ದಾಂಪತ್ಯ ಉಸಿರುಕಟ್ಟಿಸದಂತೆ ಕಾಯ್ದುಕೊಳ್ಳುವುದು ಹೇಗೆ?

By Kannadaprabha News  |  First Published Mar 11, 2020, 4:06 PM IST

ಇಂದು ವಿದ್ಯಾವಂತರೆನಿಸಿಕೊಂಡಿರುವ ಜನರಲ್ಲಿ ನೂರಕ್ಕೆತೊಂಬತ್ತರಷ್ಟುಜನ ಅತ್ಯಾಧುನಿಕ ಮೊಬೈಲ್‌, ಇಂಟರ್‌ನೆಟ್‌ ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾರೆ. ಈ ಮೊಬೈಲ್‌ ಎಂಬ ‘ಭಸ್ಮಾಸುರ’ ಆಧುನಿಕರ ಸಂಸಾರಕ್ಕೆ ಶಾಪವಾಗಿದ್ದಾನೆ. 


‘ಮದುವೆ’ ಎಂಬ ಶಬ್ದವೇ ರೋಮಾಂಚನವಾದದ್ದು, ಮಧುರವಾದದ್ದು. ಯೌವ್ವನದಲ್ಲಿ ಮದುವೆಯ ಕನಸು ಕಾಣದವರು ಯಾರಿಲ್ಲ? ಬಾಲ್ಯದಲ್ಲಿ ತುಂಟಾಟ ಮಾಡಿದರೆ ಹಿರಿಯರು ‘ನೀನು ಹೀಗೆಲ್ಲಾ ಮಾಡಿದರೆ, ನಿನಗೆ ಮದುವೆ ಮಾಡಿ ಬಿಡುತ್ತೇವೆ’ ಎಂದು ಗದರಿದಾಗ ಖುಷಿಯೂ, ಭಯವೂ ಒಟ್ಟಿಗೆ ಆದ ಅನುಭವ ಅನೇಕರಿಗಿರಬಹುದು.

ಹಾಗಾದರೆ, ಮದುವೆಯಲ್ಲಿ ಸಂಭ್ರಮದ ಜೊತೆಗೆ ಭಯದ ಒಂದೆಳೆ ಕೂಡಇದೆಎಂದಾಯಿತು. ಮನುಷ್ಯನಜೀವನದಲ್ಲಿ ವಿದ್ಯೆ, ನೌಕರಿ ಇವೆಲ್ಲವುಗಳಿಗಿಂತ ಅತ್ಯಂತ ಪ್ರಮುಖವಾದದ್ದು ಮದುವೆಯೇ. ಮದುವೆಯಾಗುವಾಗ ಆಯ್ಕೆಯಲ್ಲಿ ಎಡವಿದರೆ ಇಡೀ ಜೀವನದ ಗತಿಯೇ ಬದಲಾಗುತ್ತದೆ. ಪರ್ವತವನ್ನೇರುವ ಗುರಿಯೊಂದಿಗೆ ಹೊರಟವ ಪ್ರಪಾತದೆಡೆಗೆ ಜಾರುವಂತೆ!

Latest Videos

undefined

ನಿಮ್ಮ ಸಂಗಾತಿ ಬೆವರುತ್ತಿದ್ದರೆ ನಿಮ್ಮಿಂದ 'ಅದನ್ನು' ಬಯಸುತ್ತಿರಬಹುದು!

ಹೆಣ್ಣೊಬ್ಬಳು ತಾನು ಹುಟ್ಟಿಬೆಳೆದ ಮನೆ, ಪರಿಸರ, ಜನ್ಮವಿತ್ತತಂದೆ-ತಾಯಿಎಲ್ಲರನ್ನೂತೊರೆದು ಮದುವೆಯ ದಿನ ಅಪರಿಚಿತ ವಾತಾವರಣಕ್ಕೆ ಬಂದು, ಅಲ್ಲಿಯೇ ಬದುಕಿ-ಬಾಳಿ ಅದನ್ನೇ ತನ್ನ ಮನೆ ಎಂದು ಭಾವಿಸಿ ಇಡೀ ಬದುಕನ್ನು ಕಳೆಯುವುದು ಹೆಣ್ಣಿಗೆ ಮಾತ್ರವೇ ಸಾಧ್ಯವಾಗುವಂತದ್ದು. 

