Latest Videos

'ನಿಮಗೆಲ್ಲ ಒಂದು ಸುದ್ದಿ, ಆದರೆ ನಮ್ಮ ಜಗತ್ತೇ ಕುಸಿದಿತ್ತು' ಪೋರ್ಶೆ ಕಾರು ಅಪಘಾತದಲ್ಲಿ ಅಸು ನೀಗಿದ ಅನೀಶ್ ಕುಟುಂಬದ ರೋಧನ

By Reshma RaoFirst Published May 25, 2024, 4:40 PM IST
Highlights

ಪುಣೆ ಪೋರ್ಶೆ ಕಾರು ಅಪಘಾತದಲ್ಲಿ ಅಸು ನೀಗಿದ 24 ವರ್ಷದ ಅನೀಶ್ ಎಂಬಾತನ ಕುಟುಂಬ ಸದಸ್ಯರು ಈ ಸಾವು ನ್ಯಾಯವೇ ಕೇಳುತ್ತಿದ್ದಾರೆ. ಅಫೀಶಿಯಲ್ ಹ್ಯೂಮನ್ಸ್ ಆಫ್ ಬಾಂಬೆ ಪೇಜಿನಲ್ಲಿ ಅವರು ತಮ್ಮ ದುಃಖ ತೋಡಿಕೊಂಡಿದ್ದಾರೆ. 

ಪುಣೆ ಪೋರ್ಶೆ ಕಾರು ಅಪಘಾತದಲ್ಲಿ ಅಸು ನೀಗಿದ ಈರ್ವರಲ್ಲಿ ಒಬ್ಬ- 24 ವರ್ಷದ ಅನೀಶ್ ಎಂಬಾತನ ಕುಟುಂಬ ಸದಸ್ಯರು ಈ ಸಾವು ನ್ಯಾಯವೇ ಕೇಳುತ್ತಿದ್ದಾರೆ. ಅಫೀಶಿಯಲ್ ಹ್ಯೂಮನ್ಸ್ ಆಫ್ ಬಾಂಬೆ ಪೇಜಿನಲ್ಲಿ ಅವರು ತಮ್ಮ ದುಃಖ ತೋಡಿಕೊಂಡಿದ್ದಾರೆ. ಆತನ ನಡೆನುಡಿ ಏನಿತ್ತು, ಕುಟುಂಬಕ್ಕೆ ಆತ ಎಷ್ಟು ಮುಖ್ಯವಾಗಿದ್ದ ಎಂಬುದನ್ನು ವಿವರಿಸಿದ್ದಾರೆ. ದುರ್ಘಟನೆಯ ದಿನ ಮನೆಯ ಪರಿಸ್ಥಿತಿ ಹೇಳಿಕೊಂಡಿದ್ದಾರೆ. ಅಪಘಾತ ಮಾಡಿದವನು ಅಪ್ರಾಪ್ತ ಮತ್ತು ಶ್ರೀಮಂತ ಎಂಬ ಕಾರಣಕ್ಕೆ ಆತನನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ ಎಂಬುದು ಸಂತ್ರಸ್ತರ ಕುಟುಂಬಕ್ಕೆ ಹೇಗಿರುತ್ತದೆ ತಿಳಿಸಿದ್ದಾರೆ.

ಇದರೊಂದಿಗೆ ಅಫೀಶಿಯಲ್ ಹ್ಯೂಮನ್ಸ್ ಆಫ್ ಬಾಂಬೆ ಪುಟದಲ್ಲಿ ಆತನ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಮತ್ತು ಬರಹ ನೆಟ್ಟಿಗರ ಕಣ್ಣಲ್ಲಿ ನೀರು ತರಿಸುತ್ತಿದೆ. 12 ಲಕ್ಷಕ್ಕೂ ಅಧಿಕ ಜನರು ಈ ಪೋಸ್ಟ್ ಲೈಕ್ ಮಾಡಿದ್ದಾರೆ. 15 ಸಾವಿರಕ್ಕೂ ಅಧಿಕ ಜನ ಕಾಮೆಂಟ್ ಮಾಡಿದ್ದಾರೆ.  ಜಗತ್ತು ಎಷ್ಟು ಕ್ರೂರ ಎಂದು ಹಲವರು ನೊಂದಿದ್ದಾರೆ. 
ಈ ಜಗತ್ತು ಕೇವಲ ಶ್ರೀಮಂತರಿಗೆ, ನಾವೆಲ್ಲ ಅವರ ದಾಳವಷ್ಟೇ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಅನೀಶ್‌ಗೆ ನ್ಯಾಯ ಸಿಗಲೇಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

ಅಲ್ಲಿ ಅನೀಶನ ಚಿಕ್ಕಮ್ಮ ಆ ದಿನದ ಬಗ್ಗೆ ಹೇಳಿರುವುದಿಷ್ಟು..

