ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದಂತೆ, ವಿಚ್ಛೇದನ ಪ್ರಕರಣಗಳೂ ಹೆಚ್ಚುತ್ತಿವೆ. ಈವರೆಗೆ ಶ್ರೀಮಂತರು, ಸಿನಿಮಾ ನಟ-ನಟಿಯರು ಹಾಗೂ ಐಟಿ ಉದ್ಯೋಗಿಗಳಿಗೆ ಸೀಮಿತವಾಗಿದ್ದ ಡಿವೋರ್ಸ್ ಭೂತ ಈಗ ಜನಸಾಮಾನ್ಯರ ಕುಟುಂಬಕ್ಕೂ ಕಾಲಿಟ್ಟಿದೆ.
ಬೆಂಗಳೂರು (ಆ.27): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದು ಕೋಟಿಗೂ ಅಧಿಕ ಜನರು ವಾಸವಾಗಿದ್ದರೂ, ಕೌಟುಂಬಿಕ ಸಂಬಂಧಗಳ ಬಾಂಧವ್ಯಗಳು ಕಡಿಮೆಯಾಗುತ್ತಿವೆ. ಈ ಹಿಂದೆ ಕೇವಲ ಶ್ರೀಮಂತ ವರ್ಗದವರಿಗೆ ಮಾತ್ರ ಸೀಮಿತವಾಗಿದ್ದ ವಿಚ್ಛೇದನ ಎಂಬ ಸುಖ ಸಂಸಾರಕ್ಕೆ ಕೊಳ್ಳಿ ಇಡುವ ಡಿವೋರ್ಸ್ ಎಂಬ ಭೂತ ಈಗ ಸಿನಿಮಾ ಹಾಗೂ ಐಟಿ ಉದ್ಯೋಗಿಗಳಿಗೆ ಹೆಚ್ಚಾಗಿ ಆವರಿಸಿಕೊಂಡಿದೆ. ಇದೀಗ ನಗರದ ಸಾಮಾನ್ಯ ವರ್ಗದ ದುಡಿಯುವ ಕುಟುಂಬಕ್ಕೂ ವಿಚ್ಛೇದನ ಗುಮ್ಮ ಕಾಲಿಟ್ಟಿದ್ದು, ವಾರ್ಷಿಕ ಡಿವೋರ್ಸ್ ಕೇಸುಗಳು ಸಂಖ್ಯೆ ಶೇ.15ಕ್ಕೆ ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ ಕಳೆದ ನಾಲ್ಕೈದು ವರ್ಷಗಳ ಹಿಂದೆ ಸುಮಾರು 80 ಲಕ್ಷದಷ್ಟಿದ್ದ ಜನಸಂಖ್ಯೆ ಈಗ 1.3 ಕೋಟಿಗೆ ಹೆಚ್ಚಳವಾಗಿದೆ ಎಂದು ಅಂದಾಜಿಸಲಾಗುತ್ತಿದೆ. ಕೋವಿಡ್ ನಂತರದ ಅವಧಿಯಲ್ಲಿ ಬೆಂಗಳೂರಿಗೆ ಉದ್ಯೋಗ ಅರಸಿ ಬರುವವರ ಸಂಖ್ಯೆಯೂ ಅಧಿಕವಾಗಿದ್ದು, ಗಂಡ-ಹೆಂಡತಿ ಉದ್ಯೋಗದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಹೀಗಾಗಿ, ಕುಟುಂಬದ ಆರ್ಥಿಕ ಸಾಮರ್ಥ್ಯ ಹೆಚ್ಚಾಗುತ್ತಿದೆಯೇ ಹೊರತು, ಕೌಟುಂಬಿಕ ಬಾಂಧವ್ಯಗಳು ತಗ್ಗುತ್ತಿವೆ. ಆದ್ದರಿಂದ ಬೆಂಗಳೂರಿನಲ್ಲಿ ವಿಚ್ಛೇದನ ಪ್ರಕರಣಗಳ ಸಂಖ್ಯೆಯೂ ಪ್ರತಿ ವರ್ಷ ಹೆಚ್ಚಾಗುತ್ತಿವೆ.
