ನಿನ್ನಂಥ ಅಕ್ಕ ಇಲ್ಲ..ತಮ್ಮನಿಗಾಗಿ ಕಿಡ್ನಿ ದಾನ ಮಾಡಿ, ಜೀವ ಕೊಟ್ಟ ಅಕ್ಕ..!

Published : Dec 22, 2022, 10:10 AM ISTUpdated : Jan 12, 2023, 01:34 PM IST
ನಿನ್ನಂಥ ಅಕ್ಕ ಇಲ್ಲ..ತಮ್ಮನಿಗಾಗಿ ಕಿಡ್ನಿ ದಾನ ಮಾಡಿ, ಜೀವ ಕೊಟ್ಟ ಅಕ್ಕ..!

ಸಾರಾಂಶ

ಮೊನ್ನೆಯಷ್ಟೇ ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್​ಗೆ ಮಗಳು ರೋಹಿಣಿ ತನ್ನ ಕಿಡ್ನಿ ದಾನ ಮಾಡಿದ್ದು ಮನೆ, ಮನೆಗಳಲ್ಲೂ ದೊಡ್ಡ ಸುದ್ದಿ ಮಾಡಿತ್ತು. ಇಡೀ ದೇಶವೇ ರೋಹಿಣಿಯನ್ನು ಕೊಂಡಾಡಿತ್ತು. ಅಂಥದ್ದೇ ಮತ್ತೊಂದು ಮನಕಲಕುವ ಕಥೆ ಇದು. ಅಕ್ಕನೇ, ತನ್ನ ಪ್ರೀತಿಯ ತಮ್ಮನಿಗಾಗಿ ತನ್ನ ಕಿಡ್ನಿ ದಾನ ಮಾಡಿ, ಸಹೋದರತ್ವ, ಬಾಂಧವ್ಯಕ್ಕೆ ಸಾಕ್ಷಿಯಾಗಿದ್ದಾಳೆ.

ಶೋಭಾ. ಎಂ.ಸಿ, ಔಟ್‌ಪುಟ್ ಹೆಡ್, ಏಷ್ಯಾನೆಟ್ ಸುವರ್ಣ ನ್ಯೂಸ್

ಗುರುಗಾಂವ್​ನ ಚಂದಾ ಬಾತ್ರಾ​ಗೆ ಒಬ್ಬನೇ ಮುದ್ದಿನ ತಮ್ಮ (Brother). ಆಕೆಗಿಂತ 8 ವರ್ಷ ಚಿಕ್ಕವನು. ಹೆಸರು ಅಮನ್​ ಬಾತ್ರಾ. ಫಿಲಂ ಮೇಕರ್​​. ಬಾಲ್ಯದಿಂದಲೂ ತಮ್ಮನ ಮೇಲೆ ಚಂದಾಗೆ ವಿಪರೀತಿ ಪ್ರೀತಿ (Love), ಅಕ್ಕರೆ. ಆತನ ಕನಸಿಗೆ ನೀರೆರೆದು ಪೋಷಿಸಿದವಳು ಅಕ್ಕ ಚಂದಾ. ಕ್ಯಾಮರಾ, ಕಂಪ್ಯೂಟರ್​ ಸೇರಿದಂತೆ ತಮ್ಮ ಕೇಳಿದ್ದೆಲ್ಲವನ್ನೂ ಕೊಡಿಸುತ್ತಿದ್ದವಳೇ ಅಕ್ಕ ಚಂದಾ. 2021ರಲ್ಲಿ ಚಂದಾ ಮದುವೆಯಾಗಿ ನ್ಯೂಜಿಲ್ಯಾಂಡ್​​ ಸೇರಿಕೊಂಡಳು. ಅಮನ್​ ಪಾಲಿಗೆ ಚಂದಾ ಎರಡನೇ ತಾಯಿಯಂತಿದ್ದಳು. ತವರಿನಿಂದ ದೂರಾದ ಚಂದಾ, ಅಮನ್​ಗಾಗಿ ಹಂಬಲಿಸುತ್ತಿದ್ದಳು. ಆತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು, ಆತನ ಓದು, ಫಿಲಂ ಬಗ್ಗೆ ಇನ್ನಿಲ್ಲದ ಆಸಕ್ತಿ ತೋರುತ್ತಿದ್ದಳು. 