‘ಅನೀಷ್ಗೆ ಆಕ್ಸಿಡೆಂಟ್ ಆಗಿದೆ’ ರಾತ್ರಿ ನನಗೆ ಕರೆ ಮಾಡಿದ ಅಕ್ಕ, ಅನೀಶ್‌ನ ತಾಯಿ ಅಳುತ್ತಾ ಹೇಳಿದಳು. ನಾವು ಫ್ಲೈಟ್‌ಗಳಿಗಾಗಿ ಹುಡುಕಿದೆವು, ಆದರೆ ಯಾವುದೂ ಲಭ್ಯವಿರದಿದ್ದರಿಂದ ನಾವು ಉಮಾರಿಯಾದಿಂದ ರಸ್ತೆಯ ಮೂಲಕ ಸುಮಾರು 5:30 AMಕ್ಕೆ ಹೊರಟೆವು.

ಪೊರ್ಶೆ ಕಾರು ಅಪಘಾತಕ್ಕೂ ಮೊದಲು ಪಾರ್ಟಿಗಾಗಿ 48,000 ರೂ ಖರ್ಚು ಮಾಡಿದ್ದ ಉದ್ಯಮಿ ಪುತ್ರ!
 

ಆದಷ್ಟು ಬೇಗ ಪುಣೆಗೆ ಹೋಗಬೇಕಿತ್ತು. ನಮ್ಮ ಅನೀಶ್ ಗಂಭೀರ ಸ್ಥಿತಿಯಲ್ಲಿದ್ದ. ಅವನು ಇಲ್ಲಿಗೆ ಹೇಗೆ ತಲುಪಿದನು? ಅವನು ತುಂಬಾ ಮುದ್ದು ಮತ್ತು ಕಾಳಜಿಯುಳ್ಳ ಮಗನಾಗಿದ್ದ. ಅವನು ಯಾವಾಗಲೂ, 'ಅಮ್ಮಾ, ಅಪ್ಪಂಗೋಸ್ಕರ ಏನಾದ್ರೂ ದೊಡ್ಡದಾಗಿ ಮಾಡ್ಬೇಕು' ಎಂದು ಹೇಳುತ್ತಿದ್ದ. ಹಾಗಾಗಿ ಅವನು ಪುಣೆಯ ಪ್ರತಿಷ್ಠಿತ ಕಾಲೇಜಿಗೆ ಸೇರಿ ಮನೆಯಿಂದ ದೂರ ಹೋಗಲು ನಿರ್ಧರಿಸಿದ. ನಾವೆಲ್ಲರೂ ತುಂಬಾ ದುಃಖಿತರಾಗಿದ್ದೆವು, ಆದರೆ ಅವನು, 'ನೆನಪಾದಾಗೆಲ್ಲ, ನಾನು ಮನೆಗೆ ಬರುತ್ತೇನೆ' ಎಂದು ಹೇಳುತ್ತಿದ್ದ ಮತ್ತು ಆಗಾಗ್ಗೆ ಭೇಟಿ ನೀಡುತ್ತಿದ್ದ. 

ಅವನು ಸಂಪಾದಿಸಲು ಪ್ರಾರಂಭಿಸಿದ ನಂತರ, ಅವನು ತನ್ನ ಕಿರಿಯ ಸಹೋದರ ದೇವುವಿನ ಜವಾಬ್ದಾರಿಯನ್ನು ಸಹ ತೆಗೆದುಕೊಂಡ. ಅವನು ತುಂಬಾ ಒಳ್ಳೆಯ ಮಗನಾಗಿದ್ದ. ಮತ್ತು ಈಗ ಅವನು ನೋವಿನಲ್ಲಿದ್ದ ಮತ್ತು ಅವನ ಸುತ್ತಲೂ ಯಾರೂ ಇರಲಿಲ್ಲ. ಅವನು ಚೆನ್ನಾಗಿರಲಿ ಎಂದು ಪ್ರಾರ್ಥಿಸುತ್ತಲೇ ಇದ್ದೆವು.

ಆದರೆ ಅಣ್ಣ ಇನ್ನಿಲ್ಲ ಎಂದು ದೇವು ಅಳುತ್ತಾ ಕರೆ ಮಾಡಿದಾಗ ನಾವೆಲ್ಲ ಒದ್ದಾಡಿದೆವು. ನಮಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಅಮ್ಮನಿಗೆ ಈಗಲೇ ಹೇಳಬೇಡಿ ಎಂದಾತ ಹೇಳಿದ.

'ಹೀಗೆ ಹೇಗೆ ಮಾಡೋದು?' ಎಂಬ ಆಲೋಚನೆಗಳು ನಮ್ಮನ್ನು ಕಾಡುತ್ತಲೇ ಇದ್ದವು. 

