
ಪ್ರತಿಯೊಬ್ಬ ಮಹಿಳೆಗೂ ತಾಯಿ (Mother) ಯಾಗೋದು ಅತ್ಯಂತ ಖುಷಿ ವಿಷ್ಯ. ಸಾಮಾನ್ಯವಾಗಿ ಮಹಿಳೆಯರು ತಾಯಿಯಾದ ನಂತರ ತಮ್ಮ ಇಡೀ ಜೀವನ (Life) ವನ್ನು ಮಕ್ಕಳಿ (Children) ಗೆ ಮೀಸಲಿಡ್ತಾರೆ. ಮಕ್ಕಳ ಮುಂದೆ ತಾಯಂದಿರು ಎಲ್ಲವನ್ನೂ ಮರೀತಾರೆ. ಮಕ್ಕಳ ಮುಂದೆ ಏನೂ ಇಲ್ಲವೆಂದು ಭಾವಿಸ್ತಾರೆ. ಆದ್ರೆ ಮಕ್ಕಳ ಕಾರಣಕ್ಕೆ ಸಂಸಾರ ಮರೆಯುವ ಮಹಿಳೆಯರ ವೈವಾಹಿಕ ಸಂಬಂಧ ದಿನ ದಿನಕ್ಕೂ ಹದಗೆಡುತ್ತ ಬರುತ್ತದೆ. ಮಕ್ಕಳಾದ್ಮೇಲೆ ಮಕ್ಕಳಿಗೆ ಮಾತ್ರವಲ್ಲ ಪತಿಗೂ ಹಿಂದಿನಷ್ಟೇ ಪ್ರೀತಿ ನೀಡುವ ಅಗತ್ಯವಿರುತ್ತದೆ. ಇಲ್ಲದಿದ್ದರೆ ಕುಟುಂಬದ ಅಡಿಪಾಯ ಹದಗೆಡಲು ಪ್ರಾರಂಭಿಸುತ್ತದೆ.
ಮಗುವಿನ ಆಗಮನ ತಂದೆ-ತಾಯಿ ಜೀವನದಲ್ಲಿ ಸಂತೋಷ ತರುತ್ತದೆ ಅನ್ನೋದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಪ್ರತಿಯೊಬ್ಬ ತಾಯಿಗೂ ತನ್ನ ಮಕ್ಕಳೆಂದ್ರೆ ಅಪಾರ ಪ್ರೀತಿ. ಈ ಪ್ರೀತಿ ಗುಂಗಿನಲ್ಲಿ ಗಂಡನನ್ನು ಅವರು ಸಂಪೂರ್ಣವಾಗಿ ಮರೆಯುತ್ತಾರೆ. ತಾಯಿ ಆಗಿದ್ದೀರಿ ಅಂದ್ರೆ ಗಂಡನ ಮೇಲಿನ ಪ್ರೀತಿ ಮುಗೀತು ಎಂದರ್ಥವಲ್ಲ.
Wedding Tips: ಮದುವೆಗೂ ಮುನ್ನವೇ ಸಂಗಾತಿಗಿದ್ಯಾ ಈ ಅಭ್ಯಾಸ ಗಮನಿಸಿ!
