ಪತಿ-ಪತ್ನಿ ಮಧ್ಯೆ ಸಾಮರಸ್ಯವಿರಬೇಕು. ಪತಿಯ ನಿಂದನೆ ಸಹಿಸ್ತಾ ಬದುಕುವ ಮಹಿಳೆ ಸಾಕಷ್ಟು ಸಮಸ್ಯೆ ಎದುರಿಸ್ತಾಳೆ. ಆಕೆಗೆ ತಿಳಿಯದೆ ಆಕೆ ಅನೇಕ ಅನಾರೋಗ್ಯಕ್ಕೆ ತುತ್ತಾಗಿರ್ತಾಳೆ. ಎದ್ದು ನಿಂತು ಪ್ರತಿಭಟಿಸದೆ ಹೋದ್ರೆ ಹಿಂಸೆ ಆಕೆಯನ್ನು ಬಲಿ ಪಡೆಯುತ್ತೆ.
ಮಹಿಳೆಯರ ಮೇಲೆ ಹಿಂಸಾಚಾರ, ದೌರ್ಜನ್ಯ ನಡೆಯೋದು ಹೊಸತೇನಲ್ಲ. ಅನಾದಿ ಕಾಲದಿಂದಲೂ ಮಹಿಳೆ ದೌರ್ಜನ್ಯಕ್ಕೊಳಗಾಗ್ತಿದ್ದಾಳೆ. ಪ್ರತಿ 10 ನಿಮಿಷಕ್ಕೆ ಒಬ್ಬ ಮಹಿಳೆ ದೌರ್ಜನ್ಯಕ್ಕೆ ಬಲಿಯಾಗ್ತಿದ್ದಾಳೆ. ಹೊರಗಿನವರಿಂದ ಮಾತ್ರವಲ್ಲ ನಮ್ಮ ಆಪ್ತರು, ಕುಟುಂಬಸ್ಥರಿಂದಲೇ ಮಹಿಳೆ ಮೇಲೆ ಹಿಂಸಾಚಾರ ನಡೆಯುತ್ತಿದೆ. ಮಹಿಳೆ ರಕ್ಷಣಗಾಗಿ ಸರ್ಕಾರ ಅನೇಕ ನಿಯಮ, ಕಾನೂನುಗಳನ್ನು ಜಾರಿಗೆ ತಂದಿದೆ. ಆದ್ರೂ ಸಮಾಜದಲ್ಲಿ ಸುಧಾರಣೆ ಮಾತ್ರ ಕಂಡು ಬಂದಿಲ್ಲ. ಕುಟುಂಬದ ಸದಸ್ಯರಿಂದ ಪ್ರತಿ ದಿನ ದೌರ್ಜನ್ಯಕ್ಕೊಳಗಾಗುವ ಮಹಿಳೆಯರ ಸಂಖ್ಯೆ ಭಾರತದಲ್ಲಿ ದೊಡ್ಡದಿದೆ. ಅನೇಕ ಕಾರಣಕ್ಕೆ ಮಹಿಳೆಯರು ತಮ್ಮ ಮೇಲಾಗ್ತಿರುವ ಅನ್ಯಾಯವನ್ನು ಖಂಡಿಸದೆ ಮೌನವಾಗಿ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ಮಹಿಳೆ ನ್ಯಾಯಾಕ್ಕಾಗಿ ಹೋರಾಡಬೇಕು, ಮಹಿಳೆ ವಿರುದ್ಧ ದೌರ್ಜನ್ಯ ನಿಲ್ಲಬೇಕು ಎನ್ನುವ ಕಾರಣಕ್ಕೆ ಪ್ರತಿ ವರ್ಷ ನವೆಂಬರ್ 25ರಂದು ವಿಶ್ವ ಮಹಿಳಾ ದೌರ್ಜನ್ಯ ವಿರೋಧಿ ದಿನವನ್ನು ಆಚರಿಸಲಾಗುತ್ತದೆ.
ಮಹಿಳೆ (Woman) ಮೇಲೆ ನಡೆಯುವ ದೌರ್ಜನ್ಯ (Atrocity) ಆಕೆಯ ದೈಹಿಕ, ಮಾನಸಿಕ ಆರೋಗ್ಯ (Health) ದ ಮೇಲೆ ಮಾತ್ರವಲ್ಲ ಲೈಂಗಿಕ ಹಾಗೂ ಸಂತಾನೋತ್ಪತ್ತಿ ಆರೋಗ್ಯದ ಮೇಲೂ ಸ್ಪಷ್ಟವಾಗಿ ಪರಿಣಾಮ ಬೀರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ವಿಷ್ಯವನ್ನು ಸ್ಪಷ್ಟಪಡಿಸಿದೆ. ಮಹಿಳೆಯರ ಮೇಲಿನ ದೌರ್ಜನ್ಯ, ವಿಶೇಷವಾಗಿ ಪಾಲುದಾರರ ಹಿಂಸೆ ಮತ್ತು ಲೈಂಗಿಕ ಹಿಂಸೆ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಅಷ್ಟೇ ಅಲ್ಲ ಇದು ಮಾನವ ಹಕ್ಕುಗಳ ಉಲ್ಲಂಘನೆಯೂ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಒಂಟಿತನ ಸಮಸ್ಯೆ ವಯಸ್ಸಾದವರಲ್ಲಿ ಹೆಚ್ಚಂತೆ, ಇದ್ಯಾಕೆ?
ಪ್ರಪಂಚದಾದ್ಯಂತ ಮೂರು ಮಹಿಳೆಯರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ದೈಹಿಕ ಅಥವಾ ಲೈಂಗಿಕ ಹಿಂಸೆಯನ್ನು ಅನುಭವಿಸುತ್ತಾರೆ. ಇದು ಹೆಚ್ಚಾಗಿ ಪಾಲುದಾರರಿಂದಲೇ ನಡೆದಿರುತ್ತದೆ. ಇದು ಎಲ್ಲರಿಗೂ ತಿಳಿದಿರುವ ವಿಷ್ಯ. ಆದರೆ ಮಹಿಳೆಯರು ದೀರ್ಘಕಾಲದವರೆಗೆ ಈ ಹಿಂಸಾಚಾರದ ಸಂಬಂಧದಲ್ಲಿ ಸಿಲುಕಿಕೊಂಡಾಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾಳೆ.
ಹಿಂಸಾಚಾರದಿಂದಾಗುವ ಅಡ್ಡ ಪರಿಣಾಮಗಳು :
ಪದೇ ಪದೇ ದೌರ್ಜನ್ಯದಿಂದ ಹದಗೆಡುವ ಸಂತಾನೋತ್ಪತ್ತಿ ಆರೋಗ್ಯ : ವೈವಾಹಿಕ ಸಂಬಂಧದಲ್ಲಿ ಪದೇ ಪದೇ ಹಿಂಸಾಚಾರ ಅಥವಾ ಯಾವುದೇ ರೀತಿಯ ನಿಂದನೆಗೆ ಮಹಿಳೆ ಒಳಗಾಗ್ತಿದ್ದರೆ ಅದು ಆಕೆಯ ಸಂತಾನೋತ್ಪತ್ತಿ ಮೇಲೆ ಪ್ರಭಾವ ಬೀರುತ್ತದೆ. ಆಕೆ ಮಗುವನ್ನು ಬಯಸುವುದಿಲ್ಲವಾದ್ರೂ ಗರ್ಭನಿರೋಧಕ ಮಾತ್ರೆ ಸೇವನೆಗೆ ಇಲ್ಲಿ ಅವಕಾಶವಿರುವುದಿಲ್ಲ. ಹಾಗೆಯೇ ಯಾವುದೇ ಸುರಕ್ಷತೆಯಿಲ್ಲದೆ ಶಾರೀರಿಕ ಸಂಬಂಧ ಬೆಳೆಸುವುದು ಅನಿವಾರ್ಯವಾಗುತ್ತದೆ. ಇದ್ರಿಂದ ಲೈಂಗಿಕ ಖಾಯಿಲೆಗಳು ಬರುವ ಜೊತೆಗೆ ಅನಗತ್ಯ ಗರ್ಭಧಾರಣೆಗೆ ಒಳಗಾಗಬೇಕಾಗುತ್ತದೆ. ಇದ್ರಿಂದ ಆಗಾಗ ಆಕೆ ಗರ್ಭಪಾತಕ್ಕೆ ಒಳಗಾಗಬೇಕಾಗುತ್ತದೆ. ಇದು ಆಕೆಯ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ.
