ವಯಸ್ಕರಾದ ನಾವು ಎಲ್ಲವನ್ನೂ ತಿಳಿದಿದ್ದೇವೆ ಎಂದು ಭಾವಿಸುತ್ತೇವೆ. ಆದರೆ ಚಿಕ್ಕ ಮಗು ನಮಗೆ ಹಲವಾರು ಪಾಠಗಳನ್ನು ಕಲಿಸುತ್ತದೆ. ನಾವು ಮಗುವನ್ನು ನೋಡಿ ಅದರಿಂದ ಕಲಿಯಲು ಸಾಧ್ಯವಾದರೆ, ಜೀವನವಿಡೀ ಸಂತೋಷವಾಗಿರುವ ಈ ಕೆಳಗಿನ ಸೂತ್ರಗಳನ್ನು ಕಲಿಯಬಹುದು.
ನಾವೂ ನೀವೂ ಒಂದು ಕಾಲದಲ್ಲಿ ಪುಟ್ಟ ಮಗು ಆಗಿದ್ದೆವು ಅಲ್ಲವೇ? ಆದರೆ ಅಂದು ನಾವು ಹೇಗಿದ್ದೆವು ಎಂಬುದು ನಮಗೆ ಈಗ ಮರೆತುಹೋಗಿದೆ. ನಮ್ಮ ಮಕ್ಕಳನ್ನು ನೋಡಿದಾಗ ಅವು ಮರುಕಳಿಸುತ್ತವೆ. ಅಂಬೆಗಾಲಿಡುವ ಮಗು ನಮಗೆ ಅನೇಕ ಜೀವನದ ಪಾಠಗಳನ್ನು ಕಲಿಸುತ್ತದೆ. ಅವನ್ನು ಇಲ್ಲಿ ನೋಡೋಣ.
ಸದಾ ಉತ್ಸಾಹದಿಂದ ಇರುವುದು:
ಉತ್ಸಾಹ ಅಥವಾ ಶಕ್ತಿಯ ಕೊರತೆ ಯಾವಾಗಲೂ ನಾವೆಲ್ಲರೂ ಅನುಭವಿಸುವ ಸಂಗತಿ. ಕೆಲಸದ ಒತ್ತಡಕ್ಕೊಳಗಾಗಿರುತ್ತೇವೆ, ದಣಿದಿರುತ್ತೇವೆ. ಆದರೆ ನಿಮ್ಮ ಮಗುವನ್ನು ನೋಡಿದರೆ ಅದು ಎಲ್ಲ ಸಮಯದಲ್ಲೂ ಶಕ್ತಿಯಿಂದಿದ್ದು ಗದ್ದಲ ಮಾಡುತ್ತಿರುತ್ತದೆ ಅಲ್ಲವೇ? ಮಗು ಅಗತ್ಯವಿದ್ದಾಗ ವಿಶ್ರಾಂತಿ ತೆಗೆದುಕೊಳ್ಳುತ್ತದೆ. ಉಳಿದ ಎಲ್ಲ ಸಮಯದಲ್ಲೂ ಶಕ್ತಿಯುತವಾಗಿರುತ್ತದೆ. ದಿನನಿತ್ಯದ ಸಣ್ಣ ಕಾರ್ಯದಲ್ಲೂ ಧನಾತ್ಮಕ ಶಕ್ತಿ ಪ್ರದರ್ಶಿಸುತ್ತದೆ. ಅಂಬೆಗಾಲಿಡುವ ಮಗು ಜೀವನದಲ್ಲಿ ತೋರುವ ಉತ್ಸಾಹವನ್ನು ನೆನಪಿಸಿಕೊಂಡರೆ, ನಾವೂ ಖಂಡಿತವಾಗಿಯೂ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಬಹುದಲ್ಲವೇ?
