ಅಂಗೈಯಲ್ಲೇ ಜಗತ್ತು ತೋರಿಸೋ ಸಾಧನದ ಬಗ್ಗೆ ಹುಷಾರಾಗಿರಿ

By Suvarna News  |  First Published Feb 6, 2020, 3:53 PM IST

ತನ್ನದಲ್ಲದ ತಪ್ಪಿಗೆ ನಡೆದಿದ್ದನ್ನು ನೆನೆದು ಬೇಸರಗೊಂಡು ಮನೆಗೆ ಬಂದು ಸೋಫಾಗೆ ಒರಗಿದ್ದನಷ್ಟೆ; ಆಗ ಅವನಿಗೆ ತನ್ನ ಗೆಳೆಯ ಫೋನ್‌ ಮಾಡಿ, ನೀನಿಂಥ ದುಷ್ಕೃತ್ಯ ಮಾಡಿಕೊಂಡಿದ್ದಿಯಾ.. ಟಿವಿ ನೋಡು ಎನ್ನುತ್ತಾನೆ. ತಕ್ಷಣ ಟಿವಿ ನೋಡಿದ ಆತನಿಗೆ ಶಾಕ್‌ ಕಾದಿತ್ತು. ಮಹಿಳೆಗೆ ಅನುಚಿತ ವರ್ತನೆ ಮಾಡಿದ ವ್ಯಕ್ತಿಗೆ ಥಳಿಸಿದ ವೀರ ವನಿತೆ ಮತ್ತು ಬಸ್ಸಿನಲ್ಲಿ ನಡೆದಿದ್ದ ಘಟನೆ ದೃಶ್ಯಾವಳಿ ಎಕ್ಸಕ್ಲೂಸಿವ್‌ ವರದಿ ಬಿತ್ತರವಾಗುತ್ತಿತ್ತು.


ಮಂಜುಳಾ ಬಸವರಾಜ ಚಿಲ್ಕರಾಗಿ

ರಥಬೀದಿಯಲ್ಲಿ ತೇರೆಳೆಯುತ್ತಿದ್ದರೆ ಆರತಿ ತಟ್ಟೆಯಲ್ಲಿ ದೀಪಗಳು ಪ್ರಜ್ವಲಿಸುತ್ತಿದ್ದವು. ಹೂವು, ಹಣ್ಣು ಸಮರ್ಪಿಸಿ ನಮಸ್ಕರಿಸಿ ಕೈಮುಗಿಯುತ್ತಿದ್ದರು. ಇಂದು ಪರಿಸ್ಥಿತಿ ಬದಲಾಗಿದೆ. ಕೈಮುಗಿಯುತ್ತಿದ್ದ ಕೈಗಳಲ್ಲಿ ಮೊಬೈಲ್‌ ಆವರಿಸಿಬಿಟ್ಟಿವೆ. ನಿಂತಲ್ಲಿ, ಕುಂತಲ್ಲಿ ಈ ಮೊಬೈಲ್‌ ನ ಬಳಕೆ ಅತಿಯಾಗಿಬಿಟ್ಟಿದೆ. ಅದರಲ್ಲಿ ಇತ್ತೀಚೆಗೆ ಬಂದಿರುವ ಫೇಸ್‌ಬುಕ್‌ ಲೈವ್‌ ಎಂಬ ಗೀಳು. ಅದು ದೇವಸ್ಥಾನವೇ ಆಗಿರಲಿ, ರಸ್ತೆಯೇ ಆಗಿರಲಿ. ಇದಕ್ಕೆ ವಯಸ್ಸಿನ ಹಂಗಿಲ್ಲ, ಗಂಡು ಹೆಣ್ಣೆಂಬ ವ್ಯತ್ಯಾಸವಿಲ್ಲ. ನಮಗೆ ಅನುಕೂಲವಾಗಲಿ ಎಂಬ ಧೇಯೋದ್ದೇಶದಿಂದ ನಾವು ಕಂಡುಕೊಂಡಂತಹ ತಾಂತ್ರಿಕತೆಯನ್ನು ನಾವು ಸರಿಯಾಗಿ ಉಪಯೋಗಿಸದೆ ನಮಗೆ ನಾವೇ ಅಪಾಯವನ್ನುಂಟು ಮಾಡಿಕೊಂಡು ಬುದ್ಧಿಹೀನರಾಗಿದ್ದೇವೆ.

