
ಈಗಿನ ಮಕ್ಕಳಿಗೆ ಮೊಬೈಲ್ ಮನರಂಜನೆ ವಸ್ತುವಾಗಿದೆ. ಇಡೀ ದಿನ ಮೊಬೈಲ್ ನೋಡ್ತಾ ಕಾಲ ಕಳೆಯುವ ಮಕ್ಕಳಿಗೆ ಬೇರೆ ಪ್ರಪಂಚದ ಅರಿವಿರೋದಿಲ್ಲ. ಆಟ, ಪಾಠದಲ್ಲಿ ಮಕ್ಕಳು ಸಂಪೂರ್ಣ ಆಸಕ್ತಿ ಕಳೆದುಕೊಳ್ತಿದ್ದಾರೆ. ಮನೆಗೊಂದೇ ಮಗು, ಪಾಲಕರ ಅತಿ ಮುದ್ದು ಕೂಡ ಇದಕ್ಕೆ ಕಾರಣವಾಗಿರುತ್ತದೆ. ಈಗಿನ ದಿನಗಳಲ್ಲಿ ಅಂಬೆಗಾಲಿಡುವ ಮಗು ಕೂಡ ಮೊಬೈಲ್ ಬಳಸೋದನ್ನು ಕಲಿತಿರುತ್ತೆ ಅಂದ್ರೆ ಅತಿಶಯೋಕ್ತಿಯಲ್ಲ. ಮೊಬೈಲ್ ತೋರಿಸ್ತಾ ಮಕ್ಕಳಿಗೆ ಊಟ ಮಾಡಿಸುವ ಪಾಲಕರ ಸಂಖ್ಯೆ ಹೆಚ್ಚಿದೆ. ಬಾಲ್ಯದಲ್ಲಿ ಪಾಲಕರು ಮಾಡಿದ ಅಭ್ಯಾಸದಿಂದ ಹೊರಬರೋದು ಮಕ್ಕಳಿಗೆ ಕಷ್ಟವಾಗುತ್ತದೆ.
ಊಟವಿರಲಿ, ನಿದ್ರೆ ಇರಲಿ, ಮೊಬೈಲ್ (Mobile) ಹಿಡಿದೆ ಮಾಡುವ ಮಕ್ಕಳಿದ್ದಾರೆ. ಕೆಲ ಪಾಲಕರು, ಅನಿವಾರ್ಯ ಕಾರಣಕ್ಕೆ ಮಕ್ಕಳಿಗೆ ಮೊಬೈಲ್ ನೀಡ್ತಾರೆ. ಪಾಲಕರಿಬ್ಬರೂ ಹೊರಗೆ ಕೆಲಸ ಮಾಡ್ತಿದ್ದರೆ ಇಲ್ಲ ಮಕ್ಕಳ (Children) ನ್ನು ಓದಿಗಾಗಿ ಬೇರೆ ಊರಿನಲ್ಲಿ ಬಿಟ್ಟಿದ್ದರೆ ಮಕ್ಕಳ ಜೊತೆ ಸಂಪರ್ಕ ಬೆಳೆಸಲು ಮೊಬೈಲ್ ನೀಡಿರುತ್ತಾರೆ. ಮಕ್ಕಳಿಗೆ ಸುರಕ್ಷತೆ ಒದಗಿಸಲು ಮೊಬೈಲ್ ನೀಡುವ ಪಾಲಕರ ಸಂಖ್ಯೆ ಹೆಚ್ಚಿದೆ. ಪಾಲಕರು ಮಕ್ಕಳಿಗೆ ತಮ್ಮ ಮೊಬೈಲ್ ನೀಡೋದು ಒಂದು ಕಡೆಯಾದ್ರೆ ಇನ್ನೊಂದು ಕಡೆ ಮಕ್ಕಳಿಗಾಗಿಯೇ ದುಬಾರಿ ಬೆಲೆಯ ಮೊಬೈಲ್ ಖರೀದಿ ಮಾಡುವ ಪಾಲಕರಿದ್ದಾರೆ. ಈಗ ಸಣ್ಣ ಮಕ್ಕಳ ಕೈನಲ್ಲೂ ಸ್ವಂತ ಸ್ಮಾರ್ಟ್ಫೋನ್ (Smartphone) ಇರುತ್ತೆ. ವರದಿಯೊಂದರ ಪ್ರಕಾರ, 10 ವರ್ಷ ವಯಸ್ಸಿನ ಶೇಕಡಾ 42 ಮಕ್ಕಳ ಬಳಿ ಮೊಬೈಲ್ ಇದೆ. ಅದೇ 12 ವರ್ಷ ವಯಸ್ಸಿನ ಶೇಕಡಾ 71ರಷ್ಟು ಮಕ್ಕಳಲ್ಲಿ ಹಾಗೂ 14 ವರ್ಷ ವಯಸ್ಸಿನ ಶೇಕಡಾ 91ರಷ್ಟು ಮಕ್ಕಳ ಬಳಿ ಮೊಬೈಲ್ ಇದೆ. ಪಾಲಕರಾದವರು ಮಕ್ಕಳಿಗೆ ಯಾವಾಗ ಮೊಬೈಲ್ ನೀಡ್ಬೇಕು ಎಂಬುದನ್ನು ತಿಳಿದಿರಬೇಕಾಗುತ್ತದೆ.
