
ಮದುವೆ ವೇದಿಕೆಯಲ್ಲಿ ವರ ಮಾಡಿದ ಒಂದು ತಮಾಷೆಯ ಮಾತಿನಿಂದಾಗಿ ವಧು ಮದುವೆಯನ್ನೇ ಮುರಿದುಕೊಂಡು ಅರ್ಧಕ್ಕೆ ನಿಲ್ಲಿಸಿ ಬಿಟ್ಟು ಹೋಗುತ್ತಿರುವ ಘಟನೆ ನಡೆದಿದೆ. ವರ ತನ್ನ ಜನ್ಮ ದಿನಾಂಕದ ಬಗ್ಗೆ ಒಂದು ತಮಾಷೆ ಮಾಡಿದ್ದಕ್ಕೆ ಮದುವೆ ಮುರಿದುಕೊಂಡು ಹೋಗಿರುವ ಘಟನೆ ನಡೆದಿದೆ.
ಈ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯ ಮೇಜಾ ತಹಸಿಲ್‌ನ ಅಕ್ಬರ್ ಶಹಪುರ್ ಗ್ರಾಮದಲ್ಲಿ ನಡೆದಿದೆ. ಇತ್ತೀಚೆಗೆ ಏರ್ಪಡಿಸಲಾಗಿದ್ದ ವಿವಾಹ ಸಮಾರಂಭವೊಂದರಲ್ಲಿ ವರನ ಬೇಜವಾಬ್ದಾರಿ ಮತ್ತು ಹಾಸ್ಯಾಸ್ಪದ ಕೃತ್ಯದಿಂದಾಗಿ ವಧು ಜಯಮಾಲಾ ವೇದಿಕೆಯಲ್ಲಿ ಮದುವೆಯಾಗಲು ನಿರಾಕರಿಸಿದ್ದಾಳೆ. ಈ ವಿಚಾರ ಮದುವೆ ಮಂಟಪದಲ್ಲಿ ವಿವಾದ ಮತ್ತು ಚರ್ಚೆಯ ವಿಷಯವಾಗಿ ಬೆಳೆಯಿತು. ಶುಕ್ರವಾರ ಮದುವೆ ಮಾಡಿಕೊಳ್ಳಲು ಬಂದ ವರನ ಕುಟುಂಬವು ವಧು ಇಲ್ಲದೆ ಮದುವೆ ಮುರಿದುಕೊಂಡು ಮನೆಗೆ ಹಿಂತಿರುಗಬೇಕಾಯಿತು.
ಜೈಮಾಲಾ ಸಮಾರಂಭದಲ್ಲಿ ವರನ ಉತ್ತರ ವಿವಾದ: ಸಮಾರಂಭದ ಸಮಯದಲ್ಲಿ, ವಧುವಿನ ಸ್ನೇಹಿತರು ವರನ ಜನ್ಮ ದಿನಾಂಕದ ಬಗ್ಗೆ ತಮಾಷೆಯಾಗಿ ಕೇಳಿದಾಗ, ಅವನು ತಮಾಷೆಯಾಗಿ ತನ್ನ ಜನ್ಮ ದಿನಾಂಕ 2025 ಎಂದು ಉತ್ತರಿಸಿದನು. ಇದನ್ನು ಕೇಳಿದ ವಧು ಅವನ ಕುತ್ತಿಗೆಗೆ ಹಾರ ಹಾಕಲು ನಿರಾಕರಿಸಿದಳು. ಜೊತೆಗೆ, ಅದೇ ಕ್ಷಣದಲ್ಲಿ ವರನನ್ನು ಮದುವೆಯಾಗಲು ಏಕಾಏಕಿ ನಿರಾಕರಿಸಿದಳು. ವರನಿಗೆ ಹೂವಿನ ಹಾರ ಹಾಕುವುದನ್ನು ಬಿಟ್ಟು ವಧು ಹೀಗೇಕೆ ಹಠ ಹಿಡಿದಿದ್ದಾಳೆ ಎಂದು ಕುಟುಂಬ ಸದಸ್ಯರು ಬಂದು ಕೇಳಿದಾಗ ಘಟನೆಯ ಬಗ್ಗೆ ಮತ್ತೆ ವಿವರಿಸಿದ್ದಾಳೆ. ಇಷ್ಟು ಸಣ್ಣ ವಿಚಾರಕ್ಕೆ ಮದುವೆ ಮುರಿದುಕೊಳ್ಳಬಾರದು ಎಂದು ವಧುವಿನ ಮನೆಯವರು ಸಾಕಷ್ಟು ಮನವೊಲಿಸಲು ಪ್ರಯತ್ನ ಮಾಡಿದರೂ, ವಧು ತನ್ನ ನಿರ್ಧಾರದಲ್ಲಿ ದೃಢವಾಗಿದ್ದು, ಮದುವೆ ಮುರಿದುಕೊಂಡು ಹೋದಳು.
