
ಪ್ರಶ್ನೆ: ನನ್ನ ವಯಸ್ಸು ಇಪ್ಪತ್ತೈದು. ಇತ್ತೀಚೆಗೆ ಮದುವೆಯಾಯ್ತು. ಪತ್ನಿಯ ವಯಸ್ಸು ಇಪ್ಪತ್ತು. ಆಕೆ ಇತ್ತೀಚೆಗಷ್ಟೇ ಡಿಗ್ರಿ ಮುಗಿಸಿ ಉದ್ಯೋಗ ಹುಡುಕುತ್ತಿದ್ದಳು. ನಮ್ಮದು ಅರೇಂಜ್ಡ್ ಮ್ಯಾರೇಜ್. ನಮ್ಮಿಬ್ಬರಿಗೂ ಮೊದಲ ರಾತ್ರಿಯ ಬಗ್ಗೆ ನಿಜವಾಗಿಯೂ ಏನೂ ಗೊತ್ತಿರಲಿಲ್ಲ. ಆ ರಾತ್ರಿ ನಾವಿಬ್ಬರೂ ಸಂಕೋಚದಿಂದ ಮುದ್ದೆಯಾಗಿದ್ದೆವು. ಆಕೆಗೆ ಧರಿಸಿದ ಬಟ್ಟೆ ತೆಗೆಯುವುದಕ್ಕೂ ಸಂಕೋಚ. ಆಕೆಯನ್ನು ಮುಟ್ಟುವುದಕ್ಕೆ ಹೋದರೆ ಗಾಬರಿಯಾದಳು. ಹೆದರಿಕೊಂಡಿದ್ದಾಳೆ ಅನಿಸಿ ಸುಮ್ಮನಾದೆ. ಮರುದಿನ ಗೆಳೆಯರು ಹಿಂದಿನ ರಾತ್ರಿ ಬಗ್ಗೆ ಪ್ರಶ್ನೆ ಮಾಡಿದರು. ಸಂಕೋಚವಾಯ್ತು. ಏನು ಉತ್ತರ ಕೊಡ್ಲಿ ಅಂತ ಗೊತ್ತಾಗಲಿಲ್ಲ. ಅವಳಿಗೂ ಇದೇ ಅನುಭವ. ಮದುವೆಯಾಗಿ ಒಂದು ವಾರವಾಯಿತು. ಇನ್ನೂ ಮೊದಲ ರಾತ್ರಿಯ ಮಿಲನದ ಅನುಭವ ಆಗಿಲ್ಲ. ಹೇಗೆ ಮುಂದುವರಿಯೋದು ಅಂತ ಇಬ್ಬರಿಗೂ ಗೊತ್ತಾಗ್ತಿಲ್ಲ.
#FeelFree ಮದುವೆ ಆದ್ಮೇಲೆ ಹೆಣ್ಮಕ್ಕಳು ದಪ್ಪಗಾಗೋದಕ್ಕೆ ಸೆಕ್ಸ್ ಕಾರಣ ...
ಉತ್ತರ: ನಿಮ್ಮದು ಅನೇಕರು ಎದುರಿಸುತ್ತಿರುವ ಸಮಸ್ಯೆಯೇ. ಕೆಲವರು ಹೇಳಿಕೊಳ್ಳುತ್ತಾರೆ. ಹೆಚ್ಚಿನವರು ಹೇಳಲ್ಲ. ಸಾಮಾನ್ಯವಾಗಿ ಈ ವಿಷಯದಲ್ಲಿ ಪುರುಷರಿಗೆ ಆತುರ ಹೆಚ್ಚು. ಅದರಿಂದಾಗಿ, ಸಂಕೋಚದಿಂದ ಇನ್ನೂ ಪೂರ್ತಿ ತೆರೆದುಕೊಳ್ಳದ ಹೆಣ್ಣನ್ನು ಮಿಲನಕ್ಕಾಗಿ ಬಲವಂತಪಡಿಸುತ್ತಾರೆ. ಇದು ಕಹಿ ಅನುಭವದಲ್ಲಿ ಮುಗಿಯುತ್ತದೆ. ಮುಂದೆ ಜೀವನ ಪೂರ್ತಿ ಈ ಕಹಿ ಉಳಿಯಬಹುದು.