ನಿರಂತರ ಕುತೂಹಲದ ಗಣಿ
ಕುತೂಹಲವು ಎಲ್ಲಾ ಆವಿಷ್ಕಾರಗಳ ತಾಯಿ. ಗಿಡ ಹೇಗೆ ಚಿಗುರುತ್ತದೆ? ಮಳೆ ಹೇಗೆ ಬರುತ್ತದೆ? ಮೊಬೈಲ್ ಹೇಗೆ ಕೆಲಸ ಮಾಡುತ್ತದೆ? ಇಂಥ ಸಣ್ಣಪುಟ್ಟ ಕುತೂಹಲಗಳು ಮಗುವಿಗೆ ಯಾವಾಗಲೂ ಮೂಡುತ್ತಲೇ ಇರುತ್ತವೆ. ವಯಸ್ಸಾದಂತೆ, ಹೊಸ ವಿಷಯಗಳನ್ನು ಕಲಿಯಬೇಕೆನ್ನುವ ನಮ್ಮ ಕುತೂಹಲವು ಮರೆಯಾಗುತ್ತದೆ. ಮಗು 24/7 ಕುತೂಹಲದಿಂದ ಕೂಡಿರುತ್ತದೆ. ನಾವು ಹೊಸದನ್ನು ಕಲಿಯಲು ಬಯಸುವುದಿಲ್ಲ ಅಥವಾ ಅನ್ವೇಷಿಸುವುದಿಲ್ಲ. ನಮ್ಮ ದಿನಚರಿಯನ್ನು ಯಾಂತ್ರಿಕವಾಗಿ ನಡೆಸುತ್ತೇವೆ. ಕುತೂಹಲವು ನಮ್ಮ ಮೆದುಳಿಗೆ ಧನಾತ್ಮಕ ವ್ಯಾಯಾಮವನ್ನು ನೀಡುತ್ತದೆ. ನಮಗೆ ಆಸಕ್ತಿಯಿರುವ ವಿಷಯಗಳ ಬಗ್ಗೆ ಕುತೂಹಲ ಹೊಂದಿರಬೇಕು. ಇದು ನಮಗೆ ಜ್ಞಾನ ನೀಡುವುದು ಮಾತ್ರವಲ್ಲದೆ ನಮ್ಮ ಮಾನಸಿಕ ಯೋಗಕ್ಷೇಮವನ್ನೂ ಹೆಚ್ಚಿಸುತ್ತದೆ.
ಈ ಬಾಡಿ ಲ್ಯಾಂಗ್ವೇಜ್ ಗಮನಿಸಿದರೆ ಮಕ್ಕಳು ಸುಳ್ಳು ಹೇಳೋದು ಗೊತ್ತಾಗುತ್ತೆ!
ಯಾವುದೇ ಕಾರಣವಿಲ್ಲದೆ ಸಂತೋಷವಾಗಿರುವುದು
ದೊಡ್ಡವರ ಜಗತ್ತಿನ ಸಂತೋಷವು ಸಂಪತ್ತು, ಗಳಿಕೆ, ಯಶಸ್ಸು ಇತ್ಯಾದಿಗಳ ಮೇಲೆ ನಿಂತಿದೆ. ಉದಾಹರಣೆಗೆ ರಜೆಯಲ್ಲಿ ಟ್ರಿಪ್ ಹೋದರೆ ಸಂತೋಷ ಅಥವಾ ಹೊಸ ಗ್ಯಾಜೆಟ್ ಖರೀದಿಸಿದರೆ ಸಂತೋಷ. ದೈನಂದಿನ ಜೀವನದಲ್ಲಿ ಸಂತೋಷ ಕಂಡುಕೊಳ್ಳುವುದನ್ನು ಮರೆತಿದ್ದೇವೆ. ಆದರೆ ನೋಡಿ, ಅಂಬೆಗಾಲಿಡುವ ಮಗು ಯಾವಾಗಲೂ ಸಂತೋಷವಾಗಿರುತ್ತಾಳೆ. ಬೆಳಗ್ಗೆ ಎದ್ದಾಗ ನಗುತ್ತಾಳೆ. ಕಿಟಕಿಯಿಂದ ಹೊರಗೆ ನೋಡಿದಾಗ ಅವಳಿಗೆ ಸಂತೋಷವಾಗುತ್ತದೆ. ತಂದೆ ಕೆಲಸದಿಂದ ಹಿಂದಿರುಗುವುದನ್ನು ನೋಡಿದರೆ ತುಂಬಾ ಸಂತೋಷಪಡುತ್ತಾಳೆ. ಟಿವಿ ನೋಡುತ್ತಾ ನಗುತ್ತಾಳೆ. ಯಾವುದೇ ಕಾರಣವಿಲ್ಲದೆ ಸಂತೋಷದಿಂದ ಇರುತ್ತಾಳೆ. ಜೀವನದ ಎಲ್ಲಾ ಸಂದರ್ಭಗಳಲ್ಲಿ ಸಂತೋಷವಾಗಿರಲು ನಮಗೆಲ್ಲರಿಗೂ ಒಂದು ದೊಡ್ಡ ಪಾಠ ಇಲ್ಲಿದೆ. ಕುಕಿಂಗ್, ಕ್ಲೀನಿಂಗ್ ಮಾಡುವಾಗಲೂ ನಮ್ಮಷ್ಟಕ್ಕೆ ನಾವು ಸಂತೋಷವಾಗಿರಬೇಕು. ಸಂತೋಷಕ್ಕಾಗಿ ಯಾವುದನ್ನೂ ಅವಲಂಬಿಸಬಾರದು.
ಜಡ್ಜ್‌ಮೆಂಟಲ್ (judgemental) ಆಗದಿರುವುದು
ಸಾಮಾನ್ಯವಾಗಿ ನಾವು ನಮಗೆದುರಾಗುವ ಜನರನ್ನು ಒಂದೇ ನೋಟದಿಂದ ಇವರು ಹೀಗೇ ಎಂದು ನಿರ್ಣಯಿಸಿಬಿಡುತ್ತೇವೆ. ತೀರ್ಪುಗಳನ್ನು ನೀಡುವ ಮೊದಲು ನಾವು ಒಂದು ಸೆಕೆಂಡ್ ಕೂಡ ಕಾಯುವುದಿಲ್ಲ. ಆದರೆ ಮಗು ಅಂಥ ಯೌುದೇ ಜಡ್ಜ್‌ಮೆಂಟ್ ಇಲ್ಲದೇ ಅಪರಿಚಿತರನ್ನು ಸ್ವಾಗತಿಸುತ್ತದೆ. ಮಗುವಿಗೆ ಜನರನ್ನು ತಿಳಿದುಕೊಳ್ಳುವ ಕೌಶಲ್ಯವಿಲ್ಲದೇ ಇರಬಹುದು. ಆದರೆ ಇಂದಿನ ಜಗತ್ತಿನಲ್ಲಿ, ಜನರನ್ನು ಹೆಚ್ಚು ಪ್ರೀತಿಸುವುದು, ಅವರ ಬಗ್ಗೆ ಸಹಾನುಭೂತಿ ಹೊಂದಿರುವುದು, ಕೇಳುವ ಕಿವಿಯನ್ನು ಕೊಡುವುದು, ಅವರನ್ನು ನಿರ್ಣಯಿಸುವ ಬದಲು ಸಹಾಯಹಸ್ತ ನೀಡುವುದು ಮುಖ್ಯವಲ್ಲವೇ. ಜಗತ್ತನ್ನು ಇನ್ನಷ್ಟು ಸುಂದರವಾದ ಸ್ಥಳವನ್ನಾಗಿ ಮಾಡಲು ಎಂದಿಗಿಂತಲೂ ಹೆಚ್ಚು ಪ್ರೀತಿ ಮತ್ತು ಸ್ವೀಕಾರದ ಅಗತ್ಯವಿದೆ! ಮೊದಲು ಜನರನ್ನು ಪ್ರೀತಿಸೋಣ. ನಮಗೆ ಗೊತ್ತಿಲ್ಲದ ರೀತಿಯಲ್ಲಿ ಅದು ನಮಗೆ ಹಿಂತಿರುಗುತ್ತದೆ!
