26 ವರ್ಷಗಳಿಂದ ತನ್ನ ಆರೈಕೆ ಮಾಡ್ತಿರುವ 43 ವರ್ಷದ ವ್ಯಕ್ತಿಯ ದತ್ತು ಪಡೆಯಲು ಹೈಕೋರ್ಟ್ ಮೊರೆ ಹೋದ ವೈದ್ಯ

Published : Apr 20, 2026, 12:05 PM IST
90 Year old Doctor moves HC to adopt 43 year old man

ಸಾರಾಂಶ

ಮುಂಬೈನ 90 ವರ್ಷದ ನಿವೃತ್ತ ವೈದ್ಯರೊಬ್ಬರು, ತಮ್ಮನ್ನು ದೀರ್ಘಕಾಲದಿಂದ ಪಾಲನೆ ಮಾಡುತ್ತಿದ್ದ 43 ವರ್ಷದ ವ್ಯಕ್ತಿಯನ್ನು ದತ್ತು ಪಡೆಯಲು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ವಯಸ್ಕರ ದತ್ತು ಸ್ವೀಕಾರಕ್ಕೆ ಸ್ಪಷ್ಟ ಕಾನೂನು ಇಲ್ಲದಿರುವುದರಿಂದ, ಈ ಪ್ರಕರಣವು ಹೊಸ ಕಾನೂನು ಚರ್ಚೆಗೆ ಕಾರಣವಾಗಿದೆ.

43 ವರ್ಷದ ವ್ಯಕ್ತಿಯ ದತ್ತು ಪಡೆಯಲು ಹೈಕೋರ್ಟ್ ಮೊರೆ ಹೋದ 90 ವರ್ಷದ ವೈದ್ಯರು

ಸಾಮಾನ್ಯವಾಗಿ ಪುಟ್ಟ ಮಕ್ಕಳನ್ನು ದತ್ತು ಪಡೆಯುವುದನ್ನು ನೀವು ನೋಡಿರುತ್ತೀರಿ ಕೇಳಿರುತ್ತೀರಿ. ಮಕ್ಕಳಿಲ್ಲದ ಅನೇಕ ದಂಪತಿಗಳು ಪುಟ್ಟ ಮಕ್ಕಳನ್ನು ದತ್ತು ಪಡೆಯುವುದನ್ನು ನೀವು ನೋಡಿರುತ್ತಿರಿ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ 90 ವರ್ಷದ ವೃದ್ಧರೊಬ್ಬರು ತನ್ನ ಪಾಲನೆ ಮಾಡುತ್ತಿದ್ದ 43 ವರ್ಷದ ವ್ಯಕ್ತಿಯನ್ನೇ ತನ್ನ ಮಗುವಾಗಿ ದತ್ತು ಪಡೆಯುವುದಕ್ಕೆ ನಿರ್ಧರಿಸಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ವಿಚಾರ ಈಗ ಸಾಕಷ್ಟು ಸಾಮಾಜಿಕ ಚರ್ಚೆಗೆ ಕಾರಣವಾಗಿದೆ.

ಹೌದು ಮುಂಬೈನ ಒಪೆರಾ ಹೌಸ್ ಏರಿಯಾದಲ್ಲಿ ಸ್ತ್ರೀ ರೋಗ ತಜ್ಞರು ಹಾಗೂ ಪ್ರೊಫೆಸರ್‌ ಆಗಿ ಕೆಲಸ ಮಾಡಿ ನಿವೃತ್ತರಾಗಿದ್ದ 90 ವರ್ಷದ ನಿವೃತ್ತ ವೈದ್ಯ ಬೊಮ್ಸಿ ವಾಡಿಯಾ ಎಂಬುವವರು ತಮ್ಮನ್ನು ದೀರ್ಘಕಾಲದಿಂದ ಆರೈಕೆ ಮಾಡುತ್ತಿದ್ದ ಕೇರ್ ಟೇಕರ್‌ನನ್ನೇ ತಮ್ಮ ಮಗನಾಗಿ ದತ್ತು ಪಡೆಯುವುದಕ್ಕೆ ಯೋಜಿಸಿದ್ದು, ಅದಕ್ಕಾಗಿ ಅವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ವಾಡಿಯಾ ಅವರೊಂದಿಗೆ ವಾಸಿಸುತ್ತಿರುವ ಝಾ

