ತಾಯಿ ಮಮತೆಗೆ ಸಾಟಿಯುಂಟೇ..ಕಳೆದುಹೋದ ಮರಿಗಾಗಿ ಮರಳಿ ಗ್ರಾಮಕ್ಕೆ ಬಂದ ಚಿರತೆ

By Vinutha PerlaFirst Published May 20, 2023, 1:05 PM IST
Highlights

ತಾಯಿ ಮಮತೆಗೆ ಸಾಟಿಯುಂಟೇ..ಅದು ಮನುಷ್ಯನಾದರೂ ಸರಿ, ಪ್ರಾಣಿಯಾದರೂ ಸರಿ. ಹಾಗೆಯೇ ಚಿರತೆ ತನ್ನ ಕಳೆದುಹೋದ ಮರಿಗಾಗಿ ಹುಡುಕಾಡಿದ ದೃಶ್ಯ ಜನರನ್ನು ಭಾವುಕರನ್ನಾಗಿಸಿತು. ವಡೋದರಾದ ವಾಘೋಡಿಯಾ ತಾಲೂಕಿನಲ್ಲಿಈ ಘಟನೆ ನಡೆಯಿತು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ವಡೋದರಾ: ಬೆಕ್ಕು, ನಾಯಿಯನ್ನು ಜನರು ಇಷ್ಟಪಡುತ್ತಾರೆ. ಮನೆಯಲ್ಲಿ ಸಾಕುತ್ತಾರೆ. ಆದರೆ ಇತರ ಕಾಡುಪ್ರಾಣಿಗಳು ಜನರಲ್ಲಿ ಭೀತಿ ಮೂಡಿಸುತ್ತವೆ. ಹುಲಿ, ಚಿರತೆ ಮೊದಲಾದ ಪ್ರಾಣಿಗಳು ಪ್ರೀತಿಯ ಭಾವನೆಯನ್ನು ಮೂಡಿಸುವ ಬದಲು ಆತಂಕಕ್ಕೆ ಕಾರಣವಾಗುತ್ತವೆ. ಆದರೆ ಗುಜರಾತ್‌ನ ವಡೋದರಾದಲ್ಲಿ ಮಾತ್ರ ಚಿರತೆ ತನ್ನ ಕಳೆದುಹೋದ ಮರಿಗಾಗಿ ಹುಡುಕಾಡಿದ ದೃಶ್ಯ ಜನರನ್ನು ಭಾವುಕರನ್ನಾಗಿಸಿತು. ವಡೋದರಾದ ವಾಘೋಡಿಯಾ ತಾಲೂಕಿನಲ್ಲಿಈ ಘಟನೆ ನಡೆಯಿತು. ಇಲ್ಲಿನ ಜನರು ಚಿರತೆ ಮತ್ತು ಚಿರತೆ ಮರಿಯ ಪುನರ್ಮಿಲನದ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾದರು.

ಕಳೆದ ನಾಲ್ಕು ದಿನಗಳಿಂದ ಕಾದಿದ್ದ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲು ಜನರು ಒಂದೆಡೆ ಸೇರಿದ್ದರು. ಜಾಫ್ರಾಪುರ ಗ್ರಾಮದಲ್ಲಿ ಹೆಣ್ಣು ಚಿರತೆ (Leopard) ರಾತ್ರಿ ಹಿಂಜರಿಯುತ್ತಲೇ ಜನರು ಸೇರಿದ್ದ ಬಯಲು ಪ್ರದೇಶಕ್ಕೆ ಆಗಮಿಸಿ ತನ್ನ ಮರಿಯನ್ನು ಕೊಂಡೊಯ್ದಿತು. ಜನರು ಖುಷಿಯಿಂದ ಹರ್ಷೋದ್ಗಾರ ಮಾಡಿದರು.