ಚರಂಡಿಗೂ ಕಾಲಿಟ್ಟ PRE WEDDING ಫೋಟೋ ಶೂಟ್ : ಇನ್ನು ಏನೇನ್ ನೋಡ್ಬೇಕಪ್ಪಾ ಕಣ್ಣಲ್ಲಿ
ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಮೊಬೈಲ್ ನೀಡ್ಬೇಕು? : ಸ್ಮಾರ್ಟ್ಫೋನ್ ಬಳಕೆಯಿಂದ ಆಗುವ ನಷ್ಟದ ಬಗ್ಗೆ ಮಗು ಅರ್ಥ ಮಾಡಿಕೊಳ್ಳುತ್ತಿದ್ದರೆ ಅವರಿಗೆ ನೀವು ಮೊಬೈಲ್ ಕೊಡಿಸಬಹುದು. ಆದ್ರೆ ನೀವು ಹೇಳಿದ ಮಾತನ್ನು ಸರಿಯಾಗಿ ಕೇಳ್ತಿಲ್ಲ, ನೀವು ನೋಡಬೇಡ ಎಂಬುದನ್ನೇ ಮಗು ನೋಡ್ತಿದೆ ಎಂದಾದ್ರೆ ಮಗು ಇನ್ನೂ ಮೊಬೈಲ್ ಹಿಡಿಯಲು ಅರ್ಹವಾಗಿಲ್ಲ ಎಂದೇ ಅರ್ಥ.
ಮಕ್ಕಳಿಗೆ ಮೊಬೈಲ್ ನೀಡೋದ್ರಿಂದ ಆಗುವ ಹಾನಿ ಏನು? : ಕೆಲ ಮಕ್ಕಳಿಗೆ ಮೊಬೈಲ್ ನಲ್ಲಿ ಏನು ನೋಡ್ಬೇಕು, ಏನು ನೋಡ್ಬಾರದು ಎಂಬ ಅರಿವಿರೋದಿಲ್ಲ. ಇದ್ರಿಂದ ಸಮಸ್ಯೆ ಹೆಚ್ಚಾಗುತ್ತದೆ. ಇಂಟರ್ನೆಟ್ ಸೌಲಭ್ಯವಿರುವ ಕಾರಣ ಮಕ್ಕಳು ಅಗತ್ಯವಿರದ ವಿಷ್ಯಗಳನ್ನು ನೋಡ್ತಾರೆ. ಅದ್ರಲ್ಲಿ ಹಿಂಸಾಚಾರ, ಪೋರ್ನ್, ಅಪಘಾತ ಸೇರಿದಂತೆ ಎಲ್ಲ ವಿಡಿಯೋಗಳಿರುತ್ತವೆ. ಇದು ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಮಕ್ಕಳ ಮನಸ್ಸು ಮುಗ್ಧವಾಗಿರುತ್ತದೆ. ಸರಿ – ತಪ್ಪಿನ ಅರಿವು ಅವರಿಗಿರೋದಿಲ್ಲ. ಹಾಗಾಗಿ ಮಕ್ಕಳು ನೋಡಿದ್ದೆಲ್ಲ ಸತ್ಯವೆಂದು ನಂಬುತ್ತಾರೆ. ಅದ್ರಂತೆ ಮಾಡುವ ಯತ್ನ ನಡೆಸುತ್ತಾರೆ. ಮಕ್ಕಳು ಸೈಬರ್ ಕ್ರೈಮ್, ಬ್ಲ್ಯಾಕ್‌ಮೇಲಿಂಗ್ ಜಾಲದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯಿರುತ್ತದೆ. ಮಕ್ಕಳಿಗೆ ಅಪಾಯ ಬರಬಾರದು ಅಂದ್ರೆ ಮೊಬೈಲ್ ನಿಂದ ದೂರವಿಡಿ. ಮೊಬೈಲ್ ಅತಿಯಾಗಿ ವೀಕ್ಷಣೆ ಮಾಡೋದ್ರಿಂದ ಬೊಜ್ಜು, ನಿದ್ರಾಹೀನತೆ, ದೃಷ್ಟಿ ಸಮಸ್ಯೆ ಸೇರಿದಂತೆ ಇನ್ನೂ ಅನೇಕ ಸಮಸ್ಯೆ ಮಕ್ಕಳನ್ನು ಕಾಡುತ್ತದೆ.