ವಧುವಿನ ಸಹೋದರ ಗಂಭೀರ ಆರೋಪ: ನಮ್ಮ ಮನೆಯಲ್ಲಿರುವ 7 ಜನ ಸಹೋದರರಲ್ಲಿ ತನ್ನ ಏಕೈಕ ಸಹೋದರಿಯ ಮದುವೆಗೆ ಕುಟುಂಬವು ಬೈಕ್‌ಗಳು ಮತ್ತು ಇತರ ಉಡುಗೊರೆಗಳು ಸೇರಿದಂತೆ ಒಟ್ಟು 11 ಲಕ್ಷ ರೂ.ಗಳಿಗೂ ಹೆಚ್ಚು ಖರ್ಚು ಮಾಡಿದೆ ಎಂದು ವಧುವಿನ ಸಹೋದರ ಹೇಳಿದ್ದಾರೆ. ಆದರೆ ಮದುವೆ ಮೆರವಣಿಗೆಯಲ್ಲಿ ವರನ ವರ್ತನೆ ಮತ್ತು ಅವನ ತಂದೆ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವರನು ಮಾನಸಿಕವಾಗಿ ಅಸ್ಥಿರ, ಮೊಬೈಲ್ ಫೋನ್ ಅಥವಾ ಬೈಕ್ ಅನ್ನು ಹೇಗೆ ಬಳಸಬೇಕು ಎಂಬುದು ಕೂಡ ಅವನಿಗೆ ತಿಳಿದಿಲ್ಲ. ಅವನಿಗೆ ಸರಿಯಾದ ಜನ್ಮ ದಿನಾಂಕವನ್ನು ಹೇಳಲು ಸಾಧ್ಯವಾಗಲಿಲ್ಲ. ಅವನೊಬ್ಬ ಅರೆಹುಚ್ಚನಾಗಿದ್ದಾನೆ ಎಂದು ವಧುವಿನ ಕಡೆಯವರು ಆರೋಪಿ ಮದುವೆ ಮುರಿದುಕೊಂಡಿದ್ದಾರೆ.
ವರನ ಕುಟುಂಬ ಸ್ಪಷ್ಟೀಕರಣ: ಇನ್ನು ವಧುವಿನ ಮನೆಯವರು ಮದುವೆ ಮುರಿದುಕೊಂಡು ಹೋಗುವಾಗ ವರನ ಕುಟುಂಬವು ನೀವು ಹೇಳುತ್ತಿರುವುದೆಲ್ಲಾ ಆಧಾರರಹಿತ ಮತ್ತು ಸುಳ್ಳು. ವರನು ತಮಾಷೆಗಾಗಿ ತಪ್ಪು ಜನ್ಮ ದಿನಾಂಕವನ್ನು ಹೇಳಿದ್ದಾನೆ. ಇದರಿಂದಾಗಿ ಅನಗತ್ಯ ವಿವಾದ ಸೃಷ್ಟಿ ಮಾಡಲಾಗಿದೆ. ವಧುವಿನ ಕಡೆಯವರನ್ನು ಮನವೊಲಿಸಲು ಪ್ರಯತ್ನಿಸಿದರೂ, ಯಾವುದೇ ರಾಜಿ ಮಾಡಿಕೊಳ್ಳಲು ಅವರು ಸಿದ್ಧರಿರಲಿಲ್ಲ. ಇದಾದ ನಂತರ ಮದುವೆ ಮೆರವಣಿಗೆ ನಿರಾಶೆಯಿಂದ ಹಿಂತಿರುಗಿತು ಎಂದು ವರನ ಕುಟುಂಬ ಸದಸ್ಯರು ಹೇಳಿದ್ದಾರೆ.
ವರನ ಮನೆಯವರು ಕೇಳಿದ್ದನ್ನೆಲ್ಲಾ ಕೊಟ್ಟಿದ್ದರೂ ಅದನ್ನು ಬಳಸಿಕೊಳ್ಳಲು ಆತ ಸೂಕ್ತವಾಗಿಲ್ಲ ಎಂಬ ಭಾವನೆ ವಧುವಿನ ಮನೆಯವರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವಧುವಿಗೂ ಮದುವೆ ಮೇಲೆ ಅಷ್ಟೊಂದು ಆಸಕ್ತಿ ಇಲ್ಲದಂತೆ ಕಾಣುತ್ತಿದೆ. ಹೀಗಾಗಿ, ಮದುವೆ ಮುರಿದುಕೊಳ್ಳಲು ಒಂದು ಕಾರಣ ಸಿಕ್ಕಿದರೂ ಸಾಕು ಎಂದು ಕಾಯುತ್ತಿರುವಾಗ, ಮದುವೆ ಮೆರವಣಿಗೆಯಲ್ಲಿ ವರ ಮಾಡಿದ ಒಂದು ಜನ್ಮ ದಿನದ ಕುರಿತಾದ ತಮಾಷೆ ವರನ ಕಡೆಯವರಿಗೆ ಮದುವೆ ಮುರಿದುಕೊಳ್ಳಲು ನೆಪವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.