ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣ ಹೆಚ್ಚಾಗಿ ಕೇಳಿ ಬರ್ತಿದೆ. ಇದ್ರ ಜೊತೆ ವಿಚ್ಛೇದನದಲ್ಲೂ ಏರಿಕೆಯಾಗಿದೆ. ಕುಟುಂಬದಲ್ಲಿ ಆಗ್ತಿರುವ ಈ ಬದಲಾವಣೆಗೆ ವಾತಾವರಣ ಕಾರಣ ಎನ್ನುತ್ತಿದೆ ಹೊಸ ಅಧ್ಯಯನ.
ಜಾಗತಿಕ ತಾಪಮಾನದ ಏರಿಕೆಯಿಂದ ಅನೇಕ ರೀತಿಯ ಸಮಸ್ಯೆಗಳು ಉದ್ಭವಿಸುತ್ತವೆ. ಅಂತಹ ಸಮಸ್ಯೆಗಳ ಪೈಕಿ ಕೌಟುಂಬಿಕ ಹಿಂಸಾಚಾರವೂ ಒಂದು. ಒಂದು ವರದಿಯ ಪ್ರಕಾರ ಹವಾಮಾನ ಬಿಕ್ಕಟ್ಟಿನಿಂದ ಭಾರತ ಸೇರಿದಂತೆ ಮೂರು ದೇಶಗಳಲ್ಲಿ ಕೌಟುಂಬಿಕ ಹಿಂಸಾಚಾರ ಹೆಚ್ಚಿದೆ ಎಂಬುದು ತಿಳಿದುಬಂದಿದೆ.ಈಗಾಗಲೇ ಅನೇಕ ವರದಿಗಳು ಭಾರತ (India) ದಲ್ಲಿ ಕೌಟುಂಬಿಕ ಹಿಂಸಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ ಎಂಬುದನ್ನು ಹೇಳಿವೆ. ಈಗ ಹೊಸ ಅಧ್ಯಯನ ಕೌಟುಂಬಿಕ ಹಿಂಸಾಚಾರ ಏರಿಕೆಗೆ ಭಾರತಾದ್ಯಂತ ಹೆಚ್ಚುತ್ತಿರುವ ತಾಪಮಾನ (Temperature) ವೇ ಕಾರಣ ಎಂದು ತಿಳಿಸಿದೆ. ಜಾಮಾ ಸೈಕಿಯಾಟ್ರಿ ಜರ್ನಲ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ತಾಪಮಾನ ಏರಿಕೆಯಿಂದ ಕಡಿಮೆ ಮತ್ತು ಮಧ್ಯಮ ಆದಾಯದ ದಕ್ಷಿಣ ಏಷ್ಯಾ (South Asia ) ದೇಶಗಳಲ್ಲಿ ಹಿಂಸಾಚಾರವು ದೇಶದೆಲ್ಲೆಡೆ ಆವರಿಸುವ ವ್ಯಾಧಿಯಾಗಿ ಪರಿಣಮಿಸಿದೆ.
ಅಧ್ಯಯನ (Study) ಏನು ಹೇಳುತ್ತೆ ? : ಪಿಟಿಐ ವರದಿಯ ಪ್ರಕಾರ, ಜಾಗತಿಕ ತಾಪಮಾನದಲ್ಲಿ 1 ಡಿಗ್ರಿ ಸೆಲ್ಸಿಯಸ್ ಏರಿಕೆಯಾದ್ದರಿಂದ ಪ್ರತಿಶತ 4.5ರಷ್ಟು ನಿಕಟ ಪಾಲುದಾರ ಹಿಂಸೆ ಹೆಚ್ಚಾಗಿದೆ. ಸುಮಾರು 1,95,000 ಮಹಿಳೆಯರು ವರದಿ ಮಾಡಿದಂತೆ ಸಂಶೋಧಕರು ದೈಹಿಕ ಮತ್ತು ಮಾನಸಿಕ ಹಿಂಸೆಗೆ ಸಂಬಂಧಿಸಿದ ಡೇಟಾವನ್ನು ಸಂಗ್ರಹಿಸಿದ್ದಾರೆ. 21 ನೇ ಶತಮಾನದ ಅಂತ್ಯದ ವೇಳೆಗೆ ಕೌಟುಂಬಿಕ ಹಿಂಸಾಚಾರದ ದರವು ಶೇ. 21 ರಷ್ಟು ಹೆಚ್ಚಳವಾಗಲಿದೆ. ಭಾರತದಲ್ಲಿ ಐಪಿವಿ ಹರಡುವಿಕೆ ಶೇ. 23.5 ರಷ್ಟು, ನೇಪಾಳದಲ್ಲಿ ಶೇ. 14.8 ಮತ್ತು ಪಾಕಿಸ್ತಾನದಲ್ಲಿ ಶೇ. 5.9 ರಷ್ಟು ಹೆಚ್ಚಳವನ್ನು ಕಂಡಿದೆ. ವಿವಾಹಿತರು, ಲೈಂಗಿಕ ಸಂಪರ್ಕ ಹೊಂದಿರುವವರರಲ್ಲಿ ಐಪಿವಿ ಹೆಚ್ಚು ಕಂಡುಬಂದಿದೆ.