ಮಾನಸಿಕ ಆರೋಗ್ಯ ಹಾಳು ಮಾಡುತ್ತೆ ನಿಂದನೆ ಸಂಬಂಧ : ಕೌಟುಂಬಿಕ ಹಿಂಸೆ ಅಥವಾ ಮೌಖಿಕ ನಿಂದನೆಯನ್ನು ಎದುರಿಸುವ ಮಹಿಳೆಯರು ಖಿನ್ನತೆಗೆ ಒಳಗಾಗುತ್ತಾರೆ. ಆತಂಕ ಮತ್ತು ನಿದ್ರೆಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಪ್ರಸವಾದ ನಂತರ ಖಿನ್ನತೆಯ ಸಾಧ್ಯತೆಗಳು ಇವರಲ್ಲಿ ಹೆಚ್ಚಿರುತ್ತವೆ. ಸ್ತನ್ಯಪಾನ ಮಾಡಲು ಸಾಧ್ಯವಾಗುವುದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ ಹೊಂದಿರುತ್ತಾರೆ.
ಲೈಂಗಿಕ ಆರೋಗ್ಯದ ಮೇಲಾಗುತ್ತೆ ದೌರ್ಜನ್ಯದ ಪ್ರಭಾವ : ಮಹಿಳೆ ಸಂಗಾತಿಯ ದೌರ್ಜನ್ಯಕ್ಕೆ ಒಳಗಾಗ್ತಿದ್ದರೆ ಆಕೆ ಲೈಂಗಿಕತೆಯನ್ನು ಆನಂದಿಸಲು ಸಾಧ್ಯವಾಗುವುದಿಲ್ಲ. ಪುರುಷ ಸಂಗಾತಿ, ತನ್ನ ಸಂಗಾತಿಯ ಪರಾಕಾಷ್ಠೆ ಬಗ್ಗೆ ಆಕೆಯ ಆಸಕ್ತಿ ಬಗ್ಗೆ ಆಲೋಚನೆ ಮಾಡುವುದಿಲ್ಲ. ಅದಕ್ಕೆ ಮಹತ್ವ ನೀಡುವುದಿಲ್ಲ. ಆತನಿಗೆ ಸಂಗಾತಿಯ ಪಿರಿಯಡ್ಸ್ ನೋವು, ಬ್ರೆಸ್ಟ್ ನೋವುಗಳ ಬಗ್ಗೆ ಕಾಳಜಿ ಇರೋದಿಲ್ಲ. ಲೈಂಗಿಕತೆಯಲ್ಲಿ ಮಹಿಳೆ ಪಾತ್ರ ಶೂನ್ಯವಾಗಿರುವ ಕಾರಣ ಇದು ಮಹಿಳೆ ಒತ್ತಡ, ಉದ್ವೇಗವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ತುಂಬಾ ಖತರ್ನಾಕ್ ಆಗಿರ್ತಾರೆ ಈ ಹುಡುಗ್ರು, ಇವರೊಂದಿಗೆ ಸಂಬಂಧ ಬೆಳೆಸುವಾಗ ಹುಷಾರು!
ಕೌಟುಂಬಿಕ ಹಿಂಸೆಯಿಂದ ಹೊರ ಬರುವುದು ಹೇಗೆ? : ಮೊದಲನೇಯದಾಗಿ ನನ್ನ ಮೇಲೆ ದೌರ್ಜನ್ಯವಾಗ್ತಿದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಬಹುತೇಕರು ಇದು ಸಾಮಾನ್ಯ ಎಂದುಕೊಳ್ತಾರೆ. ಆದ್ರೆ ಅದು ತಪ್ಪು. ಕೌನ್ಸಿಲರ್ ಗಳ ಸಹಾಯ ಪಡೆಯಬಹುದು. ಈಗ ಆನ್ಲೈನ್ ನಲ್ಲಿಯೇ ತಜ್ಞರ ಸಲಹೆಗಳು ನಿಮಗೆ ಸಿಗುತ್ತದೆ. ಆರ್ಥಿಕ ಬಲ, ಶಿಕ್ಷಣ, ಲಿಂಗ ಸಮಾನತೆ ಎಲ್ಲವೂ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ.