ವಿವಾಹಿತೆಯ ಲಿವ್‌ಇನ್‌ ಸಂಬಂಧಕ್ಕೆ ಕಾನೂನು ರಕ್ಷಣೆ ನೀಡಲು ನಿರಾಕರಿಸಿದ ಕೋರ್ಟ್‌

By Suvarna NewsFirst Published Jul 21, 2022, 8:54 PM IST
Highlights

ಪ್ರಕರಣವೊಂದರಲ್ಲಿ ಲಿವೀಂಗ್‌ ರಿಲೇಷನ್‌ಶಿಪ್‌ನಲ್ಲಿ ಬದುಕುತ್ತಿದ್ದ ಜೋಡಿಯ ಸಂಬಂಧಕ್ಕೆ ಕಾನೂನಿನ ರಕ್ಷಣೆ ನೀಡಲು ಅಲಹಾಬಾದ್‌ ಹೈಕೋರ್ಟ್‌ ನಿರಾಕರಿಸಿದೆ. 

ಪ್ರಕರಣವೊಂದರಲ್ಲಿ ಲಿವೀಂಗ್‌ ರಿಲೇಷನ್‌ಶಿಪ್‌ನಲ್ಲಿ ಬದುಕುತ್ತಿದ್ದ ಜೋಡಿಯ ಸಂಬಂಧಕ್ಕೆ ಕಾನೂನಿನ ರಕ್ಷಣೆ ನೀಡಲು ಅಲಹಾಬಾದ್‌ ಹೈಕೋರ್ಟ್‌ ನಿರಾಕರಿಸಿದೆ. ಮಹಿಳೆ ಗಂಡನನ್ನು ತೊರೆದು ಮತ್ತೊರ್ವ ವ್ಯಕ್ತಿಯೊಂದಿಗೆ ವೈವಾಹಿಕ ಸಂಬಂಧದಲ್ಲಿದ್ದು, ಈ ಜೋಡಿಗೆ ಕಾನೂನಿನ ರಕ್ಷಣೆ ನೀಡಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ. ತನ್ನ ಪತಿ ತನ್ನ ಸ್ನೇಹಿತರೊಂದಿಗೆ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದ ನಂತರ ತಾನು ತನ್ನ ಪತಿಯನ್ನು ತೊರೆದಿರುವುದಾಗಿ ಕೋರ್ಟ್‌ನಲ್ಲಿ ನೀಡಿದ ದೂರಿನಲ್ಲಿ ಮಹಿಳೆ ತಿಳಿಸಿದ್ದಳು. 

ಅಲ್ಲದೇ ಇದಾದ ನಂತರ ಓರ್ವ ವ್ಯಕ್ತಿಯೊಂದಿಗೆ ಲಿವ್‌ ಇನ್‌ ರಿಲೇಷನ್‌ ಶಿಪ್ ಸಂಬಂಧದಲ್ಲಿದ್ದು, ಈ ಸಂಬಂಧಕ್ಕೆ ರಕ್ಷಣೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. ಇದಕ್ಕೆ ಕೋರ್ಟ್ ಮಹಿಳೆ ತನ್ನ ಅಕ್ರಮ ಸಂಬಂಧಕ್ಕೆ ಕಾನೂನಿನ ಮುದ್ರೆ ಪಡೆಯುವ ಉದ್ದೇಶದಿಂದಷ್ಟೇ ಈ ಅರ್ಜಿ ಸಲ್ಲಿಸಿದ್ದಾಳೆ ಎಂದು ಈ ಸಂಬಂಧಕ್ಕೆ ರಕ್ಷಣೆ ನೀಡಲು ನಿರಾಕರಿಸಿದೆ ಜೊತೆಗೆ ಐದು ಸಾವಿರ ದಂಡ ವಿಧಿಸಿದೆ. 

