ಸುಂದರವಾದ ಗೆಳೆತನವೊಂದು ಗಂಭೀರವಾದ ಕಮಿಟ್‌ಮೆಂಟ್‌ಗೆ ಬದಲಾಗುತ್ತಿದೆ ಎಂದಾಗ ಈ ಬದಲಾವಣೆಗಳತ್ತ ಗಮನ ಹರಿಸಿದರೆ ಗೊಂದಲ ಪರಿಹಾರವಾಗುತ್ತದೆ.
ಗೆಳೆತನ ಅನ್ನೋದು ಭೂಮಿ ಮೇಲಿನ ಅತ್ಯಂತ ಸುಂದರ ಸಂಬಂಧ. ಅದರಲ್ಲೂ ಬೆಸ್ಟ್ ಫ್ರೆಂಡ್ ಒಬ್ಬರು ಜೊತೆಗಿದ್ದರೆ ಜಗತ್ತೆಲ್ಲವನ್ನೂ ಗೆಲ್ಲೋ ಉತ್ಸಾಹ ಇರುತ್ತದೆ. ಇಂಥ ಬೆಸ್ಟ್ ಫ್ರೆಂಡ್‌ಶಿಪ್ ಹುಡುಗ ಹುಡುಗಿ ನಡುವೆ ಇದ್ರೆ ಅದು ಮುಂದೆ ಪ್ರೀತಿಗೆ ತಿರುಗುವ ಸಂಭಾವ್ಯತೆಗಳೂ ಇರುತ್ತವೆ. ಇಷ್ಟಕ್ಕೂ ಜೀವನಸಂಗಾತಿಯಲ್ಲಿ ಬೆಸ್ಟ್ ಫ್ರೆಂಡನ್ನೇ ತಾನೇ ಎಲ್ಲರೂ ಬಯಸುವುದು?
ಆದರೆ, ಇಂಥ ಆಳವಾದ ಗೆಳೆತನದಲ್ಲಿದ್ದಾಗ ಯಾವಾಗ ಅದು ಪ್ರೀತಿಯಾಗಿ ಬದಲಾಗುತ್ತದೆಂಬುದು ಯಾರಿಗೂ ತಿಳಿಯುವುದಿಲ್ಲ. ಹಾಗಾಗಿ, ಅದು ಪ್ರೀತಿನಾ ಅಥವಾ ಗೆಳೆತನದ ಮತ್ತೊಂದು ಹಂತವೋ ಎಂಬ ಗೊಂದಲ ಕಾಡುತ್ತದೆ. ಹೀಗಾಗುವುದು ಸಂಪೂರ್ಣ ನಾರ್ಮಲ್ ಸಂಗತಿಯಾಗಿದ್ದು, ಯಾರಿಗೆ ಬೇಕಾದರೂ ಆಗಬಹುದು. ಹೀಗಾದಾಗ ಅದು ಸ್ನೇಹಾನೋ ಪ್ರೀತಿನೋ ಎಂದು ಕಂಡುಕೊಳ್ಳುವುದು ಹೇಗೆ? ಸುಂದರವಾದ ಗೆಳೆತನವೊಂದು ಗಂಭೀರವಾದ ಕಮಿಟ್‌ಮೆಂಟ್‌ಗೆ ಬದಲಾಗುತ್ತಿದೆ ಎಂದಾಗ ಈ ಬದಲಾವಣೆಗಳತ್ತ ಗಮನ ಹರಿಸಿದರೆ ಗೊಂದಲ ಪರಿಹಾರವಾಗುತ್ತದೆ.
undefined
ದೇಹ ಭಾಷೆ
ಯಾರದಾದರೂ ಮೇಲೆ ಮತ್ತೊಬ್ಬರಿಗೆ ಲವ್ ಇಂಟ್ರಸ್ಟ್ ಇದ್ದಾಗ ಬಾಡಿ ಲಾಂಗ್ವೇಜ್ ಬಾಯಿ ಮುಚ್ಚಿಕೊಂಡು ಕುಳಿತಿರಲಾರದು. ನಿಮಗೆ ಅನುಮಾನವಿದ್ದಲ್ಲಿ ನಿಮ್ಮ ಫ್ರೆಂಡ್‌ನ ಬಾಡಿ ಲಾಂಗ್ವೇಜ್‌ಗೆ ಹೆಚ್ಚು ಗಮನ ಕೊಡಿ. ಅವರು ಮಾಡುವುದನ್ನು ನೀವು ಕಾಪಿ ಮಾಡುತ್ತಿದ್ದೀರಾ ಎಂದು ಯೋಚಿಸಿ ನೋಡಿ. ಸಾಮಾನ್ಯವಾಗಿ ಯಾರನ್ನಾದರೂ ಪ್ರೀತಿಸುತ್ತಿದ್ದರೆ ಅವರ ಸ್ಟೈಲ್ ಹಾಗೂ ಬಾಡಿ ಲಾಂಗ್ವೇಜನ್ನು ಕಾಪಿ ಮಾಡುತ್ತೇವೆ ಎನ್ನುತ್ತಾರೆ ಡೇಟಿಂಗ್ ಗುರುಗಳು.
ಬಯೋಲಾಜಿಕಲ್ ಬದಲಾವಣೆ
ನಿಮ್ಮ ಫ್ರೆಂಡ್ ಜೊತೆ ನೀವು ಪ್ರೀತಿಯಲ್ಲಿ ಬಿದ್ದಿದ್ದರೆ ಸಡನ್ ಆಗಿ ಇಡೀ ದಿನ ಈಗ ಅವರ ಬಗ್ಗೆಯೇ ಯೋಚಿಸಲಾರಂಭಿಸಿರುತ್ತೀರಿ. ಹಸಿವು, ನಿದ್ರೆ, ಏಕಾಗ್ರತೆ ಕಡಿಮೆಯಾಗುತ್ತದೆ. ಕಚೇರಿಯಲ್ಲಿದ್ದಾಗ ಕೂಡಾ ಅವರ ಬಗ್ಗೆ ಹಗಲುಗನಸು ಕಾಣಲಾರಂಭಿಸುತ್ತೀರಿ.
