ಸಿವಿಲ್‌ ಸರ್ವೀಸ್‌ ಅಧಿಕಾರಿಗಳ ಸರಳ ವಿವಾಹ, ಅನಾಥ ಮಕ್ಕಳ ಶಿಕ್ಷಣಕ್ಕೆ ಹಣ ದಾನ!

By Santosh Naik  |  First Published Feb 16, 2023, 6:02 PM IST

ಐಆರ್‌ಎಸ್‌ ಅಧಿಕಾರಿ ಆರ್ಯ ಅರ್‌ ನಾಯರ್‌ ಇತ್ತೀಚೆಗೆ ಇಂಡಿಯನ್‌ ಪೋಸ್ಟಲ್‌ ಸರ್ವೀಸ್‌ ಅಧಿಕಾರಿ ಶಿವಂ ತ್ಯಾಗಿ ಅವರನ್ನು ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಮದುವೆಯಾದರು. ಮದುವೆಯ ಸಮಾರಂಭವನ್ನು ರದ್ದು ಮಾಡುವುದು ತಮಗೆ ಕಷ್ಟದ ಕೆಲಸವಾಗಿತ್ತು ಎಂದು ಹೇಳಿದ್ದಾರೆ.


ನವದೆಹಲಿ (ಫೆ.16): ಸಣ್ಣ ಸರ್ಕಾರಿ ನೌಕರಿಯಲ್ಲಿದ್ದರೆ ಸಾಕು ಧಾಮ್‌ಧೂಮ್‌ ಆಗಿ ಅವರ ಮದುವೆ ಸಮಾರಂಭ ನಡೆಯುತ್ತದೆ. ಆದರೆ, ಕೇರಳದ ಕೊಟ್ಟಾಯಂನಲ್ಲಿ ಇಬ್ಬರು ಸಿವಿಲ್‌ ಸರ್ವೀಸ್‌ ಅಧಿಕಾರಿಗಳು ಯಾವುದೇ ಆಡಂಬರವಿಲ್ಲದ ವಿವಾಹ ಮಾಡಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ಇಂಡಿಯನ್‌ ಪೋಸ್ಟಲ್‌ ಸರ್ವೀಸ್‌ನಲ್ಲಿ ಅಧಿಕಾರಿಯಾಗಿರುವ ಶಿವಂ ತ್ಯಾಗಿ ಮತ್ತು ಇಂಡಿಯನ್‌ ರೆವಿನ್ಯೂ ಸರ್ವೀಸ್‌ ಅಧಿಕಾರಿಯಾಗಿರುವ ಆರ್ಯ ಆರ್‌ ನಾಯರ್‌ ಕೇರಳದ ಕೊಟ್ಟಾಯಂ ಜಿಲ್ಲೆಯ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಬಹಳ ಸರಳವಾದ ವಿವಾಹ ಮಾಡಿಕೊಂಡಿದ್ದಾರೆ. ಲೆಕ್ಕವಿಲ್ಲದಷ್ಟು ಅತಿಥಿಗಳನ್ನು ಕರೆಯೋದಕ್ಕಿಂತ ತೀರಾ ಆಪ್ತರಿಗಷ್ಟೇ ಮದುವೆಗೆ ಆಹ್ವಾನವಿತ್ತು. ಜನವರಿ 27 ರಂದು ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ವೈವಾಹಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದರೊಂದಿಗೆ ಅನಾಥಾಲಯದ 20 ಅನಾಥ ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸುವ ಮೂಲಕ ಮಾದರಿಯಾಗಿದ್ದಾರೆ.