ತನ್ನ ಕನಸಿನ ಕನ್ಯೆ ತನ್ನರಮನೆಗೆ ಬರುವಾಗ ಗಂಡು ಸಹಜವಾಗಿಯೇ ಸಂಭ್ರಮಿಸುತ್ತಾನೆ. ಮದುವೆಯ ದಿನ ಮಾಲೆ ಹಿಡಿದು ಮಂಟಪಕ್ಕೆ ವಧು ಆಗಮಿಸುತ್ತಿರುವಂತೆಯೇ ಗಂಡಿನೆದೆಯ ಮಧುಪಾತ್ರೆ ಸ್ರವಿಸುತ್ತದೆ. ಒಂಟಿಸಲಗದಂತೆ ಬಂದ ಮದುವೆಯ ಗಂಡು ಕಲ್ಯಾಣಮಂಟಪ ದಿಂದ ಮನೆಗೆ ದಸರೆಯ ಅಂಬಾರಿ ಹೊರುವ ಆನೆಯಂತೆ ಜೊತೆಯಾಗಿ ಹಿಂದಿರುಗುತ್ತಾನೆ. ಅಂದಿನ ರಾತ್ರಿ ಅವರವರ ಬಾಳಿನ ಅವಿಸ್ಮರಣೀಯ ಕ್ಷಣವೇ ಸರಿ.

‘ಬಂದಳೊಳಗೆ ನನ್ನ ಹೆಣ್ಣು, ಗಂಧಗಾಳಿಯಾಡಿತು!

ಅಂದವೆ ಮೈಗೊಂಡು ಬಂದಚೆನ್ನೆಗೆಕಣ್ಣೋಡಿತು!

ಚದುರು ಶಿಲ್ಪಿ ಕಡೆದ ಪ್ರತಿಮೆಎಂದು ನನಗೆ ಭ್ರಾಂತಿ!

ಹುದುಗಿದ್ದಿತು ಹೊತ್ತಸೆರಗಿನಲ್ಲಿ ಮುಖದಕಾಂತಿ! ತುಂಬಿದೆದೆಯ ಸೌಂದರ್ಯವು ನನ್ನಕಣ್ಣಕೆಣಕಿತು

ಚೆಂಬವಳದ ಬಣ್ಣದುಟಿಯು ಏನೊ ಬೇಡುತಿದ್ದಿತು

ಕೆನ್ನೆಯೆರಡು ಕೆರಳಿದ ಕೆಂಜಾಜಿಯಂತೆಕಂಡವು

ಕಣ್ಣು-ಮನಸು ಅವಳ ಚೆಲುವಿನೂಚವನ್ನುಉಂಡುವು

ಒಂದೆ ಗಳಿಗೆಯೊಳಗೆ ನಮ್ಮೊಳೊಲವು ಬೆಳೆದುದೆಷ್ಟು

ಒಂದೆ ಇರುಳಿನಲಿಯೆ ನಾವು ಹೊಂದಿಕೊಂಡುದೆಷ್ಟು!

(ಆನಂದಕಂದ-ವೀರಗಲ್ಲುಕವಿತೆ)

ಯಾಕೆ ಹೊಂದಾಣಿಕೆ ಕಷ್ಟ?

