ಉತ್ತಮ ಶಿಕ್ಷಣ ಕೊಡಿಸಿದರೂ ಮಗ ಕೆಲಸಕ್ಕೆ ಹೋಗಲಿಲ್ಲ. ಜೀವನಾಧಾರಕ್ಕೆ ದಾರಿ ಮಾಡಿಕೊಟ್ಟರೂ ಮಗನಿಗೆ ಸಾಕಾಗಲಿಲ್ಲ. ಕೊನೆಗೆ ಹೆತ್ತವರಿಂದ ಆಸ್ತಿ,ಹಣ ಎಲ್ಲವನ್ನೂ ಕಿತ್ತುಕೊಂಡು ಮನೆಯಿಂದಲೇ ಹೊರಗಟ್ಟಿದ. ಕ್ಯಾನ್ಸರ್ ಪೀಡಿತ ತಾಯಿ, ಹಾಗೂ ಅಪ್ಪ ಬೀದಿ ಬೀದಿ ಅಲೆದು, ಕರ್ನಾಟಕದ ಮೂಲದ ಜಿಲ್ಲಾಧಿಕಾರಿ ಬಳಿ ನೋವು ಹೇಳಿಕೊಂಡಿದ್ದಾರೆ. ತಕ್ಷಣವೇ ಡಿಸಿ ಕಾರ್ಯಪ್ರವೃತ್ತರಾಗಿದ್ದಾರೆ. ಇದೀಗ ಹೆತ್ತವರು ಮನೆ ಸೇರಿಕೊಂಡಿದ್ದರೆ, ಪೋಷಕರ ಹೊರಗಟ್ಟಿದ ಮಗ ಬೀದಿ ಬೀದಿ ಅಲೆಯುತ್ತಿದ್ದಾನೆ.
ಮಕ್ಕಳನ್ನು ಸಾಕಿ, ಬೆಳೆಸಲು ಹೆತ್ತವರು ಮಾಡೋ ತ್ಯಾಗ ಅಷ್ಟಿಷ್ಟಲ್ಲ. ಅವರು ಬದುಕು ಕಟ್ಟಿಕೊಡಲು ಅಪ್ಪ-ಅಮ್ಮ ಮಾಡೋ ಪಡೋ ಶ್ರಮಕ್ಕೆ ಸರಿಸಾಟಿಯಿಲ್ಲ. ಮಕ್ಕಳು ಎಷ್ಟೇ ದೊಡ್ಡವರಾದರೂ, ಅವರ ಕಷ್ಟಕ್ಕೆ ಹೆಗಲಾಗಿ ನಿಲ್ಲುವದೇ ಹೆತ್ತವರು. ಅದರಲ್ಲೂ, ತಾಯಿ ಹತ್ತು ಮಕ್ಕಳನ್ನು ಸಾಕಿ ಬಿಡುತ್ತಾಳೆ. ಆದರೆ ಹತ್ತು ಮಕ್ಕಳಿದ್ದರೂ ತಾಯಿಯನ್ನು ಸಾಕುವುದು ಅಸಾಧ್ಯ ಅಂತಾರೆ ಹಿರಿಯರು. ಈ ಮಾತು ಸತ್ಯ ಅನ್ನೋದಕ್ಕೆ ಇಲ್ಲೊಂದು ಘಟನೆ ಸಾಕ್ಷಿ.
ತಮಿಳುನಾಡು ಕನ್ಯಾಕುಮಾರಿಯ ಕುಮಾರಪುರ ಗ್ರಾಮದ ನೀಲಕಂಠ ಪಿಳ್ಳೈ, ತಂಗಂ ದಂಪತಿಗೆ ಇಬ್ಬರು ಗಂಡು ಮಕ್ಕಳು. ಹಿರಿಯ ಮಗ ಸತೀಶ್ ಆಕ್ಸಿಡೆಂಟ್‌ನಲ್ಲಿ ಮೃತಪಟ್ಟಿದ್ದ. ಇದ್ದೊಬ್ಬ ಮಗ ಅನೀಶ್ನನ್ನೇ ಅತಿ ಪ್ರೀತಿಯಿಂದ ಸಾಕಿದ್ರು ಪಿಳ್ಳೈ ದಂಪತಿ. ಸಾಕಿ, ಬೆಳೆದು ದೊಡ್ಡವನಾದ ಅನೀಶ್ಗೆ ಪಿಳ್ಳೈ ದಂಪತಿ ಎಲ್ಲ ರೀತಿಯಿಂದಲೂ ಅನುಕೂಲ ಮಾಡಿಕೊಟ್ಟರು. ಚೆನ್ನಾಗಿ ಓದಿದ ಮಗನಿಗೆ ಒಳ್ಳೆ ಕೆಲಸ ಸಿಗಲಿಲ್ಲ. ಆದರೂ, ಪಿಳ್ಳೈ ದಂಪತಿ ತಲೆಕೆಡಿಸಿಕೊಳ್ಳದೇ ಮಗನ ಭವಿಷ್ಯಕ್ಕಾಗಿ ಹಗಲೂ-ಇರುಳು ದುಡಿದು ಆಸ್ತಿ ಸಂಪಾದಿಸಿದ್ರು. ವಯಸ್ಸಿಗೆ ಬಂದ ಮಗನಿಗೆ ಹುಡುಗಿ ನೋಡಿ ಅದ್ಧೂರಿಯಾಗಿ ಮದುವೆಯನ್ನೂ ಮಾಡಿದ್ರು. ಇನ್ನೇನು ಮಗನ ಬದುಕು ಒಂದು ಹಂತಕ್ಕೆ ಬಂತು ಎಂದುಕೊಂಡು ನಿಟ್ಟುಸಿರು ಬಿಟ್ಟ ದಂಪತಿಗೆ, ಮಗ ಅನೀಶ್ ಕಾಟಕೊಡಲು ಆರಂಭಿಸಿದ. ಬ್ಯುಸಿನೆಸ್ ಕೈಹಿಡಿಯುತ್ತಿಲ್ಲ, ಸಂಸಾರ ಸಾಗಿಸಲು ಆಗುತ್ತಿಲ್ಲ ಎಂದು ವರಾತ ತೆಗೆದ. ಮಗನ ಸುಂದರ ಬದುಕಿದಾಗಿ ಅದೆಷ್ಟೋ ತ್ಯಾಗ ಮಾಡಿದ್ದ ಪಿಳ್ಳೈ ದಂಪತಿ, ಕೊನೆಯಾಗಿ, ತಾವು ಕಷ್ಟಪಟ್ಟು ದುಡಿದು ಕಟ್ಟಿಸಿದ್ದ ಮನೆ, ಒಂದಷ್ಟು ಜಮೀನು ಆಸ್ತಿಯನ್ನು ಹಿಂದೆ ಮುಂದೆ ಯೋಚಿಸದೇ ಮಗ ಅನೀಶ್ ಹೆಸರಿಗೆ ದಾನಪತ್ರವಾಗಿ ಬರೆದುಕೊಟ್ಟು ಬಿಟ್ಟರು.
ಮಗ ಗೆದ್ದು ತಂದ ತಟ್ಟೆಯಲ್ಲೇ 24 ವರ್ಷ ಉಣ್ಣುತ್ತಿದ್ದ ತಾಯಿ, ವೈರಲ್ ಆಯ್ತು ಮಗನ ಭಾವನಾತ್ಮಕ ಟ್ವೀಟ್
ಅಮ್ಮನ ಹೆಸರಿನಲ್ಲಿದ್ದ ಆಸ್ತಿ ತನ್ನ ಕೈಸೇರುತ್ತಿದ್ದಂತೆ ಅನೀಶ್ ಬದಲಾಗಿಬಿಟ್ಟ. ವೃದ್ಧ ಅಪ್ಪ-ಅಮ್ಮನಿಗೆ ಎರಡು ಹೊತ್ತು ಊಟ ಹಾಕಲು ಕ್ಯಾತೆ ತೆಗೆದ. ಅಷ್ಟರಲ್ಲಿ ತಾಯಿ ತಂಗಂಗೆ ಕ್ಯಾನ್ಸರ್ ಆವರಿಸಿಬಿಟ್ಟಿತ್ತು. ಅಮ್ಮನ ಚಿಕಿತ್ಸೆಗೂ ನಯಾಪೈಸೆ ಕೊಡಲು ಅನೀಶ್ ಇನ್ನಿಲ್ಲದ ಹಿಂಸೆ ಕೊಡುತ್ತಿದ್ದ. ದಿನೇ ದಿನೇ ತಾಯಿ ತಂಗಂ ಸ್ಥಿತಿ ಬಿಗಡಾಯಿಸುತ್ತಿದ್ದರೆ, ತಂದೆ ನೀಲಕಂಠಪಿಳ್ಳೈ ನೋವಿನಿಂದ ಕುಗ್ಗಿ ಹೋಗಿದ್ರು. ತಾಯಿಗೆ ಕ್ಯಾನ್ಸರ್ ಚಿಕಿತ್ಸೆ ಕೊಡಿಸುವಂತೆ ಎಷ್ಟೇ ಬೇಡಿಕೊಂಡರೂ ಅನೀಶ್ ಮನಸ್ಸು ಕರಗಲಿಲ್ಲ. ತಂದೆ-ತಾಯಿಯನ್ನು ಸಾಕುವುದು ಭಾರ ಎಂದುಕೊಂಡ ಅನೀಶ್ , ಆತನ ಹೆಂಡ್ತಿ ರಕ್ಕಸ ನಿರ್ಧಾರ ಕೈಗೊಂಡಿದ್ರು. ಒಂದು ದಿನ, ಮಗ ಸೊಸೆ ಸೇರಿ, ವೃದ್ಧ ದಂಪತಿಯನ್ನು ಮನೆಯಿಂದ ಹೊರಗಟ್ಟಿ ಬಿಟ್ಟರು. ಕ್ಯಾನ್ಸರ್ ಪೀಡಿತ ಪತ್ನಿಯ ಜತೆ ಬೀದಿಗೆ ಬಿದ್ದ ಪಿಳ್ಳೈ, ಮಗನ ನಿರ್ಧಾರದಿಂದ ಕೆಂಗಟ್ಟುಹೋಗಿದ್ರು. ಒಡೆದ ಹೃದಯದಿಂದ ಕಣ್ಣೀರು ಸುರಿಸುತ್ತಲೇ ಬೀದಿ ಬೀದಿ ಅಲೆದ ವೃದ್ಧ ದಂಪತಿ, ನೆಲೆ ಇಲ್ಲದೇ ಕಂಗಾಲಾಗಿ ಬಿಟ್ಟರು. ಇತ್ತ ಕ್ಯಾನ್ಸರ್ ಪೀಡಿತ ಪತ್ನಿಯನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸಿದ್ದ ಪಿಳ್ಳೈಗೆ ಮಗನ ಮೇಲೆ ಇನ್ನಿಲ್ಲದ ಸಿಟ್ಟು ಬಂದಿತ್ತು. ಆಸ್ತಿ ಲಪಟಾಯಿಸಿ ತಮ್ಮನ್ನು ಬೀದಿಗೆ ತಳ್ಳಿದ ಮಗ- ಸೊಸೆಗೆ ಬುದ್ಧಿ ಕಲಿಸುವ ನಿರ್ಧಾರಕ್ಕೆ ಬಂದು ಬಿಟ್ಟಿದ್ರು.
