ವಾಚ್ ಕದ್ದ ವಿದ್ಯಾರ್ಥಿ ಶಿಕ್ಷಕನಾಗಿದ್ದು ಹೇಗೆ? ಓಶೋ ಹೇಳಿದ ಕತೆ

By Suvarna News  |  First Published Oct 10, 2020, 4:24 PM IST

ಇನ್ನೊಬ್ಬರು ತಪ್ಪು ಮಾಡಿದಾಗ ನಮಗೆ ಸಿಟ್ಟು ಬರುತ್ತದೆ. ಆದರೆ ತಪ್ಪನ್ನೂ ಅವರಿಗೆ ಮನದಟ್ಟು ಮಾಡಿಸಿ, ಸಂಬಂಧವನ್ನೂ ಕಾಪಾಡಿಕೊಳ್ಳುವುದು ಹೇಗೆ? ಓಶೋ ಹೇಳಿದ ಒಂದು ಕತೆ ಹೀಗಿದೆ.


ಇನ್ನೊಬ್ಬರು ತಪ್ಪು ಮಾಡಿದಾಗ ನಮಗೆ ಸಿಟ್ಟು ಬರುತ್ತದೆ. ಆದರೆ ತಪ್ಪನ್ನೂ ಅವರಿಗೆ ಮನದಟ್ಟು ಮಾಡಿಸಿ, ಸಂಬಂಧವನ್ನೂ ಕಾಪಾಡಿಕೊಳ್ಳುವುದು ಹೇಗೆ? ಓಶೋ ಹೇಳಿದ ಒಂದು ಕತೆ ಹೀಗಿದೆ.
ದೊಡ್ಡ ಕಾರ್ಯಕ್ರಮ ಒಂದಕ್ಕೆ ಹಿರಿಯ ನಾಗರಿಕರೊಬ್ಬರು ಹೋಗಿದ್ದರು. ಆಗ ಅವರ ಬಳಿಗೆ ವ್ಯಕ್ತಿಯೊಬ್ಬ ಬಂದ. 'ಸರ್, ನಿಮಗೆ ನನ್ನ ನೆನಪಿದೆಯಾ?' ಎಂದು ಕೇಳಿದ.ಅವರಿಗೆ ನೆನಪಾಗಲಿಲ್ಲ. 
ಆಗ ಆತನೇ ನೆನಪಿಸಿದ.'ಸರ್, ನೀವು ನನಗೆ ಮೂರನೇ ತರಗತಿಯಲ್ಲಿ ಮೇಷ್ಟ್ರಾಗಿದ್ದಿರಿ. ಒಂದು ಸನ್ನಿವೇಶದಲ್ಲಿ ನೀವು ನನ್ನ ಮಾನ, ಮರ್ಯಾದೆ, ಗೌರವ, ಘನತೆಗಳನ್ನು ಕಾಪಾಡಿದ ರೀತಿಯಿಂದ ಎಷ್ಟು ಪ್ರಭಾವಿತನಾದೆ ಎಂದರೆ, ನಾನೂ ಸಹ ಹೀಗೆ ಶಿಕ್ಷಕನಾಗಿ ಮಕ್ಕಳ ಮೇಲೆ ಒಳ್ಳೆಯ ಪ್ರಭಾವ ಬೀರಬೇಕು ಎಂದು ನಿರ್ಧರಿಸಿಬಿಟ್ಟೆ. ಹಾಗೇ ಇಂದು ಶಿಕ್ಷಕನಾಗಿದ್ದೇನೆ' ಎಂದ. 