ಅಕ್ಕ (Sister) ಮದುವೆಯಾದ ಒಂದು ವರ್ಷಕ್ಕೆ ಸರಿಯಾಗಿ ಅಮನ್​ ಬದುಕಿನಲ್ಲಿ ಬಿರುಗಾಳಿ ಎದ್ದಿತ್ತು. 21 ವರ್ಷದ ಚಿಗುರು ಮೀಸೆಯ ಅಮನ್​ ಆರೋಗ್ಯ (Health) ಹದಗೆಡತೊಡಗಿತ್ತು. ಸಂಪೂರ್ಣ ತಪಾಸಣೆಯ ಬಳಿಕ ವೈದ್ಯರು ಹೇಳಿದ್ದು ಕಿಡ್ನಿ ಫೇಲ್ಯೂರ್​. ಇನ್ನೇನು ಮಾಡಲಾಗದು ಎಂಬ ಡಾಕ್ಟರ್ ಮಾತು ಕೇಳಿ ಅಮನ್ ಕುಸಿದು ಬಿಟ್ಟ.  ಸುಂದರ ಭವಿಷ್ಯದ ಕನಸು ಹೊತ್ತಿದ್ದ ಅಮನ್​, ದಿಕ್ಕು ತೋಚದಂತಾದ. ದಿನೇ ದಿನೇ ಅಮನ್​ ಆರೋಗ್ಯ ಹದಗೆಡುತ್ತಿತ್ತು, ಮಾನಸಿಕವಾಗಿಯೂ ಕುಸಿದುಬಿಟ್ಟಿದ್ದ. ಮಗನ ಸ್ಥಿತಿ ಕಂಡು ತಂದೆ-ತಾಯಿಯೂ ಬಿಕ್ಕಿದ್ದರು. ತಮ್ಮನ ಅನಾರೋಗ್ಯದ ವಿಷಯ ತಿಳಿಯುತ್ತಿದ್ದಂತೆ ಅಕ್ಕ ಚಂದಾಳ ಹೃದಯದಲ್ಲಿ ಅಲ್ಲೋಲ ಕಲ್ಲೋಲ. ಹೆತ್ತ ಮಗನಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ತಮ್ಮ ಅಮನ್​ ಬಗ್ಗೆ ಕಟ್ಟಿದ್ದ ಕನಸಿನ ಗೋಪುರ ಕಳಚಿ ಬಿದ್ದಿತ್ತು.

ಮಗಳಿದ್ದರೆ ನಿನ್ನಂಥ ಮಗಳಿರಬೇಕು! ಲಾಲುಗೆ ಕಿಡ್ನಿ ಕೊಟ್ಟ ಮಗಳಿಗೊಂದು ಚಪ್ಪಾಳೆ

ತಮ್ಮ ಸ್ಥಿತಿ ಕಂಡು ಮಮ್ಮಲ ಮರುಗಿದ ಚಂದಾ, ನ್ಯೂಜಿಲ್ಯಾಂಡ್​ನಿಂದ ಭಾರತಕ್ಕೆ ಧಾವಿಸಿದಳು. ಅಮನ್​ ಕೈ ಹಿಡಿದು, ಪ್ರೀತಿಯ ಧಾರೆ ಎರೆದಳು. ಆರೋಗ್ಯ ಸುಧಾರಿಸುವ ಭರವಸೆ ತುಂಬಿದಳು. ತಮ್ಮನಿಗಾಗಿ ಪಾರ್ಟಿ ಆಯೋಜಿಸಿ ಸಂಭ್ರಮಪಡುವಂತೆ ಮಾಡಿದ್ದಳು. ಇದರ ಮಧ್ಯೆ ಚಂದಾಳ ಮನಸ್ಸಲ್ಲಿ ಒಂದು ನಿರ್ಧಾರ ರೂಪುತಳೆದಿತ್ತು. ತನ್ನ ಪ್ರೀತಿಯ ಅಮನ್​ಗಾಗಿ ತನ್ನ ಕಿಡ್ನಿ ದಾನ ಮಾಡುವ ಕಠಿಣ ತೀರ್ಮಾನ ಕೈಗೊಂಡಿದ್ದಳು. ಅಕ್ಕನ ಮಾತು ಶಾಕ್ ಆದ ಅಮನ್​, ಖಡಾಖಂಡಿತವಾಗಿ ಬೇಡ ಎಂದುಬಿಟ್ಟ. ಆದ್ರೆ, ಅಕ್ಕ..! ಹುಂ, ಆಕೆಯ ತನ್ನ ನಿರ್ಧಾರದಿಂದ ಹಿಂದೆ ಸರಿಯಲೇ ಇಲ್ಲ. ಡಾಕ್ಟರ್​​ ಭೇಟಿಯಾಗಿ ವಿಷಯ ತಿಳಿಸಿದಳು. ‘ನಾವು ಎರಡು ಕಿಡ್ನಿ ಹೊಂದಿರುವುದೇ, ಮತ್ತೊಬ್ಬರಿಗೆ ಕಿಡ್ನಿ ದಾನ ಮಾಡಿ ಜೀವ ಉಳಿಸಲು. ನೀನು ಬದುಕಲೇಬೇಕು’ ಎಂದು ಪ್ರೀತಿಪೂರ್ವಕ ಗದರಿದಳು. ವಿಧಿ ಇಲ್ಲದೇ ಅಕ್ಕನ ಮಾತಿಗೆ ಒಪ್ಪಿದ ಅಮನ್​. ಇಬ್ಬರೂ ಒಂದೇ ವಾರ್ಡ್​ನಲ್ಲಿ, ಅಕ್ಕ-ಪಕ್ಕದ ಬೆಡ್​ನಲ್ಲಿ. 