ಹೊಟ್ಟೆಕಿಚ್ಚು
ನಿಮ್ಮ ಫ್ರೆಂಡ್ ಕೇವಲ ಫ್ರೆಂಡ್ ಆಗಿದ್ದರೆ, ಅವರು ಯಾರೊಂದಿಗಾದರೂ ಫ್ಲರ್ಟ್ ಮಾಡಿದಾಗ ನೀವೂ ಅದರ ಮಜಾ ತೆಗೆದುಕೊಂಡು ಒಳಗೊಳಗೇ ನಗುತ್ತೀರಿ, ಅವರನ್ನು ಚುಡಾಯಿಸುತ್ತೀರಿ. ಆದರೆ ಅವರ ಮೇಲೆ ಪ್ರೀತಿಯಾದಾಗ ಮಾತ್ರ ಈ ಫ್ಲರ್ಟಿಂಗ್ ನಿಮ್ಮಲ್ಲಿ ಹೊಟ್ಟೆಕಿಚ್ಚನ್ನು ಉಂಟು ಮಾಡುತ್ತದೆ. ನಿಮ್ಮ ಗೆಳೆಯ/ಗೆಳತಿ ಆಸಕ್ತಿ ತೋರಿಸುವ ಆ ಮತ್ತೊಬ್ಬ ವ್ಯಕ್ತಿ ಬಗ್ಗೆ ವಿನಾ ಕಾರಣ ಸಿಟ್ಟು, ದ್ವೇಷ ಉಂಟಾಗುತ್ತದೆ.
ಹೆಚ್ಚು ಕಾನ್ಷಿಯಸ್
ಇದುವರೆಗೂ ನೀವಿಬ್ಬರೂ ಭೇಟಿಯಾಗಬೇಕೆಂದರೆ ನಿಮ್ಮ ಲುಕ್ಸ್ ಬಗ್ಗೆಯಾಗಲೀ, ಡ್ರೆಸಿಂಗ್ ಅಥವಾ ವರ್ತನೆ ಬಗ್ಗೆಯಾಗಲೀ ನಿಗಾ ಇರುವುದಿಲ್ಲ. ಅವರೆದುರು ಹೇಗೆ ಬೇಕಾದರೂ ಇರಬಹುದು, ನೀವು ನೀವಾಗಿ ಇರಬಹುದೆಂಬುದೇ ಅವರನ್ನು ನಿಮ್ಮ ಬೆಸ್ಟ್ ಫ್ರೆಂಡ್ ಆಗಿಸಿರುತ್ತದೆ. ಆದರೆ, ಈಗೀಗ ಸಡನ್ ಆಗಿ ಅವರು ಸಿಗುತ್ತಾರೆಂದರೆ ಸಾಕು, ಯಾವ ಬಟ್ಟೆ ಹಾಕುವುದು, ಹೇರ್‌ಸ್ಟೈಲ್ ಏನು ಮಾಡಬೇಕು, ಯಾವ ರೀತಿ ಇದ್ದರೆ ಅವರಿಗಿಷ್ಟವಾಗುತ್ತದೆ ಎಂಬೆಲ್ಲ ಪ್ರಶ್ನೆಗಳು ಕಾಡಲಾರಂಭಿಸುತ್ತವೆ. ನೀವು ಅವರಿಗೆ ಇಷ್ಟವಾಗುವಂತಿರಬೇಕೆಂದು ಕಾನ್ಷಿಯಸ್ ಆಗಿ ಹೆಚ್ಚು ಹೆಚ್ಚು ಪ್ರಯತ್ನ ಹಾಕತೊಡಗುತ್ತೀರಿ.
ಮಾತಿನ ತುಂಬಾ ಆತ/ಆಕೆಯೇ
ಅವರು ನಿಮ್ಮ ಮನಸ್ಸಿನಲ್ಲಿರುವುದರಿಂದ ಅವರ ಬಗ್ಗೆ ಯೋಚನೆಗಳನ್ನು ನೀವು ಯೋಚನೆಗಳನ್ನು ನಿಲ್ಲಿಸಲಾರಿರಿ. ಅದೇ ಕಾರಣಕ್ಕೆ ಎಲ್ಲ ಮಾತುಗಳಲ್ಲೂ ಅವರ ಹೆಸರು ತೂರಿ ಬರಲಾರಂಭಿಸುತ್ತದೆ.
ಇಬ್ಬರಿಗೂ ಹೀಗೆ ಆಗುತ್ತಿದ್ದರೆ...
ಈ ಎಲ್ಲ ಭಾವನೆಗಳು ಇಬ್ಬರನ್ನೂ ಕಾಡುತ್ತಿದ್ದರೆ, ನಿಮ್ಮ ಫ್ರೆಂಡ್ ಕೂಡಾ ಕಾರಣವಿಲ್ಲದೆ ಬೇರೆ ರೀತಿ ವರ್ತಿಸಲು ಆರಂಭಿಸಿರುತ್ತಾರೆ. ನೀವಿಬ್ಬರೂ ಸದಾ ಜೊತೆಗೆ ಕಳೆಯಲು ಕಾರಣಗಳನ್ನು ಹುಡುಕಲಾರಂಭಿಸುತ್ತೀರಿ.