ಪ್ರಾಣಿಗಳ ಸೇವೆಯೇ ದೇವರ ಸೇವೆ ಎಂದು ತಮ್ಮ ಪ್ರಾಣಿ ಪ್ರೇಮ ಹಂಚಿಕೊಂಡ ಮಧುಮಗ, ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕ ಅನಂತ್ ಅಂಬಾನಿಯ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.
ರಿಲಯನ್ಸ್ ಇಂಡಸ್ಟ್ರೀಸ್‌ನ ನಿರ್ದೇಶಕ ಅನಂತ್ ಅಂಬಾನಿ ಅವರು ವಿಶ್ವದ ಅತಿದೊಡ್ಡ ಮೃಗಾಲಯವನ್ನು ಅಭಿವೃದ್ಧಿಪಡಿಸುವ ಕನಸಿನ ಯೋಜನೆ ಮತ್ತು ಗುಜರಾತ್‌ನ ಜಾಮ್‌ನಗರದಲ್ಲಿ ಪ್ರಾಣಿ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರ ಸ್ಥಾಪಿಸುವ ವಿಷಯವಾಗಿ ಮಾತನಾಡುವಾಗ ತಮ್ಮ ಪ್ರಾಣಿಪ್ರೇಮದ ಬಗ್ಗೆ ಹೇಳಿದರು. ಇದೀಗ ಅವರ ಪೂರ್ವ ವಿವಾಹ ಸಮಾರಂಭಕ್ಕೆ ಒಂದೆರಡು ದಿನಗಳಿರುವಾಗ ಈ ಮಾತುಗಳು ವೈರಲ್ ಆಗಿವೆ.
ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರಿಲಯನ್ಸ್ ಫೌಂಡೇಶನ್ ಫೆಬ್ರವರಿ 26 ರಂದು ಭಾರತ ಮತ್ತು ವಿದೇಶಗಳಲ್ಲಿ ಗಾಯಗೊಂಡ, ಕಡೆಗಣನೆಗೆ ಒಳಗಾದ ಮತ್ತು ಬೆದರಿಕೆಗೆ ಒಳಗಾದ ಪ್ರಾಣಿಗಳ ರಕ್ಷಣೆ, ಚಿಕಿತ್ಸೆ, ಆರೈಕೆ ಮತ್ತು ಪುನರ್ವಸತಿಗೆ ಒತ್ತು ನೀಡುವ ಉಪಕ್ರಮವಾದ ವಂತರಾ (ಸ್ಟಾರ್ ಆಫ್ ದಿ ಫಾರೆಸ್ಟ್) ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಿತು.
ಗುಜರಾತ್‌ನ ರಿಲಯನ್ಸ್‌ನ ಜಾಮ್‌ನಗರ ರಿಫೈನರಿ ಕಾಂಪ್ಲೆಕ್ಸ್‌ನ ಗ್ರೀನ್ ಬೆಲ್ಟ್‌ನೊಳಗೆ 3,000 ಎಕರೆಗಳಷ್ಟು ಪ್ರದೇಶದಲ್ಲಿ ಈ ಯೋಜನೆ ಕಾರ್ಯ ನಿರ್ವಹಿಸುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅನಂತ್ ಅಂಬಾನಿ ತಮ್ಮ ಕುಟುಂಬದ ಪ್ರಾಣಿಗಳ ಮೇಲಿನ ಪ್ರೀತಿಯ ಬಗ್ಗೆ ಹೇಳಿದ್ದಾರೆ. ಹೊಸ ಉಪಕ್ರಮಕ್ಕೆ ತಮ್ಮ ಪೋಷಕರೇ ಪ್ರಾಥಮಿಕ ಸ್ಫೂರ್ತಿ ಎಂದು ಉಲ್ಲೇಖಿಸಿದ್ದಾರೆ. ಇದೀಗ ಅವರು ತಮ್ಮ ಪ್ರಾಣಿಪ್ರೀತಿಯ ಬಗ್ಗೆ ಮಾತನಾಡಿದ ವಿಡಿಯೋ ವೈರಲ್ ಆಗಿದೆ.
