
ದೆಹಲಿಯ ಸ್ಥಳೀಯ ನ್ಯಾಯಾಲಯವೊಂದು ಅತ್ಯಂತ ಅಸಾಮಾನ್ಯ ಆದರೆ ಮಹತ್ವದ ಪ್ರಕರಣವೊಂದರಲ್ಲಿ ಐತಿಹಾಸಿಕ ತೀರ್ಪು ನೀಡಿದೆ. ಈ ಪ್ರಕರಣ ಕೇವಲ ವೈಯಕ್ತಿಕ ಕಿರುಕುಳಕ್ಕೆ ಸಂಬಂಧಿಸಿಲ್ಲ. ಗೌಪ್ಯತೆ, ಮಾನಸಿಕ ಕಿರುಕುಳ ಮತ್ತು ವೈಯಕ್ತಿಕ ಸ್ವಾತಂತ್ರ್ಯದಂತಹ ಗಂಭೀರ ಸಮಸ್ಯೆಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ ಒಬ್ಬ ಹುಡುಗ ಅಥವಾ ಪುರುಷ ನನ್ನನ್ನು ಹಿಂಬಾಲಿಸ್ತಿದ್ದಾನೆ, ಮದುವೆಯಾಗು ಅಂತ ಕಾಟ ಕೊಡ್ತಿದ್ದಾನೆ, ವಿವಾಹಿತೆಯಾದ್ರೂ ಮಾನಸಿಕ ಹಿಂಸೆ ನೀಡ್ತಿದ್ದಾನೆ, ನನಗೆ ರಕ್ಷಣೆ ಬೇಕು ಅಂತ ಹುಡುಗಿಯರು, ಮಹಿಳೆಯರು, ಪೊಲೀಸ್- ಕೋರ್ಟ್ ಮೊರೆ ಹೋಗ್ತಾರೆ. ಆದ್ರೆ ಈ ಪ್ರಕರಣ ಸ್ವಲ್ಪ ಭಿನ್ನವಾಗಿದೆ. ಇಲ್ಲಿ ವಿವಾಹಿತ ವ್ಯಕ್ತಿಯೊಬ್ಬ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಗೆದ್ದಿದ್ದಾನೆ. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಮಹತ್ವದ ಆದೇಶ ನೀಡಿದೆ.
ವಿವಾಹಿತನ ಹಿಂದೆ ಬಿದ್ದಿದ್ದ ವಿವಾಹಿತೆ:
ವಿವಾಹಿತರೊಬ್ಬರು ಮಹಿಳೆ ವಿರುದ್ಧ ದೂರು ನೀಡಿದ್ದರು. ಮಹಿಳೆ ಲೈಂಗಿಕ ಸಂಬಂಧ ಬೆಳೆಸುವಂತೆ ಪದೇ ಪದೇ ಮಾನಸಿಕ ಮತ್ತು ಭಾವನಾತ್ಮಕ ಒತ್ತಡ ಹೇರುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಅವರ ವರ್ತನೆಯಿಂದ ಮನೆಯ ಶಾಂತಿ ಹಾಳಾಗ್ತಿದೆ, ಸಾರ್ವಜನಿಕ ಪ್ರದೇಶದಲ್ಲಿ ತೊಂದರೆ ಆಗ್ತಿದೆ, Social Media ಮೂಲಕ ಕುಟುಂಬಕ್ಕೆ ಕಿರುಕುಳ ನೀಡಲಾಗ್ತಿದೆ ಎಂದೂ ಆರೋಪಿಸಿದ್ದರು.