ಮಕ್ಕಳ ಮುಂದೆ ಒಳ್ಳೇದ್ದನೇ ಮಾಡಿ... ಏಕೆ ಅಂತೀರಾ ಈ ವೀಡಿಯೋ ನೋಡಿ
ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ದಕ್ಷಿಣ ಏಷ್ಯಾದಲ್ಲಿ ಐಪಿವಿ ಹೆಚ್ಚಿನ ಪ್ರಾಬಲ್ಯ ತೋರಿದೆ. ಜಾಗತಿಕ ಹವಾಮಾನ ಏರಿಕೆಯ ಐಪಿವಿ ಅನುಭವಿಸುತ್ತಿರುವ ಮಹಿಳೆಯರ ದುರ್ಬಲತೆ ಮತ್ತು ಅಸಮಾನತೆಯನ್ನು ಎತ್ತಿ ತೋರಿಸುತ್ತದೆ. ಮಹಿಳೆಯರು ದೈಹಿಕ, ಭಾವನಾತ್ಮಕ ಹಾಗೂ ಲೈಂಗಿಕ ಹಿಂಸೆಗಳನ್ನು ಅನುಭವಿಸುತ್ತಿದ್ದಾರೆ. ಇದಲ್ಲದೇ 2090ರ ಹೊತ್ತಿಗೆ ಭಾರತವು ಅತ್ಯಧಿಕ ಐಪಿವಿ ಹೆಚ್ಚಳವನ್ನು ಹೊಂದಬಹುದು ಎಂದು ಅಂದಾಜಿಸಲಾಗಿದೆ. ಕೌಟುಂಬಿಕ ಹಿಂಸಾಚಾರಕ್ಕೆ ಹವಾಮಾನ ಬಿಕ್ಕಟ್ಟು ಕಾರಣವಾಗಿರಬಹುದೆಂದು ಸಂಶೋಧಕರು ತಿಳಿಸಿದ್ದಾರೆ.
ತಾಪಮಾನ ಮನುಷ್ಯನ ಆರೋಗ್ಯ ಹಾಗೂ ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರುತ್ತೆ? : ಹೆಚ್ಚುತ್ತಿರುವ ತಾಪಮಾನವು ನೇರವಾಗಿ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ತೀವ್ರವಾದ ಶಾಖವು ಥರ್ಮೋರ್ಗ್ಯುಲೇಷನ್ ಮತ್ತು ಭಾವನೆ ನಿಯಂತ್ರಣಕ್ಕೆ ಸಂಬಂಧಿಸಿ ಮೆದುಳನ್ನು ಸಕ್ರಿಯವಾಗಿಸುತ್ತದೆ. ಶಾಖದಲ್ಲಿನ ಹೆಚ್ಚಳವು ಅಡ್ರಿನಾಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಮನುಷ್ಯನ ದೈಹಿಕ ಮತ್ತು ಮಾನಸಿಕ ಬದಲಾವಣೆಗಳ ಮೇಲೂ ಪರಿಣಾಮ ಬೀರುತ್ತದೆ. ಇದು ಪ್ರಚೋದನೆ, ಆಕ್ರಮಣಶೀಲತೆಗೆ ಕಾರಣವಾಗುತ್ತದೆ. ಇದರಿಂದ ಕೌಟುಂಬಿಕ ಹಿಂಸಾಚಾರ ಹೆಚ್ಚಾಗುವ ಸಾಧ್ಯತೆ ಇದೆ.
ಆಷಾಢ ಮಾಸದಲ್ಲಿ ಗಂಡ-ಹೆಂಡತಿ ಲೈಂಗಿಕ ಕ್ರಿಯೆ ನಡೆಸಬಾರದು ಅನ್ನೋದ್ಯಾಕೆ?
ಜಾಗತಿಕ ತಾಪಮಾನ ಏರಿಕೆಯಿಂದ ಬಡತನ, ಆಹಾರ ಮತ್ತು ಕುಡಿಯುವ ನೀರಿನ ಕೊರತೆ ಉಂಟಾಗುತ್ತದೆ. ದೈನಂದಿನ ವೇತನದಾರರ ಆದಾಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ದೈನಂದಿನ ಕೂಲಿಯನ್ನು ಗಳಿಸುವ ಮಾರ್ಗವಿಲ್ಲದೇ ಜನರು ಮನೆಯಲ್ಲೇ ಇರುವಂತ ಸಂದರ್ಭ ಎದುರಾಗಿದೆ. ಹಾಗಾಗಿಯೇ ಕಡಿಮೆ ಆದಾಯ ಮತ್ತು ಗ್ರಾಮೀಣ ಕುಟುಂಬಗಳಲ್ಲಿ ಐಪಿವಿ ಹೆಚ್ಚು ವ್ಯಾಪಿಸಿದೆ. ವಲಸೆ ಮುಂತಾದ ಕಾರಣದಿಂದ ಮಹಿಳೆಯರ ಮೇಲೆ ಹೆಚ್ಚಿನ ಒತ್ತಡ ಹಾಗೂ ದೌರ್ಜನ್ಯಗಳು ನಡೆಯುತ್ತವೆ. ಇದರಿಂದ ಮಹಿಳೆಯರ ಮೇಲಿನ ಹಿಂಸಾಚಾರ ಗಣನೀಯವಾಗಿ ಏರಿಕೆಯಾಗಿದೆ. ಅನೇಕ ಯುವತಿಯರು ಹಾಗೂ ಮಹಿಳೆಯರು ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ದೂರು ನೀಡಿದ್ದಾರೆ. ಭಾರತದಲ್ಲಿ ಕೌಟುಂಬಿಕ ಹಿಂಸೆ ಜೊತೆ ವಿಚ್ಛೇದನ ಕೂಡ ಹೆಚ್ಚಾಗ್ತಿದೆ.