ನೀವು ಮಗುವಿನ ಆರೈಕೆಯಲ್ಲಿಯೇ ದಿನ ಕಳೆದ್ರೆ ಗಂಡನ ಮನಸ್ಸು ಹದಗೆಡುತ್ತದೆ. ಪತ್ನಿ ತನ್ನನ್ನು ನಿರ್ಲಕ್ಷ್ಯ ಮಾಡ್ತಿದ್ದಾಳೆಂದು ಆತ ಭಾವಿಸ್ತಾನೆ. ತಾಯಿ ಮತ್ತು ಮಗುವಿನ ನಡುವಿನ ಸಂಬಂಧ ತುಂಬಾ ಗಟ್ಟಿಯಾಗಿದೆ. ಅಲ್ಲಿ ತನಗೆ ಸ್ಥಾನವಿಲ್ಲವೆಂದು ಅವರು ಭಾವಿಸ್ತಾರೆ. ಇದೇ ಕಾರಣಕ್ಕೆ ದಂಪತಿ ಮಧ್ಯೆ ಮನಸ್ತಾಪ, ಗಲಾಟೆ ಶುರುವಾಗುತ್ತದೆ. ಪತಿ ಒಂಟಿತನ ಅನುಭವಿಸಲು ಶುರು ಮಾಡ್ತಾನೆ. ಒಂದ್ವೇಳೆ ನಿಮ್ಮ ಮನೆಯಲ್ಲೂ ಇದೇ ಆಗ್ತಿದ್ದರೆ ಈಗ್ಲೇ ಎಚ್ಚೆತ್ತುಕೊಳ್ಳಿ. ಮಕ್ಕಳ ಜೊತೆ ಪತಿಯ ಮೇಲೂ ಸ್ವಲ್ಪ ಕಣ್ಣು ಹಾಯಿಸಿ. ಇಲ್ಲವೆಂದ್ರೆ ನಿಮ್ಮ ಸಂಬಂಧ ಬಹುಬೇಗ ಮುರಿದು ಹೋಗುತ್ತದೆ. ಪೋಷಕರಾದ್ಮೇಲೆ ವೈವಾಹಿಕ ಜೀವನದಲ್ಲಿ ಪ್ರೀತಿಯನ್ನು ಕಾಪಾಡಿಕೊಳ್ಳಬೇಕೆಂದ್ರೆ ತಾಯಿಯಾದವಳು ಕೆಲ ಟ್ರಿಕ್ಸ್ ಪಾಲನೆ ಮಾಡ್ಬೇಕು.
ಸೆಕ್ಸ್ ಗೆ ಮಹತ್ವ ನೀಡಿ : ದಾಂಪತ್ಯದಲ್ಲಿ ಸರಸವಿರುವುದು ಬಹಳ ಮುಖ್ಯ. ನಿಮ್ಮಿಬ್ಬರ ನಡುವೆ ಭಾವನಾತ್ಮಕ ಹಾಗೂ ದೈಹಿಕ ಸಂಪರ್ಕವಿರಬೇಕು. ಇದು ಇಬ್ಬರ ನಡುವಿನ ಪ್ರೀತಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಅನೇಕ ಮಹಿಳೆಯರು ಮಕ್ಕಳಾಗ್ತಿದ್ದಂತೆ ಪತಿಯಿಂದ ಬೇರೆ ಮಲಗಲು ಶುರು ಮಾಡ್ತಾರೆ. ಇದು ತಪ್ಪು. ಇಬ್ಬರ ಮಧ್ಯೆ ಶಾರೀರಿಕ ಸಂಬಂಧ ಅಗತ್ಯ ಎಂಬುದು ನೆನಪಿರಲಿ.
ಹೆಸರು ಮರೆಯಬೇಡಿ : ಬಹುತೇಕರ ಮನೆಯಲ್ಲಿ ನೀವು ನೋಡಿರ್ಬಹುದು, ಮಗು ಬರ್ತಿದ್ದಂತೆ ಪತಿ, ಪತ್ನಿಯ ಹೆಸರು ಮರೆತು ಹೋಗುತ್ತೆ. ಮಗುವಿನ ತಂದೆ, ಮಗುವಿನ ತಾಯಿ ಎಂದು ಪರಸ್ಪರ ಗಂಡ – ಹೆಂಡತಿ ಕರೆದುಕೊಳ್ತಿರುತ್ತಾರೆ. ಇದು ಸರಿಯಾದ ಮಾರ್ಗವಲ್ಲ. ನಿಮ್ಮ ಸಂಗಾತಿಯನ್ನು ನೀವು ಹೆಸರಿನಿಂದಲೇ ಕೂಗ್ಬೇಕು. ಮಗುವಿಗೆ ಮೊದಲೇ ಅವರು ನಿಮ್ಮ ಜೀವನದಲ್ಲಿ ಬಂದಿದ್ದಾರೆ ಎಂಬುದು ನೆನಪಿರಲಿ. ಹೆಸರು ಹಿಡಿದು ಕರೆಯುವುದು ಆಪ್ತತೆಯನ್ನು ಹೆಚ್ಚು ಮಾಡುತ್ತದೆ ಎಂಬುದು ನೆನಪಿರಲಿ.
