14 ವರ್ಷಗಳ ಹಿಂದೆ ಕಾಣಿಯಾಗಿದ್ದ ಬಾಲಕನೊಬ್ಬ ಈಗ ಯುವಕನಾಗಿ ಹೆತ್ತವರ ಮುಂದೆ ಕಾಣಿಸಿಕೊಂಡಿದ್ದಾರೆ. ಅತ್ತ ಇಷ್ಟು ವರ್ಷ ಸಾಕಿದ ಅಮ್ಮ- ಇತ್ತ ಹೆತ್ತವರು... ಭಾವುಕ ಕಥೆ ಇಲ್ಲಿದೆ..
ಇದು ಇಬ್ಬರು ಅಮ್ಮಂದಿರ ನಡುವಿನ ಭಾವುಕ ಘಟನೆ. ಒಂದೆಡೆ ಹೆತ್ತ ತಾಯಿ, ಇನ್ನೊಂದೆಡೆ ಸಾಕು ಅಮ್ಮ ... ಹೆತ್ತ ತಾಯಿಯ ಬಳಿ ಇದ್ದುದು 8 ವರ್ಷ, ಸಾಕಮ್ಮನ ಬಳಿ ಇದ್ದುದು 14 ವರ್ಷ... 14 ವರ್ಷಗಳ ಬಳಿಕ ಕಾಣೆಯಾದ ಮಗ ಸಿಕ್ಕ ಖುಷಿಯ ಕ್ಷಣದಲ್ಲಿ ಹೆತ್ತಮ್ಮ ಇದ್ದರೆ, 14 ವರ್ಷ ಪೋಷಣೆ ಮಾಡಿ ಶಿಕ್ಷಣ ನೀಡಿದ ನೋವಿನ ಕ್ಷಣ ಸಾಕಮ್ಮನದ್ದು... ಒಂದೆಡೆ ನಲಿವು, ಇನ್ನೊಂದೆಡೆ ನೋವು...
ಇದು ನೀರಜ್ ಎನ್ನುವ ಯುವಕನ ಕಥೆ. ಈಗ 22 ವರ್ಷದ ನೀರಜ್ 14 ವರ್ಷಗಳ ಹಿಂದೆ ಅಂದರೆ, 8 ವರ್ಷದವನಿರುವಾಗ ಮನೆಬಿಟ್ಟಿದ್ದ. ಅದೂ ಮುಂಬೈ ನೋಡುವುದಕ್ಕಾಗಿ! ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯ ಬಡೇಗಾಂವ್ ಗ್ರಾಮದ ಪುನ್ವಾಸ್ ಕನ್ನೌಜಿಯಾ ಕುಟುಂಬ ಕೆಲಸ ಅರಸಿ ಅಂದು ಮುಂಬೈಗೆ ಬಂದಿತ್ತು. ಇವರಿಗೆ ಇಬ್ಬರು ಮಕ್ಕಳು. 8 ವರ್ಷದ ನೀರಜ್ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ. ಕನಸು ಕಾಣುವ ವಯಸ್ಸದು. ಮುಂಬೈ ನಗರಿಯ ನೋಟಕ್ಕೆ ಬೆರಗಾಗಿದ್ದ ಈ ಬಾಲಕನಿಗೆ ಮುಂಬೈ ನೋಡುವ ಹಂಬಲವಾಯಿತು. ಯಾರಿಗೂ ಹೇಳದೇ ಹೊರಟೇ ಬಿಟ್ಟ. ಮನೆಯ ವಿಳಾಸ ಗೊತ್ತಿಲ್ಲ. ಅಪ್ಪ-ಅಮ್ಮನ ಹೆಸರು ಬಿಟ್ಟರೆ ಮತ್ತೇನೂ ತಿಳಿದಿಲ್ಲ. ಹೊಸ ಊರು ಅದು. ಅಲ್ಲಿ ಇಲ್ಲಿ ಅಲೆದ. ಎಲ್ಲೋ ಬಂದಾಗಿತ್ತು. ಕಣ್ಣೀರು ಇಟ್ಟರೂ ಕೇಳುವವರು ಇಲ್ಲ. ಇತ್ತ ಕಾಣೆಯಾದ ಮಗನಿಗಾಗಿ ಪಾಲಕರು ಊರೆಲ್ಲಾ ಅಲೆದರು. ಮುಂಬೈ ನಗರಿಯಲ್ಲಿ ಕಳೆದು ಹೋದವ ಸಿಗುವುದು ಅಷ್ಟು ಸುಲಭವೇ? ದೊಡ್ಡವರ ಮಕ್ಕಳಾದರೆ ಪೊಲೀಸರೂ ಕಾರ್ಯಪ್ರವೃತ್ತರಾಗುತ್ತಾರೆ, ಆದರೆ ಬಡವರ ಗತಿ?
ವಿಶ್ವದ ಸುರಕ್ಷಿತ- ಡೇಂಜರ್ ದೇಶಗಳಾವುವು? ಭಾರತಕ್ಕೆ ಶಾಕ್: ಎಲ್ಲಾ ಲೆಕ್ಕಾಚಾರ ಬುಡಮೇಲು ಮಾಡಿದ ಸಮೀಕ್ಷೆ!