'ನನಗೆ ಚಿಕ್ಕ ವಯಸ್ಸಿನಲ್ಲೇ ಉತ್ಸಾಹವಾಗಿ ಪ್ರಾರಂಭವಾದದ್ದು ಈಗ ವಂತರಾ ಮತ್ತು ನಮ್ಮ ಅದ್ಭುತ ಮತ್ತು ಬದ್ಧತೆಯ ತಂಡದೊಂದಿಗೆ ಮಿಷನ್ ಆಗಿ ಮಾರ್ಪಟ್ಟಿದೆ. ಪ್ರಾಣಿಗಳು ದೇವರ ರೂಪ. ನಮಗೆ ನೇರವಾಗಿ ದೇವರನ್ನು ನೋಡಲಾಗುವುದಿಲ್ಲ. ಆದರೆ ಪ್ರಾಣಿಗಳ ಸೇವೆಯೇ ನನಗೆ ದೇವರ ಸೇವೆಯಾಗಿದೆ. ಇದನ್ನು ನಾನು ಹೃದಯದಿಂದ ಮಾಡುತ್ತೇನೆ. ಇದಕ್ಕೂ ನನ್ನ ಬಿಸ್ನೆಸ್‌ಗೂ ಯಾವುದೇ ಸಂಬಂಧವಿಲ್ಲ. ನನಗೆ ಅಮ್ಮ ಸಣ್ಣವನಿರುವಾಗಲೇ ಪ್ರಾಣಿಗಳನ್ನು ಹೇಗೆ ಪ್ರೀತಿಸಬೇಕು, ಹೇಗೆ ಪೋಷಿಸಬೇಕು ಎಂದು ಹೇಳಿಕೊಟ್ಟಿದ್ದಾರೆ' ಎಂದಿದ್ದಾರೆ.
ಅವರ ಈ ಮಾತುಗಳು ನೆಟ್ಟಿಗರ ಹೃದಯ ಗೆಲ್ಲುತ್ತಿವೆ.
ಅನಂತ್ ಅಂಬಾನಿ ತಮ್ಮ ಆರಂಭಿಕ ವರ್ಷಗಳಿಂದಲೂ ಪ್ರಾಣಿಗಳ ಕಲ್ಯಾಣಕ್ಕಾಗಿ ಆಳವಾದ ಉತ್ಸಾಹವನ್ನು ಪ್ರದರ್ಶಿಸಿದ್ದಾರೆ. ಪ್ರಾಣಿಗಳನ್ನು ರಕ್ಷಿಸುವುದು, ಆರೋಗ್ಯ ರಕ್ಷಣೆ, ಪುನರ್ವಸತಿ ಮತ್ತು ಸಂರಕ್ಷಿಸುವ ಗುರಿಯನ್ನು ಹೊಂದಿರುವ ವಿವಿಧ ಉಪಕ್ರಮಗಳಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ತಮ್ಮ ತಂದೆ ಮುಖೇಶ್ ಅಂಬಾನಿ ದೊಡ್ಡ ವನ್ಯಜೀವಿ ಪ್ರೇಮಿ ಎಂದಿರುವ ಅನಂತ್, ಅಂಬಾನಿ ಕುಟುಂಬ ತಮ್ಮ ರಜಾದಿನಗಳಿಗಾಗಿ ಆಫ್ರಿಕಾ, ರಣಥಂಬೋರ್ ಮತ್ತು ಕಜಿರಂಗದಂತಹ ಸ್ಥಳಗಳಿಗೆ ಹೋಗುತ್ತಿದ್ದುದನ್ನು ನೆನೆಸಿಕೊಂಡಿದ್ದಾರೆ.
ವಂತರಾ ಯೋಜನೆ
ಗುಜರಾತ್‌ನ ಜಾಮ್ನಗರದಲ್ಲಿ ಆರಂಭಿಸಿರುವ ವಂತರಾ ಪ್ರಾಣಿ ಸಂಗ್ರಹಾಲಯವು- ಪ್ರಾಣಿ ರಕ್ಷಣಾ ಕೇಂದ್ರವು 200ಕ್ಕೂ ಹೆಚ್ಚು ಆನೆಗಳನ್ನು ಹೊಂದಿದೆ. ಮೃಗಾಲಯವು 100 ಕ್ಕೂ ಹೆಚ್ಚು ಜಾತಿಯ ಪ್ರಾಣಿಗಳನ್ನು ಹೊಂದಿದೆ ಮತ್ತು ಅದನ್ನು ನಿರ್ವಹಿಸಲು 3,000 ಜನರ ಸಮರ್ಪಿತ ತಂಡವನ್ನು ಹೊಂದಿದೆ.