ಉತ್ತಮ ಕೇಳುಗನಾಗಲು ಕಿವಿಯಿದ್ರೆ ಸಾಲದು, ಮನಸ್ಸೂ ಬೇಕು

By Suvarna NewsFirst Published Feb 6, 2020, 2:37 PM IST
Highlights

ಇನ್ನೊಬ್ಬರ ಮಾತನ್ನು ನಾವು ತಾಳ್ಮೆಯಿಂದ ಕೇಳಿಸಿಕೊಂಡಾಗ ಮಾತ್ರ ಅವರೂ ನಮ್ಮ ಮಾತಿಗೆ ಕಿವಿಯಾಗುತ್ತಾರೆ,ಸಂಭಾಷಣೆಗೆ ದನಿಯಾಗುತ್ತಾರೆ. ಇನ್ನೊಬ್ಬರ ಮಾತನ್ನು ಆಲಿಸಲು, ಸ್ಪಂದಿಸಲು ಕಿವಿಯಿದ್ದರೆ ಸಾಲದು, ಮನಸ್ಸೂ ಬೇಕು.

ಮಾತು ಎಷ್ಟು ಬೇಕಾದರೂ ಆಡಬಹುದು, ನಮ್ಮ ಬಳಿ ವಿಷಯವಿರಬೇಕು, ಕೇಳಲು ಎರಡು ಕಿವಿಯಿರಬೇಕಷ್ಟೆ. ಆದರೆ, ಇನ್ನೊಬ್ಬರ ಮಾತನ್ನು ಆಸಕ್ತಿಯಿಂದ ಕೇಳಿಸಿಕೊಳ್ಳುವುದಿದೆಯಲ್ಲ ಅದು ನಿಜಕ್ಕೂ ಕಷ್ಟದ ಕೆಲಸ. ಸಾಕಷ್ಟು ತಾಳ್ಮೆಯನ್ನು ಹೊಂದಿರುವ ವ್ಯಕ್ತಿ ಮಾತ್ರ ಉತ್ತಮ ಕೇಳುಗನಾಗಬಲ್ಲ. ಬೇಕಿದ್ದರೆ ನೀವೇ ಗಮನಿಸಿ ನೋಡಿ, ಅನೇಕ ಸಂದರ್ಭಗಳಲ್ಲಿ ನಮ್ಮ ಮನಸ್ಸಿನ ಮಾತನ್ನು ಪೂರ್ತಿಯಾಗಿ ಕೇಳಿಸಿಕೊಳ್ಳುವ ಒಬ್ಬ ವ್ಯಕ್ತಿ ಬೇಕೆಂದು ಅನ್ನಿಸುತ್ತದೆ. ಆದರೆ,ಕೆಲವೇ ಕೆಲವು ವ್ಯಕ್ತಿಗಳು ಮಾತ್ರ ನಮ್ಮ ಮಾತನ್ನು ಕೊನೆಯ ತನಕ ಗಮನವಿಟ್ಟು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಾರೆ.ಅಂಥವರ ಜೊತೆ ಎಷ್ಟು ಹೊತ್ತು ಬೇಕಾದರೂ ಮಾತನಾಡಬಹುದು.ಮನಸ್ಸಿಗೆ ಬೇಸರ ಮೂಡುವುದೇ ಇಲ್ಲ. ಅದೇ ಇನ್ನೂ ಕೆಲವರಿಗೆ ಇನ್ನೊಬ್ಬರ ಮಾತನ್ನು ಪೂರ್ಣವಾಗಿ ಕೇಳಿಸಿಕೊಳ್ಳುವ ವ್ಯವಧಾನವೇ ಇರುವುದಿಲ್ಲ.ಇಂಥವರ ಜೊತೆಗೆ ಜಾಸ್ತಿ ಹೊತ್ತು ಮಾತನಾಡಲು ಸಾಧ್ಯವಿಲ್ಲ.ಉತ್ತಮ ಕೇಳುಗ ಮಾತ್ರ ಉತ್ತಮ ಮಾತುಗಾರನಾಗಬಲ್ಲ. ಅಲ್ಲದೆ,ಸಂಭಾಷಣೆಗೊಂದು ಅರ್ಥ,ಮಹತ್ವವನ್ನು ಕಲ್ಪಿಸುವ ಸಾಮಥ್ರ್ಯಹೊಂದಿರುತ್ತಾನೆ.ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಕೇಳುಗನಾಗುವುದು ಅತ್ಯಗತ್ಯ. ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೇರಬೇಕೆಂದರೆ ನಿಮ್ಮಲ್ಲಿ ಕೆಳಹಂತದ ನೌಕರರ ಸಮಸ್ಯೆಗಳನ್ನು ಆಲಿಸುವ ತಾಳ್ಮೆ ಜೊತೆಗೆ ಉನ್ನತಾಧಿಕಾರಿಗಳ ಮಾತಿನ ತಾತ್ಪರ್ಯವನ್ನು ಅರಿಯುವ ಕೌಶಲ್ಯವೂ ಇರಬೇಕು. ನೀವು ಉತ್ತಮ ಕೇಳುಗನಾಗಿದ್ರೆ ಇವೆರಡೂ ಗುಣಗಳು ಸುಲಭವಾಗಿ ನಿಮ್ಮ ಕೈವಶವಾಗುತ್ತವೆ. ಹಾಗಾದ್ರೆ ಉತ್ತಮ ಕೇಳುಗನಾಗಬೇಕೆಂದ್ರೆ ಏನು ಮಾಡಬೇಕು?

