
ಫೇಸ್‌ಬುಕ್, ಇನ್ಸ್ಟಾ, ಟ್ವಿಟ್ಟರ್‌ನಲ್ಲಿ ಸ್ಯಾರಿ ಚಾಲೆಂಜ್, ಪುಸ್ತಕ ಸವಾಲು, ಡ್ರಾಮಾ ಫೋಟೋ ಕೋ ಇತ್ಯಾದಿ ಇತ್ಯಾದಿ ಚಾಲೆಂಜ್‌ಗಳು ಆಗಾಗ ನಡೆಯುತ್ತಲೇ ಇರುತ್ತವೆ. ಈ ಬಾರಿ ಸ್ವಲ್ಪ ವಿಭಿನ್ನವಾದ ಚಾಲೆಂಜ್ ತೆಗೆದುಕೊಳ್ಳಿ. ಸುಮ್ಮನೆ ನಿಮ್ಮ ಫೋಟೋವನ್ನೋ, ನಿಮ್ಮ ಸಿನಿಮಾ, ಪುಸ್ತಕ ಪ್ರೀತಿಯನ್ನೋ ಪ್ರದರ್ಶಿಸಿ ಸೋಷ್ಯಲ್ ಮೀಡಿಯಾಗಳಲ್ಲಿ ಮೈಲೇಜ್ ತೆಗೆದುಕೊಂಡಂತಲ್ಲ. ನಿಮ್ಮ ಪರಿಸರ ಕಾಳಜಿ, ಅದಕ್ಕಾಗಿ ಮನೆಯಲ್ಲಿ ನೀವೆಷ್ಟು ಜಾಗೃತೆ ವಹಿಸುತ್ತೀರಾ ಎಂಬುದನ್ನು ನಿಮಗೇ ಅರ್ಥ ಮಾಡಿಸುವ, ಆ ಮೂಲಕ ಜೀರೋ ವೇಸ್ಟ್ ಲೈಫ್‌ಸ್ಟೈಲ್ ಸಾಧಿಸುವ ಹಾದಿ ಹಿಡಿಯಲು ಪ್ರೇರೇಪಿಸುವ ಚಾಲೆಂಜ್ ಇದು. ಸಧ್ಯ ಈ ಫ್ಯೂಚರಿಸ್ಟಿಕ್ ಫೆಬ್ರವರಿ ಚಾಲೆಂಜ್ ಜಗತ್ತಿನಾದ್ಯಂತ ಪ್ರಕೃತಿ ಪ್ರಿಯರು, ಜವಾಬ್ದಾರಿಯುತ ನಾಗರಿಕರಿಂದ ಪ್ರಶಂಸೆಗೆ ಒಳಗಾಗಿ, ಅವರೆಲ್ಲ ಈ ಸವಾಲಿಗೆ ಸೈ ಎನ್ನುತ್ತಿದ್ದಾರೆ.
ಚರಂಡಿ ನೀರಿನ ಡಿಮ್ಯಾಂಡಪ್ಪೋ ಡಿಮ್ಯಾಂಡ್
ಶುರುವಾದದ್ದೆಲ್ಲಿಂದ?
