ಗಂಡು ಹೆಣ್ಣನ್ನು ಒಲಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಾನೆ. ಆದರೆ ಈ ಪಾಡುಗಳೆಲ್ಲಾ ಬರೀ ಮನುಷ್ಯನಾಗಿ ಹುಟ್ಟಿದ ಗಂಡಿಗೆ ಮಾತ್ರ ಅಂದುಕೊಂಡರೆ ನಿಮ್ಮ ಊಹೆ ತಪ್ಪು, ಪ್ರಪಂಚದ ಸಕಲ ಗಂಡು ಜೀವಿಗಳು ಕೂಡ ಹೆಣ್ಣಿನ ಒಲವಿಗಾಗಿ ಹಲವು ಸಾಹಸಗಳ ಮಾಡುತ್ತವೆ. ಅದಕ್ಕೊಂದು ಉತ್ತಮ ಉದಾಹರಣೆ ಈ ಪುಟ್ಟ ಹಕ್ಕಿ...
ಹೆಣ್ಣನ್ನು ಒಲಿಸಿಕೊಳ್ಳುವ ಕಲೆ ಎಲ್ಲರಿಗೂ ಅಷ್ಟು ಸುಲಭವಾಗಿ ಒಲಿಯುವುದಿಲ್ಲ, ಮನ ಮೆಚ್ಚಿದ ಹುಡುಗಿಯ ಮನದರಸಿ ಮಾಡಿಕೊಳ್ಳಲು ಗಂಡು ಇನ್ನಿಲ್ಲದ ಸಾಹಸ ಮಾಡುತ್ತಾನೆ. ಎಂದೂ ತೋರದ ಕಾಳಜಿ ತೋರುತ್ತಾನೆ. ಹಿಂದೆ ಮುಂದೆ ಸುಳಿದಾಡುತ್ತಾ ಹೆಣ್ಣಿನ ಗಮನ ಸೆಳೆಯಲು ಪ್ರಯತ್ನಿಸುತ್ತಾನೆ. ಅರಮನೆ ಐಷಾರಾಮಿ ಜೀವನ, ಅಲಂಕಾರಿಕ ವಸ್ತುಗಳು ಹೂ ಬಳೆ, ಪ್ರೀತಿ ಹೀಗೆ ತನಗೆ ಸಾಧ್ಯವಿರುವ ಎಲ್ಲಾ ಆಸೆ ಆಮಿಷಗಳನ್ನು ತೋರಿಸುವ ಮೂಲಕ ಹೆಣ್ಣನ್ನು ಒಲಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಾನೆ. ಆದರೆ ಈ ಪಾಡುಗಳೆಲ್ಲಾ ಬರೀ ಮನುಷ್ಯನಾಗಿ ಹುಟ್ಟಿದ ಗಂಡಿಗೆ ಮಾತ್ರ ಅಂದುಕೊಂಡರೆ ನಿಮ್ಮ ಊಹೆ ತಪ್ಪು, ಪ್ರಪಂಚದ ಸಕಲ ಗಂಡು ಜೀವಿಗಳು ಕೂಡ ಹೆಣ್ಣಿನ ಒಲವಿಗಾಗಿ ಹಲವು ಸಾಹಸಗಳ ಮಾಡುತ್ತವೆ. ಅದಕ್ಕೊಂದು ಉತ್ತಮ ಉದಾಹರಣೆ ಈ ಪುಟ್ಟ ಹಕ್ಕಿ...
ಹೌದು ಪುಟ್ಟ ಹಕ್ಕಿಯೊಂದು ತನ್ನೊಲವಿನ ಗೆಳತಿಯ ಒಲಿಸಿಕೊಳ್ಳಲು ಇನ್ನಿಲ್ಲದ ಸಾಹಸ ಮಾಡುತ್ತಿದೆ. ಈ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. Bibbi the Budgie ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ನಿಮ್ಮ ಬಾಯ್‌ಫ್ರೆಂಡ್ ಹೀಗಿದ್ರೆ ಹೇಗೆ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವೀಡಿಯೋದಲ್ಲಿ ಹಿನ್ನೆಲೆ ವಿವರಣೆ ನೀಡಲಾಗಿದೆ.
ವೀಡಿಯೋದಲ್ಲೇನಿದೆ.
