
ಕೆಲವರು ತುಂಬಾ ನಾಚಿಕೆ (Shyness) ಸ್ವಭಾವದವರಾಗಿರ್ತಾರೆ. ಕಡಿಮೆ ಮಾತನಾಡ್ತಾರೆ. ಮಾತನಾಡುವಾಗ ತಮ್ಮ ದೃಷ್ಟಿಕೋನವನ್ನು ವ್ಯಕ್ತಪಡಿಸಲು ದುರ್ಬಲರಾಗಿರ್ತಾರೆ. ಶಾಲಾ-ಕಾಲೇಜಿ (School-college)ನಲ್ಲಿ, ಬಂಧು-ಬಳಗದ ಮುಂದೆ ಅವರ ಸಂಕೋಚದ ಸ್ವಭಾವ ಕೆಲವೊಮ್ಮೆ ತೊಂದರೆಯನ್ನುಂಟು ಮಾಡುತ್ತದೆ. ಇದು ಇಷ್ಟಕ್ಕೆ ಮೀಸಲಾಗಿರುವುದಿಲ್ಲ. ಪ್ರೀತಿ (Love),ಮದುವೆ (Marriage),ಸಂಬಂಧದ ವಿಷ್ಯ ಬಂದಾಗ ಈ ನಾಚಿಕೆ,ಹಿಂಜರಿಕೆ ಇನ್ನಷ್ಟು ಹೆಚ್ಚಾಗುತ್ತದೆ. ನೀವೂ ನಾಚಿಕೆ ಸ್ವಭಾವದವರಾಗಿದ್ದರೆ ಕೆಲವೊಂದು ಬದಲಾವಣೆ ತರುವುದು ಅತ್ಯಗತ್ಯ. ಏಕೆಂದರೆ ಅತಿಯಾದ ಸಂಕೋಚ, ಪ್ರೀತಿ ಅಥವಾ ಸಂಬಂಧದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ನಿಮ್ಮ ಈ ನಡವಳಿಕೆಯಿಂದಾಗಿ ನಿಮ್ಮ ಸಂಗಾತಿಗೆ ನಿಮ್ಮ ಮನಸ್ಸಿನ ಭಾವನೆಯನ್ನು ಹೇಳಲು ಸಾಧ್ಯವಾಗುವುದಿಲ್ಲ. ನಿಮ್ಮ ಈ ಸ್ವಭಾವವನ್ನು ಸಂಗಾತಿ ಅರ್ಥ ಮಾಡಿಕೊಳ್ಳದೆ ಹೋದಲ್ಲಿ ತೊಂದರೆಯಾಗುತ್ತದೆ. ಅವರು ನಿಮ್ಮಿಂದ ದೂರವಾಗಬಹುದು. ಪ್ರೀತಿಯನ್ನು ಪಡೆಯಲು,ಉಳಿಸಿಕೊಳ್ಳಲು ನೀವು ಬದಲಾಗುವುದು ಅನಿವಾರ್ಯ. ಕೆಲವು ಸುಲಭವಾದ ವಿಧಾನದ ಮೂಲಕ, ನಿಮ್ಮ ಸಂಕೋಚ ಮತ್ತು ಹಿಂಜರಿಕೆಯನ್ನು ಸುಲಭವಾಗಿ ಕಡಿಮೆ ಮಾಡಬಹುದು.