ಸದಾ ಹೋರಾಟದ ಮನೋಭಾವ
ಹೋರಾಟದ ಮನೋಭಾವವನ್ನು ನಾವು ಬಹಳ ಸುಲಭವಾಗಿ ಬಿಟ್ಟುಬಿಡುತ್ತೇವೆ. ನಾವು ಬಯಸಿದ ವಸ್ತು ಪಡೆಯಲು ಆರಂಭದಲ್ಲಿ ಉತ್ಸಾಹ ತೋರಿಸುತ್ತೇವೆ. ಆದರೆ ಸಮಯ ಕಳೆದಂತೆ ಪ್ರಯಾಣದ ಹಾದಿಯಲ್ಲಿ ಉತ್ಸಾಹವನ್ನು ಕಳೆದುಕೊಳ್ಳುತ್ತೇವೆ. ಆದರೆ ಮಗು ತನಗೆ ಸಾಧ್ಯವಿರುವ ಎಲ್ಲಾ ರೀತಿಯಲ್ಲೂ ಅತ್ಯಂತ ಶಕ್ತಿಯುತ ಹೋರಾಟವನ್ನು ಪ್ರದರ್ಶಿಸುತ್ತದೆ. ಏನನ್ನಾದರೂ ಬಯಸಿದರೆ ಅದನ್ನು ಪಡೆಯಲು ವಿಭಿನ್ನ ಮಾರ್ಗಗಳನ್ನು ಕಂಡುಕೊಳ್ಳುತ್ತದೆ. ತನ್ನ ಗುರಿ ತಲುಪುವವರೆಗೆ ಜಿಗಿಯುತ್ತದೆ, ಎಳೆಯುತ್ತದೆ, ಪ್ರಯತ್ನಿಸುತ್ತಲೇ ಇರುತ್ತದೆ. ಈ ನಡವಳಿಕೆಯು ನಮ್ಮ ಗುರಿಗಳನ್ನು ತಲುಪಲು ನಾವು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಿಸಬೇಕು ಎಂದು ಅರ್ಥ ಮಾಡಿಸುತ್ತದೆ.
ಭಾವನೆಗಳನ್ನು ವ್ಯಕ್ತಪಡಿಸುವುದು (Expressive)
ಭಾವನೆಗಳನ್ನು ತೋರಿಸುವುದು ದೌರ್ಬಲ್ಯದ ಸಂಕೇತ ಎಂದು ಕೆಲವರು ಹೇಳುತ್ತಾರೆ. ಆದರೆ ಇದು ನಿಜವಲ್ಲ. ಭಾವನೆಗಳನ್ನು ಮರೆಮಾಡುವ ಜನರು ಮಾನಸಿಕ ಒತ್ತಡ, ಒಂಟಿತನವನ್ನು ಅನುಭವಿಸುತ್ತಾರೆ. ಮಗು ಪ್ರೀತಿ, ಸಂತೋಷ, ನಗು, ಕೋಪ, ಕಣ್ಣೀರು, ಹತಾಶೆ ಹೀಗೆ ಎಲ್ಲಾ ಭಾವನೆಗಳನ್ನು ಮುಕ್ತವಾಗಿ ತೋರಿಸುತ್ತದೆ. ಅದು ಏನು ಭಾವಿಸುತ್ತದೆ ಎಂದು ನಮಗೆ ನಿಖರವಾಗಿ ತಿಳಿಯುತ್ತದೆ. ನಾವು ವಯಸ್ಕರು ನಮ್ಮ ಭಾವನೆಗಳನ್ನು ಏಕೆ ಮರೆಮಾಡುತ್ತೇವೆ? ನಾವು ಶಿಶುಗಳಂತೆ ಏಕೆ ಮುಕ್ತವಾಗಿ ವ್ಯಕ್ತಪಡಿಸಬಾರದು? ಇಂದು ಸಮಾಜದಲ್ಲಿ ನಾವು ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವುದೇ ಇಲ್ಲ. ಭಾವನೆಗಳನ್ನು ಸರಿಯಾಗಿ ಸಂವಹನ ಮಾಡಿದರೆ ಜನ ನಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ನಾವು ಯಾವಾಗಲೂ ನಾವೇ ಆಗಿರಬಹುದು. ಇಕ್ಯೂ ಎಂಬುದು ಯಶಸ್ಸು ಮತ್ತು ಅಭಿವೃದ್ಧಿಯ ಪ್ರಮುಖ ಅಂಶಗಳಲ್ಲಿ ಒಂದು.