ಈ ಕೆಂಪು ಹಕ್ಕಿ ಅಚ್ಚುಕಟ್ಟು ನೀಟು ಆಗಿಡೋದರಲ್ಲಿ ಪಂಟರ್, ಇದು ಪ್ರತಿದಿನವೂ ತಾನು ವಾಸ ಮಾಡುವ ಸ್ಥಳವನ್ನು ಕ್ಲೀನ್ ಆಗಿ ಇಡಲು ಬಯಸುತ್ತದೆ. ಇದು ತಾನಿರುವ ಸ್ಥಳದಲ್ಲಿ ಬಿದ್ದ ಎಲೆ, ಹೂ, ಕಾಯಿ, ತನ್ನ ಗಾತ್ರಕ್ಕಿಂತಲೂ ಉದ್ದದ ಮರದ ತುಂಡುಗಳನ್ನು ಕೂಡ ತಾನಿರುವ ಸ್ಥಳದಿಂದ ದೂರ ತೆಗೆದುಕೊಂಡು ಹೋಗಿ ಹಾಕುತ್ತದೆ. ಏಕೆಂದರೆ ಇದು ನಂಬಲು ಅಸಾಧ್ಯವಾದಂತಹ ಪ್ರಣಯದಾಟವನ್ನು ಮಾಡಲು ಬಯಸುತ್ತದೆ. ಇನ್ನು ಈ ರೆಡ್ ಹಕ್ಕಿಗಳಲ್ಲಿ ಹೆಣ್ಣು ಹಕ್ಕಿ ತುಂಬಾ ಚೂಸಿ, ಅಳಿದು ತೂಗಿ ತನ್ನ ಸಂಗಾತಿಯನ್ನು ಆಯ್ಕೆ ಮಾಡುವ ಇದು, ಒಂದು ಪುಟ್ಟ ಎಲೆ ಗಂಡು ಹಕ್ಕಿ ಇದ್ದಲ್ಲಿ ಕಂಡರು ಅದು ಆ ಪ್ರೇಮ ಸಂಬಂಧವನ್ನು (Love affairs)ನಿರಾಕರಿಸಬಹುದು. ಹೀಗಾಗಿ ಗಂಡು ಬಹಳ ಕಾಳಜಿಯಿಂದ ತಾನಿರುವ ಪರಿಸರವನ್ನು ಬಹಳ ಕಷ್ಟಪಟ್ಟು ಸ್ವಚ್ಛಗೊಳಿಸುತ್ತದೆ. ಆ ಸ್ಥಳಕ್ಕೆ ಬರುವ ಹೆಣ್ಣು ಹಕ್ಕಿ ಆ ಸ್ಥಳದ ಅವಲೋಕನ ಮಾಡುತ್ತದೆ. ಗಂಡಿನ ಕಾರ್ಯವೈಖರಿಯನ್ನು ಗಮನಿಸುತ್ತದೆ. ಅಲ್ಲದೇ ಶ್ರಮಕ್ಕೆ ತಕ್ಕ ಫಲ ಇದೆ ಸಿಕ್ಕೇ ಸಿಗುತ್ತದೆ ಎಂಬಂತೆ ಗಂಡಿನ ಪರಿಶ್ರಮಕ್ಕೆ ಹೆಣ್ಣು ಹಕ್ಕಿ ಒಲಿದು ಬಿಡುತ್ತದೆ. ಅಲ್ಲಿ ಪ್ರಣಯದಾಟ ಆರಂಭವಾಗುತ್ತದೆ. ನಂತರದ ಕ್ಷಣಗಳು ಇನ್ನಷ್ಟು ರೋಮಾಂಚಕ.