ಒಂದೇ ಕರುಳು ಬಳ್ಳಿಗಳು, ಒಂದಾಗಿದ್ದವು. ಚಂದಾ ಕಿಡ್ನಿ ಯಶಸ್ವಿಯಾಗಿ ಅಮನ್​ಗೆ ಜೋಡಿಸಲಾಯ್ತು. ಅಮನ್​ ಬಾಳಲ್ಲಿ ಹೊಸ ಚಂದ್ರ ಉದಯಿಸಿದ್ದ. ಅಕ್ಕ ಚಂದಾ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಳು. ತನ್ನ ಒಡಹುಟ್ಟಿದವನ ಬದುಕು ಹಸನಾಗಿಸಲು ಚಂದಾ ಮಾಡಿದ‌ ತ್ಯಾಗ‌ ದೊಡ್ಡದು.‌ ಒಂದು ಕ್ಷಣವೂ ತಾನು ಬಾಳಿ ಬದುಕಬೇಕಾದವಳೆಂಬುದನ್ನೇ ಮರೆತು ಬಿಟ್ಟಳು. ಮದುವೆಯಾಗಿ ವರ್ಷವಷ್ಟೇ ಕಳೆದಿತ್ತು.‌ ದಾಂಪತ್ಯ ಜೀವನವನ್ನೇ ಬದಿಗಿರಿಸಿ, ತನ್ನ ಆರೋಗ್ಯ, ಕುಟುಂಬ, ತಾಯ್ತನದ ಆಸೆ ಎಲ್ಲವನ್ನೂ ಮರೆತು, ಒಡಹುಟ್ಟಿದವನ ಜೀವ ಉಳಿಸಲು, ತನ್ನ ಭವಿಷ್ಯವನ್ನೇ ಪಣಕ್ಕಿಟ್ಟಳು. ಅಮನ್ ಗೆ ಚಂದಾ ಅಕ್ಕ ಮಾತ್ರ ಅಲ್ಲ ತಾಯಿಯೇ ಆಗಿಬಿಟ್ಟಿದ್ದಳು. 

 ತಾಯಿಯಾಗಿ, ಪತ್ನಿಯಾಗಿ, ಸಹೋದರಿಯಾಗಿ- ಹೀಗೆ ಎಲ್ಲ ಪಾತ್ರವನ್ನೂ ಸಮರ್ಥವಾಗಿ ನಿಭಾಯಿಸುವ ಹೆಣ್ಣು, ತನ್ನ ಜೀವದ ಬಗ್ಗೆ ಚಿಂತೆ ಇಲ್ಲ. ತನ್ನ ಪ್ರೀತಿ ಪಾತ್ರರಿಗಾಗಿ ಜೀವವನ್ನೇ ಒತ್ತೆ ಇಡಲು ಆಕೆ ಹಿಂದೆ ಮುಂದೆ ನೋಡೋದಿಲ್ಲ ಅನ್ನೋದಕ್ಕೆ ಚಂದಾ ಕಥೆ ಒಂದು ಉದಾಹರಣೆ ಅಷ್ಟೇ. 