ಅವಲಂಬನೆ (Dependency) ಇರಲಿ
ಮಗು ಎಲ್ಲದಕ್ಕೂ ಹೆತ್ತವರ ಮೇಲೆ ಅವಲಂಬಿತವಾಗಿರುತ್ತದೆ. ಆಹಾರ ಸೇವನೆ, ಶುಚಿಗೊಳಿಸುವಿಕೆ, ಸ್ನಾನ ಇತ್ಯಾದಿ. ಆದರೆ ಸ್ವತಂತ್ರವಾಗಿರುವಿಕೆ ನಮ್ಮ ಶಕ್ತಿ ಎಂದು ನಂಬುತ್ತೇವೆ. ನಮ್ಮ ಅಗತ್ಯಗಳಿಗಾಗಿ ನಾವು ಯಾರ ಮೇಲೂ ಅವಲಂಬಿತರಾಗಲು ಬಯಸುವುದಿಲ್ಲ. ಆದರೆ ನಮ್ಮ ಕುಟುಂಬ ವ್ಯವಸ್ಥೆ ಇರುವುದೇ ಒಬ್ಬರಿನ್ನೊಬ್ಬರ ಮೇಲೆ ಅವಲಂಬಿತರಾಗುವುದರಿಂದ. ಕುಟುಂಬದಲ್ಲಿ ಪರಸ್ಪರ ಅವಲಂಬನೆ ಇರಬೇಕು, ಇದರಿಂದ ನಮ್ಮ ಬಂಧಗಳು ಗಟ್ಟಿಯಾಗುತ್ತವೆ. ಇದರಲ್ಲಿ ಹಿಂಜರಿಯಲು ಏನೂ ಇಲ್ಲ. ನಮ್ಮ ಅತ್ಯಂತ ಸಂಕಷ್ಟದ ಸಮಯದಲ್ಲಿ ಕುಟುಂಬದ ಬೆಂಬಲ ಯಾವಾಗಲೂ ಪ್ರಮುಖ ಪಾತ್ರ ವಹಿಸುತ್ತದೆ. ಅವಲಂಬಿಸುವುದರಲ್ಲಿ ಮುಜುಗರ ಬೇಡ.
ಬೆರಗು, ಆಶ್ಚರ್ಯ
ಹೌದು, ಒಂದು ವರ್ಷದ ಪುಟ್ಟ ಪುಟ್ಟ ಮಗು ನಮಗೆ ಹಲವು ವಿಷಯಗಳನ್ನು ಕಲಿಸಬಹುದು. ಮಗುವಿನ ಕಣ್ಣುಗಳಿಂದ ಜಗತ್ತನ್ನು ನೋಡಿದರೆ, ಪ್ರತಿಬಾರಿಯೂ ಅದು ಸ್ವರ್ಗದಂತೆ ಕಾಣುವುದರಲ್ಲಿ ಸಂಶಯವಿಲ್ಲ. ಹೊಸ ಸಂಗತಿಗಳನ್ನು ಕಂಡಾಗ ಆಶ್ಚರ್ಯಪಡುವುದು, ಬೆರಗು ವ್ಯಕ್ತಪಡಿಸುವುದು ಮಗುವಿನ ಸಹಜ ಸ್ವಭಾವ. ಈ ಬೆರಗು ನಮ್ಮ ಭಾವನಾತ್ಮಕ ಹಾಗೂ ಜ್ಞಾನದ ಬೆಳವಣಿಗೆಗೆ ಸಹಕಾರಿ.
Parenting Tips: ಮಕ್ಕಳ ಆತ್ಮ ವಿಶ್ವಾಸ ಹೆಚ್ಚಾಗ್ಬೇಕೆಂದ್ರೆ ಪಾಲಕರು ಮಾಡ್ಬೇಕಾಗಿದ್ದಿಷ್ಟು!