ಅನ್ನ ಮುಂದಿಟ್ಟುಕೊಂಡು ಮೊಬೈಲ್ ಒತ್ತುತ್ತಿದ್ದ ಅಪ್ಪ ಮಕ್ಕಳು: ಅಮ್ಮ ಹೆಂಗೆ ಬುದ್ಧಿಕಲಿಸಿದ್ಲು ನೋಡಿ

By Anusha Kb  |  First Published Jun 4, 2023, 1:04 PM IST

ಊಟದ ತಟ್ಟೆ ಮುಂದಿಟ್ಟುಕೊಂಡು ಮೊಬೈಲ್ ಒತ್ತುವ ಅಪ್ಪ ಮಕ್ಕಳಿಗೆ ಬುದ್ದಿ ಕಲಿಸಲು ಪ್ಲಾನೊಂದನ್ನು ಮಾಡಿದ್ದು, ಆ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದೆ.


ಇಂದು ಬಹುತೇಕ ಮಕ್ಕಳು ಮೊಬೈಲ್ ಚಟಕ್ಕೆ ದಾಸರಾಗಿದ್ದು, ಒಂದು ತುತ್ತು ಅನ್ನ ಹೊಟ್ಟೆ ಸೇರುವುದಕ್ಕೂ ಮಕ್ಕಳ ಕೈಯಲ್ಲಿ ಮೊಬೈಲ್ ಇರಲೇಬೇಕು. ಇಲ್ಲದಿದ್ದರೆ ರಂಪಾಟ ಶುರುವಾಗುತ್ತದೆ. ಇನ್ನು ದೊಡ್ಡವರಿಗೆ  ಅದರಲ್ಲೂ ಯುವಕ ಯುವತಿಯರಂತೂ ಮೊಬೈಲ್‌ಗೆ ಸಂಪೂರ್ಣ ವಶವಾಗಿದ್ದು, ಕೂತರೂ ನಿಂತರೂ ಟಾಯ್ಲೆಟ್‌ಗೆ ಹೋಗುವಾಗಲೂ ಮಲಗುವಾಗಲೂ, ಮೊಬೈಲ್ ಫೋನ್ ಕೈಯಲ್ಲಿ ಇರಲೇಬೇಕು. ಒಂದು ಕ್ಷಣ ಮೊಬೈಲ್ ಇಲ್ಲದೇ ಹೋದರೆ ಅಥವಾ ಮೊಬೈಲ್ ಸ್ವಿಚ್ಆಫ್ ಆದರೂ ಚಡಪಡಿಸುವ ಜನರನ್ನು ನೀವು ನೋಡಿರಬಹುದು. ಮನೆಗೆ ಯಾರಾದರೂ ಬಂದರೂ ಅಷ್ಟೇ ಮಕ್ಕಳು  ತಮ್ಮ ಪಾಡಿಗೆ ತಾವು ಮೊಬೈಲ್ ಒಳಗೆ ಮುಳುಗಿ ಹೋಗಿರುವುದನ್ನು ನೀವು ಕಾಣಬಹುದು.

ಮಕ್ಕಳ ಮೊಬೈಲ್ ಚಟ (Mobile Addiction) ದೊಡ್ಡವರ, ಮನೆಯ ಹಿರಿಯರ ಪಾಲಿಗೆ ಸಂಕಟ ತಂದೊಡ್ಡುತ್ತಿದೆ. ಏನಾದರೂ ಮಾತನಾಡಿದರು ಮಕ್ಕಳು ಮೊಬೈಲ್‌ನಿಂದ ತಲೆ ಎತ್ತದೇ ಹೂ ಹೂ ಎನ್ನುವುದನ್ನು ನೋಡಿದ ಪೋಷಕರ ಪಿತ್ತ ನೆತ್ತಿಗೇರುತ್ತಿದ್ದು, ಈ ಚಟದಿಂದ ಮಕ್ಕಳನ್ನು ಬಿಡಿಸುವುದು ಹೇಗೆ ಎಂಬುದೇ ಪೋಷಕರ ಪಾಲಿಗೆ ದೊಡ್ಡ ತಲೆನೋವಾಗಿದೆ. ಅದರಲ್ಲೂ ಕೆಲ ಮನೆಗಳಲ್ಲಿ ಅಪ್ಪ ಮಕ್ಕಳು ಎಲ್ಲರೂ ಊಟದ ಸಮಯದಲ್ಲೂ ಪರಸ್ಪರ ಮುಖ ನೊಡುತ್ತಾ ಕಷ್ಟ ಸುಖ ಹಂಚಿಕೊಳ್ಳದೇ ಕೇವಲ ಮೊಬೈಲ್ ಲ್ಯಾಪ್‌ಟಾಪ್‌ಗಳಲ್ಲಿ (Laptop) ಮುಳುಗಿ ಹೋಗುತ್ತಿದ್ದಾರೆ.  ಇದರಿಂದ ಮನೆಯ ಗೃಹಿಣಿಯರ ತಾಳ್ಮೆ ಕೆಡುತ್ತದೆ. 

