ನಾನ್ ಹೆಂಡತಿಗೋಸ್ಕರನಾದ್ರೂ ಬದುಕಬೇಕು: ಇರ್ಫಾನ್ ಖಾನ್

By Suvarna NewsFirst Published Mar 7, 2020, 3:33 PM IST
Highlights

ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಗಾಢವಾಗಿ ಬದುಕಿದ ದಂಪತಿಗೆ ಸಿಡಿಲಿನಂತೆ ಬಡಿದದ್ದು ಇರ್ಫಾನ್ ಅವರಿಗೆ ಬಂದ ಕ್ಯಾನ್ಸರ್. ಸುತಪ ಹಾಗೂ ಇರ್ಫಾನ್ ಸಂಬಂಧ ಇನ್ನಷ್ಟು ಗಾಢವಾದದ್ದು ಇಲ್ಲೇ. ಸಾಮಾನ್ಯವಾಗಿ ಕ್ಯಾನ್ಸರ್ ಬಂದರೆ ಎಂಥಾ ಆತ್ಮಸ್ಥೈರ್ಯ ಇದ್ದರೂ ಕುಂದುತ್ತದೆ. ಮನಸ್ಸು ಖಿನ್ನತೆಗೊಳಗಾಗುತ್ತೆ. ಸರಿಯಾದ ಸಪೋರ್ಟ್ ಇಲ್ಲದೇ ಹೋದರೆ ರೋಗಿಗೆ ಬದುಕಿನ ಬಗ್ಗೆ ಆಸಕ್ತಿಯೇ ಹೋಗಿಬಿಡುತ್ತದೆ. ಆದರೆ ಇರ್ಫಾನ್ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾದವರು ಪತ್ನಿ ಸುತಪ.

ಅದು 1988ನೇ ಇಸವಿ. ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಿಂದ ಪದವಿ ಪಡೆದು ಹೊರಬಿದ್ದ ಇರ್ಫಾನ್ ಖಾನ್ ಬಾಲಿವುಡ್‌ನಲ್ಲಿ ಅವಕಾಶಕ್ಕಾಗಿ ಅರಸತೊಡಗಿದ್ದರು. ಸಿನಿಮಾ ಅನ್ನೋದು ಅವರಿಗೆ ಹೊಟ್ಟೆ ತುಂಬಿಸುವ ಉದ್ಯೋಗ ಮಾತ್ರ ಆಗಿರಲಿಲ್ಲ. ಅದು ಅವರ ಬದುಕೇ ಆಗಿತ್ತು. ಸಿನಿಮಾ ಇಲ್ಲದೇ ನಾನಿಲ್ಲ ಅನ್ನೋ ಹಾಗಿದ್ದರು. ಶೂಟಿಂಗ್ ಮುಗಿಸಿ ಅಲ್ಲಿಲ್ಲಿ ಗೆಳೆಯರ ಜೊತೆಗೆ ಅಡ್ಡಾಡದೇ ನೇರ ಮನೆಗೆ ಬರುತ್ತಿದ್ದರು. ಬಾಲಿವುಡ್ ಮಂದಿಯೆಲ್ಲ ಪಾರ್ಟಿ, ಮೋಜು ಅಂತ ಮಧ್ಯರಾತ್ರಿಯವರೆಗೆ ಕಳೆಯುತ್ತಿದ್ದರೆ ಇರ್ಫಾನ್ ಹಾಗಲ್ಲ. 'ಅವರು ಯಾವತ್ತೂ ಒಂದು ವಿಷಯದ ಮೇಲೆ ಫೋಕಸ್ಡ್‌ ಆಗಿಯೇ ಇರುತ್ತಾರೆ, ಶೂಟಿಂಗ್ ಮುಗಿಸಿ ನೇರ ಮನೆಗೆ ಬಂದರೆ ಅವರು ಅತ್ತಿತ್ತ ನೋಡದೇ ಹೋಗೋದು ನಮ್ಮ ಬೆಡ್ ರೂಮ್‌ಗೆ. ಅಲ್ಲಿ ಫ್ರೆಶ್ ಆಗಿ ನೆಲದ ಮೇಲೆ ಕೂರೋದು. ಅವರ ಪಕ್ಕ ಒಂದಿಷ್ಟು ಪುಸ್ತಕಗಳ ರಾಶಿ. ಪುಸ್ತಕ ಓದುತ್ತಾ ಕೂರುವುದು. ಮಧ್ಯರಾತ್ರಿಯವರೆಗೆ ಅವರು ಓದುತ್ತಾರೆ. ಅವರು ಗಾಸಿಪ್ ಮಾಡಿದ್ದು ನಾನು ನೋಡಿಲ್ಲ.
ವಾರದಲ್ಲಿ ಒಂದಾದರೂ ಹೊಸ ಸ್ಕ್ರಿಪ್ಟ್ ನೋಡುತ್ತಾರೆ. ಕೆಲವೊಮ್ಮೆ ಹಾಲಿವುಡ್ ಸ್ಕ್ರಿಪ್ಟ್ ಹಿಡಿದು ಕೂತರೆ ಬೆಳಗಿನ ಜಾವ ಮೂರರವರೆಗೂ ಓದುತ್ತಿರುತ್ತಾರೆ. ನಾವು ಕೂಗಿ ಕರೆದು ಮಲಗಲು ಹೇಳಿದರೂ, ಕೇಳೋದೇ ಇಲ್ಲ.' ಹೀಗಂತ ಇರ್ಫಾನ್ ಸ್ವಭಾವದ ಬಗ್ಗೆ ಹೇಳುತ್ತಾರೆ ಅವರ ಪತ್ನಿ ಸುತಪ ಸಿಕ್ದರ್. ಈಕೆಯೂ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾದ ಪದವೀಧರೆ. ಇರ್ಫಾನ್ ಮತ್ತು ಸುತಪಾ ಪ್ರೇಮಿಸಿ ಮದುವೆಯಾದವರು. ಜಮೀನ್ದಾರಿ ಪಠಾಣ್ ಕುಟುಂಬದಿಂದ ಬಂದ ಇರ್ಫಾನ್ ಮನೆಯವರು ಹಣದ ಹಿಂದೆ ಬಿದ್ದರೆ, ಇವರು ಕ್ರಿಯೇಟಿವಿಟಿ ಹಿಂದೆ ಬಿದ್ದವರು, ದುಡ್ಡಿನ ಮುಖ ನೋಡಿದವರಲ್ಲ. ಅಪ್ಪಟ ಸಸ್ಯಾಹಾರಿ.

