನ ನಗಣ್ಯವಾಗಿರುತ್ತದೆ. ಹಾಗೂ ಸೊಸೆಯನ್ನು ಅತಿಯಾಗಿ ದೂಷಿಸಲಾಗುತ್ತದೆ. ಎಲ್ಲರೆದುರು ಅವಮಾನ ಮಾಡುವುದು, ಮಹಿಳೆಯರನ್ನು ಕೀಳಾಗಿ ನೋಡುವುದು ಇರುತ್ತದೆ. ಅಂತಹ ಸಮಯದಲ್ಲಿ ಸುಶಿಕ್ಷಿತ ಹೆಣ್ಣುಮಕ್ಕಳು ವಿಚ್ಛೇದನಕ್ಕೆ ಮುಂದಾಗುತ್ತಾರೆ.