ಕಾರಣ ಹೇಳುವುದನ್ನು ನಿಲ್ಲಿಸಿ : ಪತಿ ಜೊತೆ ಕಳೆಯಬೇಕಾದ ಸಮಯವನ್ನು ಮಕ್ಕಳಿಗೆ ನೀಡುವುದು ತಪ್ಪು. ಉದಾಹರಣೆಗೆ, ಮಗುವಿಗೆ ಹೋಂ ವರ್ಕ್ ಮಾಡಿಸ್ಬೇಕು ಎಂಬ ಕಾರಣಕ್ಕೆ ಅನೇಕ ಮಹಿಳೆಯರು ಪತಿ ಜೊತೆ ಊಟ ಮಾಡೋದಿಲ್ಲ. ಹೀಗೆ ಮಾಡಿದ್ರೆ ಪತಿ ಮತ್ತಷ್ಟು ಏಕಾಂಗಿತನ ಅನುಭವಿಸುತ್ತಾನೆ. ಪತಿಗೆ ನೀಡಬೇಕಾದ ಸಮಯವನ್ನು ಅವರಿಗೆ ನೀಡ್ಲೇಬೇಕು. ಮಗುವಿದೆ, ಮಗುವನ್ನು ಮಲಗಿಸಬೇಕೆಂಬ ನೆಪ ಹೇಳಿ ಕೆಲ ಮಹಿಳೆಯರು ಶಾರೀರಿಕ ಸಂಬಂಧ ಬೆಳೆಸುವುದಿಲ್ಲ. ಇದೆಲ್ಲವೂ ದಾಂಪತ್ಯದ ಮೇಲೆ ಪರಿಣಾಮ ಬೀರುತ್ತದೆ.
ಲವ್ ಮ್ಯಾರೇಜ್‌ಗಿಂತ ಆರೇಂಜ್ಡ್ ಮ್ಯಾರೇಜ್ ಒಳ್ಳೇದು ಅಂತಾರಲ್ಲ, ಯಾಕೆ ?
ಐ ಲವ್ ಯು (I Love You) ಹೇಳಲು ಮರೆಯದಿರಿ : ಮಕ್ಕಳಾಗುವ ಮೊದಲು ದಿನಕ್ಕೆ ನಾಲ್ಕೈದು ಬಾರಿ ಐ ಲವ್ ಯು ಹೇಳ್ತಿದ್ದ ಪತ್ನಿ ಏಕಾಏಕಿ ಸುಮ್ಮನಾದ್ರೆ ಪತಿಗೆ ಗೊಂದಲವಾಗೋದು ಸಹಜ. ಪ್ರೀತಿಸ್ತೇನೆ ಎನ್ನಲು ಸಮಯ, ದಿನ, ಮುಹೂರ್ತದ ಅಗತ್ಯವಿಲ್ಲ. ಮದುವೆಯಾಗಿ ಮಕ್ಕಳಾಯ್ತು ಇನ್ನೇನು ಐ ಲವ್ ಯು ಅನ್ನೋದು ಎನ್ನುವವರಿದ್ದಾರೆ. ಆದ್ರೆ ಅದು ತಪ್ಪು. ನಿಮ್ಮ ಭಾವನೆಯನ್ನು ನೀವು ಪ್ರತಿ ಬಾರಿ ವ್ಯಕ್ತಪಡಿಸುವ ಅಗತ್ಯವಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.