ಬೊಮ್ಸಿ ವಾಡಿಯಾ ಅವರು ಎರಡು ದಶಕಗಳಿಗೂ ಹೆಚ್ಚು ಕಾಲ ತಮ್ಮನ್ನು ನೋಡಿಕೊಳ್ಳುತ್ತಿರುವ 43 ವರ್ಷದ ರಾಜೀವ್ ಝಾ ಅವರನ್ನು ದತ್ತು ತೆಗೆದುಕೊಳ್ಳುವ ಬಯಕೆಗೆ ಕಾನೂನು ಮಾನ್ಯತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ತಮ್ಮ ಜೀವನದ ಈ ಹಂತದಲ್ಲಿ ತಮ್ಮ ಹೆಸರು ಮತ್ತು ಪರಂಪರೆಯನ್ನು ಮುಂದುವರಿಸಲು ಝಾ ಅವರನ್ನು ಔಪಚಾರಿಕವಾಗಿ ದತ್ತು ಪಡೆಯಲು ಬಯಸುವುದಾಗಿ ವಾಡಿಯಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಇವರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಸಂಬಂಧ ಅಭಿಪ್ರಾಯ ತಿಳಿಸುವಂತೆ ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಕೇಳಿದೆ. ಬಾಂಬೆ ಹೈಕೋರ್ಟ್‌ನ ಜಸ್ಟೀಸ್ ರವೀಂದ್ರ ಘುಗೆ ಹಾಗೂ ಅಭಯ್ ಮಂತ್ರಿ ಎಂಬುವವರು ಪ್ರಸ್ತುತ ಈ ಅರ್ಜಿಯ ವಿಚಾರಣೆ ನಡೆಸಿದ್ದಾರೆ.

ವಯಸ್ಕರ ದತ್ತು ಪ್ರಕರಣದಲ್ಲಿ ಭಾರತದ ಕಾನೂನು ಏನು ಹೇಳುತ್ತದೆ?

ಭಾರತದಲ್ಲಿ ವಯಸ್ಕರ ದತ್ತು ಸ್ವೀಕಾರಕ್ಕೆ ಸಂಬಂಧಿಸಿದಂತೆ ಭಾರತೀಯ ಕಾನೂನು ವಯಸ್ಕರ ದತ್ತು ಸ್ವೀಕಾರವನ್ನು ಸ್ಪಷ್ಟವಾಗಿ ಅನುಮತಿಸುವುದಿಲ್ಲ ಹಾಗೆಯೇ ಈ ದತ್ತು ಸ್ವೀಕಾರವನ್ನು ಸ್ಪಷ್ಟವಾಗಿ ನಿಷೇಧಿಸಿಯೂ ಇಲ್ಲ.

ವಯಸ್ಕ ದತ್ತು ಸ್ವೀಕಾರಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಶಾಸಕಾಂಗದ ನಿರ್ವಾತವಿದೆ(legislative vacuum) ಅಂದರೆ ಸ್ಪಷ್ಟವಾದ ಕಾನೂನು ಇಲ್ಲ ಎಂದು ವಾಡಿಯಾ ಅವರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಅಮೆರಿಕ, ಕೆನಡಾ, ಜಪಾನ್, ಜರ್ಮನಿ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಂತಹ ದೇಶಗಳು ವಯಸ್ಕರ ದತ್ತು ಸ್ವೀಕಾರಕ್ಕೆ ಅವಕಾಶ ನೀಡುತ್ತಿದ್ದರೂ, ಭಾರತೀಯ ಕಾನೂನುಗಳು ಹೆಚ್ಚಾಗಿ ಮಕ್ಕಳ ದತ್ತು ಸ್ವೀಕಾರದ ಮೇಲೆ ಮಾತ್ರ ಕೇಂದ್ರೀಕೃತವಾಗಿವೆ ಎಂದು ಅವರು ಹೇಳಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಭಾರತದ ಕಾನೂನು ಆಡಳಿತವು ಮಕ್ಕಳ ಕೇಂದ್ರಿತವಾಗಿದ್ದು ವಯಸ್ಕರ ದತ್ತು ಸ್ವೀಕಾರವನ್ನು ಒಳಗೊಳ್ಳುವುದಿಲ್ಲ. ಕಾನೂನಿನ ಕೊರತೆಯಿಂದಾಗಿ ಒಬ್ಬರು ದತ್ತು ಸ್ವೀಕರಿಸಲಾಗದೇ ಕಷ್ಟಪಡಬೇಕೆ ಎಂದು ಅವರು ಪ್ರಶ್ನಿಸಿದ್ದಾರೆ.