Relationship Tips : ಕೆಲಸ ಮಾಡೋ ಹುಡುಗಿಗೆ ಓಕೆ ಎನ್ನುವ ಮುನ್ನ ಇದು ಗೊತ್ತಿರಲಿ!
ಮಕ್ಕಳಿಗೆ ಮೊಬೈಲ್ ನೀಡೋದು ಅನಿವಾರ್ಯವಾದ್ರೆ ಹೀಗೆ ಮಾಡಿ : ಮೊದಲೇ ಹೇಳಿದಂತೆ ಕೆಲ ಸಂದರ್ಭದಲ್ಲಿ ಮಕ್ಕಳಿಗೆ ಮೊಬೈಲ್ ನೀಡುವ ಅಗತ್ಯವಿರುತ್ತದೆ. 12 – 15ನೇ ವಯಸ್ಸಿನಲ್ಲಿಯೇ ಮಕ್ಕಳು ಮೊಬೈಲ್ ಕೊಂಡುಕೊಳ್ಳುತ್ತಾರೆ. ಮಕ್ಕಳಿಗೆ ಫೋನ್ ನೀಡಿದರೆ, ನಂತರ ಫೋನ್‌ನಲ್ಲಿನ ನಿಯಂತ್ರಣವನ್ನು ಸಹ ಬಳಸಬೇಕು. ಆಗ ಮಕ್ಕಳು ಮೊಬೈಲ್ ನಲ್ಲಿ ಏನು ನೋಡ್ತಾರೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ. ಮಕ್ಕಳಿಗೆ ಸ್ಮಾರ್ಟ್ ಫೋನ್ ಬದಲು ಬೇಸಿಕ್ ಸೆಟ್ ನೀಡಿ. ಮಗು ಎಷ್ಟು ಸಮಯ ಮೊಬೈಲ್ ನೋಡ್ಬೇಕು ಎಂಬ ಬಗ್ಗೆ ಸಮಯ ನಿಗದಿಪಡಿಸಿ. ಮಕ್ಕಳ ಫೋನ್ ಪಾಸ್ವರ್ಡ್‌ಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಅವರಿಗೆ ಈ ಬಗ್ಗೆ ತಿಳಿಸಿ. ಮಲಗುವ ಒಂದು ಗಂಟೆ ಮೊದಲು ಮೊಬೈಲ್ ಬಳಸದಂತೆ ಮಕ್ಕಳಿಗೆ ಸಲಹೆ ನೀಡಿ. ಹಾಗೆ ಅದ್ರ ಪ್ರಯೋಜನವನ್ನೂ ಅವರಿಗೆ ಹೇಳಿ. ಮಗು ಹದಿಹರೆಯಕ್ಕೆ ಬಂದಾಗ ಮಕ್ಕಳ ಜೊತೆ ಮಾತನಾಡಿ. ಕೆಲ ಅಪ್ಲಿಕೇಷನ್ ಹಾಗೂ ವೆಬ್ ಹುಡುಕಾಟವನ್ನು ನೀವು ಲಾಕ್ ಮಾಡಿಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.