
ಮೊದಲ ಬಾರಿ ಗರ್ಭ(Pregnancy)ಧರಿಸಿದ ಮಹಿಳೆ (Woman)ಯ ಖುಷಿಯನ್ನು ವರ್ಣಿಸಲು ಸಾಧ್ಯವಿರುವುದಿಲ್ಲ. ತಾಯಿಯಾಗುವ ಸಂತೋಷದಲ್ಲಿರುವ ಮಹಿಳೆ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹೆರಿಗೆ (Delivery) ನಂತ್ರ ಖಿನ್ನತೆ (Depression)ಗೆ ಒಳಗಾಗುವ ತಾಯಂದಿರಿದ್ದಾರೆ. ಸಾಮಾನ್ಯವಾಗಿ ಮಗುವಾದ್ಮೇಲೆ ತಾಯಿ ಜವಾಬ್ದಾರಿ ಮಾತ್ರ ಹೆಚ್ಚಾಗುತ್ತದೆ ಎಂದು ನಾವು ಭಾವಿಸುತ್ತೇವೆ. ತಾಯಿ (Mother) ಮಾತ್ರವಲ್ಲ ಮೊದಲ ಬಾರಿ ತಂದೆಯಾದ ಪುರುಷನಲ್ಲೂ ಅನೇಕ ಬದಲಾವಣೆಯಾಗುತ್ತದೆ. ಆತನ ಜೀವನ ಶೈಲಿನಲ್ಲಿ ಬದಲಾವಣೆಯಾಗುತ್ತದೆ. ಮಹಿಳೆಯರು ಮಾತ್ರವಲ್ಲ ಮೊದಲ ಬಾರಿ ಮನೆಗೆ ಮಗು ಬಂದಾಗ ತಂದೆ ಕೂಡ ಖಿನ್ನತೆಗೆ ಒಳಗಾಗುವುದುಂಟು. ಇದನ್ನು ಪಿತೃಪ್ರಸವದ ನಂತರದ ಖಿನ್ನತೆ ಎಂದು ಕರೆಯಲಾಗುತ್ತದೆ.
ಮಕ್ಕಳೊಂದಿಗೆ ಹೊಂದಿಕೊಳ್ಳಲು ತಂದೆ ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಒಂದ್ವೇಳೆ ತಂದೆ ಇದಕ್ಕೆ ಹೊಂದಿಕೊಳ್ಳಲಾಗದೆ ನಕಾರಾತ್ಮಕವಾಗಿ ಚಿಂತಿಸಲು ಶುರು ಮಾಡಿದ್ರೆ ಇದು ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ತಂದೆ ಖಿನ್ನತೆಗೆ ಒಳಗಾಗುವ ಮೊದಲೇ ಎಚ್ಚೆತ್ತುಕೊಳ್ಳಬೇಕು. ಮನೆಗೆ ಮಗು ಬರ್ತಿದೆ ಎಂದಾಗಲೇ ಅದಕ್ಕೆಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಮಾನಸಿಕ ಆರೋಗ್ಯ ಇಲ್ಲಿ ಬಹಳ ಮುಖ್ಯವಾಗುತ್ತದೆ.
ತಂದೆಗೆ ಕಾಡುವ ಖಿನ್ನತೆ ಲಕ್ಷಣ : ಅಮ್ಮಂದಿರು ಅನುಭವಿಸುವ ಹೆರಿಗೆ ನಂತ್ರದ ಖಿನ್ನತೆಯ ಲಕ್ಷಣವೇ ಇರುತ್ತದೆ.ಅಮ್ಮಂದಿರು ಪ್ರದರ್ಶಿಸುವುದಕ್ಕಿಂತ ಹೆಚ್ಚಿನ ಕೋಪವನ್ನು ಇವರಲ್ಲಿ ಕಾಣಬಹುದು. ಸದಾ ಕಿರಿಕಿರಿ ಅನುಭವಿಸುವ ಅವರು ಕುಟುಂಬದಿಂದ ದೂರವಿರಲು ಮನಸ್ಸು ಮಾಡ್ತಾರೆ. ಕೆಲವರಿಗೆ ಹೆರಿಗೆ ಮೊದಲು ಮತ್ತು ಕೆಲವರಿಗೆ ಹೆರಿಗೆ ನಂತ್ರ ಖಿನ್ನತೆ ಕಾಡುತ್ತದೆ. ಮೊದಲ ಬಾರಿ ತಂದೆಯಾಗುವವರು ಮಾನಸಿಕ ಆರೋಗ್ಯ ಸಲಹೆಯನ್ನು ಪಾಲಿಸಬೇಕು.