ಯಾರಪ್ಪಾ ಇಂಥ ಚಾಲೆಂಜ್ ಎಲ್ಲ ಹುಟ್ಟು ಹಾಕೋದು ಅಂದ್ರಾ, ಈ ಫ್ಯೂಚರಿಸ್ಟಿಕ್ ಫೆಬ್ರವರಿ ಚಾಲೆಂಜ್ ಹುಟ್ಟು ಹಾಕಿದ್ದು ಅಮೆರಿಕದ ಕಾರ್ಲಿ ಬರ್ಗ್‌ಮ್ಯಾನ್ ಹಾಗೂ ಬ್ರೆಂಡನ್ ಫಿಟ್ಜ್‌ಗೆರಾಲ್ಡ್ ದಂಪತಿ. ಇದೆಲ್ಲ ಶುರುವಾದದ್ದು 2017ರಲ್ಲಿ. ಆಗ ಕಾರ್ಲಿಯು ಹಳ್ಳಿಗಳ ಸಮುದಾಯಗಳಿಗೆ ಪ್ರಕೃತಿಯ ಕುರಿತು ಶಿಕ್ಷಣ ನೀಡುವ ಸಲುವಾಗಿ ನಿಕಾರ್ಗಾವಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಆ ಹಳ್ಳಿಯಲ್ಲಿ ಜನಕ್ಕೆ ತ್ಯಾಜ್ಯ ನಿರ್ವಹಣೆ ಹೇಗೆ ಮಾಡಬೇಕೆಂದೇ ಗೊತ್ತಿಲ್ಲದಿದ್ದುದ್ದನ್ನು ನೋಡಿದ ಕಾರ್ಲಿಗೆ ತಾನು ಕೂಡಾ ತಾನಲ್ಲಿ ಇದ್ದ ಒಂದು ತಿಂಗಳಿನ ಕಸವನ್ನು ಉಳಿಸಿದರೆ ಅದರ ನಿರ್ವಹಣೆಯಾಗದೆ, ಅದು ಪರಿಸರಕ್ಕೆ ಮಾರಕವಾಗುತ್ತದೆ ಎಂಬ ಯೋಚನೆ ಕಾಡತೊಡಗಿತು. ಕಡೆಗೆ, ತಾನಲ್ಲಿರುವಷ್ಟೂ ಸಮಯದಲ್ಲಿ ಬಳಸಿ ಬಿಸಾಡಬೇಕಾದ ತ್ಯಾಜ್ಯವನ್ನೆಲ್ಲ ಒಟ್ಟು ಮಾಡಿಕೊಂಡು ಒಂದು ಬ್ಯಾಗ್‌ಗೆ ಹಾಕಿ ಅದನ್ನು ಸರಿಯಾಗಿ ರಿಸೈಕಲ್ ಮಾಡುವ ಯೋಚನೆಯಿಂದ ವಿಮಾನದಲ್ಲಿ ಅಮೆರಿಕಕ್ಕೆ ವಾಪಸ್ ತಂದರು. ಈ ಘಟನೆಯು ಕಾರ್ಲಿ ಹಾಗೂ ಬ್ರೆಂಡನ್ ದಂಪತಿಯಲ್ಲಿ ಫ್ಯೂಚರಿಸ್ಟಿಕ್ ಫೆಬ್ರವರಿ ಕ್ಯಾಂಪೇನ್ ಯೋಚನೆಗೆ ಕಾರಣವಾಯಿತು.
ಫ್ಯೂಚರಿಸ್ಟಿಕ್ ಫೆಬ್ರವರಿ
ಬೇಸಿಕ್ ಐಡಿಯಾ ಏನಪ್ಪಾ ಅಂದ್ರೆ ಫೆಬ್ರವರಿ 1ರಿಂದ 28ರವರೆಗೆ ಮನೆಯ ಒಣ ಕಸವನ್ನು ಸಂಪೂರ್ಣ ಸಂಗ್ರಹಿಸಿಟ್ಟುಕೊಂಡು- 28ರಂದು ಎಷ್ಟು ಪ್ಲ್ಯಾಸ್ಟಿಕ್ ಹಾಗೂ ಇನ್ನಿತರೆ ಅಜೈವಿಕ ತ್ಯಾಜ್ಯ ಸಂಗ್ರಹವಾಗಿದೆ ಎಂದು ಒಟ್ಟು ಮಾಡಿ ಫೋಟೋ ತೆಗೆದು ಸೋಷ್ಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಬೇಕು. ಈ ಕಸವನ್ನು 12ರಿಂದ ಗುಣಿಸಿದರೆ ಎಷ್ಟಾಗಬಹುದೆಂದು ಒಮ್ಮೆ ಕಲ್ಪನೆಗೆ ತಂದುಕೊಂಡರೆ 1 ವರ್ಷಕ್ಕೆ ನಿಮ್ಮ ಮನೆಯಲ್ಲಿ ಸಂಗ್ರಹವಾಗುವ ಒಣಕಸದ ಚಿತ್ರಣ ಕಣ್ಣ ಮುಂದೆ ಬರುತ್ತದೆ. ತದನಂತರದಲ್ಲಿ ಇದನ್ನು ಕಡಿಮೆ ಮಾಡುವುದು ಹೇಗೆ ಎಂಬುದರತ್ತ ಸಾಧ್ಯವಾಗುವ ಎಲ್ಲ ಪ್ರಯತ್ನಗಳನ್ನೂ ಹಾಕುತ್ತಾ ಜೀರೋ ವೇಸ್ಟ್ ಲೈಫ್‌ಸ್ಟೈಲ್‌ನತ್ತ ಸಾಗಬೇಕು.