ಗಂಡು ಹಕ್ಕಿ (Male Bird) ತನ್ನ ನಿಯತ್ತು ಪ್ರಾಮಾಣಿಕತೆಯನ್ನು (sincerity) ತೋರಿಸುವ ಸಲುವಾಗಿ ಹೆಣ್ಣಿನ ಮುಂದೆ ತಲೆಬಾಗುತ್ತದೆ. ಅಲ್ಲದೇ ತನ್ನ ಕಣ್ಣಿನ ಬಣ್ಣವನ್ನು ಅತ್ಯಾಕರ್ಷಕ ಹಳದಿ ಬಣ್ಣಕ್ಕೆ ಬದಲಾಯಿಸುತ್ತದೆ. ಇದರ ಜೊತೆಗೆ ನೆಲದ ಮೇಲೆ ತನ್ನ ರೆಕ್ಕೆ ಪುಕ್ಕಗಳನ್ನೆಲ್ಲಾ ತಿರುಗಿಸುತ್ತ ಪ್ರಸಿದ್ಧ ನಾಟ್ಯಕಾರರನ್ನು ಮೀರಿಸುವಂತೆ ನೃತ್ಯ ಮಾಡುತ್ತದೆ. ಈ ನೃತ್ಯ ಎಷ್ಟು ವೇಗವಾಗಿರುತ್ತದೆ ಎಂದರೆ ಮೇಲಿನಿಂದ ನೋಡಿದಾಗ ಬಿಡಿಸಿದ ಛತ್ರಿಯೊಂದು ಅದರಷ್ಟಕ್ಕೆ ತಿರುಗುತ್ತಿರುವಂತೆ ಕಾಣುತ್ತದೆ. ಈ ಗಂಡು ಹಕ್ಕಿಯ ನೃತ್ಯವನ್ನು ನೋಡುತ್ತಾ ಹೆಣ್ಣು ಗಂಡು ಹಕ್ಕಿಯತ್ತ ಮೋಹಗೊಳ್ಳುತ್ತದೆ. ತನ್ನ ರೆಕ್ಕೆಗಳನ್ನು ತೆರೆದು ಗಂಡಿಗೆ ತಾನು ನಿನ್ನೆ ಪ್ರೇಮವನ್ನು ಒಪ್ಪಿಕೊಂಡಿದ್ದಾಗಿ ಸೂಚನೆ ನೀಡುತ್ತದೆ. ಈ ವೇಳೆ ಗಂಡು ಹಕ್ಕಿ ಮತ್ತಷ್ಟು ಖುಷಿಯಾಗಿ ನೃತ್ಯ ಮಾಡಲು ಶುರು ಮಾಡುತ್ತದೆ. ನಂತರ ಹೆಣ್ಣು ಹಕ್ಕಿ ಮತ್ತಷ್ಟು ಉತ್ಸಾಹಿತವಾಗುತ್ತದೆ. ನಂತರ ನಡೆಯುತ್ತದೆ ಈ ಹಕ್ಕಿಗಳ ಪ್ರಣಯದಾಟ...
ಆ ಕ್ಷಣಗಳನ್ನು ನೀವು ಈ ವೀಡಿಯೋದಲ್ಲೇ ನೋಡಬೇಕು...
ಇತ್ತ ಈ ವೀಡಿಯೋ ನೋಡಿದ ನೆಟ್ಟಿಗರ ಕಾಮೆಂಟ್ ಮಾತ್ರ ಬಹಳ ಸ್ವಾರಸ್ಯವಾಗಿದೆ. ಹುಡುಗಿಯೊಬ್ಬಳು ನೋಡಿ ಸಂಬಂಧಕ್ಕಾಗಿ ಒಂದು ಪುಟ್ಟ ಹಕ್ಕಿಯೂ ಎಷ್ಟು ಶ್ರಮ ಪಡುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮನುಷ್ಯರಿಗಿಂತ ಈ ಪುಟ್ಟು ಹಕ್ಕಿಗಳು ಬುದ್ಧಿವಂತಿಕೆಯನ್ನು ಹೊಂದಿವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಕ್ಷಣಿಕ ಖುಷಿಗಾಗಿ ಹಕ್ಕಿಯೂ ಎಷ್ಟು ಕಷ್ಟಪಡುತ್ತದೆ ನೋಡಿ, ಈ ಹಕ್ಕಿಯನ್ನು ನೋಡಿ ನಾನು ಇಂಪ್ರೆಸ್ ಆದೆ ಎಂದು ಹುಡುಗಿಯೊಬ್ಬಳು ಕಾಮೆಂಟ್ ಮಾಡಿದ್ದಾಳೆ. ಅದಕ್ಕೊರ್ವ ಯುವಕ ಈ ಹಕ್ಕಿ ಮಾಡುವುದೆಲ್ಲಾ ನಾನು ಮಾಡುವೆ ಎಂದು ಪರೋಕ್ಷವಾಗಿ ಪ್ರೇಮ ನಿವೇದನೆ ಮಾಡಿದ್ದಾನೆ.
ಒಟ್ಟಿನಲ್ಲಿ ಪ್ರೇಮಕ್ಕಾಗಿ ಹಾತೊರೆಯುವುದು ಮನುಷ್ಯರು ಮಾತ್ರವಲ್ಲ, ಪುಟ್ಟದೊಂದು ಹಕ್ಕಿಯೂ ಪ್ರೀತಿಗಾಗಿ ಬಹಳ ಶ್ರಮ ಪಡುವುದು ಎಂಬುದು ಈ ವೀಡಿಯೋದಿಂದ ಸಾಬೀತಾಗಿದೆ.