ಉತ್ತರ ಪ್ರದೇಶದಲ್ಲಿ ಪತ್ನಿ ಪ್ರೇಮಿಯೊಂದಿಗೆ ಸಿಕ್ಕಿಬಿದ್ದಾಗ, ಆಕೆಯ ಗಂಡನೇ ಮುಂದೆ ನಿಂತು ಮದುವೆ ಮಾಡಿಸಿದ ಘಟನೆ ನಡೆದಿದೆ. ಬಾಬ್ಲು ಎಂಬಾತ ತನ್ನ ಹೆಂಡತಿ ರಾಧಿಕಾಳನ್ನು ಆಕೆಯ ಪ್ರಿಯತಮನೊಂದಿಗೆ ವಿವಾಹ ಮಾಡಿದ್ದಾನೆ.
ಹೆಂಡತಿ ಅಕ್ರಮ ಸಂಬಂಧಗಳಲ್ಲಿ ತೊಡಗಿದಾಗ, ಅಥವಾ ಕೇವಲ ಸಂಶಯ ಬಂದರೂ ಸಾಕು ಕೆಲವು ಪತಿಯರು ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡುತ್ತಾರೆ. ಇನ್ನು ಕೆಲವರು ಶೀಲ ಶಂಕಿಸಿ ಪತ್ನಿಯನ್ನೇ ಕೊಂದೇ ಬಿಟ್ಟಂತಹ ಹಲವು ಘಟನೆಗಳು ಸಮಾಜದಲ್ಲಿ ನಡೆದಿವೆ. ಹೀಗಿರುವಾಗ ಇಲ್ಲೊಂದು ಕಡೆ ಪ್ರೇಮಿಯ ಜೊತೆ ಸಿಕ್ಕಿಬಿದ್ದ ಪತ್ನಿಗೆ ಆಕೆಯ ಲವರ್ ಜೊತೆ ಗಂಡನೇ ಮುಂದೆ ನಿಂತು ಮದುವೆ ಮಾಡಿಸಿದ್ದಾನೆ. ಉತ್ತರ ಪ್ರದೇಶದ ಕಬೀರ್ ನಗರ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಬಾಬ್ಲು ಎಂಬಾತನೇ ಹೀಗೆ ಪತ್ನಿಗೆ ಆಕೆಯ ಪ್ರೇಮಿ ಜೊತೆ ಮದುವೆ ಮಾಡಿದ ದೊಡ್ಡ ಮನಸ್ಸಿನ ಪತಿ.
ಬಾಬ್ಲು ಮತ್ತು ರಾಧಿಕಾ 2017ರಲ್ಲಿ ವಿವಾಹವಾಗಿದ್ದರು. ಈ ದಾಂಪತ್ಯದಲ್ಲಿ ಅವರಿಗೆ 7 ಮತ್ತು 9 ವರ್ಷ ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ. ಬಾಬ್ಲು ಕೆಲಸಕ್ಕಾಗಿ ಮನೆಯಿಂದ ದೂರ ಹೋಗುತ್ತಿದ್ದ ವೇಳೆ ರಾಧಿಕಾ ಅದೇ ಗ್ರಾಮದ ಮತ್ತೊಬ್ಬ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು. ತನ್ನ ಹೆಂಡತಿ ಮತ್ತೊಬ್ಬ ಯುವಕನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ವಿಚಾರ ಗೊತ್ತಾದ ಕೂಡಲೇ ಬಾಬ್ಲು, ಪತ್ನಿ ರಾಧಿಕಾಗೆ, ಇಬ್ಬರು ಮಕ್ಕಳ ಜವಾಬ್ದಾರಿಯನ್ನು ತನಗೆ ಬಿಟ್ಟುಕೊಟ್ಟರೆ, ಆಕೆಯನ್ನು ಆಕೆಯ ಪ್ರಿಯತಮನೊಂದಿಗೆ ಮದುವೆ ಮಾಡಿಕೊಡುತ್ತೇನೆ ಎಂದು ಹೇಳುತ್ತಾನೆ. ರೋಗಿ ಬಯಸಿದ್ದು, ಹಾಲು ಅನ್ನ ವೈದ್ಯರು ಹೇಳಿದ್ದು ಅದೇ ಎಂಬ ಗಾದೆ ಮಾತಿನಂತೆ ಪತಿಯ ಮಾತಿಗೆ ಎದುರಾಡದೇ ಆಕೆ ಮಕ್ಕಳ ಜವಾಬ್ದಾರಿಯನ್ನು ಗಂಡನ ಹೆಗಲಿಗೊಪ್ಪಿಸಿದ್ದಾಳೆ. ನಂತರ ತನ್ನ ಪ್ರೇಮಿಯ ಜೊತೆ ಹಸೆಮಣೆ ಏರಿದ್ದಾಳೆ.