Latest Videos

undefined

‘ಪಕ್ಕೆಲುಬು’ ವಿಡಿಯೋ ಎಫೆಕ್ಟ್: ಶಿಕ್ಷಕರ ಮೊಬೈಲ್‌ ಬಳಕೆಗೆ ನಿಷೇಧ!

ಅಪಘಾತಕ್ಕೆ ಸಿಲುಕಿ ಪ್ರಾಣ ಬಿಡುತ್ತಿದ್ದರೂ ಅವನನ್ನು ಕಾಪಾಡುವ ಯೋಚನೆ ಮಾಡದೇ ಮೊಬೈಲ್‌ನಲ್ಲಿ ಸೆರೆಹಿಡಿಯುವ ಅಮಾನುಷ ಅತಿರೇಕತನ. ಇಂತಹ ಅತಿರೇಕತನ ಎಂಥ ಅನಾಹುತ ಸೃಷ್ಟಿಸಬಲ್ಲದು ಎಂಬುದರ ಅರಿವು ಗೀಳಿಗರ ಸಮುದಾಯದ ಬುದ್ಧಿಮತ್ತೆಗೆ ಪ್ರಾಪ್ತಿಯಾಗುವುದಿಲ್ಲ. ಫೇಸ್‌ಬುಕ್‌ನಲ್ಲಿ ನನ್ನ ಕಣ್ಣಿಗೆ ಬಿದ್ದ ವಿಡಿಯೋ ಇದೆಲ್ಲವನ್ನು ಬರೆಯಲು ಪ್ರೇರೇಪಿಸಿದ್ದು. ಅಚಾನಕ್‌ ನಡೆದ ಘಟನೆಗಳನ್ನು ಚಿತ್ರೀಕರಿಸಿ ವೈರಲ್‌ ಮಾಡುವ ಮುನ್ನ ಎಚ್ಚರಿಕೆ ವಹಿಸದಿದ್ದರೆ ಏನಾಗುತ್ತದೆ ಎಂಬುದಕ್ಕೆ ಇದೊಂದು ತಾಜಾ ನಿದರ್ಶನ.

ಬೆಂಗಳೂರು ನಗರದ ಸಿಟಿ ಬಸ್‌ನಲ್ಲಿ ಮಹಿಳೆಯರಿಗೆ ಮೀಸಲಲ್ಲದ ಸೀಟಿನಲ್ಲಿ ಒಬ್ಬ ಯುವಕ ಕುಳಿತಿದ್ದ. ಪಕ್ಕದಲ್ಲಿ ಮಧ್ಯವಯಸ್ಸಿನ ಹೆಂಗಸಿದ್ದಳು. ಮುಂದೊಂದು ನಿಲ್ದಾಣದಿಂದ ಹಲವರು ಬಸ್‌ ಹತ್ತಿದರು. ಬಸ್‌ ಜನಜಂಗುಳಿಯಿಂದ ಇದ್ದ ಕಾರಣ, ಯುವತಿಯೊಬ್ಬಳು ಯುವಕನ ಪಕ್ಕದಲ್ಲಿ ನಿಂತಿದ್ದಳು. ಬಸ್‌ ತಿರುವುಗಳ ಸಹಜ ಹೋಯ್ದಾಟದಲ್ಲಿ ಎರಡು ಬಾರಿ ಅವಳ ಮಗ್ಗುಲಿಗೆ ತಾಕಿದ್ದನಷ್ಟೆ. ಕ್ಯಾತೆ ಆರಂಭಿಸಿದ ಅವಳು ಮೈಮೇಲೆ ಬಿದ್ದು ತೊಂದರೆ ಕೊಡುತ್ತಿದ್ದಾನೆ ಎಂದು ಹುಯಿಲೆಬ್ಬಿಸಿದಳು. ತಪ್ಪು ಮಾಡಿಲ್ಲವೆಂದರೂ ಕೇಳದ ಅವಳು ಕಪಾಳಮೋಕ್ಷ ಮಾಡಿಬಿಟ್ಟಳು. ಕೊನೆಗೆ ಎಲ್ಲರೂ ಅವನನ್ನು ಬಸ್‌ನಿಂದ ಆಚೆ ತಳ್ಳಿದರು.