ಇದು ಎಲ್ಲರ ಅನುಭವವೇ ಹೌದಾದರೂ ಇತ್ತೀಚೆಗಿನ ಮದುವೆಗಳನ್ನು ಗಮನಿಸಿದಾಗ, ಸುತ್ತಲಿನ ಸಮಾಜವನ್ನು ಹಕ್ಕಿನೋಟದಿಂದ ವೀಕ್ಷಿಸಿದಾಗ ಈ ಹೊಂದಾಣಿಕೆ ಕಷ್ಟವಾಗುತ್ತಿರುವುದು ಕಾಣುತ್ತದೆ. ಮದುವೆಯ ಸಂಬಂಧಗಳು ಮಧುಚಂದ್ರಕ್ಕು ಮೊದಲೇ ಮುರಿದು ಬೀಳುತ್ತಿರುವುದು ವರ್ತಮಾನದ ದುರಂತವೇ ಸರಿ. ಹಾಗಾದರೆ, ಮದುವೆಗೆ ಮೊದಲು ಪ್ರೇಮಿಗಳಾಗಿರುವಾಗ, ಕೈ ಕೈ ಹಿಡಿದು ಸುತ್ತುತ್ತಿರುವಾಗ ಇದ್ದ ಪ್ರೀತಿ ಮದುವೆಯಾದ ಮೇಲೆ ಮಾಯವಾಗುತ್ತಿರುವುದಾದರೂ ಏಕೆ? ಹೇಗೆ? ಈ ಪ್ರಶ್ನೆ ನಮ್ಮನ್ನು ಕಾಡದೆ ಇರದು.

ಸಂತಾನದ ಕನಸು ನನಸಾಗಿಸಲು ವೈದ್ಯಕೀಯ ಹೊಸ ವಿಧಾನ!

ಇಂದು ವಿದ್ಯಾವಂತರೆನಿಸಿಕೊಂಡಿರುವ ಜನರಲ್ಲಿ ನೂರಕ್ಕೆತೊಂಬತ್ತರಷ್ಟುಜನ ಅತ್ಯಾಧುನಿಕ ಮೊಬೈಲ್‌, ಇಂಟರ್‌ನೆಟ್‌ ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾರೆ. ಈ ಮೊಬೈಲ್‌ ಎಂಬ ‘ಭಸ್ಮಾಸುರ’ ಆಧುನಿಕರ ಸಂಸಾರಕ್ಕೆ ಶಾಪವಾಗಿದ್ದಾನೆ. ಗಂಡ-ಹೆಂಡತಿಇಬ್ಬರೂ ದಿನದ ಬಹುತೇಕ ಸಮಯವನ್ನು ಮೊಬೈಲ್‌ ಜೊತೆಯಲ್ಲೇ ಕಳೆಯುತ್ತಾರೆ.

ಒಬ್ಬರು ಇನ್ನೊಬ್ಬರ ಮೊಬೈಲನ್ನು ಉಪಯೋಗಿಸದಂತೆ ವಿವಿಧ ಮಾದರಿಯ ಲಾಕ್‌ಗಳು, ವಿವಿಧ ಅಪ್ಲಿಕೇಶನ್‌ಗಳು ಇಂದು ಲಭ್ಯವಿದೆಯಾದರೂ ದಂಪತಿಗಳಲ್ಲಿ ಪರಸ್ಪರ ಅಡಗಿಸುವ ರಹಸ್ಯ ಅಂಥದ್ದೇನಿರುತ್ತದೆ ಎಂಬುದು ಬಿಲಿಯನ್‌ ಡಾಲರ್‌ ಪ್ರಶ್ನೆ.

ದಾಂಪತ್ಯ ಸೋಲುವುದು ಹೀಗೆ!

ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಗಂಡ-ಹೆಂಡತಿ ಇಬ್ಬರೂ ಚಿಕ್ಕಪುಟ್ಟಕಾರಣಗಳಿಗೆ ಜಗಳವಾಡುತ್ತಾರೆ. ಒಬ್ಬರ ಹಾಸಿಗೆ ಹೊರಬರುತ್ತದೆ. ಮೊಬೈಲ್‌ಗಳಲ್ಲಿ ‘ಸ್ಟೇಟಸ್‌ ವಾರ್‌’ ಪ್ರಾರಂಭವಾಗುತ್ತದೆ. ಇಬ್ಬರ ‘ಇಗೋ’ (ಅಹಂ) ಜಾಗೃತವಾಗುತ್ತದೆ. ನಾನೇಕೆ ಮೊದಲು ಮಾತನಾಡಿಸಲಿ ಎಂದು ಇಬ್ಬರೂ ಮೌನವೃತಧಾರಿಗಳಾಗುತ್ತಾರೆ.