ಇದ್ದರೆ ಇರಬೇಕು ನಿನ್ನಂಥ ಅಪ್ಪ..!ಕಿಡ್ನ್ಯಾಪ್ ಆದ ಮಗನನ್ನೂ 24 ವರ್ಷದ ಬಳಿಕ ಮರಳಿ ಪಡೆದ!
ತಂಜಾವೂರು ಕಲೆಕ್ಟರ್ ಕೌಶಿಕ್ ಮೊರೆ ಹೋದ ವೃದ್ಧ ದಂಪತಿ, ಬೀದಿಗೆ ತಳ್ಳಿದ ಮಗನ ಬಗ್ಗೆ, ತಮ್ಮ ಸ್ಥಿತಿಯ ಬಗ್ಗೆ ಕಣ್ಣೀರುಗೆರೆಯುತ್ತಾಲೆ ಅಲವತ್ತುಕೊಂಡ್ರು. ಅಷ್ಟಕ್ಕೂ ಕನ್ಯಾಕುಮಾರಿ ಕಲೆಕ್ಟರ್ ಕೌಶಿಕ್ ಕರ್ನಾಟಕದವರು. ನೀಲಕಂಠ ಪಿಳ್ಳೈ- ತಂಗಂ ದಂಪತಿಯ ಕಣ್ಣೀರ ಕಥೆ ಕೇಳಿ ಮರುಗಿದ ಕೌಶಿಕ್, ಮಗ ಅನೀಶ್ಗೆ ಬುದ್ಧಿ ಕಲಿಸಲು ಮುಂದಾದರು. ಸೀನಿಯರ್ ಸಿಟಿಜನ್ ಆಕ್ಟ್ ಅಡಿ ಆಸ್ತಿ ದಾನಪತ್ರವನ್ನು ರದ್ದುಪಡಿಸಿದ್ರು. ಅಷ್ಟೇ ಅಲ್ಲ, ಪಾಪಿ ಮಗ ಅನೀಶ್ನಿಗೆ ಈ ಕೂಡಲೇ ಮನೆ ಬಿಟ್ಟು ಕೊಡುವಂತೆ ಆದೇಶ ಹೊರಡಿಸಿದ್ರು. ವೃದ್ಧ ದಂಪತಿಯನ್ನು ಅವರೇ ಕಟ್ಟಿಸಿದ ಮನೆಗೆ ಸೇರಿಸಿ ಕಲೆಕ್ಟರ್ ಕೌಶಿಕ್ ಸಾರ್ಥಕತೆ ಮೆರೆದ್ರು. ಇದೆಲ್ಲ ನಡೆದಿದ್ದು ಕಳೆದ ಡಿಸೆಂಬರ್ನಲ್ಲಿ. ಮತ್ತೆ ತಮ್ಮ ಮನೆ ಸೇರಿದ ನೀಲಕಂಠಪಿಳ್ಳೈ, ಕ್ಯಾನ್ಸರ್ ಪೀಡಿತ ಪತ್ನಿ ತಂಗಂಗೆ ಚಿಕಿತ್ಸೆ ಕೊಡಿಸುತ್ತಾ ನೆಮ್ಮದಿಯಾಗಿದ್ದಾರೆ. ಅಪ್ಪ-ಅಮ್ಮನನ್ನೇ ಮನೆಯಿಂದ ಬೀದಿಗೆ ತಳ್ಳಿದ ಮಗ ಅನೀಶ್ ಈಗ ಬೀದಿಯಲ್ಲಿ ನಿಂತಿದ್ದಾನೆ.