ಮುಖ್ಯವಾಗಿ ನಿಮಗೆ ಈ ವಿಚಾರದಲ್ಲಿ ವೈಜ್ಞಾನಿಕ ತಿಳಿವಿನ ಕೊರತೆ ಇದೆ ಅಂತ ನನಗೆ ಅನಿಸುತ್ತದೆ. ಹೆಚ್ಚಿನವರು, ಪ್ರಸ್ತ ಎಂದರೆ ಮೊದಲನೇ ರಾತ್ರಿಯೇ ಆಗಬೇಕು ಎಂದು ಭಾವಿಸುತ್ತಾರೆ. ಇಲ್ಲವಾದರೆ ತಮ್ಮಲ್ಲಿ ಏನೋ ತೊಂದರೆ ಇದೆ ಅಂತ ತಿಳಿಯುತ್ತಾರೆ. ಆ ಚಿಂತೆಯಿಂದ ಬಳಲಿ ಸುಖಜೀವನದ ಸಾಧ್ಯತೆಗಳನ್ನು ಕೆಡಿಸಿಕೊಳ್ಳುತ್ತಾರೆ.
ಪ್ರಸ್ತ ಅಥವಾ ಮೊದಲ ರಾತ್ರಿ ಎಂಬ ಪದ್ಧತಿಯ ಬಗ್ಗೆ ನಮ್ಮಲ್ಲಿ ಅನೇಕ ತಪ್ಪು ಕಲ್ಪನೆಗಳೂ ಇವೆ. ಮದುವೆಯಾದ ಹುಡುಗಿ ಕನ್ಯೆಯೇ ಅಲ್ಲವೇ ಎಂಬುದನ್ನು ಪತ್ತೆ ಮಾಡಲೂ ಕೆಲವು ಕಡೆ ಈ ರಾತ್ರಿಯನ್ನು ಬಳಸಿಕೊಳ್ಳುತ್ತಾರೆ. ಇಂಥ ಕಲ್ಪನೆಗಳನ್ನು ತಿರಸ್ಕರಿಸಬೇಕು.
ಸಂತಾನದ ಕನಸು ನನಸಾಗಿಸಲು ವೈದ್ಯಕೀಯ ಹೊಸ ವಿಧಾನ!
ವಾಸ್ತವವಾಗಿ ಮೊದಲ ರಾತ್ರಿಯೇ ನಿಮ್ಮ ಮಿಲನದ ಪ್ರಥಮ ರಾತ್ರಿಯೂ ಆಗಬೇಕಿಲ್ಲ. ಅವಸರ ಬೇಡ. ನೀವು ಈ ವಿಚಾರದಲ್ಲಿ ಸಾಕಷ್ಟು ಸಮಯ ತೆಗೆದುಕೊಳ್ಳಬಹುದು. ಈ ವಿಷಯದಲ್ಲಿ ಗಂಡಿಗಿರುವಷ್ಟು ಕಾಮೋತ್ಸಾಹ ಹೆಣ್ಣಿಗೆ ಇರುವುದಿಲ್ಲ. ಆಕೆ ಮೊದಲು ತನ್ನ ಗಂಡನನ್ನು ಅರ್ಥ ಮಾಡಿಕೊಳ್ಳಲು ಬಯಸುತ್ತಾಳೆ. ಅವನಿಗೆ ನನ್ನಲ್ಲಿ ಪ್ರೀತಿ ಹುಟ್ಟಲಿ ಅಂತ ಹಂಬಲಿಸುತ್ತಾಳೆ. ಕಾಮ ಇದರ ನಂತರದ ಮಾತು.