43 ವರ್ಷದ ವಯಸ್ಕ ವ್ಯಕ್ತಿಯ ದತ್ತು ಸ್ವೀಕಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಯಲ್ಲಿರುವ ಮಾಹಿತಿಯಂತೆ, ರಾಜೀವ್ ಝಾ ಅವರು 1999ರಿಂದಲೂ ಬೊಮ್ಸಿ ವಾಡಿಯಾ ಅವರೊಂದಿಗೆ ವಾಸ ಮಾಡುತ್ತಿದ್ದು, ಅಂದಿನಿಂದಲೂ ಅವರು ಬೊಮ್ಸಿ ವಾಡಿಯಾ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ವಾಡಿಯಾ ಅವರು ಅವಿವಾಹಿತರಾಗಿದ್ದು, ಅವರಿಗೆ ಮಕ್ಕಳಿಲ್ಲ, ಅವರು ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದಾರೆ. ಅವರ ಏಕೈಕ ಸಹೋದರಿ ನಿಧನರಾಗಿದ್ದು, ಸೋದರಿಗೆ ಮಕ್ಕಳಿದ್ದಾರೆ.

ಹೀಗಾಗಿ ತಮ್ಮ ಈ ಇಳಿವಯಸ್ಸಿನಲ್ಲಿ ಅವರು ಇಷ್ಟು ಕಾಲ ತಮ್ಮನ್ನು ಆರೈಕೆ ಮಾಡಿದ್ದ ರಾಜೀವ್ ಝಾ ಅವರನ್ನು ತಮ್ಮ ಸ್ವಂತ ಮಗನಂತೆ ದತ್ತು ಪಡೆಯಬೇಕು ಎಂದು ನಿರ್ಧರಿಸಿದ್ದಾರೆ ಎಂದು ಅವರ ವಕೀಲರು ನ್ಯಾಯಾಲಯಕ್ಕೆ ಹೇಳಿದ್ದಾರೆ. ಈ ವೇಳೆ ನ್ಯಾಯಾಲಯವೂ ಈ ಇಳಿವಯಸ್ಸಿನಲ್ಲಿ ದತ್ತು ಪಡೆಯುವ ಅಗತ್ಯವೇನು ಎಂದು ಪ್ರಶ್ನೆ ಮಾಡಿದೆ. ಈಗಾಗಲೇ ವಾಡಿಯಾ ಅವರು ರಾಜೀವ್ ಅವರ ಭವಿಷ್ಯವನ್ನು ಭದ್ರಡಿಸುತ್ತಿರುವಾಗ ಇದರ ಅಗತ್ಯವೇನು ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿದ ವಾಡಿಯಾ,ತಾವು ಝಾ ಅವರ ಪರವಾಗಿ ವ್ಹೀಲ್ ಬರೆದಿದ್ದೇನೆ. ಅವರಿಗೆ ಪವರ್ ಆಫ್ ಅಟರ್ನಿ ನೀಡಿದ್ದೇನೆ ಅವರಿಗೆ ಅಗತ್ಯ ದಾಖಲೆಗಳನ್ನು ನೀಡಿದ್ದೇನೆ ಎಂದು ಹೇಳಿದ್ದಾರೆ.

