ತಾಯಿ ಪ್ರೀತಿ ಸಿಗದಿದ್ದರೆ ಮಗಳ ವ್ಯಕ್ತಿತ್ವಕ್ಕೆ ಕುತ್ತು

By Suvarna News  |  First Published Feb 4, 2020, 4:02 PM IST

ತಾಯಿ ಹಾಗೂ ಮಗಳ ಬಾಂಧವ್ಯ ಈ ಭೂಮಿ ಮೇಲಿನ ಅತಿ ಸುಂದರ ಸಂಬಂಧಗಳಲ್ಲೊಂದು. ಅದರಲ್ಲಿ ಡೌಟೇ ಬೇಡ. ಆದರೆ, ಎಲ್ಲ ಹೆಣ್ಮಗಳಿಗೂ ಅಂಥ ತಾಯಿ ಸಿಗುವುದಿಲ್ಲ ಎಂಬುದೂ ಸತ್ಯ. ತಾಯಿಯ ಪ್ರೀತಿಯಲ್ಲಿ ಕೊರತೆಯಾದರೆ ಅದು ಮಗಳ ಬದುಕಿನ ಮೇಲೆ ಬರೆ ಎಳೆಯುತ್ತದೆ.


ಬೆಳೆದ ಹೆಣ್ಮಗಳಿಗೆ ತಾಯಿ ಬೆಸ್ಟ್ ಫ್ರೆಂಡ್ ಆಗಿದ್ದರೆ ಆಕೆಯಷ್ಟು ಹ್ಯಾಪಿ ಸೋಲ್ ಮತ್ತೊಂದು ಸಿಗಲಿಕ್ಕಿಲ್ಲ. ಭೂಮಿ ಮೇಲಿನ ಪ್ರೀತಿಯೆಲ್ಲ ತನ್ನ ತಾಯಿಯಾಗಿ ರೂಪ ತಳೆದಂತೆ ಆಕೆ ಸಂಭ್ರಮ ಪಡುತ್ತಾಳೆ. ಎಲ್ಲ ನಿರ್ಧಾರಗಳನ್ನು, ಸಂತೋಷ, ದುಃಖಗಳನ್ನು ತಾಯಿಯೊಂದಿಗೆ ಹಂಚಿಕೊಂಡು ಹಗುರಾಗುತ್ತಾಳೆ. ಬಾಲ್ಯದಲ್ಲಿ ತಾಯಿ ತೋರುವ ಅಕ್ಕರೆ, ಕಾಳಜಿ, ಪ್ರೀತಿ ಮಗಳನ್ನು ಭಾವನಾತ್ಮಕವಾಗಿ ಬಲಪಡಿಸುತ್ತದೆ. ಮಗಳಿಗೆ ತಾಯಿಯೇ ಸ್ಫೂರ್ತಿಯಾಗುತ್ತಾಳೆ. ಆದರೆ, ಎಲ್ಲ ಹೆಣ್ಮಕ್ಕಳಿಗೆ ಇಂಥ ತಾಯಿ ಸಿಗುವುದಿಲ್ಲ. ಕೆಲ ತಾಯಂದಿರು ಭಾವನಾತ್ಮಕವಾಗಿ ಬರಡಾಗಿರುತ್ತಾರೆ, ಮತ್ತೆ ಕೆಲವರು ಮಗಳನ್ನು ನಿಯಂತ್ರಿಸುವುದರಲ್ಲೇ ಸುಖ ಕಾಣುತ್ತಾರೆ. ಇನ್ನೂ ಕೆಲವರು ಮಗಳ ಮೇಲೆ ನಂಬಿಕೆ ಹೊಂದಿರುವುದಿಲ್ಲ, ಮತ್ತೆ ಕೆಲವರಿಗೆ ಮಗಳಿಗೆ ಕೊಡಲು ಬಾಲ್ಯದಿಂದ ಇದುವರೆಗೂ ಸಮಯವೇ ಇರುವುದಿಲ್ಲ.

