
- ನಿಹಾರಿಕಾ
ಕ್ರಿಯೇಟಿವಿಟಿಗೆ ಹೆಚ್ಚು ಒತ್ತು ಕೊಡುತ್ತಿದ್ದ ಶಾಲೆ ನಮ್ಮದು. ಪಾಠದ ಆಚೆ ಏನೇನೋ ವಿಷಯಗಳ ಬಗ್ಗೆ ಬರೆಯೋದಕ್ಕೆ, ಸೆಮಿನಾರ್ ಮಾಡೋದಕ್ಕೆ ಹೇಳ್ತಿದ್ರು. ಹಾಗೆ ಒಂದು ಸಲ ದೇಶದ ರೈತರ ಬಗ್ಗೆ ಸೆಮಿನಾರ್ ಮಾಡಬೇಕಿತ್ತು. ನಾನು ಹಿಂದಿನ ದಿನ ಪ್ರಬಂಧ ಬರೆದು ಟೇಬಲ್ ಮೇಲೆ ಇಟ್ಟು ಮಲಗಿದ್ದೆ. ರಾತ್ರಿ ಶೂಟಿಂಗ್ ಮುಗಿಸಿ ಬಂದ ಅಪ್ಪ ಅದನ್ನೆಲ್ಲ ಓದಿದ್ದಾರೆ. ಮರುದಿನ ಬೆಳಗ್ಗೆ ಆ ಪ್ರಬಂಧದ ಯಾವ ಭಾಗ ಚೆನ್ನಾಗಿದೆ, ಎಲ್ಲಿ ಸ್ವಲ್ಪ ಇಂಪ್ರೂವ್‌ಮೆಂಟ್‌ಗೆ ಅವಕಾಶ ಇದೆ, ಏನೆಲ್ಲ ಪಾಯಿಂಟ್‌ಸ್ ಸೇರಿಸಬಹುದು ಅನ್ನೋದನ್ನೆಲ್ಲ ನೋಟ್ ಮಾಡಿ ಪಕ್ಕದಲ್ಲಿಟ್ಟು ಶೂಟಿಂಗ್‌ಗೆ ಹೋಗಿದ್ದಾರೆ. ನಮ್ಮ ನಡುವೆ ಇಂಥದ್ದು ಕಾಮನ್.
ಒಬ್ಬ ಬ್ಯುಸಿ ನಟನ ಮಗಳಾಗಿದ್ರೂ, ನಂಗೆ ಅಪ್ಪ ಟೈಮ್ ಕೊಟ್ಟಿಲ್ಲ ಅಂತ ಯಾವತ್ತೂ ಅನಿಸಿದ್ದಿಲ್ಲ. ಶೂಟಿಂಗ್‌ಗಾಗಿ ಬಹಳ ಕಾಲ ವಿದೇಶಗಳಲ್ಲಿದ್ದರೂ ಪ್ರತೀ ದಿನ ನಮ್ಮ ಜೊತೆಗೆ ವೀಡಿಯೋ ಕಾಲ್ ಮೂಲಕ ಮಾತಾಡ್ತಿದ್ರು. ಸ್ಕೂಲ್ ಡೇಸ್‌ನಲ್ಲಿ ನನಗೆ ಮ್ಯಾತ್ಸ್, ಫಿಸಿಕ್ಸ್ ಅವರೇ ಹೇಳ್ಕೊಟ್ಟಿದ್ದು. ಆಗೆಲ್ಲ ಟೀಚರ್ ಥರ ಕಾಣ್ತಿದ್ದ ಅಪ್ಪ ದೊಡ್ಡವರಾಗ್ತಿದ್ದ ಹಾಗೆ ಬೆಸ್ಟ್ ಫ್ರೆಂಡ್ ಆದ್ರು. ನಾವಿಬ್ರೂ ಇವತ್ತಿಗೂ ಇನ್‌ಸ್ಟಾದಲ್ಲಿ ಚಾಟ್ ಮಾಡುತ್ತಾ ಮೀಮ್ಸ್, ಇಂಟೆರೆಸ್ಟಿಂಗ್ ಟ್ರೆಂಡ್ಸ್ , ಹೊಸ ವಿಚಾರಗಳ ಬಗ್ಗೆ ಚರ್ಚೆ ಮಾಡ್ತಾ ಇರುತ್ತೇವೆ.
