“One father is more than a hundred schoolmasters.” - George Herbert
- ಅಭಿಷೇಕ್ ಅಂಬರೀಶ್
ನಮ್ಮ ಮನೆಗೆ ಜನ ಬರುವುದು, ನಾನು ಶಾಲೆಗೆ ಹೋಗುತ್ತಿದ್ದಾಗ ಅಂಬರೀಶ್ ಮಗ ಎಂದು ಗುರುತಿಸುತ್ತಿದ್ದು ನೋಡಿ ನನಗೆ ಆಗಿನಿಂದಲೂ ಅಪ್ಪನ ಬಗ್ಗೆ ಕುತೂಹಲ. ಯಾಕೆಂದರೆ ಅದೆಲ್ಲವೂ ಅವರು ಗಳಿಸಿಕೊಟ್ಟ ಪ್ರೀತಿ ಮತ್ತು ಸಂಪತ್ತು. ಲಕ್ಷಾಂತರ ಜನರ ಅಭಿಮಾನ ಗಳಿಸಿರುವ, ನೂರಾರು ಚಿತ್ರಗಳಲ್ಲಿ, ವಿಭಿನ್ನ ರೀತಿಯ ಪಾತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ, ಜನರ ಪುಣ್ಯ ಸಂಪಾದಿಸಿರುವ ವ್ಯಕ್ತಿಯ ಮಗನಾಗಿ ಹುಟ್ಟಿದ್ದು ನನ್ನ ಪುಣ್ಯ. ಹೀಗಾಗಿ ಅಂಬರೀಶ್ ಅವರು ನಿಮ್ಮ ಹಾಗೆ ನನಗೂ ರೆಬೆಲ್ ಸ್ಟಾರ್.
ಚಿಕ್ಕ ವಯಸ್ಸಿನಿಂದಲೂ ಅವರಿಗೆ ನಾನು ದೊಡ್ಡ ಅಭಿಮಾನಿ. ನಿಮ್ಮ ಜತೆ ಎಷ್ಟು ಜಾಲಿಯಾಗಿ ಇರುತ್ತಿದ್ದರೋ ಮನೆಯಲ್ಲೂ ನನ್ನ ಜತೆಗೂ ಅದೇ ರೀತಿ ಇರುತ್ತಿದ್ದರು. ಟೀವಿಯಲ್ಲಿ ಬೇರೆಯವರ ಸಿನಿಮಾಗಳನ್ನು ಸುಮ್ಮನೆ ನೋಡುತ್ತಾ ಹೋಗುತ್ತಿದ್ದರು. ಅವರ ಸಿನಿಮಾ ಬಂದಾಗ ನನ್ನ ಕರೆದು, ‘ನೋಡೋ ನಿಮ್ಮ ಅಪ್ಪ ಹೆಂಗಿದ್ದಾನೆ, ಹೆಂಗೆ ಡ್ಯಾನ್‌ಸ್ ಮಾಡ್ತಾನೆ, ಹೆಂಗೆ ಫೈಟ್ ಮಾಡುತ್ತಾನೆ. ನೋಡೋ ನನಗೆ ವಯಸ್ಸಾಗಿರಬಹುದು. ಆದರೂ ನಾನು ಹೀರೋನೆ ಕಣೋ’ ಎಂದು ಸಂಭ್ರಮದಿಂದ ಹೇಳುವವರು. ಅವರ ಜರ್ನಿ ಬಗ್ಗೆ ಅವರಿಗೆ ಹೆಮ್ಮೆ ಇತ್ತು.
'ಭಾಗ್ಯವಂತರು' ಚಿತ್ರದ ಬಾನ ದಾರಿಯಲ್ಲಿ ಹಾಡಿ ಫಾದರ್ಸ್ ಡೇಗೆ ಪುನೀತ್ ವಿಶ್!
ಮನೆಯಲ್ಲಿ ಇದ್ದಾಗ ಅವರು ನನ್ನ ಜತೆಗೆ ರಾಜಕೀಯ ಯಾವತ್ತೂ ಮಾತನಾಡಿದವರಲ್ಲ. ಸಿನಿಮಾಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದರು. ಜತೆಗೆ ತುಂಬಾ ತರಲೆ ಮಾಡುವವರು. ನಮ್ಮ ಅಪ್ಪನಿಂದ ಕಲಿತಿದ್ದು ಪ್ರಾಮಾಣಿಕವಾಗಿ, ಮನಸ್ಸಿನಲ್ಲಿ ಯಾವುದೇ ದ್ವೇಷ ಇಲ್ಲದೆ, ನೇರವಂತಿಕೆ ಇದ್ದರೆ ಇರುವಷ್ಟು ದಿನ ನೆಮ್ಮದಿಯಾಗಿ ಜೀವನ ಮಾಡಬಹುದು ಅನ್ನುವುದು. ಆ ಕಾರಣಕ್ಕೆ ನಾನು ತುಂಬಾ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ, ನನ್ನ ತಂದೆಯಷ್ಟು ನೆಮ್ಮದಿಯಾಗಿ ಬದುಕಿದವರು ಇಲ್ಲ. ಹೀಗಾಗಿಯೇ ಮೈ ಫಾದರ್ ಮೈ ರಿಯಲ್ ರೆಬೆಲ್ ಸ್ಟಾರ್.