ಮಾತನಾಡುವಾಗ ಕೆಲವು ರೀತಿಯ ವಾಕ್ಯಗಳನ್ನು ಎಂದಿಗೂ ಬಳಕೆ ಮಾಡಬಾರದು. ಕೋಪದಲ್ಲೇ ಆದರೂ ಅಂತಹ ಶಬ್ದಗಳನ್ನು ಬಳಕೆ ಮಾಡುವುದರಿಂದ ಆಡಿಸಿಕೊಂಡವರ ಮನಸ್ಸಿಗೆ ಭಾರೀ ದೊಡ್ಡ ಗಾಯವಾಗುತ್ತದೆ.
ಯೋಚಿಸಿ ಮಾತನಾಡಬೇಕು ಎನ್ನುವ ಮಾತನ್ನು ಚಿಕ್ಕಂದಿನಿಂದಲೂ ಕೇಳಿದ್ದೇವೆ. ಕೆಲವರು ಮಾತ್ರವೇ ಇದನ್ನು ಅನುಸರಿಸುತ್ತಾರೆ, ಬಹಳಷ್ಟು ಮಂದಿ ತಮಗೇನು ತೋಚುತ್ತದೆಯೋ ಅದನ್ನೆ ಮಾತಾಡುವ ಪದ್ಧತಿಯನ್ನು ಮುಂದುವರಿಸುತ್ತಾರೆ. ಇನ್ನು, ಕೋಪದಲ್ಲಿದ್ದರಂತೂ ಮುಗಿಯಿತು, ಏನು ಬೇಕಿದ್ದರೂ ಮಾತನಾಡುತ್ತಾರೆ. ಹೀಗಾಗಿ, ಕೋಪದಲ್ಲಿ ಆಡಿರುವ ಮಾತುಗಳಿಗೆ ಬೆಲೆ ನೀಡದಿರುವುದನ್ನು ನಾವೂ ಅಭ್ಯಾಸ ಮಾಡಿಕೊಂಡಿರುತ್ತೇವೆ. ಆದರೂ, ಕೆಲವು ಮಾತುಗಳನ್ನು ಕೋಪದಲ್ಲಿ ಸಹ ಆಡಬಾರದು. ಅವು ಎದುರಿನವರ ಮೇಲೆ ಅಷ್ಟು ಪರಿಣಾಮ ಬೀರುತ್ತವೆ. ಕೋಪದಲ್ಲಿ ಆಡುವ ಮಾತುಗಳು ಸಾಕಷ್ಟು ಬಾರಿ ಸಿಕ್ಕಾಪಟ್ಟೆ ಬಿರುಸಾಗಿರುತ್ತವೆ. ಜತೆಗೆ, ಇಂತಹ ಕೆಲವು ವಾಕ್ಯಗಳು, ಮಾತುಗಳೂ ಸೇರಿಕೊಂಡು ಬಿಟ್ಟರೆ ಅವು ಮನದಿಂದ ಎಂದಿಗೂ ಅಳಿಯುವುದಿಲ್ಲ. ಹೀಗಾಗಿ, ಎಂತಹ ಸಮಯದಲ್ಲೂ ಕೆಲವು ಮಾತುಗಳನ್ನು ಆಡದೇ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಸಂಬಂಧಗಳು ಚೆನ್ನಾಗಿರಬೇಕು ಎಂದಾದರೆ ಉದ್ರಿಕ್ತರಾಗದೇ, ಕೆಲವು ರೀತಿಯ ಕೆಟ್ಟ ಮಾತುಗಳನ್ನಾಡದೇ ಇರುವುದನ್ನು ರೂಢಿಸಿಕೊಳ್ಳಬೇಕು. ಅಂತಹ ಮಾತುಗಳು ತೀವ್ರ ನೋವು ನೀಡುತ್ತವೆ. ಜತೆಗೆ, ನಿಮ್ಮ ಉದ್ದೇಶವನ್ನೇನೂ ಸಫಲಗೊಳಿಸುವುದಿಲ್ಲ, ಬದಲಿಗೆ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತವೆ.
