
ದಾವಣಗೆರೆ (ಆ.10): 'ನೂರು ಕಾಲ ಜೊತೆಯಾಗಿ ಬಾಳಿ, ಸಾವಿನಲ್ಲೂ ಒಂದಾಗುತ್ತೇವೆ' ಎಂಬ ಮಾತಿಗೆ ನಿದರ್ಶನವೆಂಬಂತೆ ವೃದ್ಧ ದಂಪತಿಯೊಬ್ಬರು ಕೆಲವೇ ಗಂಟೆಗಳ ಅಂತರದಲ್ಲಿ ಮೃತಪಟ್ಟ ಹೃದಯವಿದ್ರಾವಕ ಘಟನೆ ದಾವಣಗೆರೆ ತಾಲೂಕಿನ ಹದಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿಗಳಾದ ಸಿದ್ದಜ್ಜಿ ಹಾಗೂ ಅವರ ಪತಿ ಮಲ್ಲಜ್ಜ (75) ಮೃತಪಟ್ಟ ವೃದ್ಧ ದಂಪತಿ. ಇಬ್ಬರೂ ಸುದೀರ್ಘ ಕಾಲದ ದಾಂಪತ್ಯ ಜೀವನ ನಡೆಸಿ, ಕೊನೆಗೆ ಸಾವಿನಲ್ಲೂ ಒಂದಾಗುವ ಮೂಲಕ ಇಡೀ ಗ್ರಾಮಸ್ಥರ ಕಣ್ಣಂಚಿನಲ್ಲಿ ನೀರು ತರಿಸಿದ್ದಾರೆ.
ಸಿದ್ದಜ್ಜಿ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಅವರು ಕೊನೆಯುಸಿರೆಳೆದಿದ್ದರು. ಕುಟುಂಬಸ್ಥರು ಹಾಗೂ ಬಂಧು-ಮಿತ್ರರು ಸಿದ್ದಜ್ಜಿ ಅವರ ಅಗಲಿಕೆಯಿಂದ ತೀವ್ರ ಶೋಕದಲ್ಲಿ ಮುಳುಗಿದ್ದರು. ಇಂದು (ಆಗಸ್ಟ್ 10) ಬೆಳಗ್ಗೆ ಗ್ರಾಮದಲ್ಲಿ ಸಿದ್ದಜ್ಜಿ ಅವರ ಅಂತ್ಯಕ್ರಿಯೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿತ್ತು. ಇನ್ನೇನು ಅಂತಿಮ ಯಾತ್ರೆ ಆರಂಭವಾಗಬೇಕು ಎನ್ನುವಷ್ಟರಲ್ಲಿ, ಪತ್ನಿಯ ಅಗಲಿಕೆಯ ದುಃಖದಲ್ಲಿದ್ದ ಪತಿ ಮಲ್ಲಜ್ಜ (75) ಅವರ ಆರೋಗ್ಯದಲ್ಲೂ ಏಕಾಏಕಿ ಏರುಪೇರಾಗಿದೆ. ಬೆಳಗ್ಗೆ ಸುಮಾರು 10.30ರ ವೇಳೆಗೆ ಮಲ್ಲಜ್ಜ ಕೂಡ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ.
ಕೇವಲ ಕೆಲವೇ ಗಂಟೆಗಳ ಅಂತರದಲ್ಲಿ ಮನೆಯ ಇಬ್ಬರು ಹಿರಿಯರು ಮೃತಪಟ್ಟಿರುವುದು ಕುಟುಂಬಸ್ಥರಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ. ಸಂಬಂಧಿಕರ ಹಾಗೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಒಂದೇ ದಿನ, ಒಂದೇ ಮನೆಯಿಂದ ದಂಪತಿಗಳಿಬ್ಬರ ಅಂತಿಮ ಯಾತ್ರೆ ಹೊರಡುತ್ತಿರುವುದು ಹದಡಿ ಗ್ರಾಮಸ್ಥರಲ್ಲಿ ಕಂಬನಿ ತರಿಸಿದೆ. ಸದ್ಯ ಹದಡಿ ಗ್ರಾಮದಲ್ಲಿ ವೃದ್ಧ ದಂಪತಿ ಮಲ್ಲಜ್ಜ ಹಾಗೂ ಸಿದ್ದಜ್ಜಿ ಅವರ ಅಂತ್ಯಕ್ರಿಯೆಗೆ ಏಕಕಾಲದಲ್ಲಿ ಸಿದ್ಧತೆಗಳನ್ನು ನಡೆಸಲಾಗುತ್ತಿದ್ದು, ಗ್ರಾಮದ ಹಿರಿಯರು ಹಾಗೂ ಬಂಧುಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.