undefined
ದುಡಿದು ಸಂಪಾದಿಸಿ, ಪತಿಯಿಂದ ಮಾಸಿಕ 6 ಲಕ್ಷ ಜೀವನಾಂಶ ಕೇಳಿದ ಪತ್ನಿಗೆ ಖಡಕ್ ಸಂದೇಶ ನೀಡಿದ ಜಡ್ಜ್
ಬೆಂಗಳೂರಿನಲ್ಲಿ ವಾಸವಾಗಿರುವ ಜನರ ಜೀವನ ಶೈಲಿಗೆ ತಕ್ಕಂತೆ ಮದುವೆಯ ವೆಚ್ಚವೂ ಬದಲಾಗುತ್ತಿದೆ. ಈ ಹಿಂದೆ ಲಕ್ಷಗಳಲ್ಲಿ ಖರ್ಚಾಗುತ್ತಿದ್ದ ಮದುವೆ ವೆಚ್ಚ, ಈಗ ಕೋಟಿಗಳನ್ನು ದಾಟಿದೆ. ಆದರೆ, ಮದುವೆ ಸಂಬಂಧಗಳು ಗಟ್ಟಿಯಾಗುವ ಬದಲು, ಪೊಳ್ಳಾಗುತ್ತಿವೆ. ಈ ಹಿಂದೆ ಸಂಬಂಧದಲ್ಲಿ ಬಿರುಕು ಬಂದರೆ ಎರಡು ಮನೆಯವರು ಸೇರಿ ದಂಪತಿಯನ್ನು ಒಂದಾಗಿಸುತ್ತಿದ್ದರು. ಆದರೆ ಈಗ ಮದುವೆಯಾದ ಜೋಡಿಗಳು ಒಟ್ಟೊಟ್ಟಾಗಿ ಕೈ-ಕೈ ಹಿಡಿದುಕೊಂಡು ಹೋಗಿ ವಿಚ್ಛೇದನ ಪಡೆದುಕೊಳ್ಳುವ ಮನಸ್ಥಿತಿಗೆ ಬಂದಿದ್ದಾರೆ. ಆದ್ದರಿಂದ ಜನಸಂಖ್ಯೆ ಹೆಚ್ಚಿದಂತೆಲ್ಲಾ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಸದರಿ ವರ್ಷದಲ್ಲಿ ಬೆಂಗಳೂರಿನಲ್ಲಿ ವಿಚ್ಛೇದನ ಪ್ರಕರಣಗಳ ಸಂಖ್ಯೆ ಶೇ.15ರಷ್ಟು ಹೆಚ್ಚಾಗುತ್ತಿವೆ. ಈ ಹಿಂದೆ ಶ್ರೀಮಂತರಿಗೆ ಸೀಮಿತವಾಗಿದ್ದ ಡಿವೋರ್ಸ್ ಗುಮ್ಮ ಇದೀಗ ಸಿನಿಮಾ ಕ್ಷೇತ್ರ, ಐಟಿ ಉದ್ಯಮ ಕ್ಷೇತ್ರ ಹಾಗೂ ಜನ ಸಾಮಾನ್ಯರ ವರ್ಗಕ್ಕೂ ಕಾಲಿಟ್ಟಿದೆ.
ದುಡಿಯುವ ವರ್ಗದಲ್ಲಿ ಹೆಚ್ಚಳ: ಇನ್ನು ಬೆಂಗಳೂರಿನಲ್ಲಿ ಮಧ್ಯಮ, ಕೆಳ ಮಧ್ಯಮ ಹಾಗೂ ಬಡತನ ವರ್ಗದ ಕುಟುಂಬಗಳಲ್ಲಿ ಒಬ್ಬ ವ್ಯಕ್ತಿ ದುಡಿದು, ಮನೆ ಮಂದಿಯೆಲ್ಲಾ ಕುಳಿತು ತಿನ್ನಲು ಸಾಧ್ಯವೇ ಇಲ್ಲ. ಹೀಗಾಗಿ, ಪತಿ ಪತ್ನಿ ಇಬ್ಬರೂ ದುಡಿಮೆಯಲ್ಲಿ ತೊಡಗುತ್ತಾರೆ. ಆದ್ದರಿಂದ ಇಲ್ಲಿ ದುಡಿಯುವ ಪತಿ ಪತ್ನಿ ಇಬ್ಬರೂ ಆರ್ಥಿಕವಾಗಿ ಸಬಲರಾಗುತ್ತಿದ್ದಂತೆ ಕುಟುಂಬದ ಸಣ್ಣ ವಿಚಾರಕ್ಕೂ ಇಬ್ಬರೂ ತಮ್ಮದೇ ಮೇಲೆಂಬ ಭಾವನೆಗೆ ಬರುತ್ತಾರೆ. ಜೊತೆಗೆ, ಸೋತು ನಡೆದುಕೊಳ್ಳುವ ಭಾವನೆಯನ್ನು ಮೂಟೆ ಕಟ್ಟಿ ಮನೆಯಾಚೆ ಬೀಸಾಡುತ್ತಿದ್ದಾರೆ. ಇದಕ್ಕೆ ಕಾರಣ ಹೆಣ್ಣು ಮಕ್ಕಳು ಕೂಡ ಗಂಡಸಿಗೆ ಸರಿ ಸಮನಾಗಿ ಕೆಲಸ ಮಾಡುತ್ತಿರುವುದರಿಂದ, ಹಿಳೆಯರು ಕೂಡ ಡಿವೋರ್ಸ್ ಬೇಕು ಎಂದು ಯಾವುದೇ ಹಿಂಜರಿಕೆ ಇಲ್ಲದೇ ನ್ಯಾಯಾಲಯದ ಮುಂದೆ ಹೇಳಿಕೊಳ್ಳುತ್ತಿದ್ದಾರೆ. ಒಂದೆಡೆ, ಇದು ಮಹಿಳಾ ಸಬಲೀಕರಣ ಅಗಿದೆ ಎಂದು ಸಂತಸ ಪಡಬೇಕೋ ಅಥವಾ ಭಾರತೀಯ ಕೌಟುಂಬಿಕ ವ್ಯವಸ್ಥೆಗೆ ಧಕ್ಕೆ ಬರುತ್ತಿದೆ ಎಂದು ಆತಂಕ ಪಡಬೇಕೋ ತಿಳಿಯುತ್ತಿಲ್ಲ. ಅತೀ ಸಣ್ಣ ಪುಟ್ಟ ಕಾರಣಗಳಿಗೆ ವಿಚ್ಛೇದನಗಳು ಆಗುತ್ತಿದ್ದು, ವಾರ್ಷಿಕ 3,000ಕ್ಕೂ ಹೆಚ್ಚು ಡಿವೋರ್ಸ್ ಪ್ರಕರಣಗಳು ವರದಿಯಾಗುತ್ತಿವೆ ಎಂದು ಹೇಳಲಾಗುತ್ತಿದೆ.
ಕೇವಲ 43 ದಿನ ಜೊತೆಗಿದ್ದ ವೈದ್ಯ ದಂಪತಿಗೆ 22 ವರ್ಷದ ಬಳಿಕ ವಿಚ್ಛೇದನ ನೀಡಿದ ಸುಪ್ರೀಂಕೋರ್ಟ್
ಇನ್ನು ದುಡಿಯುವ ವರ್ಗದ ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆ, ಕೌಟುಂಬಿಕ ಮೌಲ್ಯ ಕುಸಿತ, ಪ್ರೇಮ ವಿವಾಹಗಳಲ್ಲಿ ಅನ್ಯೋನ್ಯತೆ ಕೊರತೆ, ಅನೈತಿಕ ಸಂಬಂಧ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ಕಲಹ, ಹಣ ಹಾಗೂ ಬುದ್ಧಿವಂತಿಕೆಯ ಅಹಂ, ಆರ್ಥಿಕ ಸ್ವಾವಲಂಬನೆ ಮುಂದಾದವುಗಳು ವಿಚ್ಛೇದನಕ್ಕೆ ನೇರ ಕಾರಣಗಳಾಗಿವೆ. ಸಂಬಂಧದಲ್ಲಿ ಹೊಂದಾಣಿಕೆ ಸಮಸ್ಯೆಯೂ ಹೆಚ್ಛಾಗುತ್ತಿದ್ದು, ದಾಂಪತ್ಯದಲ್ಲಿ ಬಿರುಕು ಮೂಡುವುದರಿಂದ ಮಾನಸಿಕ ಕಾಯಿಲೆಗೆ ಒಳಗಾಗುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಕೌಟುಂಬಿಕೆ ಸಮಸ್ಯೆ ಪರಿಹಾರಕ್ಕೆ ಸಲಹಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದರೂ, ಜನರು ಮಾತ್ರ ಇಂತಹ ಸಲಹಾ ಕೇಂದ್ರಗಳಿಗೆ ಹೋಗದೇ ನೇರವಾಗಿ ವಿಚ್ಛೇದನ ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ. ಇನ್ನು ಮುಂದಾದರೂ ದಾಂಪತ್ಯ ಕೊನೆಗೊಳಿಸುವ ವಿಚ್ಛೇದನ ಪಡೆಯಲು ಕೋರ್ಟ್‌ಗೆ ಹೋಗುವ ಮುನ್ನ ಸಾವಧಾನದಿಂದ ಯೋಚಿಸಿ ಸಂಬಂಧಗಳನ್ನು ಉಳಿಸಿಕೊಳ್ಳುವುದು ಉತ್ತಮ ಎಂದು ಮನೋವೈದ್ಯರು ಸಲಹೆ ನೀಡುತ್ತಾರೆ.