• ನಿನ್ನ ಕಂಡ್ರೆ ನಂಗಾಗಲ್ಲ! (I do not Like You)
ಯಾರಿಗಾದರೂ ಈ ಮಾತುಗಳನ್ನು ಹೇಳುವುದು ಅತಿಯಾದ ತಿರಸ್ಕಾರವನ್ನು (Rejection) ತೋರಿಸುತ್ತದೆ. ಒಂದೊಮ್ಮೆ ನೀವು ಕೋಪದಲ್ಲೇ (Angry) ಆಡಿದ್ದರೂ ಪ್ರಭಾವ ಅಳಿಯುವುದಿಲ್ಲ. ಭಾವನಾತ್ಮಕವಾಗಿ ನೋವು (Emotional Pain) ನೀಡುವ ಈ ಮಾತಿನಿಂದ ಎಂದಿಗೂ ಮಾಸದ ಗಾಯ ಉಳಿದುಹೋಗುತ್ತದೆ. ಅವರು ನಿಮ್ಮನ್ನು ಕ್ಷಮಿಸಿದರೂ ಮಾತುಗಳನ್ನು ಮರೆಯಲು (Forget) ಆಗುವುದಿಲ್ಲ.
ನಾನೇ ಮೇಲು ಅಂತ ಸಾಯ್ತಿದ್ದರೆ ಇವತ್ತೇ ನಿಮ್ಮನ್ನು ತಿದ್ದಿಕೊಳ್ಳಿ!
• ಅತಿಯಾಗಿ ಆಡ್ಬೇಡ (Overreact)
ಯಾರಿಗಾದರೂ ಕಿರಿಕಿರಿ ನೀಡುವ ಹೇಳಿಕೆ ಇದು. ವಾದದ ಮಧ್ಯೆ ಈ ಮಾತು ಹೇಳಿದರೆ ಅವರು ಆ ಪರಿಸ್ಥಿತಿಯಲ್ಲಿ ತಪ್ಪಾಗಿ ವರ್ತಿಸುತ್ತಿದ್ದಾರೆ (Behave) ಎಂದು ಹೇಳುವಂತೆಯೂ ಆಗುತ್ತದೆ ಹಾಗೂ ಅವರ ಭಾವನೆಗಳನ್ನು ಅಗೌರವಿಸಿದಂತೆಯೂ ಆಗುತ್ತದೆ. ಪ್ರತಿಯೊಬ್ಬರೂ ಅವರ ಧೋರಣೆ ಹೊಂದಿರುತ್ತಾರೆ, ಅದನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೆ ಬಿಟ್ಬಿಡಿ.
• ಡೋಂಟ್ ಕೇರ್ (Don’t Care)
ಯಾರಿಗೂ ಡೋಂಟ್ ಕೇರ್ ಎನ್ನುತ್ತಿರುವುದು ಹಲವರ ಗುಣ. ಆದರೆ, ಯಾರೊಂದಿಗಾದರೂ ಮಾತನಾಡುವಾಗ ಹೀಗೆ ಹೇಳಿದರೆ ಅವರಿಗೂ ನೀವು ಬೆಲೆ (Value) ನೀಡುವುದಿಲ್ಲ ಎಂದರ್ಥ. ಇದೊಂದು ರೀತಿಯ ರಕ್ಷಣಾತ್ಮಕ ಹೇಳಿಕೆಯಾದರೂ, ಕೆಟ್ಟ ಮಾದರಿಯ ಸಂವಹನ. ಇನ್ನೊಬ್ಬರ ಭಾವನೆಗಳು, ವಿಚಾರಗಳಿಗೆ (Thoughts) ನೀವು ಪ್ರಾಮುಖ್ಯತೆ ನೀಡುವುದಿಲ್ಲ ಎಂದು ಹೇಳಿದಂತೆ ಆಗುತ್ತದೆ. ನಿಮಗೆ ಯಾರು ಪ್ರೀತಿಪಾತ್ರರಾಗಿರುತ್ತಾರೋ (Dearest) ಅವರ ಬಳಿಯಂತೂ ಇಂತಹ ಮಾತನ್ನಾಡಬೇಡಿ.