ಒಬ್ಬರನ್ನು ಇನ್ನೊಬ್ಬರು ಸಂಶಯಿಸುತ್ತಾರೆ. ನಿದ್ದೆ ಮಾಡಿದರೂ- ನಿದ್ದೆ ಮಾಡದಿದ್ದರೂ ಅನುಮಾನ ಹೆಡೆಯೆತ್ತುತ್ತವೆ. ಇದು ಇಬ್ಬರ ವೃತ್ತಿ ಜೀವನದ ಮೇಲೂ ಕೆಟ್ಟಪರಿಣಾಮ ಬೀರುತ್ತದೆ. ದಾಂಪತ್ಯದ ಸುಖವನ್ನು ಈಗಾಗಲೇ ಕಂಡಿರುವ ದೇಹ ಮತ್ತೆ ಮತ್ತೆಅದೇ ಸುಖವನ್ನು ತೀವ್ರವಾಗಿಅಪೇಕ್ಷಿಸುತ್ತದೆ. ಮನೆಯಲ್ಲಿ ಅದು ಸಿಗದಿದ್ದಾಗ ಮನಸ್ಸು ಕನಲುತ್ತದೆ, ವಿಚಲಿತವಾಗುತ್ತದೆ, ಒದ್ದಾಡುತ್ತದೆ.

ಹೀಗಿರುವಾಗ ಅವರಿಗೆ ಫೇಸ್‌ಬುಕ್ಕಿನಲ್ಲಿಯೋ ಅಥವಾ ಕಚೇರಿಯಲ್ಲಿಯೋ ಇದೆ ಥರದ ‘ಸಮಾನ ದುಃಖಿಗಳು’ ಪರಿಚಿತರಾಗುತ್ತಾರೆ. ಒಬ್ಬರನ್ನು ಮತ್ತೊಬ್ಬರು ಸಾಂತ್ವನಗೊಳಿಸುತ್ತಾರೆ. ಪರಿಚಯ ಸ್ನೇಹವಾಗಿ, ಸ್ನೇಹದಲ್ಲಿ ದೈಹಿಕ ಆಕರ್ಷಣೆಯೇ ಪ್ರಬಲವಾಗಿ ಹಾಸಿಗೆಯವರೆಗೂ ಮುಟ್ಟಿಸುತ್ತದೆ. ಅಲ್ಲಿಗೆ ವರ್ಗಗಳ ಕಾಲ ಕಟ್ಟಿದ ದಾಂಪತ್ಯದ ಗೋಪುರದ ಅಡಿಗಲ್ಲು ಉರುಳಿದಂತೆಯೇ. ವಿವಾಹೇತರ ಸಂಬಂಧಗಳಲ್ಲಿ ಸುಖವೇ ಪ್ರಧಾನ.