ಈ ವೇಳೆ ದತ್ತು ಸ್ವೀಕಾರದ ನಂತರ ಜಾ ಅವರು ಕಾನೂನಾತ್ಮಕವಾಗಿ ವಾಡಿಯಾ ಆಗಿ ಬದಲಾಗಲಿದ್ದಾರೆಯೇ ಎಂದು ನ್ಯಾಯಾಲಯ ವಾಡಿಯಾ ಅವರನ್ನು ಪ್ರಶ್ನಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ವಾಡಿಯಾ ಪರ ವಕೀಲರು ರಾಜೀವ್ ಝಾ ಅವರಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಅವರೆಲ್ಲರೂ ವಾಡಿಯಾ ಅವರ ಕುಟುಂಬವನ್ನು ಸೇರಲು ಒಪ್ಪಿದ್ದಾರೆ ಎಂದರು.

ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದೇಗೆ?

ಆಗಸ್ಟ್ 2025ರಲ್ಲಿ ವಾಡಿಯಾ ಅವರು ರಾಜೀವ್ ಝಾ ಅವರಿಗೆ ತಮ್ಮೆಲ್ಲಾ ಆಸ್ತಿಯನ್ನು ಹಸ್ತಾಂತರ ಮಾಡಿ ಅದನ್ನು ನೋಂದಣಿ ಮಾಡುವುದಕ್ಕೆ ಮುಂದಾಗಿದ್ದರು. ಆದರೆ ನೊಂದಣಿ ಅಧಿಕಾರಿ ಈ ದತ್ತು ಪ್ರಕ್ರಿಯೆಯನ್ನು ನೋಂದಣಿ ಮಾಡುವುದಕ್ಕೆ ನಿರಾಕರಿಸಿದರು. ಹೀಗಾಗಿ ವಾಡಿಯಾ ಅವರು ಈ ಪ್ರಕರಣದಲ್ಲಿ ನ್ಯಾಯಾಂಗ ಮಧ್ಯಪ್ರವೇಶ ಬಯಸಿ ಕೋರ್ಟ್ ಮೆಟ್ಟಿಲೇರಿದರು. ಅಲ್ಲದೇ ಈ ದತ್ತು ಪ್ರಕ್ರಿಯೆಯನ್ನು ನೊಂದಾಯಿಸುವಂತೆ ನೋಂದಣಿ ಅಧಿಕಾರಿಗೆ ಸೂಚನೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದರು.

ಅಲ್ಲದೇ ತಮ್ಮ ಆಯ್ಕೆಯ ವಯಸ್ಕ ವ್ಯಕ್ತಿಯನ್ನು ದತ್ತು ಪಡೆಯುವ ತಮ್ಮ ಹಕ್ಕನ್ನು ಗುರುತಿಸುವಂತೆ ಅವರು ಕೇಳಿದರು.