2021 ರ ಬ್ಯಾಚ್‌ನ ಐಆರ್‌ಎಸ್‌ ಅಧಿಕಾರಿಯಾಗಿರುವ ಆರ್ಯ, ಮದುವೆಗೆ ಸಂಬಂಧಿಸಿದ ಸಂಭ್ರಮಗಳನ್ನು ಬೇಡ ಎಂದು ಹೇಳುವುದು ಬಹಳ ಕಷ್ಟದ ನಿರ್ಧಾರವಾಗಿತ್ತು ಎಂದಿದ್ದಾರೆ. 'ನನ್ನ ಪ್ರತಿ ಸಂಬಂಧಿಕರು ಮತ್ತು ಸ್ನೇಹಿತರು ಮದುವೆಯ ದಿನಕ್ಕಾಗಿ ಕಾಯುತ್ತಿದ್ದರು. ಕೇರಳದಲ್ಲಿ ಚಾಲ್ತಿಯಲ್ಲಿರುವ ಪ್ರವೃತ್ತಿಯಾಗಿರುವುದರಿಂದ ಅವರೆಲ್ಲರೂ ಎರಡು ಮೂರು ದಿನಗಳ ಕಾಲ ಮದುವೆಯ ಸಂಭ್ರಮ ಮಾಡಲು ಉತ್ಸುಕರಾಗಿದ್ದರು' ಎಂದು ಹೇಳಿದ್ದಾರೆ. 

ಪ್ರಸ್ತುತ ಆರ್ಯ ಅವರಿಗೆ ಎಲ್ಲಿಯೂ ಪೋಸ್ಟಿಂಗ್‌ ಆಗಿಲ್ಲ. ತರಬೇತಿ ಹಂತದಲ್ಲಿದ್ದಾರೆ. ಸರ್ಕಾರಿ ಸೇವೆಯಿಂದ ನಿವೃತ್ತರಾಗಿರುವ ತನ್ನ ತಂದೆ-ತಾಯಿ ಇಬ್ಬರಿಗೂ ಈ ವಿಚಾರದ ಬಗ್ಗೆ ಮೊದಲು ಹೇಳಿದಾಗ, 'ಸರಳ ಮದುವೆ ಸಮಾರಂಭಕ್ಕೆ ಇಬ್ಬರೂ ಕೂಡ ಒಪ್ಪಿರಲಿಲ್ಲ ಎಂದರು. ಅವರು ಈಗಾಗಲೇ ಕೇರಳದಲ್ಲಿಯೇ ಹಲವಾರು ಮದುವೆಯ ಸಮಾರಂಭವನ್ನು ನೋಡಿದ್ದರು. ಸಂಬಂಧಿಕರ ಮಕ್ಕಳ ಮದುವೆಯನ್ನು ನೋಡಿದ್ದರು. ಹಾಗಿದ್ದಾಗ ತನ್ನ ಮಗಳ ಮದುವೆ ಸರಳವಾಗಿ ಆಗುವುದು ಅವರಿಗೆ ಇಷ್ಟವಿರಲಿಲ್ಲ. ಎಲ್ಲರನ್ನೂ ಆಹ್ವಾನಿಸಿ ಸಂಭ್ರಮವನ್ನು ಹಂಚಿಕೊಳ್ಳಬೇಕು ಎನ್ನುವ ಆಸೆ ಅವರಲ್ಲಿಯೂ ಇತ್ತು. ಅನಾಥ ಮಕ್ಕಳ ಶೈಕ್ಷಣಿಕ ವೆಚ್ಚ ಭರಿಸುವ ನಮ್ಮ ನಿರ್ಧಾರ ಸಂಬಂಧಿಕರಿಗೂ ಸರಿ ಹೋಗಲಿಲ್ಲ. ಆದರೆ, ಈಗ ಎಲ್ಲರೂ ನಮ್ಮ ನಿರ್ಧಾರವನ್ನು ಬಹಳವಾಗಿ ಮೆಚ್ಚಿಕೊಂಡಿದ್ದಾರೆ' ಎಂದು ಹೇಳಿದರು.