ಚಿರತೆನೂ ಸೂರ್ಯ ನಮಸ್ಕಾರ ಮಾಡುತ್ತೆ ನೋಡಿ... ವೈರಲ್ ವೀಡಿಯೋ

ಸೋಮವಾರ ಹಳ್ಳಿಯ ಬಯಲೊಂದರಲ್ಲಿ ಗ್ರಾಮಸ್ಥರು ತನ್ನೆರಡು ಮರಿಗಳ ಜೊತೆ ಚಿರತೆಯನ್ನು ನೋಡಿದ್ದರು. ಆದರೆ ಜನಜಂಗುಳಿಯಿಂದಾಗಿ ಚಿರತೆಯ ಮರಿ (Cub)ಯೊಂದು ಗುಂಪಿನಿಂದ ಬೇರೆಯಾಗಿತ್ತು. ಗ್ರಾಮಸ್ಥರನ್ನು ನೋಡಿ ಉಳಿದ ಚಿರತೆಗಳು ಸ್ಥಳದಿಂದ ಓಡಿಹೋಗಿದ್ದವು. ಚಿರತೆಯ ಮರಿ ಕಳೆದ ಕೆಲವು ದಿನಗಳಿಂದ ಬಯಲಿನಲ್ಲೇ ಒಂಟಿಯಾಗಿ ಓಡಾಡಿಕೊಂಡಿತ್ತು. ಜನರು ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅರಣ್ಯ ಅಧಿಕಾರಿಗಳು (Forest officers) ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. 'ನಾವು ಸ್ಥಳಕ್ಕೆ ತೆರಳಿ ತಾಯಿ ಚಿರತೆಗಾಗಿ ಸಾಕಷ್ಟ ಹುಡುಕಾಡಿದೆವು. ಆದರೆ ಸಮೀಪದಲ್ಲಿ ಎಲ್ಲೂ ತಾಯಿ ಚಿರತೆ ಸಿಗಲ್ಲಿಲ್ಲ. ಹೀಗಾಗಿ ವೆಟರ್ನಿಟಿ ಡಾಕ್ಟರ್‌ನ್ನು ಕರೆಸಿ ಚಿರತೆ ಮರಿಯ ಆರೋಗ್ಯ (Health)ವನ್ನು ಪರಿಶೀಲಿಸಿದೆವು' ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯ ಅಧಿಕಾರಿಗಳು ಅದೇ ದಿನ ರಾತ್ರಿ ಮರಿ ಚಿರತೆಯನ್ನು ತಾಯಿಯೊಂದಿಗೆ ಸೇರಿಸಲು ಪ್ಲಾನ್ ಮಾಡಿದರು. ಚಿರತೆ ಮರಿಯನ್ನು ಗ್ರಾಮದ ಹೊರಗೆ ಬಯಲಲ್ಲಿ ಓಪನ್ ಬಾಸ್ಕೆಟ್‌ನಲ್ಲಿ ಇರಿಸಿದರು. ಆದರೆ ಹೀಗೆ ಚಿರತೆ ಮರಿಯನ್ನು ಅಲ್ಲಿಟ್ಟು ಎರಡು ದಿನ ಕಳೆದರೂ ತಾಯಿ ಚಿರತೆ ಸ್ಥಳಕ್ಕೆ ಬರಲ್ಲಿಲ್ಲ. 'ನಾವು ಚಿರತೆ ಮರಿಯನ್ನು ಬಯಲಲ್ಲಿ ಇರಿಸಿದ್ದ ಕಾರಣ ತಾಯಿ ಚಿರತೆ ಬಂದು ಮರಿಯನ್ನು ಕೊಂಡೊಯ್ಯಬಹುದು ಎಂದು ನಾವು ಭಾವಿಸಿದೆವು. ಆದರೆ ನಮ್ಮ ನಿರೀಕ್ಷೆ ಹುಸಿಯಾಯಿತು. ಎರಡು ದಿನ ಕಾದರೂ ಚಿರತೆ ಸ್ಥಳಕ್ಕೆ ಬರಲ್ಲಿಲ್ಲ' ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು.

ಜೊತೆಯಾಗಿ ಸಾಗುತ್ತಿರುವ ಚಿರತೆ, ಬ್ಲಾಕ್ ಪಾಂಥೆರ್ : ಅಪರೂಪದ ವಿಡಿಯೋ ವೈರಲ್

ಚಿರತೆ ಮರಿ ಸುರಕ್ಷಿತವಾಗಿರಲು ಗ್ರಾಮಸ್ಥರು ಹಾಗೂ ಅರಣ್ಯ ಅಧಿಕಾರಿಗಳು ರಾತ್ರಿ ಸ್ಥಳದಲ್ಲೇ ತಂಗಿದ್ದರು. ಹಗಲು ಹೊತ್ತು ಚಿರತೆ ಮರಿಯ ಚಲನವಲನವನ್ನು ವೀಕ್ಷಿಸಲು ಬಯಲಿನ ಸಮೀಪದ ಮರವೊಂದಕ್ಕೆ ಸಿಸಿಟಿವಿಯನ್ನು ಅಳವಡಿಸಿದ್ದರು. 'ಬುಧವಾರ ಸಂಜೆ ತಾಯಿ ಚಿರತೆ ತನ್ನ ಮರಿಯನ್ನು ಹುಡುಕಿಕೊಂಡು ಬಂದಿತ್ತು. ಆದರೆ ಮರಿಯನ್ನು ಮೂಸಿ ನೋಡಿ ವಾಪಾಸ್ ತೆರಳಿತ್ತು. ಇದರಿಂದ ನಾವೆಲ್ಲರೂ ನಿರಾಸೆಗೊಂಡೆವು' ಎಂದು ಅರಣ್ಯ ಅಧಿಕಾರಿ ತಿಳಿಸಿದ್ದಾರೆ.

ಕೊನೆಗೂ ಗುರುವಾರ ಸಂಜೆ ಚಿರತೆ ಮತ್ತೆ ಮರಳಿ ಬಂತು. ಸ್ವಲ್ಪ ಹಿಂಜರಿಯುತ್ತಲೇ ಸುತ್ತ ನೋಡಿ ಚಿರತೆ ಮರಿಯನ್ನು ಕೊಂಡೊಯ್ದಿತು ಎಂದು ಅರಣ್ಯ ಅದಿಕಾರಿಗಳು ಹೇಳಿದ್ದಾರೆ. ಚಿರತೆ ಹಾಗೂ ಮರಿಯ ಸಮ್ಮಿಲನವನ್ನು ಮೋಡಿ ಅರಣ್ಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ರಿಲೀಫ್ ಆದರು. 

click me!