ಅಲಹಾಬಾದ್ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ಕೌಶಲ್ ಜಯೇಂದ್ರ ಠಾಕರ್ ಮತ್ತು ಅಜಯ್ ತ್ಯಾಗಿ ಅವರಿದ್ದ ದ್ವಿಸದಸ್ಯ ಪೀಠ ಈ ತೀರ್ಪು ನೀಡಿದೆ. ಮಹಿಳೆಯು ಈಗಾಗಲೇ ಬೇರೊಬ್ಬರನ್ನು ಮದುವೆಯಾಗಿದ್ದಾಳೆ ಮತ್ತು ಇಬ್ಬರು ಅರ್ಜಿದಾರರ ನಡುವಿನ ಸಹಬಾಳ್ವೆಯ ಅವಧಿಯು ತುಂಬಾ ಕಡಿಮೆ ಇದೆ. ಈ ಕಾರಣಕ್ಕೆ ಈ ಸಂಬಂಧಕ್ಕೆ ಕಾನೂನಿನ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

ಅಕ್ರಮ ಸಂಬಂಧದ ಅಪರೂಪದ ಕೇಸ್ : 5 ವರ್ಷದ ಬಳಿಕ ಹೈ ಕೋರ್ಟ್ ಮಹತ್ವದ ತೀರ್ಪು
ನ್ಯಾಯಮೂರ್ತಿಗಳಾದ ಕೌಶಲ್ ಜಯೇಂದ್ರ ಠಾಕರ್ ಮತ್ತು ಅಜಯ್ ತ್ಯಾಗಿ ಅವರಿದ್ದ ಪೀಠ, ನಮ್ಮ ಭಾರತದ ಸಂವಿಧಾನವು ಲಿವ್-ಇನ್ ಸಂಬಂಧಗಳಿಗೆ ಅನುಮತಿ ನೀಡಬಹುದು. ಆದರೆ ಪ್ರಸ್ತುತ ಸಲ್ಲಿಸಿದ ಅರ್ಜಿ ಕಾನೂನು ಬಾಹಿರ ಸಂಬಂಧದ ಮೇಲೆ ನ್ಯಾಯಾಲಯದ ಮುದ್ರೆಯನ್ನು ಪಡೆಯುವ ಉದ್ದೇಶದಿಂದ ಸಲ್ಲಿಸಲಾಗಿದೆ ಎಂದು ಹೇಳಿದೆ.

ಭಾರತದ ಸರ್ಕಾರ ಹಾಗೂ ನ್ಯಾಯಾಂಗ ಸಂವಿಧಾನದ ವಿಧಿಯಂತೆ ಆಡಳಿತ ನಡೆಸುತ್ತಿದೆ. ನಾವು ಹಿಂದಿನ ಕಾಲದಲ್ಲಿ ವಾಸಿಸುತ್ತಿಲ್ಲ ಎಂದು ಹೇಳುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಏಕೆಂದರೆ ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರು ಪತಿ-ಪತ್ನಿಯಾಗಿ ಬದುಕುತ್ತಿದ್ದಾರೆ ಎಂದು ಹೇಳಲಾಗುವುದಿಲ್ಲ. ಅಲ್ಲದೇ ನಾವು ಒಂದೇ ಲಿಂಗದ ಇಬ್ಬರು ವ್ಯಕ್ತಿಗಳಿಗೆ ರಕ್ಷಣೆ ನೀಡಬೇಕಾದ ಸಂದರ್ಭ ಎದುರಿಸಬೇಕಾಗುವುದು. ಭಾರತದ ಸಂವಿಧಾನವು ಲಿವ್-ಇನ್ ಸಂಬಂಧಕ್ಕೆ ಅನುಮತಿ ನೀಡಬಹುದು ಆದರೆ ಈ ಅರ್ಜಿ ಅಕ್ರಮ ಸಂಬಂಧದ ಮೇಲೆ ಈ ನ್ಯಾಯಾಲಯದ ಮುದ್ರೆಯನ್ನು ಪಡೆಯುವ ಉದ್ದೇಶದಿಂದ ಸಲ್ಲಿಸಲಾಗಿದೆಯೇ ಹೊರತು ಬೇರೇನೂ ಅಲ್ಲ ಎಂದು ಪೀಠ ಹೇಳಿದೆ.