ಆರೋಗ್ಯದ ಬಗ್ಗೆ ಕಾಳಜಿ : ಮೊದಲಿನಂತೆ ಮನೆಯಲ್ಲಿ ಹಿರಿಯರು ಇರೋದು ಬಹಳ ಅಪರೂಪ. ಪತಿ-ಪತ್ನಿಯ ಮೇಲೆಯೇ ಮಕ್ಕಳನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿಯಿರುತ್ತದೆ. ಮಗು ಜನಿಸಿದ ನಂತ್ರ ತಂದೆ ಮಗುವಿನ ಆರೈಕೆಯಲ್ಲಿ ಕೈ ಜೋಡಿಸಬೇಕಾಗುತ್ತದೆ. ತಾಯಿಗೆ ವಿಶ್ರಾಂತಿ ನೀಡುವ ಅನಿವಾರ್ಯತೆಯಿರುವ ಕಾರಣ ತಂದೆ ಮಗು ನೋಡಿಕೊಳ್ಳಬೇಕು. ಇದಕ್ಕೆ ತಂದೆ ಆರೋಗ್ಯವಾಗಿರುವುದು ಬಹಳ ಮುಖ್ಯ. ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ. ಸಾಕಷ್ಟು ನಿದ್ರೆ ಮಾಡಿ ಮತ್ತು ನಿಮ್ಮ ಆಹಾರ ಮತ್ತು ವ್ಯಾಯಾಮದ ಬಗ್ಗೆ ಕಾಳಜಿ ವಹಿಸಿ. ಸಮಯ ಸಿಕ್ಕಾಗ ನಿದ್ರೆ ಮಾಡಿದಲ್ಲಿ ಕಿರಿಕಿರಿ,ಒತ್ತಡದಿಂದ ಹೊರ ಬರಬಹುದು. ವ್ಯಾಯಾಮ ನಿಮ್ಮ ಮನಸ್ಸಿಗೆ ರಿಲ್ಯಾಕ್ಸ್ ನೀಡುತ್ತದೆ.
ಆರ್ಥಿಕ ಪರಿಸ್ಥಿತಿ ಬಗ್ಗೆ ಪ್ಲಾನ್ : ತಂದೆಯಾದ್ಮೇಲೆ ಖರ್ಚು ಹೆಚ್ಚು. ಕೆಲವೊಮ್ಮೆ ನಿಮ್ಮ ಅರಿವಿಗೆ ಬರದೆ ಖರ್ಚು ಬಂದಿರುತ್ತದೆ. ಇದು ಒತ್ತಡ ಮತ್ತು ಆತಂಕವನ್ನು ಉಂಟು ಮಾಡಬಹುದು. ಆದ್ದರಿಂದ, ಹಣಕಾಸಿನ ಯೋಜನೆಯನ್ನು ಮುಂಚಿತವಾಗಿ ಮಾಡಬೇಕು. ಮಕ್ಕಳನ್ನು ಪಡೆಯುವ ಪ್ಲಾನ್ ಶುರು ಮಾಡುವಾಗ್ಲೇ ಮಕ್ಕಳಿಗಾಗಿ ಹಣ ಉಳಿಸಲು ಶುರು ಮಾಡಬೇಕು. ಇದು ನಿಮಗೆ ಆರ್ಥಿಕ ಬಲವನ್ನು ನೀಡುತ್ತದೆ. ಏಕಾಏಕಿ ಖರ್ಚು ಬಂದರೂ ಆಗ ಚಿಂತಿಸುವ ಅಗತ್ಯವಿರುವುದಿಲ್ಲ.
Relationship Tips: ಸಂಗಾತಿಯನ್ನು ಖುಷಿಪಡಿಸಲು ಸಿಂಪಲ್ ಟಿಪ್ಸ್
ಅನುಭವಿಗಳ ಜೊತೆ ಮಾತನಾಡಿ : ಕೆಲವರು ತಂದೆಯ ವಿಷ್ಯವನ್ನು ಗಂಭೀರವಾಗಿ ತೆಗೆದುಕೊಂಡಿರುವುದಿಲ್ಲ. ಮಗು ಹುಟ್ಟಿದ ಮೇಲೆ ನೋಡಿದರಾಯ್ತು ಎಂಬ ನಿರ್ಲಕ್ಷ್ಯದಲ್ಲಿರುತ್ತಾರೆ. ಆದ್ರೆ ಒಂದೇ ಬಾರಿ ಎಲ್ಲ ಒತ್ತಡ ಬಂದಾಗ ನಿಭಾಯಿಸುವುದು ಕಷ್ಟವಾಗುತ್ತದೆ. ಹಾಗಾಗಿ ತಂದೆಯಾಗುವ ಮೊದಲು ಅನುಭವಿಗಳ ಬಳಿ ಮಾತನಾಡಬೇಕು. ಅವರ ಸಲಹೆ ಮತ್ತು ಮಾಹಿತಿಯು ನಿಮಗೆ ತಂದೆಯಾಗಿ ತಯಾರಾಗಲು ಸಹಾಯ ಮಾಡುತ್ತದೆ.
Relationship Tips: ಸಂಗಾತಿಯನ್ನು ಖುಷಿಪಡಿಸಲು ಸಿಂಪಲ್ ಟಿಪ್ಸ್
ಜ್ಞಾನ ಹೆಚ್ಚಿಸುವ ಜೊತೆಗೆ ವೃತ್ತಿಪರರ ಸಲಹೆ : ಆನ್ಲೈನ್ ನಲ್ಲಿ ಈಗ ಸಾಕಷ್ಟು ಮಾಹಿತಿ,ಸಲಹೆಗಳು ಸಿಗುತ್ತವೆ. ಅವುಗಳನ್ನು ನೀವು ನೋಡಿ ಜ್ಞಾನ ಹೆಚ್ಚಿಸಿಕೊಳ್ಳಬಹುದು. ನಿಮಗೆ ಒತ್ತಡ ಹೆಚ್ಚಾಗ್ತಿದೆ ಎಂದಾದ್ರೆ ನೀವು ತಜ್ಞರನ್ನು ಭೇಟಿಯಾಗಿ ಅವರ ಸಲಹೆ ಪಡೆಯಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.