ಮೊದಲಿಗೆ ಪತ್ನಿಯ ಅನೈತಿಕ ವಿಚಾರ ಬಾಬ್ಲು ಕುಟುಂಬಕ್ಕೆ ತಿಳಿದಾಗ ಗಾಬರಿಯಾಗಿದ್ದಲ್ಲದೇ ಈ ಸಂಬಂಧವನ್ನು ನಿಲ್ಲಿಸಲು ಪ್ರಯತ್ನಿಸಲಾಯ್ತು. ಆದರೆ ಈ ಸಮಸ್ಯೆ ಮುಂದುವರಿಯುವ ಲಕ್ಷಣಗಳೇ ಕಂಡು ಬಂದ ಹಿನ್ನೆಲೆ ಹೆಂಡ್ತಿಯ ಈ ಅಕ್ರಮ ಸಂಬಂಧವನ್ನು ಹೇಗೆ ಪರಿಹರಿಸಬೇಕೆಂದು ಅರ್ಥವಾಗಲಿಲ್ಲ. ನಂತರ ಗ್ರಾಮಸ್ಥರಿಗೆ ತಿಳಿಸಿ, ಹೆಂಡತಿಯನ್ನು ಆ ಯುವಕನಿಗೆ ಮದುವೆ ಮಾಡಿಕೊಡಲು ಬಯಸುತ್ತೇನೆ ಎಂದು ಆತ ಹೇಳಿದ್ದಾನೆ.
ಒಂದೇ ದಿನ ಇಬ್ಬರ ಮದುವೆಯಾದ ಕಿಲಾಡಿ: ಬೆಳಗ್ಗೆ ಪ್ರೇಯಸಿ, ಸಂಜೆ ಪೋಷಕರು ನೋಡಿದ ಹುಡುಗಿ ಜೊತೆ ಮದ್ವೆ
ನಂತರ ಆತ ನ್ಯಾಯಾಲಯಕ್ಕೆ ಹೋಗಿ ಹೆಂಡತಿ ಮತ್ತು ಆಕೆಯ ಪ್ರಿಯತಮನ ಮದುವೆಯನ್ನು ರಿಜಿಸ್ಟ್ರಾರ್ ಮಾಡಿಸಿದ್ದಾನೆ.. ನಂತರ ಅವರನ್ನು ದೇವಸ್ಥಾನಕ್ಕೆ ಕರೆದೊಯ್ದು ಅಲ್ಲಿ ಹಾರ ಬದಲಾವಣೆಯಂತಹ ಇತರ ವಿಧಿವಿಧಾನಗಳನ್ನು ನೆರವೇರಿಸಿದ್ದಾನೆ. ಅದಕ್ಕೂ ಮುನ್ನ ಬಾಬ್ಲು ರಾಧಿಕಾಳಲ್ಲಿ ಇಬ್ಬರು ಮಕ್ಕಳ ಜವಾಬ್ದಾರಿಯನ್ನು ತನಗೆ ಬಿಡಬೇಕು ಎಂದು ಕೇಳಿದ್ದಾನೆ. ಗಂಡನ ಬೇಡಿಕೆಗೆ ರಾಧಿಕಾ ಒಪ್ಪಿದ್ದಾಳೆ. ಗ್ರಾಮಸ್ಥರು ಸೇರಿದಂತೆ ಅನೇಕ ಜನರು ಈ ವಿವಾಹದಲ್ಲಿ ಭಾಗವಹಿಸಿದ್ದರು. ಅವರೆಲ್ಲರ ಸಮ್ಮುಖದಲ್ಲಿ ಮದುವೆ ನಡೆಯಿತು. ಬಾಬ್ಲು ಮದುವೆಯ ಎಲ್ಲಾ ಕಾರ್ಯಗಳನ್ನು ಮುತುವರ್ಜಿಯಿಂದ ಮಾಡಿದ ಹೆಂಡತಿಯನ್ನು ಆಕೆಯ ಪ್ರೇಮಿಯ ಜೊತೆ ಕಳುಹಿಸಿಕೊಟ್ಟಿದ್ದಾನೆ.
ಬಹುತೇಕ ಕುಟುಂಬಗಳಲ್ಲಿ ಗಂಡ ದಾರಿ ತಪ್ಪಿದಾಗ ಪತ್ನಿಯೇ ಮಕ್ಕಳ ಜವಾಬ್ದಾರಿವಹಿಸಿಕೊಂಡು ಮಕ್ಕಳಿಗೆ ಅಪ್ಪ ಅಮ್ಮ ಇಬ್ಬರೂ ಆಗಿ ನಿಲ್ಲುತ್ತಾಳೆ. ಆದರೆ ಇಲ್ಲಿ ತಾಯಿಯ ದಾರಿ ತಪ್ಪಿದ್ದು, ತಂದೆ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಂಡಿರುವುದು ನಿಜಕ್ಕೂ ಗಂಡಸರು ಹೆಮ್ಮೆ ಪಡುವ ವಿಚಾರ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.
64 ವರ್ಷಗಳ ಹಿಂದೆ ಮನೆಯಿಂದ ಓಡಿ ಹೋಗಿದ್ದ ಜೋಡಿಗೆ 80ರ ಹರೆಯದಲ್ಲಿ ಮದುವೆ ಭಾಗ್ಯ