ಕನ್ಫ್ಯೂಷನ್ನೇ ಜಾಸ್ತಿ, ಸೊಲ್ಯೂಷನ್ನು ನಾಸ್ತಿ;ಗರ್ಲ್ ಫ್ರೆಂಡಾ, ಬೆಸ್ಟ್‌ ಫ್ರೆಂಡಾ!

ತನ್ನದಲ್ಲದ ತಪ್ಪಿಗೆ ನಡೆದಿದ್ದನ್ನು ನೆನೆದು ಬೇಸರಗೊಂಡು ಮನೆಗೆ ಬಂದು ಸೋಫಾಗೆ ಒರಗಿದ್ದನಷ್ಟೆ; ಆಗ ಅವನಿಗೆ ತನ್ನ ಗೆಳೆಯ ಫೋನ್‌ ಮಾಡಿ, ನೀನಿಂಥ ದುಷ್ಕೃತ್ಯ ಮಾಡಿಕೊಂಡಿದ್ದಿಯಾ.. ಟಿವಿ ನೋಡು ಎನ್ನುತ್ತಾನೆ. ತಕ್ಷಣ ಟಿವಿ ನೋಡಿದ ಆತನಿಗೆ ಶಾಕ್‌ ಕಾದಿತ್ತು. ಮಹಿಳೆಗೆ ಅನುಚಿತ ವರ್ತನೆ ಮಾಡಿದ ವ್ಯಕ್ತಿಗೆ ಥಳಿಸಿದ ವೀರ ವನಿತೆ ಮತ್ತು ಬಸ್ಸಿನಲ್ಲಿ ನಡೆದಿದ್ದ ಘಟನೆ ದೃಶ್ಯಾವಳಿ ಎಕ್ಸಕ್ಲೂಸಿವ್‌ ವರದಿ ಬಿತ್ತರವಾಗುತ್ತಿತ್ತು. ಬಸ್ಸಿನಲ್ಲಿದ್ದ ವ್ಯಕ್ತಿಯೊಬ್ಬ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸುದ್ದಿವಾಹಿನಿಗೆ ನೀಡಿದ್ದ. ಹಿಂದು ಮುಂದು ನೋಡದೆ ಯುವಕನ ಮಾನ ಮೂರು ಕಾಸಿಗೆ ಹರಾಜಾಯ್ತು. ಯುದ್ದ ಗೆದ್ದ ಸೇನಾನಿಯಂತೆ ಯುವತಿಗೆ ಸನ್ಮಾನ, ಬಿರುದು, ಪ್ರಶಸ್ತಿ, ಹಣ ಹರಿದುಬಂತು.

ಟಿವಿಯಲ್ಲಿ ಬಂದಿದ್ದರಿಂದ ನಮ್ಮ ಕಂಪನಿ ಮರ್ಯಾದೆ ಹೋಯ್ತು ಎಂದು ಕೆಲಸದಿಂದ ಆ ಯುವಕನನ್ನು ವಜಾ ಮಾಡಲಾಯಿತು. ಅವನಿಗೆ ಊರಿಗೆ ಹೋಗಲು ಮರ್ಯಾದೆ ಇಲ್ಲವಾಯಿತು. ತಾನು ಮಾಡಿರದ ತಪ್ಪಿಗೆ, ಯಾರದ್ದೋ ಮೂರ್ಖತನ ಕೊನೆಗೆ ಅವನನ್ನು ಬಲಿ ತೆಗೆದುಕೊಂಡಿತು. ಮನನೊಂದು ಆತ್ಮಹತ್ಯೆ ಮಾಡಿಕೊಂಡ.