Ego ದುನಿಯಾದಲ್ಲಿ ಇಂದಿನ ಸಂಬಂಧಗಳು

ಮಧ್ಯೆ ಬಾಯಿ ಹಾಕಬೇಡಿ: ನೀವು ಇನ್ನೊಬ್ಬರೊಂದಿಗೆ ಅಥವಾ ಗುಂಪಿನಲ್ಲಿ ಮಾತನಾಡುವಾಗ ಇನ್ನೊಬ್ಬರು ತಮ್ಮ ಮಾತನ್ನು ಮುಗಿಸಿದ ಬಳಿಕವೇ ಮಾತನಾಡಬೇಕು.ಅದುಬಿಟ್ಟು ಮಧ್ಯದಲ್ಲಿ ಬಾಯಿ ಹಾಕಿದರೆ ಮಾತನಾಡುತ್ತಿರುವವರಿಗೂ ಕಿರಿಕಿರಿಯಾಗುವ ಜೊತೆಗೆ ನಿಮ್ಮ ಬಗ್ಗೆ ತಪ್ಪುಭಾವನೆ ಮೂಡುವ ಸಾಧ್ಯತೆಯಿರುತ್ತದೆ. ಎಷ್ಟೋ ಜಗಳ, ವಾಗ್ವಾದಗಳಿಗೆ ಈ ವರ್ತನೆಯೇ ಕಾರಣವಾಗುತ್ತದೆ.ಆದಕಾರಣ ಅದೆಷ್ಟೇ ಮುಖ್ಯವಾದ ವಿಷಯವನ್ನು ಹಂಚಿಕೊಳ್ಳುವುದಿರಲಿ, ಇನ್ನೊಬ್ಬರು ಮಾತು ಮುಗಿಸುವ ತನಕ ತಾಳ್ಮೆಯಿಂದ ಸುಮ್ಮನಿರಿ.

ನಿಮ್ಮ ಬಗ್ಗೆಯೇ ಮಾತನಾಡಲು ಪ್ರಯತ್ನಿಸಬೇಡಿ: ಕೆಲವರಿಗೊಂದು ಅಭ್ಯಾಸವಿರುತ್ತದೆ,ಇನ್ನೊಬ್ಬರು ಏನೋ ಪ್ರಮುಖವಾದ ವಿಷಯದ ಬಗ್ಗೆ ವಿವರಿಸುತ್ತಿರುತ್ತಾರೆ. ಆದರೆ, ಇವರಿಗೆ ತನಗೆ ಸಂಬಂಧಿಸಿದ ಏನೋ ವಿಷಯವನ್ನು ಹಂಚಿಕೊಳ್ಳುವ ತವಕ. ಹೀಗಾಗಿ ಎಲ್ಲರ ಗಮನವನ್ನು ತನಗೆ ಸಂಬಂಧಿಸಿದ ವಿಷಯದತ್ತ ಸೆಳೆಯಲು ಪ್ರಯತ್ನಿಸುತ್ತಾರೆ. ಇದರಿಂದ ಮುಖ್ಯವಾದ ವಿಷಯವನ್ನು ಮಾತನಾಡುತ್ತಿರುವ ವ್ಯಕ್ತಿಗೆ ಬೇಸರವಾಗಬಹುದು. ಇಂಥ ನಡವಳಿಕೆ ಸ್ನೇಹಿತರ ಗುಂಪಿನಲ್ಲಿ ನಿಮ್ಮ ಇಮೇಜ್ ಹಾಳು ಮಾಡಬಹುದು. ಆದಕಾರಣ ಯಾರದರೂ ಮುಖ್ಯವಾದ ವಿಷಯ ಮಾತನಾಡುತ್ತಿರುವಾಗ ಅದರಲ್ಲಿ ನಿಮಗೆ ಆಸಕ್ತಿಯಿಲ್ಲದಿದ್ದರೂ ಅವರೊಂದಿಗಿನ ನಿಮ್ಮ ಬಾಂಧವ್ಯಕ್ಕೆ ಬೆಲೆ ಕೊಟ್ಟು ತಾಳ್ಮೆಯಿಂದ ಕೇಳಿಸಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು.