ಸಾಮಾಜಿಕ ನೈತಿಕತೆಯ ಕಲ್ಪನೆಗಿಂತ ವೈಯಕ್ತಿಕ ಸ್ವಾಯತ್ತತೆಯನ್ನು ಪರಿಶೀಲಿಸಬಹುದು ಆದರೆ ಸಹಬಾಳ್ವೆಯ ಅವಧಿ ಕಡಿಮೆಯಿದ್ದರೆ ಅದು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಪ್ರತಿವಾದಿಗಳಿಂದ ಕಿರುಕುಳ ಆಗದಂತೆ ತಡೆಯಲು ಈ ಲಿವ್‌ ಇನ್‌ ಜೋಡಿ ಹೈಕೋರ್ಟ್‌ಗೆ ಮ್ಯಾಂಡಮಸ್ ರಿಟ್  ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರು ಪ್ರತಿವಾದಿಗಳಲ್ಲಿ ಒಬ್ಬರನ್ನು ಮದುವೆಯಾಗಿದ್ದರು ಮತ್ತು ಅವರೊಂದಿಗೆ ಮಕ್ಕಳನ್ನು ಹೊಂದಿದ್ದರು. ತನ್ನ ಸ್ನೇಹಿತರ ಜೊತೆ ಅಕ್ರಮ ಸಂಬಂಧ ಹೊಂದುವಂತೆ  ಕೇಳಿದ್ದಕ್ಕೆ  ಪತಿಯನ್ನು ತೊರೆದಿದ್ದಾಗಿ ಮಹಿಳೆ ಹೇಳಿದ್ದರು. 

ಮೊದಲ ಪತ್ನಿ ಒಪ್ಪಿಗೆ ಇಲ್ಲದ 2ನೇ ಮದುವೆ ಕ್ರೌರ್ಯ

ಇಂದ್ರ ಶರ್ಮಾ ವಿರುದ್ಧ ವಿಕೆ ಶರ್ಮಾ ಪ್ರಕರಣದಲ್ಲಿ ನ್ಯಾಯಾಲಯ ಈ ತೀರ್ಪು ನೀಡಿದೆ. ಈ ತೀರ್ಪಿನ 52 ನೇ ಪ್ಯಾರಾಗ್ರಾಪ್‌ನಲ್ಲಿ ಲಿವ್-ಇನ್ ರಿಲೇಶನ್ ಇತರ ದೇಶಗಳಿಗಿಂತ ಭಾರತದಲ್ಲಿ ಭಿನ್ನವಾಗಿದ್ದು, ಭಾರತದಲ್ಲಿ ಇದನ್ನು ಸಾಮಾಜಿಕವಾಗಿ ಅಂಗೀಕರಿಸದ ಸಂಬಂಧ ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ ಎಂಬುದನ್ನು ಕೋರ್ಟ್‌ ಗಮನಿಸಿದೆ. ಅಲ್ಲದೇ ಪತಿ ಬೆದರಿಕೆ ಹಾಕಿದ್ದಾನೆ ಎಂದು ತೋರಿಸಲು ಯಾವುದೇ ದಾಖಲೆಗಳಿಲ್ಲ. ಅಲ್ಲದೇ ಈ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಎಫ್ಐಆರ್‌ ದಾಖಲಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. 

ಅಲ್ಲದೇ ಒಂದು ವೇಳೆ ಜೀವಕ್ಕೆ ಅಪಾಯವಾಗುವಂತಹ ಸಂದರ್ಭ ಬಂದಲ್ಲಿ ಸಂವಿಧಾನದ 21 ನೇ ಪರಿಚ್ಛೇದದ ಅಡಿಯಲ್ಲಿ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಬಹುದು ಆದರೆ ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಿದ ಯಾವುದೇ ದಾಖಲೆಗಳಿಲ್ಲ ಎಂಬುದನ್ನು ಕೋರ್ಟ್ ಗಮನಿಸಿದೆ.
 

click me!