ಇದೊಂದು ಅಚಾತುರ್ಯವೇನಲ್ಲ. ಇಂತಹ ಘಟನೆಗಳು ನಿತ್ಯವೂ ನಮ್ಮ ಸುತ್ತ ನಡೆಯುತ್ತಲೇ ಇವೆ. ಮೋಜು ಎಂದೆನಿಸುವ ಸಂಗತಿಗಳು ಇನ್ನೊಬ್ಬರ ಜೀವನ ಕಸಿಯುತ್ತಿವೆ. ಬದುಕುವ ಹಕ್ಕುಗಳ ಹರಣವಾಗುತ್ತಿದೆ. ಮೊಬೈಲ್‌ ಗೀಳು ಇನ್ನೊಬ್ಬರಿಗೆ ಗೋಳಾಗುತ್ತಿವೆ. ಸಂದರ್ಭ ಹಾಗೂ ಸಮಯೋಚಿತ ಬಳಸುವ ಅನಿವಾರ್ಯತೆ ಎದುರಾಗಿದೆ. ಈ ಮೊಬೈಲ್‌ ಫೋನ್‌ ಬಂದಾಗಿನಿಂದ ನಮ್ಮ ಯುವ ಜನಾಂಗದ ಜೀವನ ಶೈಲಿಯೇ ಬದಲಾಗಿದೆ. ಫೇಸಬುಕ್‌ ಕೇವಲ ಒಬ್ಬರನ್ನು ಗುರಿಯಾಗಿಸಿ ಅವಹೇಳನವಾಗಿ ತೆಗಳಿ ಖುಷಿಪಡುವ ಹೀನ ಮನಸ್ಸುಳ್ಳವರ ತಾಣವಾಗಿ ಮಾರ್ಪಟ್ಟಿದೆ.

ಇತಿಹಾಸ ಸೃಷ್ಟಿಸಿದ ‘ಕೆಂಪುಕೋಟೆ’: ಮಂಗಳೂರು ವಿವಿ ಕಾಲೇಜಿಗೆ 150 ವರ್ಷದ ಸಂಭ್ರಮ!

ಇದು ನಮ್ಮ ಮಾನವ ಜನ್ಮದ ಮಾನವತ್ವವನ್ನು ಹಾಳು ಮಾಡುವುದರ ಜೊತೆಗೆ ನಮ್ಮ ಮುಂದಿನ ಪೀಳಿಗೆಗೆ ವರ್ಗಾವಣೆಯಾಗುವ ಮಾನವೀಯ ಮೌಲ್ಯಗಳು ನಶಿಸಿ ಹೋಗುವಂತೆ ಮಾಡುತ್ತಿರುವುದರಲ್ಲಿ ಸಂಶಯವೇ ಇಲ್ಲ. ಆದ್ದರಿಂದ ಬುದ್ದಿವಂತ ಹಾಗೂ ಎಲ್ಲ ರೀತಿಯ ಜ್ಞಾನವನ್ನು ಹೊಂದಿರುವ ನಾವು ಸಾಮಾಜಿಕ ಜಾಲತಾಣವಾಗಲಿ ಅಥವಾ ಈ ಇಂಟರ್ನೆಟ್‌ ಎಂಬ ಮಾಯಾಪ್ರಪಂಚವನ್ನಾಗಲಿ ನಮ್ಮ ಸುತ್ತಮುತ್ತಲಿನ ಯಾವುದೇ ಜನರಿಗೆ ತೊಂದರೆ ಮಾಡದೆ, ಪೇಚಿಗೆ ಸಿಲುಕಿಸುವಂತೆ ಬಳಕೆ ಮಾಡದೆ ನಮ್ಮೆಲ್ಲರ ಉನ್ನತಿ ಹಾಗೂ ಒಳತಿಗಾಗಿ ಬಳಕೆ ಮಾಡಿದರೆ ನಮಗೆಲ್ಲಾ ಹಿತ. ನಾವು ಬದುಕೋಣ ಇನ್ನೊಬ್ಬರನ್ನು ಬದುಕಲು ಬಿಡೋಣ. ಸ್ವಚ್ಛಂದ ಬದುಕಿಗಾಗಿ ಸ್ವೇಚ್ಛಾಚಾರ ತಡೆಯೋಣ.

click me!