ಅಲ್ಲಿ ಕೌಟುಂಬಿಕ ನಿರ್ವಹಣೆಯ ಯಾವ ಜಂಜಡ ಮತ್ತು ಒತ್ತಡಗಳಿರುವುದಿಲ್ಲ. ಇದರಿಂದಾಗಿ ದಂಪತಿಗಳು ತಮ್ಮನ್ನು ತಾವು ವಂಚಿಸಿಕೊಂಡು ಇನ್ನೊಬ್ಬರಿಗೆ ಪಾಠ ಕಲಿಸಿದೆ ಎಂಬ ಭ್ರಮೆಯಲ್ಲಿ ತೇಲುತ್ತಾರೆ. ಮದುವೆ ನೋಂದಣಿ ಆಗುವ ಪೂರ್ವದಲ್ಲಿಯೇ ನ್ಯಾಯಾಲಯದಲ್ಲಿ ವಿಚ್ಛೇದನದ ದಾವೆ ‘ನೋಂದಣಿ’ಯಾಗಿರುತ್ತದೆ. ಸುಲಭದಲ್ಲಿ ವಿಚ್ಛೇದನ ನೀಡಿದರೆ ‘ಇನ್ನೊಬ್ಬರು’ ಖುಷಿಯಿಂದ ಬದುಕುತ್ತಾರೆ ಎಂಬ ಕಾರಣಕ್ಕೆ ಇಬ್ಬರೂ ಸತಾಯಿಸುತ್ತಾ ಸುಖ ಪಡುವ ವಯಸ್ಸು ಮುಗಿದಿರುತ್ತದೆ. ಹತ್ತಾರು ವರ್ಷಗಳ ನಂತರ ವಿಚ್ಛೇದನ ದೊರೆಯುತ್ತದೆ. ಆದರೆ ಅದರ ಅವಶ್ಯಕತೆ ಇಬ್ಬರಿಗೂ ಆಗ ಇರುವುದಿಲ್ಲ.

ಇದು #MeToo ಅಲ್ಲ, #MeTime, ನಿಮ್ಮ ಸಮಯ ಎಂಜಾಯ್‌ ಮಾಡಿ

ದಾಂಪತ್ಯವು ಉರುಳಾಗದಂತೆ ಕಾಯ್ದು ಉಳಿಸಿಕೊಳ್ಳುವುದು ಹೇಗೆ?

-ಪತಿ-ಪತ್ನಿಇಬ್ಬರೂ ಪರಸ್ಪರರನ್ನುಗೌರವಿಸಬೇಕು.

-ಅಧಿಕಾರ ಚಲಾಯಿಸಬಾರದು.

-ಸಾಮಾಜಿಕ ಜಾಲತಾಣಗಳಿಂದ ಸಾಧ್ಯವಾದಷ್ಟುದೂರವಿರಿ.

-ಮೊಬೈಲ್‌ಗಳಿಗೆ ಲಾಕ್‌ಇರದಿದ್ದಾಗ ಮಾತ್ರ ಹೃದಯದ ನಂಬಿಕೆಯ ಲಾಕ್‌ತೆರೆಯುತ್ತದೆ ಎಂಬುದನ್ನು ನೆನಪಿನಲ್ಲಿಡಿ.

- ಸಣ್ಣಪುಟ್ಟಜಗಳ ಮನಸ್ತಾಪವನ್ನು ಹೆಚ್ಚುಹೊತ್ತು ಮುಂದುವರಿಸದಿರಿ.

- ಹೆಣ್ಣು ಸಣ್ಣಪುಟ್ಟಉಡುಗೊರೆಗಳಿಂದ ಖುಷಿಪಡುತ್ತಾಳೆ ಎಂಬುದನ್ನು ತಿಳಿದುಕೊಳ್ಳಿ.

-ಕೆಟ್ಟಅಭ್ಯಾಸಗಳಿಂದ ಸಾಧ್ಯವಾದಷ್ಟುದೂರವಿರಿ.

- ಗೃಹಕೃತ್ಯಗಳು ಹೆಂಡತಿಯದ್ದು ಎಂದುಎಲ್ಲಿಯೂ ಬರೆದಿಟ್ಟಿಲ್ಲ. ಗಂಡಸರೂ ಅದಕ್ಕೆ ನೆರವಾಗಬಹುದು.

- ದಂಪತಿಗಳು ಹಗಲಿನಲ್ಲಿ ಒಬ್ಬರನ್ನೊಬ್ಬರು ಎಷ್ಟುಖುಷಿಯಾಗಿಡುತ್ತಾರೆ ಎಂಬುದರ ಮೇಲೆಯೇ ರಾತ್ರಿಯ ಸುಖ ನಿರ್ಧಾರಿತವಾಗುತ್ತದೆ. ಇದನ್ನು ಮರೆಯಬೇಡಿ.

