ಜೈಪುರ: ಪತ್ನಿಗೆ ಫೋನ್‌ನಲ್ಲೇ ತ್ರಿವಳಿ ತಲಾಖ್ ನೀಡಿ ಪಾಕಿಸ್ತಾನದ ಮಹಿಳೆಯನ್ನು ಮದುವೆಯಾಗಲು ಮುಂದಾಗಿದ್ದ ವ್ಯಕ್ತಿಯನ್ನು ಜೈಪುರ ವಿಮಾನ ನಿಲ್ದಾಣದಲ್ಲೇ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು 35 ವರ್ಷದ ರೆಹಮಾನ್ ಎಂದು ಗುರುತಿಸಲಾಗಿದೆ. ಉದ್ಯೋಗದ ಕಾರಣಕ್ಕೆ ಕುವೈತ್‌ನಲ್ಲಿ ವಾಸವಿದ್ದ ಪಾಕಿಸ್ತಾನ ಮಹಿಳೆಯನ್ನು ಮದುವೆಯಾಗಿದ್ದಾನೆ ಎನ್ನಲಾಗಿದ್ದು, ಆ ಮದುವೆಗೂ ಮೊದಲು ಆತ ಫೋನ್‌ನಲ್ಲೇ ಪತ್ನಿ ಫರಿದಾ ಬಾನುಗೆ ತಲಾಖ್ ನೀಡಿದ್ದ.
ರೆಹಮಾನ್ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿದ್ದ ಪಾಕಿಸ್ತಾನ ಮಹಿಳೆ ಮೆಹ್ವಿಶ್ ಎಂಬಾಕೆಯನ್ನು ಸೌದಿ ಅರೇಬಿಯಾಗೆ ಕರೆಸಿಕೊಂಡು ಅಲ್ಲಿ ಮದ್ವೆಯಾಗಿದ್ದ. ಇದಾದ ನಂತರ ಈ ಪಾಕಿಸ್ತಾನ ಮಹಿಳೆ ಮೆಹ್ವಿಶ್ ಪ್ರವಾಸಿ ವೀಸಾದ ಮೂಲಕ ಭಾರತದ ಚುರುವಿಗೆ ಬಂದಿದ್ದು, ಅಲ್ಲಿ ರೆಹಮಾನ್‌ನ ಪೋಷಕರೊಂದಿಗೆ ವಾಸ ಮಾಡುತ್ತಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಲಾಖ್ ಪಡೆದ ಮಹಿಳೆ ಜೀವನಾಂಶಕ್ಕೆ ಅರ್ಹಳು, ಎಲ್ಲಾ ಧರ್ಮಕ್ಕೂ ಕಾನೂನು ಒಂದೇ ಎಂದ ಸುಪ್ರೀಂಕೋರ್ಟ್
ಕೆಲಸಕ್ಕೆಂದು ದೇಶ ತೊರೆದು ಸೌದಿ ರಾಷ್ಟ್ರದಲ್ಲಿ ನೆಲೆಸಿದ ಪತಿಯ ಈ ಕಿತಾಪತಿಯಿಂದ ಮನನೊಂದ ಹನುಮಾನ್‌ಗಢದ ಭದ್ರಾ ನಿವಾಸಿಯಾದ 29 ವರ್ಷದ ಫರಿದಾ ಬಾನು ತನ್ನ ಪತಿ ರೆಹಮಾನ್ ವಿರುದ್ದ ಕಳೆದ ತಿಂಗಳು ಎಫ್‌ಐಆರ್ ದಾಖಲಿಸಿದ್ದಳು. ವರದಕ್ಷಿಣೆ ಕಿರುಕುಳ ನೀಡಿ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡಿದ್ದಾನೆ ಎಂದು ಅವರು ದೂರಿನಲ್ಲಿ ದಾಖಲಿಸಿದ್ದಳು ಎಂದು ಹನುಮಾನ್‌ಗಢ ಎಸ್‌ಪಿ ರಣ್ವೀರ್ ಸಿಂಗ್ ಮಾಹಿತಿ ನೀಡಿದ್ದಾರೆ.
ವಾಟ್ಸಪ್ ವಾಯ್ಸ್ ನೋಟ್‌ನಲ್ಲಿ ತಲಾಖ್ ನೀಡಿದ್ದ ಗಂಡ ಅರೆಸ್ಟ್
ಇದಾದ ನಂತರ ಸೋಮವಾರ ರೆಹಮಾನ್ ಕುವೈತ್‌ನಿಂದ ಜೈಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಈ ವೇಳೆ ಆತನನ್ನು ಹನುಮಾನ್‌ಗಢದ ಪೊಲೀಸರ ತಂಡ ವಶಕ್ಕೆ ಪಡೆದಿದೆ. ಬಳಿಕ ಪ್ರಾಥಮಿಕವಾಗಿ ವಿಚಾರಣೆ ನಡೆಸಿ ಮಾರನೇ ದಿನ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಫರಿದಾ ಬಾನು ಜೊತೆ 2011ರಲ್ಲೇ ರೆಹಮಾನ್ ಮದುವೆಯಾಗಿದ್ದು ಒಂದು ಗಂಡು ಒಂದು ಹೆಣ್ಣು ಇಬ್ಬರು ಮಕ್ಕಳಿದ್ದಾರೆ. ಕೆಲಸ ಅರಸಿ ಕುವೈತ್‌ಗೆ ಹೋದ ರೆಹಮಾನ್ ಅಲ್ಲಿನ ಸಾರಿಗೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಯಾವಾಗ ಈತ 2ನೇ ಬಾರಿ ಮದುವೆಯಾದ ಪಾಕಿಸ್ತಾನದ ಮಹಿಳೆ ಮೆಹ್ವಿಶ್ ಚುರುವಿಗೆ ಬಂದು ನೆಲೆಸಿದಳು ಆಗ ಫರೀದಾ ಬಾನು ಗಂಡನ ವಿರುದ್ಧ ದೂರು ನೀಡಿದ್ದಾಳೆ. ಫರೀದಾ ಬಾನು ಪ್ರಸ್ತುತ ತನ್ನ ಪೋಷಕರ ಜೊತೆ ವಾಸ ಮಾಡುತ್ತಿದ್ದಾಳೆ.