ಮಾದರಿಯಾಯ್ತು ಸ್ವಾಮಿಗಳ ಪರಿಸರ ಕಾಳಜಿ
'ಈ ಜೀರೋ ವೇಸ್ಟ್ ಜೀವನಶೈಲಿ ಅಳವಡಿಸಿಕೊಳ್ಳುವ ಹಾದಿಯಲ್ಲಿನ ಪ್ರತಿಯೊಂದು ಪ್ರಯತ್ನಗಳೂ ಬದಲಾವಣೆಗೆ ಕಾರಣವಾಗುತ್ತದೆ ಮತ್ತು ನಿಮ್ಮ ಹಣ ಉಳಿತಾಯವಾಗುತ್ತದೆ. ಈ ಸವಾಲು ನಿಮ್ಮ ಆರೋಗ್ಯಕ್ಕೂ, ಪರಿಸರಕ್ಕೂ ಒಳ್ಳೆಯದು,' ಎನ್ನುತ್ತಾರೆ ಕಾರ್ಲಿ ಹಾಗೂ ಬ್ರೆಂಡನ್.
ಈ ಕ್ಯಾಂಪೇನಿನ ನಾಲ್ಕನೇ ವರ್ಷವಾಗಿರುವ ಈ ಬಾರಿ ಕೂಡಾ ಈ ಚಾಲೆಂಜ್ ತೆಗೆದುಕೊಳ್ಳಲು ದಂಪತಿ ಎಲ್ಲರನ್ನೂ ಹುರಿದುಂಬಿಸುತ್ತಿದ್ದು 'ಸಂಪೂರ್ಣವಾಗಿ ಜೀರೋ ವೇಸ್ಟ್ ಜೀವನಶೈಲಿ ಅಳವಡಿಸಿಕೊಳ್ಳುವುದು ಸುಲಭದ ಮಾತಲ್ಲ. ಇದಕ್ಕಾಗಿ ನೀವು ನಿಮ್ಮೆಲ್ಲ ಹಳೆ ಅಭ್ಯಾಸಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ,' ಎನ್ನುತ್ತಾರೆ ಅವರು.
'ಗರ್ಲ್ಸ್ ವಿಥ್ ಗ್ರೀನ್ ಬೂಟ್ಸ್' ಖಾತೆಯನ್ನು ಇನ್ಸ್ಟಾದಲ್ಲಿ ನಿರ್ವಹಿಸುತ್ತಿರುವ ಮಹಿಮಾ ಟಿ.ಪಿ., ಕಳೆದ ಎರಡು ವರ್ಷಗಳಿಂದ ಈ ಸವಾಲನ್ನು ತೆಗೆದುಕೊಂಡಿದ್ದಾರೆ. ಪರಿಸರ ಪ್ರಜ್ಞೆಯಿಂದ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದರೂ ಫ್ಯೂಚರಿಸ್ಟಿಕ್ ಫೆಬ್ರವರಿ ಚಾಲೆಂಜ್ ನಿಜವಾಗಿ ನನ್ನ ಕಣ್ಣು ತೆರೆಸಿತು ಎನ್ನುತ್ತಾರೆ ಆಕೆ. ನಿಮಗೂ ಈ ಸವಾಲು ಸ್ವೀಕರಿಸುವ ಮನಸ್ಸಿದ್ದಲ್ಲಿ, ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ.
ಫೆಬ್ರವರಿ ಎಂದಿನಂತಿರಲಿ
ಈ ಜಾಗೃತಿ ಅಭಿಯಾನದ ಮೂಲ ಆಶಯವೇ ನಿಮ್ಮಿಂದ ಅದೆಷ್ಟು ತ್ಯಾಜ್ಯ ಪರಿಸರದ ಒಡಲು ಸೇರುತ್ತಿದೆ ಎಂಬುದನ್ನು ತಿಳಿಸುವುದಾದ್ದರಿಂದ, ಈ ತಿಂಗಳು ಇದುವರೆಗೂ ಜೀವನ ನಡೆಸಿದಂತೆಯೇ ನಡೆಸಿ. ಸಾಮಾನ್ಯವಾಗಿ ನೀವೆಷ್ಟು ಪ್ಲ್ಯಾಸ್ಟಿಕ್ ಬಳಕೆ ಮಾಡುತ್ತಿದ್ದಿರೋ ಅಷ್ಟೇ ಬಳಕೆ ಮಾಡಿ. ಆದರೆ ಪೌರಕಾರ್ಮಿಕರಿಗೆ ಕೊಡದೇ ಮನೆಯಲ್ಲೇ ಇಟ್ಟುಕೊಳ್ಳಿ. ಆಗ ಮಾತ್ರ ನಿಮಗೆ ಈ ಸಮಸ್ಯೆಯ ಆಳ ಅರಿವಾಗಲು ಸಾಧ್ಯ.