Latest Videos

undefined

ಆಹಾರ ಎದುರಿಗಿದ್ದರೂ ತಿನ್ನದೇ ಮೊಬೈಲ್ ಒತ್ತುವ ಗ್ರಾಹಕರು: ಸ್ಮಾರ್ಟ್‌ಫೋನ್ ನಿಷೇಧಿಸಿದ ಹೊಟೇಲ್‌

ಹೀಗಿರುವಾಗ ಊಟದ ತಟ್ಟೆ ಮುಂದಿಟ್ಟುಕೊಂಡು ಮೊಬೈಲ್ ಒತ್ತುವ ಅಪ್ಪ ಮಕ್ಕಳಿಗೆ ಬುದ್ದಿ ಕಲಿಸಲು ಪ್ಲಾನೊಂದನ್ನು ಮಾಡಿದ್ದು, ಆ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದೆ. ಇದನ್ನು ಟ್ವಿಟ್ಟರ್‌ನಲ್ಲಿ Kungfu Pande (@pb3060)ಎಂಬ ಪೇಜ್‌ನಿಂದ ಅಪ್‌ಲೋಡ್ ಮಾಡಲಾಗಿದ್ದು, ಸಾವಿರಾರು ಜನ ವೀಕ್ಷಿಸಿದ್ದಾರೆ.

ವೀಡಿಯೋದಲ್ಲಿ ಏನಿದೆ?

ಕೆಂಪು ಚೂಡೀಧಾರ್ ಧರಿಸಿರುವ ಗೃಹಿಣಿ, ಆಹಾರವನ್ನು (Food)ತಯಾರಿಸಿ ತಂದು ಊಟದ ಟೇಬಲ್ ಮೇಲಿಟ್ಟಿದ್ದು, ಪಕ್ಕದ ಕುರ್ಚಿಯಲ್ಲಿ ಕುಳಿತು ಎಲ್ಲರನ್ನೂ ಊಟಕ್ಕೆ ಕರೆದಿದ್ದಾರೆ. ಈ ವೇಳೆ ಒಬ್ಬೊಬ್ಬರಾಗಿ ಊಟ ಮಾಡಲು ಮನೆ ಮಂದಿ ಬರುತ್ತಾರೆ. ಮೊದಲಿಗೆ ಮಗ ಬಂದಿದ್ದು, ಮಗನ ಕೈಯಲ್ಲಿದ್ದ ಮೊಬೈಲ್ ಅನ್ನು ಅಮ್ಮ ತೆಗೆದುಕೊಳ್ಳುತ್ತಾಳೆ. ನಂತರ ಮಗಳು ಬರುತ್ತಾಳೆ. ಮಗಳು ಮೊದಲಿಗೆ ಟ್ಯಾಬ್‌ನ್ನು ಊಟದ ಟೇಬಲಿನ ಮೇಲೆ ಇಡುತ್ತಾಳೆ. ಈ ವೇಳೆ ಅಮ್ಮ ಮೊಬೈಲ್‌ ಕೂಡ ಹೊರಗೆ ಬರಲಿ ಎಂಬಂತೆ ಊಟದ ಮೇಜನ್ನು ಬಡಿದು ಸೂಚಿಸುತ್ತಾಳೆ, ನಂತರ ಅಪ್ಪ ಊಟಕ್ಕೆ ಬರುತ್ತಾರೆ. ಅಪ್ಪನು ಕೂಡ ತನ್ನ ಬಳಿ ಇದ್ದ ಲ್ಯಾಪ್‌ಟಾಪ್‌ನ್ನು ಮೊದಲು ಮೇಜಿನ ಮೇಲೆ ಇಡುತ್ತಾನೆ. ಈ ವೇಳೆ ಅಮ್ಮ ಉಳಿದೆರಡು ಮೊಬೈಲ್‌ಗಳನ್ನು ಹೊರ ತೆಗೆಯುವಂತೆ ಮೊದಲಿನಂತೆ ಮೇಜು ಬಡಿದು ಸೂಚಿಸುತ್ತಾಳೆ. ಅದರಂತೆ ಅಪ್ಪ ಒಂದೊಂದಾಗಿ ತನ್ನ ಚಡ್ಡಿ ಜೇಬಿನಲ್ಲಿದ್ದ ಮೊಬೈಲ್ ಅನ್ನು ತೆಗೆದು ಹೊರಗೆ ಇಟ್ಟಿದ್ದು,  ನಂತರ ಎಲ್ಲರಿಗೂ ಅಮ್ಮ ಊಟ ಬಡಿಸಿದ್ದಾಳೆ. ಎಲ್ಲರೂ ಟೇಬಲ್ ಮೇಲೆ ಕುಳಿತು ಜೊತೆಯಾಗಿ ಊಟ ಮಾಡುತ್ತಾರೆ. 

ವೀಡಿಯೋ ಗೇಮ್ ಆಡುವ ವೇಳೆ ಸಿಕ್ಕಿಬಿದ್ದ ಮಗ: ಅಪ್ಪ ಕೊಟ್ಟ ಶಿಕ್ಷೆಗೆ ದಂಗಾದ

30 ಸೆಕೆಂಡ್‌ಗಳ ಈ ವೀಡಿಯೋವನ್ನು ಸಾವಿರಾರು ಜನ ಲೈಕ್ ಮಾಡಿದ್ದು, ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕರು ಇದೊಂದು ಉತ್ತಮ ಐಡಿಯಾ ಪ್ರತಿ ಮನೆಯಲ್ಲೂ ಈ ರೀತಿ ಯೋಜನೆ ಮಾಡಬೇಕು ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.  ಮತ್ತೆ ಕೆಲವರು ಇದು ಬೆಸ್ಟ್ ಐಡಿಯಾ ಎಂದಿದ್ದಾರೆ. ಒಟ್ಟಿನಲ್ಲಿ ಅಮ್ಮನ ಐಡಿಯಾ ಒಳ್ಳೆ ಕ್ಲಿಕ್ ಆಗಿದ್ದು, ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ.  

Dinner ka Naya rule 😂🤣 pic.twitter.com/Sssl3RL3gk

— Kungfu Pande 🇮🇳 (Parody) (@pb3060)

 

click me!