ಮರಿಜಿಂಕೆಗೆ ಹಾಲುಣಿಸಿದ ಕರುಣಾಮಯಿ

ಇವರು ಮಗಳಿಗೆ ಚಳಿಯಾಯಿತೆಂದು ಸ್ವೆಟರ್ ತೊಡಿಸುವವರಲ್ಲ, ಹೊರಗಿಂದ ಬಂದಳೆಂದು ಬಿಸಿಹಾಲು ಕುಡಿಸುವುದಿಲ್ಲ, ದಣಿದಿದ್ದಾಳೆಂದು ಮಸಾಜ್ ಮಾಡುವುದಿಲ್ಲ... ಅವೆಲ್ಲ ಹೋಗಲಿ, ಆಕೆಯ ಇಷ್ಟಕಷ್ಟಗಳೇನು, ಭಾವನೆಗಳೇನು ಎಂಬುದನ್ನು ಎಂದಿಗೂ ವಿಚಾರಿಸುವುದಿಲ್ಲ. ಹಾಗಾಗಿ ಕೆಲ ತಾಯಿ- ಮಗಳ ಸಂಬಂಧವು ಕಹಿಯ ಲೇಪದಿಂದ ಕೂಡಿರುತ್ತದೆ. ಇಂಥ ತಾಯಿಯನ್ನು ಹೊಂದಿರುವ ಮಗಳ ಭವಿಷ್ಯ ಏನಾಗುತ್ತದೆ ಗೊತ್ತಾ, ಇದು ಆಕೆಯ ವ್ಯಕ್ತಿತ್ವದ ಮೇಲೆ ಎಂಥ ಪರಿಣಾಮ ಬೀರುತ್ತದೆ ಎಂದರೆ ಅದನ್ನು ಯಾರೂ ಸರಿಪಡಿಸಲಾರರು. ಮನಸ್ಸಿನ ಮೇಲೆ ಮಾಸದ ಗಾಯವಾಗಿ ಉಳಿದು, ಬದುಕನ್ನು ಭಯವಾಗಿಸುತ್ತದೆ, ದುಸ್ತರವಾಗಿಸುತ್ತದೆ. ಹೀಗೆ ಪ್ರೀತಿಯಿಲ್ಲದ ತಾಯಿಯನ್ನು ಹೊಂದಿದ ಮಗಳು ನೋಡುವ ಜಗತ್ತು ಪ್ರೀತಿಸುವ ತಾಯಿಯನ್ನು ಹೊಂದಿದ ಮಗಳು ನೋಡುವ ಜಗತ್ತಿಗಿಂತ ಬಹಳ ವಿಭಿನ್ನವಾಗಿರುತ್ತದೆ.

Tap to resize

Latest Videos

undefined

Ego ದುನಿಯಾದಲ್ಲಿ ಇಂದಿನ ಸಂಬಂಧಗಳು...

ಕೆಲ ಗೈಡೆನ್ಸ್‌ಗಾಗಿ ತಾಯಿಯ ಬಳಿ ಹೋಗಿ, ಬೈಸಿಕೊಂಡು ಬಂದರೆ ಹೇಗಿರುತ್ತದೆ ಕಲ್ಪಿಸಿಕೊಳ್ಳಿ. ಇಂಥ ಅಜ್ಞಾನಿ ಹಾಗೂ ಸ್ವಾರ್ಥಿ ತಾಯಿಯನ್ನು ಹೊಂದಿರುವ ಮಗಳು ಸಾಮಾನ್ಯವಾಗಿ ಆತ್ಮವಿಶ್ವಾಸದ ಕೊರತೆ ಎದುರಿಸುತ್ತಾಳೆ. ತಾವೇನೇ ಸಾಧಿಸಿದರೂ ಅದರ ಮೇಲೆ ಅವರಿಗೇ ನಂಬಿಕೆ ಇರುವುದಿಲ್ಲ. ಅದರಲ್ಲೂ ಬಾಲ್ಯದಲ್ಲಿ ತಮ್ಮ ರೂಪ ಹಾಗೂ ಬುದ್ಧಿವಂತಿಕೆ ಬಗ್ಗೆ ಸದಾ ತೆಗಳುವಿಕೆ, ದೂರು, ವ್ಯಂಗ್ಯವಾಡುವುದನ್ನು ಎದುರಿಸಿದ್ದರೆ ಅವರು ಯಾರೇ ತಮ್ಮನ್ನು ಹೊಗಳಿದರೂ ನಂಬಲಾರರು. ಯಾವುದೇ ಪರೀಕ್ಷೆ ಎದುರಿಸಲು ಅವರಲ್ಲಿ ವಿಶ್ವಾಸ ಇರುವುದಿಲ್ಲ. ಯಾರನ್ನೂ ಆತ್ಮವಿಶ್ವಾಸದಿಂದ ಎದುರಿಸಲಾರರು.

ಪ್ರೀತಿಗೆ ಅನರ್ಹ
ತಾಯಿಯ ಪ್ರೀತಿಯೇ ಸಿಗದವರು, ತಾವು ಯಾರೂ ಪ್ರೀತಿಸದಂಥ ವ್ಯಕ್ತಿತ್ವ ಎಂಬ ನಂಬಿಕೆ ಬೆಳೆಸಿಕೊಳ್ಳುತ್ತಾರೆ. ತಿರಸ್ಕಾರ ಎಂಬುದು ಸಾಮಾನ್ಯ ಅನುಭವವಾಗಿದ್ದಾಗ, ಪ್ರೀತಿಗೆ ತಾವು ಅನರ್ಹ, ಪ್ರೀತಿ ಗಳಿಸಲು ತಮ್ಮಲ್ಲಿ ಏನೋ ಕೊರತೆ ಇದೆ ಎಂಬ ಭಾವನೆ ಅವರನ್ನು ಆವರಿಸುತ್ತದೆ. ಯಾರಾದರೂ ತಮಗೆ ಹೆಚ್ಚು ಗಮನ ಕೊಟ್ಟರೆ ಅದರಿಂದ ಅವರು ಸಂಕೋಚದ ಮುದ್ದೆಯಾಗುತ್ತಾರೆ.

ನಂಬಿಕೆ ವಂಚಿತ
ತಾಯಿಯ ಆರೈಕೆ, ಕಾಳಜಿ ಪ್ರೀತಿ ವಂಚಿತವಾಗಿ ಬೆಳೆವ ಮಕ್ಕಳು ಏಕಾಂಗಿಯಾಗಿ ಬೆಳೆಯುತ್ತಾರೆ. ಇದರಿಂದ ಇಂಥ ವಾತಾವರಣದಲ್ಲಿ ಬೆಳೆದ ಹೆಣ್ಣುಮಕ್ಕಳು ಹೊಸ ಗೆಳೆತನಗಳನ್ನು ಮಾಡಿಕೊಳ್ಳಲು ಭಯ ಪಡುತ್ತಾರೆ. ಯಾವುದೇ ಹೊಸ ಸಂಬಂಧವನ್ನು ಅವರು ಸುಲಭವಾಗಿ ನಂಬಲಾರರು. ಇದು ಭವಿಷ್ಯದಲ್ಲಿ ಅವರಿಗೆ ಸ್ನೇಹ ಹಾಗೂ ಪ್ರೇಮಸಂಬಂಧಕ್ಕೆ ಸಮಸ್ಯೆಗಳನ್ನುಂಟು ಮಾಡುತ್ತದೆ.

ಸಂಬಂಧಗಳ ಆಯ್ಕೆಯಲ್ಲಿ ತಪ್ಪು
ಪ್ರೀತಿಯಿಲ್ಲದ ತಾಯಿಯ ಜೊತೆ ಬೆಳೆವ ಮಗಳು ತಮ್ಮ ಸ್ನೇಹ ಹಾಗೂ ಪ್ರೇಮ ಸಂಬಂಧದಲ್ಲಿ ಕೂಡಾ ತಾಯಿಯೊಂದಿಗೆ ಹೊಂದಿದ್ದ ಸಂಬಂಧವನ್ನೇ ಪುನಾ ಸೃಷ್ಟಿಸಿಕೊಳ್ಳುವ ಅಪಾಯ  ಹೆಚ್ಚು. ಕೆಟ್ಟ ನಡತೆಯ, ನಿಯಂತ್ರಿತ ವಾತಾವರಣದ ಸಹವಾಸವೇ ಅವರನ್ನು ಹೆಚ್ಚು ಆಕರ್ಷಿಸುತ್ತದೆ. ಏಕೆಂದರೆ ಅವರಿಗೆ ಗೊತ್ತಿರುವುದು ಅಂಥ ಸಂಬಂಧವೊಂದೇ. ಹಾಗಾಗಿ, ಈ ಫೀಲಿಂಗಿಗೆ ಅವರು ಹೆಚ್ಚು ಕಾಲ ಅಂಟಿಕೊಂಡಿರಲು ಬಯಸುತ್ತಾರೆ.

ಮನೆಯಲ್ಲಿರುವ ಅಮ್ಮ ಪಡೋ ಪಾಡು ಸಂಕಟ

ಮೆಚ್ಚಿಸುವ ಹಪಹಪಿ
ಬೆಳೆಯುವ ಅಷ್ಟೂ ಸಮಯವನ್ನು ತಾಯಿಯನ್ನು ಮೆಚ್ಚಿಸಲು, ಆಕೆಯ ಪ್ರೀತಿ ಹಾಗೂ ಗಮನ ಸೆಳೆಯುವ ಪ್ರಯತ್ನಗಳಿಂದಲೇ ಕಳೆದಿರುವ ಕಾರಣ, ಇಂಥ ಹೆಣ್ಮಕ್ಕಳು ನಂತರದಲ್ಲಿಯೂ ಎಲ್ಲರನ್ನೂ ಮೆಚ್ಚಿಸುವ ಹಪಹಪಿಗೆ ಬೀಳುತ್ತಾರೆ. ಸದಾ ಮತ್ತೊಬ್ಬರ ಅಗತ್ಯ ಹಾಗೂ ಬೇಡಿಕೆಗಳನ್ನು ಪೂರೈಸುವ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಆರೋಗ್ಯಕರ ಮಿತಿ ಹಾಕಿಕೊಳ್ಳುವುದು ಇವರಿಗೆ ಕಷ್ಟವಾಗುತ್ತದೆ.

click me!