ತ್ಯಾಜ್ಯದ ವಿಡಿಯೋ ಮಾಡಿ
ಈ ಎಲ್ಲ ಒಣತ್ಯಾಜ್ಯದ ವಿಡಿಯೋ ಚಿತ್ರೀಕರಣ ಮಾಡಿ 28ನೇ ತಾರೀಖಿನಂದು ನಿಮ್ಮ ಸೋಷ್ಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳಿ. ಅದಕ್ಕೆ ಫ್ಯೂಚರಿಸ್ಟಿಕ್ ಫೆಬ್ರವರಿ ಹ್ಯಾಷ್‌ಟ್ಯಾಗ್ ಬಳಸಿ. ನೀವು ಬೇಕಿದ್ದರೆ ಇಡೀ ತಿಂಗಳು ಈ ಚಾಲೆಂಜ್ ಬಗ್ಗೆ ಬರೆದುಕೊಳ್ಳಬಹುದು.
ಮರ ಕಡಿಯಲು ಹೋದವರು ಪೂಜೆ ಮಾಡುತ್ತಾರೆ?
ಮಿನಿಮಲ್ ಮಾರ್ಚ್
ಫೋಟೋ ಹಾಕಿದ ಬಳಿಕ ಫೆಬ್ರವರಿಯಲ್ಲಿ ಎಷ್ಟೊಂದು ಒಣತ್ಯಾಜ್ಯ ಸಂಗ್ರಹವಾಗಿದೆ ಎಂಬುದು ನಿಮಗೆ ಅರಿವಾಗಿರುತ್ತದೆ. ಹೀಗಾಗಿ, ಮಾರ್ಚ್‌ನಲ್ಲಿ ಇದನ್ನು ಎಲ್ಲೆಲ್ಲಿ ಹೇಗೆಲ್ಲ ಕಡಿಮೆ ಮಾಡಲು ಸಾಧ್ಯವೋ ಆ ಎಲ್ಲ ತಂತ್ರಗಳನ್ನು ಪ್ರಯೋಗಿಸಿ ಕಸ ಕಡಿಮೆ ಮಾಡಿ. ಪ್ಲ್ಯಾಸ್ಟಿಕ್ ಬ್ಯಾಗ್ ನಿರಾಕರಣೆ, ಮನೆಗೆ ದೊಡ್ಡ ಮಟ್ಟದಲ್ಲಿ ಒಮ್ಮೆಯೇ ದಿನಸಿ ತರುವುದು, ಜಂಕ್ ಫುಡ್‌ಗಳನ್ನು ತರದಿರುವುದು, ಎಲ್ಲ ಕಡೆಗೆ ಬಟ್ಟೆಯ ಬ್ಯಾಗ್ ಹಿಡಿದೇ ಹೋಗುವುದು- ಇಂಥ ಸಣ್ಣ ಪುಟ್ಟ ಅಭ್ಯಾಸಗಳು ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗಬಲ್ಲವು. ನಂತರ ಮಾರ್ಚ್ 31ರಂದು ಆ ತಿಂಗಳು ಸಂಗ್ರಹವಾದ ಒಣಕಸದ ಚಿತ್ರ ಹಾಕಿ. ಫೆಬ್ರವರಿಗೂ, ಮಾರ್ಚ್‌ಗೂ ಆದ ವ್ಯತ್ಯಾಸವನ್ನು ನೀವೇ ಕಂಡುಕೊಳ್ಳಿ. ಇದನ್ನು ಇನ್ನೂ ಕಡಿಮೆ ಮಾಡುವುದು ಹೇಗೆಂದು ಯೋಚಿಸುತ್ತಾ, ಪ್ರಯೋಗಿಸುತ್ತಾ ಮುನ್ನುಗ್ಗಿ. ವರ್ಷ ಕಳೆವಷ್ಟರಲ್ಲಿ ಜೀರೋ ವೇಸ್ಟ್ ಜೀವನಶೈಲಿ ನಿಮ್ಮದಾಗಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.