ವಾಡಿಯಾ ಹೊಂದಿರುವ ಆಸ್ತಿಯ ಬಗ್ಗೆ ರಾಜ್ಯದ ಕಳವಳ

ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಪರ ವಕೀಲರು ಕಳವಳ ವ್ಯಕ್ತಪಡಿಸಿದ್ದಾರೆ. ವಾಡಿಯಾ ಅವರು ಹಲವು ಆಸ್ತಿಗಳನ್ನು ಹೊಂದಿದ್ದು, ಅವರು ಅದನ್ನು ತಮ್ಮ ವ್ಹೀಲ್‌ನಲ್ಲಿ ಉಲ್ಲೇಖಿಸಿದ್ದಾರೆ. ಇಂತಹ ದತ್ತು ಪ್ರಕ್ರಿಯೆಯನ್ನು ನೋಂದಾಯಿಸುವ ಮೊದಲು ಇದರ ಬಗ್ಗೆ ಕಾನೂನಾತ್ಮಕ ಸ್ಪಷ್ಟತೆ ಅಗತ್ಯ ಎಂದು ಅವರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಾಡಿಯಾ ಪರ ವಕೀಲರು, ಅರ್ಜಿದಾರರಿಗೆ ಅವರ ಆಸ್ತಿಗಳನ್ನು ವಿಲೇವಾರಿ ಮಾಡುವ ಹಕ್ಕಿದೆ ಎಂದು ವಾದಿಸಿದರು. ಅಲ್ಲದೇ ವಾಡಿಯಾ ಅವರ ವಿಲ್ ಅನ್ನು ಕಾರ್ಯಗತಗೊಳಿಸುವ ಅವರ ಸೋದರಳಿಯನನ್ನು ಈ ಪ್ರಕರಣದಲ್ಲಿ ಸೇರಿಸಬೇಕಾಗಬಹುದು ಎಂದು ನ್ಯಾಯಾಲಯ ಸೂಚಿಸಿದೆ.

ಪಾರ್ಸಿ ಕುಟುಂಬದಲ್ಲಿ ಜನಿಸಿದರೂ, ವಾಡಿಯಾ ಅವರು ಸಾಂವಿಧಾನಿಕ ಜಾತ್ಯತೀತತೆಯನ್ನು ನಂಬುತ್ತಾರೆ ಮತ್ತು ತಮ್ಮ ಕಾನೂನುಬದ್ಧ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಬಯಸುತ್ತಾರೆ ಎಂದು ವಾದಿಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ನ್ಯಾಯಾಲಯ ನೀಡುವ ತೀರ್ಪು ಭಾರತದಲ್ಲಿ ದತ್ತು ಸ್ವೀಕಾರ ಕಾನೂನುಗಳನ್ನು ನವೀಕರಿಸುವ ಕುರಿತು ವಿಶಾಲ ಚರ್ಚೆಗಳಿಗೆ ನಾಂದಿ ಹಾಡಬಹುದು. ಜೊತೆಗೆ ಇದರ ಒಳಿತು ಕೆಡುಕುಗಳ ಬಗ್ಗೆಯೂ ಚರ್ಚಿಸಬೇಕಾಗಬಹುದು. ಏಕೆಂದರೆ ಎಲ್ಲರೂ ವಾಡಿಯಾ ತರ ಅಥವಾ ಅವರನ್ನು ಬಹಳ ಚೆನ್ನಾಗಿ ನೋಡಿಕೊಂಡಿದ್ದ ರಾಜೀವ್ ಝಾ ತರ ಇರಲು ಸಾಧ್ಯವಿಲ್ಲ, ಕೆಲವರಿಗೆ ಆಸ್ತಿ ಕೈಗೆ ಸಿಗುತ್ತಿದ್ದಂತೆ ವರಸೆ ಬದಲಾಗಬಹುದು. ಅಂತಹ ಸಂದರ್ಭಗಳಲ್ಲಿ ಈ ದತ್ತು ಪ್ರಕ್ರಿಯೆಯೇ ಮಾರಕವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಬಿಟ್‌ಕಾಯಿನ್ ಶ್ರೀಕಿ ಜೊತೆ ಲಿಂಕ್: ಶಾಸಕ ಹ್ಯಾರಿಸ್ ನಿವಾಸದ ಮೇಲೆ ಐಟಿ ದಾಳಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಏಪ್ರಿಲ್ 21 ರಿಂದ ಅವರಿಗೆ ಹಣವೇ ಹಣ, ನಾಳೆ ಈ ರಾಶಿಗೆ ಗಜಕೇಸರಿ ಯೋಗದಿಂದ ರಾಜಮನೆತನದ ಆನಂದ
ಕಾಫಿ ಡೇಟ್, ಸಿನಿಮಾ ಡೇಟ್ ಬಿಟ್ಟು ಸ್ಮಶಾನದ ಹಾದಿ ಹಿಡಿದ Gen-Z… ಇದೇನಿದು ಹೊಸ ಟ್ರೆಂಡ್