ಆದರೂ ಮೇಷ್ಟ್ರಿಗೆ ಆತನ ನೆನಪಾಗಲಿಲ್ಲ. ಕಡೆಗೆ ಅವನೇ ಅಂದಿನ ಘಟನೆಯನ್ನು ನೆನಪಿಸಿದ. 'ತರಗತಿಯಲ್ಲಿ ಅಂದು ಬೇರೊಬ್ಬ ಹುಡುಗ ಹೊಸ ವಾಚ್ ಒಂದನ್ನು ಕಟ್ಟಿಕೊಂಡು ಬಂದಿದ್ದ. ನಾನೂ ಸಹ ಅಂತಹ ಸುಂದರ ಕೈಗಡಿಯಾರಕ್ಕಾಗಿ ಹಂಬಲಿಸುತ್ತಿದ್ದೆ. ಆದರೆ ಅದು ಈಡೇರುವುದು ಅಸಾಧ್ಯವಾಗಿತ್ತು. ಆಸೆ ತಡೆಯಲಾರದೆ ಆ ಹುಡುಗನ ಗಡಿಯಾರವನ್ನು ಕದ್ದು ಕಿಸೆಯೊಳಗೆ ಸೇರಿಸಿಬಿಟ್ಟೆ. ಆ ಹುಡುಗ, ತನ್ನ ಗಡಿಯಾರವನ್ನು ಯಾರೋ ಕದ್ದಿದ್ದಾರೆ ಎಂದು ನಿಮಗೆ ದೂರಿದ. ನೀವು, ''ಯಾರು ಅದನ್ನು ಕದ್ದುಕೊಂಡಿದ್ದೀರೋ ಅವನಿಗೆ ಹಿಂದಿರುಗಿಸಿ" ಎಂದು ಹೇಳಿದಿರಿ. ಎಲ್ಲರ ಮುಂದೆ ತಪ್ಪು ಒಪ್ಪಿಕೊಳ್ಳುವ ಧೈರ್ಯವಿಲ್ಲದೆ ಸುಮ್ಮನಾಗಿಬಿಟ್ಟೆ. 



ಆಗ ನೀವು ಬಾಗಿಲನ್ನು ಮುಚ್ಚುತ್ತಾ, 'ಹಾಗಿದ್ದರೆ ನಾನು ಪ್ರತಿಯೊಬ್ಬರ ಜೇಬನ್ನೂ ಹುಡುಕಬೇಕಾಗುತ್ತದೆ' ಎಂದಿರಿ. ನಾನು ಭಯದಲ್ಲಿ ತಲ್ಲಣಿಸಿದೆ.ಆದರೆ ನೀವು ಎಲ್ಲ ವಿದ್ಯಾರ್ಥಿಗಳನ್ನೂ ಗೋಡೆಯ ಬಳಿ ಸಾಲಾಗಿ ನಿಲ್ಲಿಸಿ ಹೇಳಿದಿರಿ. 'ಎಲ್ಲರೂ ಕಣ್ಣುಗಳನ್ನು ಮುಚ್ಚಿರಬೇಕು. ನಾನು ಹೇಳುವವರೆಗೂ ಯಾರೂ ಕಣ್ಣು ತೆರೆಯುವಂತಿಲ್ಲ' ಎಂದು ಕಟ್ಟಪ್ಪಣೆ ಮಾಡಿ, ಪ್ರತಿಯೊಬ್ಬರ ಕಿಸೆಯನ್ನೂ ಹುಡುಕಿದಿರಿ. ನನ್ನ ಕಿಸೆಯಲ್ಲಿ ವಾಚ್ ಸಿಕ್ಕಿತು ನಿಮಗೆ. ಆದರೆ ನೀವು ಚಕಾರ ಎತ್ತದೆ, ಇತರರೆಲ್ಲರ ಬಳಿಗೂ ಹೋಗಿ ಅವರ ಜೇಬುಗಳನ್ನೂ ತಲಾಶ್ ಮಾಡಿದಿರಿ. ನಂತರ ಎಲ್ಲರೂ ಕಣ್ಣು ತೆರೆಯಲು ಹೇಳಿ ಹುಡುಗನಿಗೆ ಆ ವಾಚನ್ನು ಹಿಂದಿರುಗಿಸಿದಿರಿ. ಕದ್ದವನು ಯಾರು ಎಂದು ಯಾರಿಗೂ ಹೇಳಲಿಲ್ಲ. ಬೇರೆ ಯಾರೇ ಆಗಿದ್ದರೂ ಎಲ್ಲರೆದುರು ನನ್ನನ್ನು ಕಳ್ಳ, ಅಯೋಗ್ಯ, ಸುಳ್ಳ ಎಂದೆಲ್ಲ ನಿಂದಿಸುತ್ತಿದ್ದರು. ಆದರೆ ನೀವು ಹಾಗೆ ಏನನ್ನೂ ಮಾಡಲಿಲ್ಲ. ನನ್ನನ್ನು ಶಿಕ್ಷಿಸಲಿಲ್ಲ. ಎಲ್ಲರ ಮುಂದೆ ನನ್ನ ಘನತೆ ಉಳಿಸಿದಿರಿ. ಅಂದು ನೀವು ನನಗೆ ತೋರಿದ ಗೌರವ ಮುಂದೆ ನನಗೆ ಜೀವನದ ಪಾಠವಾಯಿತು. ಅಂದಿನಿಂದ ನಂತರ ನಾನು ಎಂದೂ ಕದಿಯಲಿಲ್ಲ. ಸುಳ್ಳು ಹೇಳಲಿಲ್ಲ. ಮಕ್ಕಳು ಮೆಚ್ಚುವ ಶಿಕ್ಷಕನಾದೆ.