• ನೀನು ಯಾವಾಗ್ಲೂ ಹೀಗೆ ಅಥವಾ ಯಾವತ್ತೂ ಏನ್ಮಾಡಲ್ಲ
“ಯಾವತ್ತೂ’ ಅಥವಾ “ಎಂದಿಗೂ’ ಶಬ್ದವನ್ನು ಬಳಕೆ ಮಾಡುವುದು ಸರಿಯಲ್ಲ. ಇದರಿಂದ ನೀವು ಮಾತನಾಡುತ್ತಿರುವವರ ಬಗ್ಗೆ ನೆಗಟಿವ್ (Negative) ಚಿತ್ರಣ ಮೂಡುವಂತಾಗುತ್ತದೆ. ವಿಷಯವನ್ನು ಬಿಟ್ಟು ವ್ಯಕ್ತಿತ್ವದ (Personality) ಮೇಲೆ ದಾಳಿ ಮಾಡಿದಂತಾಗುತ್ತದೆ. ಒಂದು ನಿರ್ದಿಷ್ಟ ಪರಿಸ್ಥಿತಿ, ವಿಷಯಕ್ಕೆ ಸಂಬಂಧಿಸಿ ಮಾತನಾಡುವಾಗ “ನೀನು ಎಂದಿಗೂ ನನ್ನನ್ನು ಅರ್ಥ ಮಾಡಿಕೊಂಡಿಲ್ಲ, ನೀನು ಯಾವತ್ತೂ ನನಗೆ ಸಪೋರ್ಟ್ ಮಾಡಿಲ್ಲʼ ಎಂಬಂತಹ ಮಾತುಗಳು ಹಾನಿ ಮಾಡುತ್ತವೆ.
ವಿಷವನ್ನೇ ಬಿತ್ತುವಂಥ ಇಂಥವರೊಂದಿಗೆ ಒಡನಾಟವಿದ್ದರೆ ನಿಲ್ಲಿಸಿದರೆ ನಿಮಗೇ ಒಳ್ಳೇದು!
• ನೀನು ನಿನ್ನ ಅಪ್ಪ-ಅಮ್ಮನಂತೆ (You are Like Them)
ದಂಪತಿಯ ಮಧ್ಯ ಜಗಳವಾದಾಗ ನಕಾರಾತ್ಮಕವಾಗಿ ಈ ಮಾತಿನ ಬಳಕೆ ಸಾಮಾನ್ಯ. ಇದು ಸಹ ತೀವ್ರ ನೋವುಂಟು ಮಾಡುವ ಹೇಳಿಕೆಯಾಗಿದ್ದು, ಅವರು ಎಂದಿನಿಂದಲೂ ಹೋರಾಟ (Struggle) ಮಾಡುತ್ತಿರುವ ಆಳವಾದ ವಿಷಯಕ್ಕೆ ಸಂಬಂಧಿಸಿದ ಸಂಗತಿಯಾಗಿರಬಹುದು. ಅದರಿಂದ ಅವರಿಗೆ ತೀವ್ರ ನೋವಾಗಬಹುದು. ನಕಾರಾತ್ಮಕ ಹೋಲಿಕೆ ಯಾವತ್ತೂ ಸರಿಯಲ್ಲ.
• ಏನ್ ಬೇಕಿದ್ರೂ ಆಗ್ಲಿ
ಈ ವಾಕ್ಯಗಳು ಬೈಗುಳಗಳಲ್ಲ. ಆದರೂ ಅವುಗಳಿಗಿಂತ ಹೆಚ್ಚಾದ ಪರಿಣಾಮ ಹೊಂದಿವೆ. “ನೀನೇನ್ ಹೇಳಿದ್ರೂ ನಾನು ಕೇಳಲ್ಲ, ಏನ್ ಬೇಕಿದ್ರೂ ಆಗ್ಲಿ, ನಿನ್ನ ಮಾತು ನಂಗೆ ಬೇಕಾಗಿಲ್ಲʼ ಇಂತಹ ಮಾತುಗಳಿಂದ ಎದುರಿನವರಿಗೆ ಘಾಸಿಯಾಗುತ್ತದೆ.