ಕೊನೆಯದಾಗಿ ಒಂದು ಮಾತು. ಅಪಘಾತಗಳಲ್ಲಿ ಚಾಲಕರದೋ ಅಥವಾ ಇಂಜಿನ್ನಿನದೋ ಯಾವುದಾದರೂ ಒಂದು ಕಾರಣವಾಗಿರುತ್ತದೆ. ದಾಂಪತ್ಯದ ಯಾನ ಅಪಘಾತಕ್ಕೀಡಾಗದೆ ಮುಂದುವರಿಯಬೇಕೆಂಬುದುಎಲ್ಲರ ಸದಾಶಯ. ಅಕಸ್ಮಾತ್‌ ಅಪಘಾತವಾದರೆ ಎದೆಗುಂದಬೇಡಿ. ಆತ್ಮವಿಶ್ವಾಸದ ಪ್ಯಾರಾಚ್ಯೂಟ್‌ ಬಿಚ್ಚಿಕೊಳ್ಳಿ ಅಥವಾ ವಿಲ್‌ ಪವರ್‌ ಎಂಬ ‘ಲೈಫ್‌ಜಾಕೆಟ್‌’ ಧರಿಸಿ ನೀರಿಗೆ ಧುಮುಕಿ ಫೀನಿಕ್ಸ್‌ನಂತೆ ಮತ್ತೆ ಎದ್ದು ಬನ್ನಿ.

ಕಳೆದುಕೊಂಡದ್ದನ್ನು ಕಳೆದುಕೊಂಡ ಸ್ಥಳದಲ್ಲಿಯೇ ಹುಡುಕಿ ಪಡೆಯಬೇಕು. ದಾರಿಯಲ್ಲಿ ಬಿದ್ದರೆ ಯಾರೂ ನೋಡದಂತೆಯೇ ಎದ್ದುಕೊಳ್ಳಿ. ಜೀವನದಲ್ಲಿ ಮುಗ್ಗರಿಸಿದರೆ ಎಲ್ಲರೂ ನೋಡುವಂತೆಯೇ ಮೇಲೇಳಿ. ‘ಲಲಾಟ ಲಿಖಿತಾರೇಖಾ ಪರಿಮಾಷ್ಠುಂ ನ ಶಕ್ಯತೆ’ ಅಂದರೆ- ಹಣೆಯಲ್ಲಿ ಬರೆದದ್ದನ್ನುಯಾರಿಂದಲೂ ಅಳಿಸಲಾಗದು.

ಕೆಲವೊಮ್ಮೆ ಬರೆಯುವ ಅವಕಾಶ ನಮಗೇ ಸಿಕ್ಕಾಗ ಸರಿಯಾದುದ್ದನ್ನೇ ಬರೆದುಕೊಳ್ಳುವುದು ಜಾಣತನ. ಯಾವುದೇ ಕಾರಣಕ್ಕೂ ಆಯ್ಕೆಯಲ್ಲಿ ಎಡವದಿರಿ. ಪ್ರಪಂಚದಲ್ಲಿ ಪ್ರೀತಿಸಿದವರನ್ನೇ ಮದುವೆಯಾಗುವ ಭಾಗ್ಯ ಕೆಲವರಿಗಷ್ಟೇ ಸಿಕ್ಕಿರುತ್ತದೆ. ಉಳಿದವರು ಮದುವೆಯಾದವರನ್ನೇ ಪ್ರೀತಿಸುತ್ತಾರೆ. ಇದು ದಾಂಪತ್ಯ ಯಾನದ ಗುಟ್ಟು!

- ಪ್ರೊ. ಪ್ರಶಾಂತ ಹೆಗಡೆ ಮೂಡಲಮನೆ 

click me!