ಕಿಡ್ನಿ ಕದ್ದ ಡಾಕ್ಟರ್‌, ಆತನದ್ದೇ ಅಂಗಾಂಗ ಕಸಿ ಮಾಡುವಂತೆ ಮಹಿಳೆಯ ಪಟ್ಟು

ಹೆಣ್ಣು ಮಕ್ಕಳಿಗೆ ಸಿಗೋದಿಲ್ಲ ಕಿಡ್ನಿ..!
ಅಪ್ಪ, ಗಂಡ, ಅಣ್ಣ, ತಮ್ಮನ ಪಾಲಿಗೆ ದೇವತೆಯಾಗಿ, ಜೀವ ಕಾಪಾಡುವ ಹೆಣ್ಣಿಗೆ ಮಾತ್ರ ಅಂಗಾಂಗ ಕಸಿಗೆ ದಾನಿಗಳೇ ಸಿಗುತ್ತಿಲ್ಲ ಅನ್ನೋದು ಮಾತ್ರ ಕಹಿ ಸತ್ಯ.  ಭಾರತದಲ್ಲಿ ದೇಶದಲ್ಲಿ ಕಿಡ್ನಿ ಕಸಿ ಮಾಡಿಕೊಳ್ಳುತ್ತಿರುವ ಮಹಿಳೆಯರ ಪಾಲು ಕೇವಲ ಶೇ.19 ಮಾತ್ರ. ದೇಶದ ಒಟ್ಟು 10 ಕಿಡ್ನಿ ಕಸಿ ಚಿಕಿತ್ಸೆ ಮಾಡಿಸಿಕೊಂಡವರಲ್ಲಿ 8 ಮಂದಿ ಪುರುಷರಾದರೆ, ಮಹಿಳೆಯರ ಸಂಖ್ಯೆಕೇವಲ 2. ಗಂಡಸಿನ ಸಂಕಷ್ಟ ಕಾಲದಲ್ಲಿ ಹೆಗಲಿಗೆ ಹೆಗಲಾಗಿ, ಜೀವಕ್ಕೆ ಜೀವವಾಗಿ ನಿಲ್ಲುವ ಹೆಣ್ಣಿಗೆ ಕಿಡ್ನಿ ದಾನ ಮಾಡಲು ಪುರುಷರು ಹಿಂದೇಟು ಹಾಕುವುದು ದುರಂತ. ಎಷ್ಟೇ ಆಗಲಿ, ಆಕೆ ಜೀವ ಕೊಡುವವಳು. ಜೀವಕ್ಕಾಗಿ ಹಂಬಲಿಸುವವಳಲ್ಲ..!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

SM
About the Author

Shobha MC

ಮಂಡ್ಯ ಜಿಲ್ಲೆಯ ಮಳವಳ್ಳಿಯವರು. ಮಾನಸ ಗಂಗೋತ್ರಿಯಲ್ಲಿ ಪತ್ರಿಕೋದ್ಯಮ ಎಂಎ ಮುಗಿಸಿ, ಸೇರಿದ್ದು ವಿಜಯ ಕರ್ನಾಟಕ ಪತ್ರಿಕೆಗೆ. ಸೂರ್ಯೋದಯ ಸೇರಿ ಪತ್ರಿಕೆಗಳಲ್ಲಿ 7 ವರ್ಷಗಳ ಅನುಭವ. ನ್ಯೂಸ್ ಚಾನೆಲ್ಗಳಿನ್ನೂ ಸರಿಯಾಗಿ ಕಣ್ಬಿಡದ ಕಾಲದಲ್ಲೇ ದೃಶ್ಯ ಮಾಧ್ಯಮಕ್ಕೆ ಕಾಲಿಟ್ಟಿದ್ದು, ಟೆಲಿವಿಷನ್ ಪಟ್ಟುಗಳೆಲ್ಲ ಕರತಲಾಮಲಕ. ಉದಯ ಟಿವಿಯಲ್ಲಿ 2 ವರ್ಷ ಸೇವೆ. ಕಳೆದ 17 ವರ್ಷದಿಂದಲೂ ಸುವರ್ಣ ನ್ಯೂಸ್ ಇನ್ಪುಟ್, ಔಟ್ಪುಟ್ ಹೆಡ್ ಆಗಿ ಕಾರ್ಯ ನಿರ್ವಹಣೆ. ಪತ್ರಿಕೆ- ಟಿವಿ ಎರಡರ ಅಗಾಧ ಅನುಭವ ಇರುವ ಏಕೈಕ ಪತ್ರಕರ್ತೆ. ಪ್ರತಿಷ್ಠಿತ ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಪತ್ರಕರ್ತರ ಸಂಘ, ಕೆಂಪೇಗೌಡ ಪ್ರಶಸ್ತಿ, ಪಬ್ಲಿಕ್ ರಿಲೇಷನ್ ಕೌನ್ಸಿಲ್ ಆಫ್ ಇಂಡಿಯಾ, ಪ್ರೆಸ್ಕ್ಲಬ್ ವಾರ್ಷಿಕ ಪ್ರಶಸ್ತಿಗಳು ಮುಡಿಗೇರಿವೆ. ಸದ್ಯ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯೆ, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಸಿಲಬಸ್ ಕಮಿಟಿ ಸದಸ್ಯೆಯಾಗಿಯೂ ನೇಮಕ.Read More...
Read more Articles on
click me!

Recommended Stories

ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?
ಚಾಣಕ್ಯ ನೀತಿಯ ಪ್ರಕಾರ ಇಂಥ ಸಂಗಾತಿ ಸಿಕ್ಕರೆ ಜೀವನಪೂರ್ತಿ ಕಷ್ಟ ತಪ್ಪಿದ್ದಲ್ಲ!