ಭಯವನ್ನು ನಿಯಂತ್ರಿಸಿ : ನಾಚಿಕೆ ಸ್ವಭಾವದ ಜನರಲ್ಲಿ ಭಯ ಜಾಸ್ತಿ. ಪ್ರೀತಿಯ ವಿಷ್ಯವನ್ನು ಹಂಚಿಕೊಂಡರೆ ಮುಂದಿರುವವರು ಅದನ್ನು ನಿರಾಕರಿಸಿದರೆ ಅಥವಾ ಅವಮಾನಿಸಿದರೆ ಎಂಬ ಭಯವಿರುತ್ತದೆ. ಮನಸ್ಸಿನಲ್ಲಿರುವ ಈ ಭಯ ಅವರ ಭಾವನೆಗಳನ್ನು ಹೊರಹಾಕದಂತೆ ತಡೆಯುತ್ತದೆ. ಈ ಭಯ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ. ಇದ್ರಿಂದಾಗಿ ನೀವು ಮೆಚ್ಚಿದ ಸಂಗಾತಿ ನಿಮಗೆ ಸಿಗದೆ ಹೋಗಬಹುದು. ಆದ್ದರಿಂದ ನಿಮ್ಮ ಭಯವನ್ನು ನಿಯಂತ್ರಿಸಬೇಕಾಗುತ್ತದೆ. ಮುಂದೇನಾಗಬಹುದು ಎಂಬುದನ್ನು ಮೊದಲೇ ಊಹಿಸಿ ಭಯಪಡುವ ಬದಲು ಬಂದಿದ್ದನ್ನು ಎದುರಿಸುತ್ತೇನೆಂಬ ಧೈರ್ಯ ತಂದುಕೊಳ್ಳಿ. ಹೆಚ್ಚು ಯೋಚಿಸುವುದು ನಿಮ್ಮ ಹಿಂಜರಿಕೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಭಯವನ್ನು ದೂರ ಮಾಡಿ, ಮುಕ್ತವಾಗಿ ಮಾತನಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಕನ್ನಡಿ ಮುಂದೆ ನಿಂತೂ ನೀವು ಮಾತನಾಡುವ ಅಭ್ಯಾಸ ಮಾಡಬಹುದು.
ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡಿ : ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡುವುದು ಬಹಳ ಮುಖ್ಯ. ಪ್ರಾಧ್ಯಾಪಕರೊಂದಿಗಿರಲಿ ಇಲ್ಲ ಸ್ನೇಹಿತರ ಜೊತೆ ಇರಲಿ ಇಲ್ಲವೇ ಸಂಗಾತಿ ಜೊತೆಗಿರಲಿ ದೃಷ್ಟಿ ನೇರವಾಗಿಟ್ಟು ಮಾತನಾಡಬೇಕು. ಅನೇಕರು ಅಲ್ಲಿ,ಇಲ್ಲಿ ನೋಡುತ್ತ ಮಾತನಾಡುತ್ತಾರೆ. ಇದು ನಿಮ್ಮ ನಾಚಿಕೆ,ಹಿಂಜರಿಗೆ ಸ್ವಭಾವವನ್ನು ತೋರಿಸುತ್ತದೆ. ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡುವುದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಿಮ್ಮ ಮಾತಿನ ಮೇಲೆ ಜನರು ನಂಬಿಕೆಯಿಡಲು ಶುರು ಮಾಡ್ತಾರೆ.