ನಾವು ದೇವು ಜೊತೆಗೆ ಸಂಪರ್ಕದಲ್ಲಿದ್ದೆವು ಮತ್ತು ಅನೀಶ್‌ಗೆ ಡಿಕ್ಕಿ ಹೊಡೆದ ಕಾರನ್ನು ಸುಮಾರು 18 ವರ್ಷ ತಲುಪದವನೊಬ್ಬ ಚಲಾಯಿಸುತ್ತಿದ್ದನು. ಹಾಗಾದರೆ ಅಪ್ರಾಪ್ತ ವಯಸ್ಸಿನ ಚಾಲಕನ ನಿಯಂತ್ರಣ ತಪ್ಪಿದ ಕಾರಣ ನಮ್ಮ ಅನೀಶ್ ಸತ್ತಿದ್ದಾನೆಯೇ?

ಪೋರ್ಶೆ ಕಾರು ಹತ್ತಿಸಿ ಇಬ್ಬರ ಕೊಂದ ಬಿಲ್ಡರ್ ಪುತ್ರನಿಗೆ ಬಿರಿಯಾನಿ, ಪಿಜ್ಜಾ ಕೊಟ್ರಾ ಪೊಲೀಸರು?
 

ನಮ್ಮ ಅನೀಶ್ ನನ್ನು ಇಡಲು ಫ್ರೀಜರ್ ಜಾಗವೂ ಸಿಗಲಿಲ್ಲ. ದೇವು ಅನೀಶ್‌ನ ಶವವನ್ನು ನಮ್ಮ ಮನೆಗೆ ಸಾಗಿಸಲು ಆಂಬ್ಯುಲೆನ್ಸ್‌ನ ವ್ಯವಸ್ಥೆ ಮಾಡಿದ. ಆಂಬ್ಯುಲೆನ್ಸ್‌ನಲ್ಲಿ ಶವಕ್ಕಾಗಿ ವ್ಯವಸ್ಥೆಗಳಿದ್ದರೂ, ಅನೀಶ್‌ನ ದೇಹವು ಈಗಾಗಲೇ ಕೊಳೆಯಲು ಪ್ರಾರಂಭಿಸಿತ್ತು. ಏಕೆಂದರೆ ಅದು ಅವನ ಮರಣದ ನಂತರ ಸುಮಾರು 15 ಗಂಟೆಗಳ ಕಾಲ ಹೊರಗಿತ್ತು.

ಅಕ್ಕನಿಗೆ ಮಗ ಸತ್ತಿದ್ದಾನೆಂದೇ ತಿಳಿದಿರಲಿಲ್ಲ. ಆದರೀಗ ಅವನನ್ನು ಅರ್ಧ ಕೊಳೆವ ಸ್ಥಿತಿಯಲ್ಲಿ ಅವಳು ನೋಡುತ್ತಿದ್ದಳು. ಆಕೆಯ ಅಳು ನಿಲ್ಲಿಸಲು ಅಸಾಧ್ಯವಾಗಿತ್ತು. ಆತನನ್ನು ಕೊನೆಯ ಬಾರಿ ಭೇಟಿಯಾದಾಗ ಪುಣೆಯಲ್ಲಿ ಭೇಟಿ ನೀಡಿದ ಕೆಫೆಗಳ ಬಗ್ಗೆ ಹೇಳುತ್ತಿದ್ದ. ಆದರೀಗ ಅವನನ್ನು ಸ್ಟ್ರೆಚರ್ ಮೇಲೆ ಮಲಗಿಸಿದ್ದರು. 

2 ದಿನಗಳ ಹಿಂದೆ ನಾವು ಅವನ ಚಿತೆಗೆ ಬೆಂಕಿ ಹಚ್ಚುವ ಮುಂಚೆಯೇ, ಅವನಿಗೆ ಇದನ್ನು ಮಾಡಿದ ಅಪ್ರಾಪ್ತನಿಗೆ ಪ್ರಬಂಧ ಬರೆಯುವ ಕನಿಷ್ಠ ಶಿಕ್ಷೆಯನ್ನು ನೀಡಿ ಬಿಡಲಾಗಿದೆ ಎಂದು ನಮಗೆ ತಿಳಿಯಿತು. ಇದು ನಿಮಗೆ ನ್ಯಾಯಯುತವಾಗಿ ತೋರುತ್ತಿದೆಯೇ?
ಅವನಿಗೆ ಕೇವಲ 24 ವರ್ಷ, ಅವನ ಮುಂದೆ ಇಡೀ ಜೀವನವಿತ್ತು. ಅವನು ಕಳೆದುಕೊಂಡ ಜೀವಮಾನಕ್ಕೆ 300 ಪದಗಳ ಪ್ರಬಂಧವು ಸಾಕಾಗಿದೆಯೇ?

 

click me!