ಬದುಕಿನ ಇಳಿಸಂಜೆಗೆ ರೆಡಿನಾ?

ಬೇಗ ಮಾತು ಮುಗಿಸುವಂತೆ ಒತ್ತಾಯಿಸಬೇಡಿ: ನಿಮಗೆ ಅದೆಷ್ಟೇ ಮುಖ್ಯವಾದ ಕೆಲಸವಿರಲಿ, ನಿಮ್ಮದು ಅದೆಷ್ಟೇ ಬ್ಯುಸಿ ಶೆಡ್ಯೂಲ್ ಇರಲಿ, ಬೇಗ ಮಾತು ಮುಗಿಸುವಂತೆ ಇನ್ನೊಬ್ಬರ ಮೇಲೆ ಒತ್ತಡ ಹೇರುವುದನ್ನು ಒರಟು ನಡವಳಿಕೆ ಎಂದೇ ಪರಿಗಣಿಸಲಾಗುತ್ತದೆ.ನೇರವಾಗಿ ಮಾತಿನಲ್ಲಿ ಏನೂ ಹೇಳದೆ ಪದೇಪದೆ ಗಡಿಯಾರ ನೋಡಿಕೊಳ್ಳುವುದು, ಮೊಬೈಲ್ ಚೆಕ್ ಮಾಡೋದು, ಸುತ್ತಮುತ್ತಲು ಕಣ್ಣು ಹಾಯಿಸುವುದು...ಇವೆಲ್ಲವೂ ನಿಮಗೆ ಸಂಭಾಷಣೆಯಲ್ಲಿ ಆಸಕ್ತಿಯಿಲ್ಲ ಎಂಬುದನ್ನು ಸೂಚಿಸುತ್ತವೆ.ಆದಕಾರಣ ಇನ್ನು ಮುಂದೆ ಯಾರೊಂದಿಗಾದರೂ ಮಾತಿನಲ್ಲಿ ತೊಡಗಿರುವಾಗ ಅವರೆಡೆಗೆ ಪೂರ್ಣ ಗಮನ ನೀಡಲು ಪ್ರಯತ್ನಿಸಿ.

ಕಣ್ಣಿನಲ್ಲಿ ಕಣ್ಣನ್ನಿಟ್ಟು ಮಾತನಾಡಿ: ಇನ್ನೊಬ್ಬರೊಂದಿಗೆ. ಮಾತನಾಡುವಾಗ ಅವರ ಕಣ್ಣಿನಲ್ಲಿ ಕಣ್ಣನಿಟ್ಟು ಅಥವಾ ಮುಖ ನೋಡಿ ಮಾತನಾಡಬೇಕು.ಅದೇರೀತಿ ಅವರ ಮಾತನ್ನು ಕೇಳಿಸಿಕೊಳ್ಳುವಾಗಲೂ ಅವರ ಕಣ್ಣಿನೊಂದಿಗೆ ಕಣ್ಣು ಬೆರೆಸುವುದು ಅಗತ್ಯ.ಇಂಥ ವರ್ತನೆ ನಿಮ್ಮಲ್ಲಿನ ಆತ್ಮವಿಶ್ವಾಸದ ಕೊರತೆಯನ್ನು ತೋರಿಸುತ್ತದೆ.ಜೊತೆಗೆ ನಿಮಗೆ ಅವರ ಮಾತಿನಲ್ಲಿ ಆಸಕ್ತಿಯಿಲ್ಲ ಎಂಬುದನ್ನು ಕೂಡ ಬಿಂಬಿಸುತ್ತದೆ.

ನಿನ್ನನ್ನು ಸಂಭಾಳಿಸುವುದು ಇನ್ನು ನನ್ನಿಂದ ಸಾಧ್ಯವೇ ಇಲ್ಲ

ನಿಮ್ಮ ಸರದಿ ಬರುವ ತನಕ ಕಾಯಿರಿ: ಮಾತನಾಡುವಾಗ ನಿಮ್ಮ ಸರದಿ ಬರುವ ತನಕ ತಾಳ್ಮೆಯಿಂದ ಕಾಯಿರಿ.ಅದೆಷ್ಟೇ ಮುಖ್ಯವಾದ ಅಭಿಪ್ರಾಯವನ್ನು ಹಂಚಿಕೊಳ್ಳುವುದಿದ್ದರೂ ಇನ್ನೊಬ್ಬರು ತಮ್ಮ ಮಾತನ್ನು ಪೂರ್ತಿಯಾಗಿ ಮುಗಿಸಿದ ಬಳಿಕವೇ ಮಾತನಾಡಿ.

click me!