ಸಂಬಂಧ ಕುರಿತ Anxiety ಬಗ್ಗೆ ನಿರ್ಲಕ್ಷ್ಯ ಬೇಡ; ದಾಂಪತ್ಯಕ್ಕೆ ಮುಳ್ಳಾಗ್ಬಹುದು ಈ ಖಾಯಿಲೆ
ನಿಮ್ಮನ್ನ ನೀವು ಪ್ರೀತಿಸಿ : ನಾಚಿಕೆಪಡುವ ಜನರು ಸಾಮಾನ್ಯವಾಗಿ ಎಲ್ಲರ ಜೊತೆ ಬೆರೆಯುವುದಿಲ್ಲ. ಒಂಟಿಯಾಗಿರಲು ಇಷ್ಟಪಡ್ತಾರೆ. ಒಂದು ಕೋಣೆಯಲ್ಲಿ ಬಂಧಿಯಾಗಿರಲು ಬಯಸ್ತಾರೆ. ಹಲವು ಜನರೊಂದಿಗೆ ಬಹಿರಂಗವಾಗಿ ಭೇಟಿಯಾಗಲು ಹೆದರುತ್ತಾರೆ. ಇದಕ್ಕೆ ಅವರಲ್ಲಿರುವ ಆತ್ಮವಿಶ್ವಾಸದ ಕೊರತೆಯೂ ಒಂದು ಕಾರಣ. ನೋಟ,ಮಾತಿನ ವಿಷ್ಯಕ್ಕೆ ಇತರರ ಜೊತೆ ತಮ್ಮನ್ನು ಹೋಲಿಸುತ್ತಾರೆ. ಅವರಿಗಿಂತ ತಾವು ಕೀಳು ಎಂಬ ಭಾವನೆ ಹೊಂದುತ್ತಾರೆ. ಇದೇ ಕಾರಣಕ್ಕೆ ಸಮಾಜದ ಮುಂದೆ ಬರಲು ಹೆದರುತ್ತಾರೆ. ಪ್ರತಿಯೊಬ್ಬರಲ್ಲೂ ಒಂದೊಂದು ಸಮಸ್ಯೆಯಿರುತ್ತದೆ. ಅದನ್ನೇ ಕಾರಣ ಮಾಡಿಕೊಳ್ಳುವ ಅಗತ್ಯವಿಲ್ಲ. ನಿಮ್ಮನ್ನು ನೀವು ಪ್ರೀತಿಸಲು ಶುರು ಮಾಡಿದಾಗ ಆತ್ಮವಿಶ್ವಾ ಹೆಚ್ಚಾಗುತ್ತದೆ. ನೀವು ಹೇಗಿದ್ದೀರಿ ಹಾಗೆ ನಿಮ್ಮನ್ನು ನೀವು ಸ್ವೀಕರಿಸಲು ಕಲಿಯಿರಿ. ನೀವೇ ನಿಮ್ಮನ್ನು ಪ್ರೀತಿಸಿಲ್ಲವೆಂದ್ರೆ ಬೇರೆಯವರು ನಿಮ್ಮನ್ನು ಪ್ರೀತಿಸಲು ಹೇಗೆ ಸಾಧ್ಯ?.
Cheating Husband: ಪತಿ ಕಾರಿನಲ್ಲಿದ್ದ ಕಾಂಡೋಮ್ ನೋಡಿ ಸೇಡು ತೀರಿಸಿಕೊಂಡ ಪತ್ನಿ..!
ಆನ್ಲೈನ್ ಡೇಟಿಂಗ್ : ನಾಚಿಕೆಯಿಂದ ಸಂಗಾತಿಯೊಂದಿಗೆ ಮನಃಪೂರ್ವಕವಾಗಿ ಮಾತನಾಡಲು ನಿಮಗೆ ಸಾಧ್ಯವಾಗದಿದ್ದರೆ, ಅವರೊಂದಿಗೆ ಆನ್‌ಲೈನ್ ಡೇಟಿಂಗ್ ಮಾಡಿ. ಅವರ ಮುಂದೆ ಹೇಳಲಾಗದ ಮಾತುಗಳನ್ನು ಚಾಟ್ ಅಥವಾ ಮೆಸೇಜ್ ಮೂಲಕ ಮಾಡಿ. ನೀವಿಬ್ಬರೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದಾಗ ಮತ್ತು ಚಾಟ್ ಮೂಲಕ ನಿಮ್ಮ ಭಾವನೆ ಹಂಚಿಕೊಳ್ಳುವ ಧೈರ್ಯ ಬಂದಾಗ ಕರೆ ಮಾಡಿ ಮಾತನಾಡಲು ಪ್ರಾರಂಭಿಸಿ. ನಂತ್ರ ನಿಧಾನವಾಗಿ ಭೇಟಿಯಾಗಿ. ಆಗ ಮುಕ್ತವಾಗಿ ಮಾತನಾಡಲು ಸುಲಭವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.