ಈಗ ನೀವಿಬ್ಬರೂ ಆರೋಗ್ಯಕಾರಿ ಕಾಮ ಕಲಾಪದ ಬಗ್ಗೆ ನಿಮ್ಮ ಅರಿವನ್ನು ಹೆಚ್ಚಿಸಿಕೊಳ್ಳಬೇಕು. ಮಿಲನ ಇರುವುದು ಕೇವಲ ಮಗು ಮಾಡುವುದಕ್ಕಾಗಿ ಅಲ್ಲ, ದೈಹಿಕ ಸುಖ ಹಾಗೂ ಆರೋಗ್ಯಕ್ಕಾಗಿ ಕೂಡಾ. ಇಬ್ಬರೂ ಪರಸ್ಪರರ ಲೈಂಗಿಕ ಅಂಗಗಳ ಪರಿಚಯ ಮಾಡಿಕೊಳ್ಳಬೇಕು. ಮೊದಲು ಇಬ್ಬರೂ ನಿಮ್ಮ ಸಂಕೋಚದ ಪರಿಧಿಗಳಿಂದ ಹೊರಬನ್ನಿ. ಇಬ್ಬರೂ ಏಕಾಂತದಲ್ಲಿರುವ ಹೊತ್ತನ್ನು ಹೆಚ್ಚು ಹೆಚ್ಚಾಗಿ ಸೃಷ್ಟಿಸಿಕೊಳ್ಳಿ. ಇಬ್ಬರೂ ಪರಸ್ಪರರನ್ನು ಅರೆನಗ್ನವಾಗಿ ಹಾಗೂ ನಂತರ ನಗ್ನವಾಗಿ ಪರಿಚಯಿಸಿಕೊಳ್ಳಿ. ಒಬ್ಬರು ಇನ್ನೊಬ್ಬರನ್ನು ಹಿತವಾಗಿ ಮುಟ್ಟುವುದರಿಂದ ಉಂಟಾಗುವ ಆನಂದವನ್ನು ಸವಿಯಿರಿ. ನಿಮ್ಮ ಅಪಕಲ್ಪನೆ ಅಥವಾ ಸಂಕೋಚ ಅಥವಾ ಭಯ ಏನಿದ್ದರೂ ಪರಸ್ಪರ ಹಂಚಿಕೊಳ್ಳಿ. ಆಗ ಅದು ದೂರವಾಗುವುದು. ನಿಮ್ಮ ಸರಸಕ್ಕೆ ಮನೆ ಮಂದಿ ಅಡ್ಡಿ ಎನಿಸಿದರೆ ಇಬ್ಬರೇ ಎಲ್ಲಾದರೂ ಪ್ರವಾಸ ಹೋಗಿ ಬನ್ನಿ.
ಇಬ್ಬರೂ ಸಾಕಷ್ಟು ಶೃಂಗಾರ ಸಾಹಿತ್ಯವನ್ನು ಓದಿ. ಅದರಲ್ಲಿ ಕಲ್ಪನೆ ಹಾಗೂ ಕ್ರಿಯೇಟಿವಿಟಿಗೆ ಅವಕಾಶ ಇದೆ. ಡಾ.ಅನುಪಮಾ ನಿರಂಜನ, ಡಾ.ವಿನೋದ ಛಬ್ಬಿ ಮುಂತಾದವರ ದಾಂಪತ್ಯ ಸಲಹೆ ಪುಸ್ತಕವನ್ನು ಓದಿ. ಅದರಲ್ಲಿ ಆರೋಗ್ಯಕಾರಿ ಲೈಂಗಿಕ ಜೀವನದ ಸ್ವರೂಪದ ಬಗ್ಗೆ ತಿಳಿಸಲಾಗಿದೆ. ನೀವು ಯಾವಾಗ ಎಲ್ಲ ಸಂಕೋಚ ಬಿಟ್ಟು ಸೆಕ್ಸ್‌ನ ಅದ್ಭುತ ಸುಖ ಅನುಭವಿಸುತ್ತೀರೋ ಅದೇ ನಿಮ್ಮ ಫಸ್ಟ್ ನೈಟ್. ಹ್ಯಾಪೀ ಫಸ್ಟ್ ನೈಟ್!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.