ದೂರುದಾರನ ದೂರಿನ ಪ್ರಕಾರ, 2019ರಲ್ಲಿ ಮೊದಲ ಬಾರಿ ಮಹಿಳೆ ಮತ್ತು ಪುರುಷನ ಭೇಟಿಯಾಗಿತ್ತು. ಆಧ್ಯಾತ್ಮಿಕ ಆಶ್ರಮದಲ್ಲಿ ಮಹಿಳೆ, ದೂರುದಾರನನ್ನು ಭೇಟಿಯಾಗಿದ್ದಲ್ಲದೆ, ಅವರನ್ನು ಪ್ರೀತಿಸಲು ಶುರು ಮಾಡಿದ್ದರು. ಮಹಿಳೆಯ ಪ್ರೇಮ ನಿವೇದನೆಯನ್ನು ದೂರುದಾರ ತಿರಸ್ಕರಿಸಿದ್ದ. ಆದ್ರೆ ಮಹಿಳೆ ಇದನ್ನು ಅಲ್ಲಿಗೆ ಬಿಡಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಸಿದ್ದರು. ಇದ್ರಿಂದ ದೂರುದಾರನಿಗೆ ಮಾನಸಿಕ ಹಿಂಸೆ ಶುರುವಾಗಿತ್ತು.
ಕೋರ್ಟ್ ತೀರ್ಪು ಏನು? :
ಪರ – ವಿರೋಧ ವಾದಗಳನ್ನು ಆಲಿಸಿದ ರೋಹಿಣಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ರೇಣು, ದೂರುದಾರನ ಇಚ್ಛೆಗೆ ವಿರುದ್ಧವಾಗಿ ಯಾವುದೇ ರೀತಿಯ ವೈಯಕ್ತಿಕ ಸಂಪರ್ಕಕ್ಕೆ ಒತ್ತಾಯಿಸಬಾರದು. ಪ್ರತಿಯೊಬ್ಬ ನಾಗರಿಕನೂ ಮುಕ್ತ, ಭಯ-ಮುಕ್ತ ಮತ್ತು ಗೌರವಾನ್ವಿತ ಜೀವನವನ್ನು ನಡೆಸುವ ಹಕ್ಕನ್ನು ಹೊಂದಿದ್ದಾನೆ ಎಂದಿದ್ದಾರೆ. ಕೋರ್ಟ್, ಇಬ್ಬರ ಮಧ್ಯೆ 300 ಮೀಟರ್ ಅಂತರ ಇರಬೇಕು. ಯಾವುದೇ ರೀತಿಯ ಡಿಜಿಟಲ್, ಸಾಮಾಜಿಕ ಅಥವಾ ವೈಯಕ್ತಿಕ ಸಂಪರ್ಕ ಇರಬಾರದು ಎಂದು ಕೋರ್ಟ್ ಆದೇಶ ನೀಡಿದೆ.
ಮಹತ್ವ ಪಡೆದ ಕೋರ್ಟ್ ಈ ತೀರ್ಪು? : ಈ ಪ್ರಕರಣ ಪುರುಷನ ಭದ್ರತೆ, ಗೌಪ್ಯತೆ ಮತ್ತು ಕಿರುಕುಳದ ವಿರುದ್ಧ ಎತ್ತಲಾದ ಕಾನೂನು ಧ್ವನಿಗೂ ಮಹತ್ವ ಇದೆ ಎಂಬುದನ್ನು ಸಾರುತ್ತದೆ. ಮೊದಲೇ ಹೇಳಿದಂತೆ ಸಾಮಾನ್ಯವಾಗಿ ಇಂತಹ ಪ್ರಕರಣಗಳು ಮಹಿಳೆಯರಿಗೆ ಸಂಬಂಧಿಸಿವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಪುರುಷರು ಕೂಡ ಬಲಿಪಶು ಆಗ್ತಿದ್ದಾರೆ. ಅನೇಕ ಮಹಿಳೆಯರು ತಮ್ಮ ಪರ ಇರುವ ಕಾನೂನನ್ನು ದುರುಪಯೋಗಪಡಿಸಿಕೊಳ್ತಿದ್ದಾರೆ. ಇಂಥ ಸಮಯದಲ್ಲಿ ಪುರುಷರ ಸಮಸ್ಯೆ ಆಲಿಸಿ, ಅದಕ್ಕೆ ಪರಿಹಾರ ನೀಡಿದ ಕೋರ್ಟ್ ಈ ತೀರ್ಪು ಸಾಕಷ್ಟು ಮಹತ್ವ ಪಡೆಯುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.