 ಬ್ರಿಟನ್‌ನಿಂದ ನಾಸಿಕ್‌ಗೆ ಬಂದು ಹೋಮ ನಡೆಸಿದ ಇರ್ಫಾನ್ ಖಾನ್ 

ಇವರು ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾದ ವಿದ್ಯಾರ್ಥಿಯಾಗಿದ್ದಾಗಲೇ ಇವರ ಗಮನ ಸೆಳೆದವರು ಸುತಪ. ಇರ್ಫಾನ್ ಆಕ್ಟಿಂಗ್‌ನಲ್ಲಿ ಬ್ಯುಸಿ ಇದ್ದರೆ, ಆಕೆ ಆಕ್ಟಿಂಗ್ ಜೊತೆಗೆ ಕತೆ, ಸ್ಕ್ರಿಪ್ಟ್ ವರ್ಕ್ ಬಗ್ಗೆ ಕುತೂಹಲ ತೋರಿಸುತ್ತಿದ್ದರು. ಈಕೆಯನ್ನು ಅಚ್ಚರಿಯಿಂದ ಗಮನಿಸುತ್ತಿದ್ದ ಇರ್ಫಾನ್ ತಾವೇ ಮುಂದಾಗಿ ಪರಿಚಯ ಮಾಡಿಕೊಂಡರು. ಕೆಲವು ಕಾಲ ಇಬ್ಬರೂ ಅಪ್ಪಟ ಸ್ನೇಹಿತರಾಗಿದ್ದರು. ಒಂದು ಸ್ವೀಟ್ ಗಳಿಗೆಯಲ್ಲಿ ಈ ಸ್ನೇಹ ಸಂಬಂಧಕ್ಕೆ ತಿರುಗಿತ್ತು. ಪ್ರೀತಿ ಗಾಢವಾಗಿದ್ದರೂ, ಕೆರಿಯರ್‌ನಲ್ಲಿ ಸೆಟಲ್ ಆದಮೇಲೆ ಇಬ್ಬರೂ ವಿವಾಹವಾದರು. ಆ ಬಳಿಕ ಇಬ್ಬರೂ ಟಿವಿ ಶೋಗಳಲ್ಲಿ ಜೊತೆಯಾಗಿದ್ದಾರೆ. ಸಿನಿಮಾಕ್ಕೆ ಸಂಬಂಧಿಸಿದ ಅನೇಕ ಕೆಲಸಗಳನ್ನು ಒಟ್ಟಿಗೆ ಮಾಡಿದ್ದಾರೆ. ಸುತಪ ಅವರಿಗೆ ಇರ್ಫಾನ್ ಅಭಿನಯದ ಬಗ್ಗೆ ಅಭಿಮಾನವಿದೆ. ಆದರೆ ಪತಿಯ ಆಕ್ಟಿಂಗ್‌ನಲ್ಲಿ ಲೋಪವಾದರೆ ಮೊದಲು ಕಾಣೋದು ಇವರಿಗೇ.

ಹೀಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಗಾಢವಾಗಿ ಬದುಕಿದ ದಂಪತಿಗೆ ಸಿಡಿಲಿನಂತೆ ಬಡಿದದ್ದು ಇರ್ಫಾನ್ ಅವರಿಗೆ ಬಂದ ಕ್ಯಾನ್ಸರ್.

ಅಪರೂಪದ ಕಾಯಿಲೆ ಗೆದ್ದುಬಂದ ಇರ್ಫಾನ್; ಮತ್ತೆ ಬರಲಿದ್ದಾರೆ ತೆರೆ ಮೇಲೆ 

ಸುತಪ ಹಾಗೂ ಇರ್ಫಾನ್ ಸಂಬಂಧ ಇನ್ನಷ್ಟು ಗಾಢವಾದದ್ದು ಇಲ್ಲೇ. ಸಾಮಾನ್ಯವಾಗಿ ಕ್ಯಾನ್ಸರ್ ಬಂದರೆ ಎಂಥಾ ಆತ್ಮಸ್ಥೈರ್ಯ ಇದ್ದರೂ ಕುಂದುತ್ತದೆ. ಮನಸ್ಸು ಖಿನ್ನತೆಗೊಳಗಾಗುತ್ತೆ. ಸರಿಯಾದ ಸಪೋರ್ಟ್ ಇಲ್ಲದೇ ಹೋದರೆ ರೋಗಿಗೆ ಬದುಕಿನ ಬಗ್ಗೆ ಆಸಕ್ತಿಯೇ ಹೋಗಿಬಿಡುತ್ತದೆ. ಆದರೆ ಇರ್ಫಾನ್ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾದವರು ಪತ್ನಿ ಸುತಪ. 'ನನ್ನನ್ನು ಇಪ್ಪತ್ತನಾಲ್ಕು ಗಂಟೆ ಮಗುವಿನಂತೆ ನೋಡಿಕೊಂಡವಳು ಅವಳು. ಸುತಪ ಈ ಟೈಮ್ ನಲ್ಲಿ ನನ್ನ ಜೊತೆಗೆ ಇಲ್ಲದಿರುತ್ತಿದ್ದರೆ ನಾನು ಖಂಡಿತಾ ಬದುಕುಳಿಯುತ್ತಿರಲಿಲ್ಲ. ರೋಲರ್ ಕೋಸ್ಟರ್ ನಂಥಾ ಈ ಭಯಾನಕ ಗಳಿಗೆಗಳಲ್ಲಿ ಅವಳು ನನ್ನನ್ನು ನಗಿಸಿದ್ದಾರೆ. ನಾವಿಬ್ಬರೂ ಎಲ್ಲ ನೋವನ್ನು ಮರೆತು ಹೆಚ್ಚೆಚ್ಚು ನಕ್ಕಿದ್ದೇವೆ. ಬದುಕಿನ ಆತ್ಮೀಯ ಕ್ಷಣಗಳನ್ನು ಕಳೆದಿದ್ದೇವೆ. ನ್ಯೂರೋ ಎಂಡೋಕ್ರೈನ್ ಕ್ಯಾನ್ಸರ್ ಈ ದಿನಗಳು ನನ್ನ ಬದುಕಿನಲ್ಲಿ ಅವಿಸ್ಮರಣೀಯ. ಇದು ನನಗೆ ನನ್ನನ್ನು ತೋರಿಸಿದೆ. ಪತ್ನಿಯನ್ನು ಇನ್ನಷ್ಟು ತೀವ್ರವಾಗಿ ಹತ್ತಿರವಾಗಿಸಿದೆ. ಹೀಗೆ ನನ್ನ ನೋವನ್ನು ಮರೆಸಿದ ಅವಳಿಗಾಗಿಯಾದರೂ ನಾನು ಇನ್ನೊಂದಿಷ್ಟು ವರ್ಷ ಬದುಕಬೇಕು' ಅಂದಿದ್ದಾರೆ ಇರ್ಫಾನ್.

click me!