ನಮ್ಮ ತಂದೆ ನನಗೂ ರೆಬೆಲ್ ಸ್ಟಾರ್:ಅಭಿಷೇಕ್ ಅಂಬರೀಶ್
ಅಪ್ಪನದು ತಣಿಯದ ಕುತೂಹಲ. ಆ ಗುಣ ನನ್ನಲ್ಲೂ ಇದೆ. ಅಪ್ಪ ಒಂದು ಕ್ಷಣವನ್ನೂ ಮಿಸ್ ಮಾಡದೇ ಹೊಸ ಹೊಸ ಸಂಗತಿಗಳನ್ನು ಕಲಿಯುತ್ತಲೇ ಇರುತ್ತಾರೆ. ಇವತ್ತಿಗೂ ಅವರೊಬ್ಬ ಜಗತ್ತಿನ ಎಲ್ಲ ವಿದ್ಯಮಾನಗಳ ಬಗ್ಗೆ ಕುತೂಹಲಿಯಾದ ಸ್ಟೂಡೆಂಟ್. ಸ್ಟೀಫನ್ ಹಾಕಿಂಗ್‌ಸ್ ಪುಸ್ತಕದಿಂದ ಬಸವಣ್ಣನವರ ವಚನಗಳವರೆಗೆ ಎಲ್ಲವನ್ನೂ ಓದುತ್ತಾರೆ. ಗ್ರಾಫಿಕ್‌ಸ್ನಲ್ಲಿ ಏನೇನೋ ಕ್ರಿಯೇಟ್ ಮಾಡುತ್ತಾರೆ. ಮೊನ್ನೆ ಸೀರಿಯಲ್‌ಗೆ ಗ್ರಾಫಿಕ್ಸ್ ಹಾವು ಸೃಷ್ಟಿಸಿದ್ರು. ಹೊಸ ಟೆಕ್ನಾಲಜಿ ಕಲಿಯುತ್ತಲೇ ಇರುತ್ತಾರೆ.
ನಮ್ಮಿಬ್ಬರ ಕುತೂಹಲಕ್ಕೆ ಸಾಕ್ಷಿ ಅನ್ನೋ ಥರದ ಒಂದು ವೀಡಿಯೋದ ತುಣುಕು ಇದೆ. ನಾವಿಬ್ಬರೂ ನಮ್ಮ ಫ್ಯಾಮಿಲಿ ಫ್ರೆಂಡ್ ಡೆಂಟಿಸ್ಟ್ ಕ್ಲಿನಿಕ್‌ಗೆ ಹೋಗಿದ್ದಾಗಿನ ವೀಡಿಯೋವದು. ಅಲ್ಲಿರುವ ಪ್ರತೀ ಉಪಕರಣವನ್ನೂ ನಾವಿಬ್ಬರೂ ತದೇಕ ಚಿತ್ತದಿಂದ ಬಹಳ ಹೊತ್ತು ಗಮನಿಸುತ್ತಿರುತ್ತೇವೆ. ಅದನ್ನೇ ಸ್ನೇಹಿತರು ವೀಡಿಯೋ ಮಾಡಿದ್ರು. ಈಗಲೂ ಅದನ್ನು ತೋರಿಸಿ ನಗುತ್ತಿರುತ್ತಾರೆ.
ಅಪ್ಪ ನಟ, ನಿರ್ದೇಶಕ, ನಿರೂಪಕ, ಮೋಟಿವೇಶನಲ್ ಸ್ಪೀಕರ್ ಎಲ್ಲವೂ. ಜಗತ್ತೆಲ್ಲ ಅವರ ಪ್ರತಿಭೆಯನ್ನು ವೀಡಿಯೋ ಮೂಲಕ ನೋಡ್ತಿದ್ರೆ, ನನಗೆ ಮನೆಯಲ್ಲೇ ರಮೇಶ್ ಓಟಿಟಿ. ಆಫೀಸ್‌ನಿಂದ ಮೂಡ್ ಕೆಡಿಸಿಕೊಂಡು ಬಂದು ಕೂತರೆ, ‘ನಾವೆಲ್ಲ ನಿನ್ನ ಜೊತೆಗಿದ್ದೇವೆ, ಖುಷಿಯಾಗಿರು’ ಅನ್ನುವ ಅಪ್ಪ ಬೆಚ್ಚನೆಯ ಸಾಂತ್ವನ. ನನ್ನ ಮದುವೆ ಮರುದಿನ ಪಾರ್ಟಿಯಲ್ಲಿ ಟೀನ್ ಹುಡುಗನಂತೆ ಉತ್ಸಾಹ ಬುಗ್ಗೆಯಾಗಿದ್ದ ಅಪ್ಪ.. ನನ್ನ ಖುಷಿಗೆ, ನೋವಿಗೆ ಸದಾ ಮಿಡಿಯುವ, ತುಡಿಯುವ ಅಪ್ಪ ಅಂದ್ರೆ ನಂಗಿಷ್ಟ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.