ಇಂಜಿನಿಯರಿಂಗ್ ಪದವೀಧರರಾಗಿರುವ ಆರ್ಯ ಅವರು ತಮ್ಮ ಈ ನಿರ್ಧಾರಿಂದ ಮುಂದೆ ಮದುವೆಯಾಗಲಿರುವ ವಧು-ವರರಿಗೆ ದುಬಾರಿ ಮದುವೆ ಬೇಡ ಎಂದು ಹೇಳುವ ಅಲ್ಪ ವಿಶ್ವಾಸವನ್ನಾದರೂ ನೀಡುತ್ತದೆ ಎಂದು ಹೇಳಿದರು. ಅದ್ದೂರಿ ವಿವಾಹ ಕಾರ್ಯಕ್ರಮಗಳನ್ನು ಬೇಡ ಎಂದು ಹೇಳುವ ವೇಳೆ ಎದುರಾಗುವ ಸಮಾಜದ ಒತ್ತಡವನ್ನು ತಡೆದುಕೊಳ್ಳುವ ಧೈರ್ಯವನ್ನು ಯುವಕರು ತೋರಿಸಬೇಕು ಎಂದು ಅವರು ಹೇಳಿದರು.

ಆನ್‌ಲೈನ್‌ನಲ್ಲಿ ಚಂದದ ಹುಡುಗಿ ನೋಡಿ ಮದುವೆಯಾದ, ರೌಡಿಶೀಟರ್‌ ಎಂದು ಗೊತ್ತಾಗಿ ದಂಗಾದ!

Tap to resize

Latest Videos

ದೆಹಲಿ ಮೂಲದ ಶಿವಂ ತ್ಯಾಗಿ ಅವರು ಭಾರತೀಯ ಅಂಚೆ ಸೇವೆಯ 2020 ರ ಬ್ಯಾಚ್‌ಗೆ ಸೇರಿದವರು. ಅಹಮದಾಬಾದ್‌ನ ಎಸ್‌ಎಸ್‌ಪಿಯಲ್ಲಿ ಪೋಸ್ಟಿಂಗ್‌ನಲ್ಲಿರುವ ಶಿವಂ, “ಸರಳ ವಿವಾಹದ ಕಲ್ಪನೆಯು ಆರ್ಯ ಅವರಿಂದ ಬಂದಿತ್ತು. ದಿನಗಟ್ಟಲೆ ಸಂಭ್ರಮಾಚರಣೆಯ ನಿರೀಕ್ಷೆಯಲ್ಲಿದ್ದ ನನ್ನ ಬಂಧುಗಳಿಗೆ ಈ ನಿರ್ಧಾರ ಆಘಾತ ತಂದಿತ್ತು. ಮುಂಬರುವ ವರ್ಷಗಳಲ್ಲಿ, ಅನಾಥಾಶ್ರಮದಲ್ಲಿರುವ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ವೆಚ್ಚಗಳನ್ನು ಪೂರೈಸಲು ನಾವು ಸಹಾಯ ಮಾಡುತ್ತೇವೆ. ಕೇವಲ ಮದುವೆಯ ಸಂಭ್ರಮಕ್ಕೆ ಮಾತ್ರವೇ ನಮ್ಮ ಈ ಸಹಾಯ ಸೀಮಿತವಾಗಿರೋದಿಲ್ಲ' ಎಂದಿದ್ದಾರೆ.

ಆರ್ಮಿ ಮೇಜರ್, ಮಹಿಳಾ ಜಡ್ಜ್ ಸರಳ ವಿವಾಹ: 500 ರೂಪಾಯಿಯಲ್ಲಿ ಮದುವೆ!

ಜನವರಿ 28 ರಂದು ಶಿವಂ ಅವರ ಕುಟುಂಬವನ್ನು ಭೇಟಿ ಮಾಡುವ ಸಲುವಾಗಿ ದಂಪತಿಗಳು ದೆಹಲಿಗೆ ವಿಮಾನದ ಮೂಲಕ ಪ್ರಯಾಣಿಸಿದ್ದರು. ಗುರುವಾರ ಶಿವಂ ಅಹಮದಾಬಾದ್‌ನಲ್ಲಿ ತಮ್ಮ ಕೆಲಸಕ್ಕೆ ಮರಳಿ ಸೇರಿಕೊಂಡಿದ್ದರೆ, ಆರ್ಯ ಕೂಡ ಗುಜರಾತ್‌ಗೆ ವರ್ಗಾವಣೆಯಾಗಿದ್ದು ಅಲ್ಲಿಯೇ ತರಬೇತಿ ಪೂರ್ಣ ಮಾಡಲಿದ್ದಾರೆ.
 

click me!