Tap to resize

Latest Videos

ಹೀಗಾಗುತ್ತಿದ್ದರೆ ಶೀಘ್ರದಲ್ಲೇ ಸಂಗಾತಿ ನಿಮ್ಮಿಂದ ದೂರ ಆಗಬಹುದು! 

ಗುರುಗಳು ಹೇಳಿದರು- 'ಅಂದಿನ ಆ ಘಟನೆ ನನಗೆ ನೆನಪಿದೆ. ಆದರೆ ನೀನು ಹೇಳದೆ ಇದ್ದಿದ್ದರೆ ಆ ಹುಡುಗ ನೀನೇ ಅಂತ ತಿಳಿಯುತ್ತಲೇ ಇರಲಿಲ್ಲ‌. ತಿಳಿದದ್ದು ಈಗಲೇ.'
ಆಶ್ಚರ್ಯಚಕಿತನಾಗಿ ಆ ವ್ಯಕ್ತಿ ಕೇಳಿದ- 'ಅದು ಹೇಗೆ ಸಾಧ್ಯ ಸರ್?'
ಗುರುಗಳು ಹೇಳಿದರು- 'ಏಕೆಂದರೆ ಅಂದು ನಿಮ್ಮೆಲ್ಲರ ಜೊತೆ ನಾನೂ ಕಣ್ಣು ಮುಚ್ಚಿಕೊಂಡಿದ್ದೆ!'

ತುಂಟಿ ಮಗಳಿಗೊಂದು ಪತ್ರ: ಇಂದು ಮಗಳ ದಿನವಂತೆ! 

ಈ ಘಟನೆ ಹೃದಯಸ್ಪರ್ಶಿ ಆಗಿದೆಯಲ್ಲವೇ. ಆ ಗುರುವಿನಂಥ ಆದರ್ಶ ಶಿಕ್ಷಕರು, ಮುಖಂಡರು ನಮ್ಮ ಸಮಾಜವನ್ನು, ಕುಟುಂಬಗಳನ್ನು ಪ್ರೀತಿ ಘನತೆಗಳಿಂದ ಬೆಸೆಯಬಲ್ಲವರು. ಇಂಥವರು ಇದ್ದಲ್ಲಿ ಅನಗತ್ಯ ದೂರು ವಂಚನೆ ತಟವಟ ಕಿರಿಕಿರಿ ಇರುವುದಿಲ್ಲ. ಸಂದಿಗ್ಧ ಸನ್ನಿವೇಶಗಳನ್ನು ಯಾರ ಘನತೆ ಗೌರವವೂ ಮುಕ್ಕಾಗದಂತೆ ಕಾಪಾಡುವುದು ಹೇಗೆ ಎಂಬುದು ಇವರಿಗೆ ತಿಳಿದಿರುತ್ತದೆ.ಇಂಥ ಕೆಲವು ಮೇಸ್ಟ್ರುಗಳನ್ನು ನೋಡಿರುತ್ತೀರಿ. ಇವರು ನೀವು ಒಳ್ಳೆಯ ಕೆಲಸ ಮಾಡಿದರೆ ಕ್ಲಾಸ್‌ನಲ್ಲಿ ಎಲ್ಲರ ಮುಂದೆ ನಿಮ್ಮನ್ನು ಶ್ಲಾಘಿಸುತ್ತಾರೆ. ಹಾಗೇ ನೀವು ಏನಾದರೂ ತಪ್ಪು ಮಾಡಿದರೆ, ಸ್ಟಾಫ್ ರೂಮಿಗೆ ಒಬ್ಬನನ್ನೇ ಕರೆಸಿ ತಿಳಿಹೇಳುತ್ತಾರೆ. ಇವರೇ ನಿಜಕ್ಕೂ ಮಕ್ಕಳ ಭವಿಷ್ಯ ಬರೆಯುವವರು.

ತೂತಾದ ಕೊಡದಲ್ಲೂ ನೀರು ಹನಿಸಬಹುದು! ಎರಡು ಕತೆಗಳು

click me!