ಕೊನೆಗೆ ತಮ್ಮ ಮಗ ವಾಪಸ್ ಬರುವ ಆಸೆಯನ್ನೇ ಬಿಟ್ಟುಬಿಟ್ಟರು ಹೆತ್ತವರು. ವರ್ಷಗಳು ಉರುಳಿ ಹೋದವು. ಈಗ ಮಗ ಕಾಣೆಯಾಗಿ 14 ವರ್ಷ. ಆದರೆ ದಿಢೀರ್ ಆಗಿದ್ದೇ ಬೇರೆ. ಮಗ ಸಿಕ್ಕಿಯೇ ಬಿಟ್ಟಿದ್ದಾನೆ. ಇನ್ನು ಹೆತ್ತವರ ಖುಷಿ ಹೇಳಬೇಕೆ? ಅದು ಪದಗಳಲ್ಲಿ ವರ್ಣಿಸಲಾಗದ್ದು. ಆದರೆ ಇದೇ ಖುಷಿಯ ಹಿಂದೆ ಒಂದು ನೋವಿನ ಘಟನೆಯೂ ಇದೆ. ಅದೇನೆಂದರೆ, ಈ ಬಾಲಕನನ್ನು 14ವರ್ಷಗಳವರೆಗೆ ಸಾಕಿ, ಸಲುಹಿ ಶಿಕ್ಷಣ ನೀಡಿದ ಆ ಸಾಕಮ್ಮ. ಅಷ್ಟಕ್ಕೂ ಈ ಬಾಲಕ ಸುಮಾರು ಎರಡು ತಿಂಗಳ ಕಾಲ ಅಲೆದಾಡಿದ್ದಾನೆ. ಕೊನೆಗೆ ರೈಲನ್ನು ಹತ್ತಿ ಆಂಧ್ರಪ್ರದೇಶಕ್ಕೆ ಹೋಗಿಬಿಟ್ಟಿದ್ದಾನೆ. ನೆಲ್ಲೂರು ಜಿಲ್ಲೆಯ ಗುಡೂರು ರೈಲು ನಿಲ್ದಾಣ ತಲುಪಿದ್ದಾನೆ. ಅಲ್ಲಿ ಜೋರಾಗಿ ಅಳುತ್ತಾ ಇದ್ದ ಬಾಲಕ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ. ಆತನಿಂದ ಮಾಹಿತಿ ಕಲೆ ಹಾಕಿದರೂ, ಅವನಿಗೆ ತನ್ನ ಬಗ್ಗೆ ಏನೂ ಗೊತ್ತಿರಲಿಲ್ಲ. ಆದ್ದರಿಂದ ಪೊಲೀಸರು ಇಲ್ಲಿಯ ಸ್ವಯಂಸೇವಾ ಸಂಸ್ಥೆ ಸ್ವರ್ಣ ಭಾರತ್ ಟ್ರಸ್ಟ್ ವಶಕ್ಕೆ ನೀಡಿದ್ದರು.
ಇಲ್ಲಿ ಬಾಲಕನ ದಿಕ್ಕೇ ಬದಲಾಯಿತು. ಸ್ವರ್ಣ ಭಾರತ್ ಟ್ರಸ್ಟ್ನ ವ್ಯವಸ್ಥಾಪಕರಾದ ದೀಪಾ ವೆಂಕಟ್ ಅವರು ನೀರಜ್ನನ್ನು ದತ್ತು ತೆಗೆದುಕೊಂಡು ಸಾಕಿದರು. ಟ್ರಸ್ಟ್ನ ಅಡಿಯಲ್ಲಿರುವ ಶಾಲೆಯಲ್ಲಿ ಆತನಿಗೆ ಶಿಕ್ಷಣ ನೀಡಿದರು. ಬಾಲಕ ಚತುರನಾಗಿದ್ದರಿಂದ ಪ್ಲಂಬಿಂಗ್, ಎಲೆಕ್ಟ್ರಿಕಲ್, ಚಾಲನೆ ಮತ್ತು ವಾಹನ ದುರಸ್ತಿ ಇತ್ಯಾದಿ ಕೆಲಸಗಳನ್ನೂ ಕಲಿಸಲಾಯಿತು. ಎಲ್ಲದರಲ್ಲಿಯೂ ಬಾಲಕ ಎಕ್ಸ್ಪರ್ಟ್ ಆದ. ಸಾಕಮ್ಮಾ ದೀಪಾ ಅವರ ಮಡಿಲಲ್ಲಿಯೇ ಬೆಳೆದ ಬಾಲಕ. ಕೊನೆಗೆ ಈಗ ಯುವಕನಾಗಿರುವ ಆತನಿಗೆ, ತನ್ನ ಬಾಲ್ಯದ ನೆನಪಾಗಿದೆ. ಅಲ್ಪ ಸ್ವಲ್ಪ ವಿಳಾಸ ಹೇಳಿದ್ದಾನೆ. ಮುಂಬೈನಲ್ಲಿ ತಾನು ಕೆಲಸ ಮಾಡುತ್ತಿದ್ದ ಬೇಕರಿ ಹೆಸರು ಹೇಳಿದ್ದಾನೆ. ಕೊನೆಗೆ ಟ್ರಸ್ಟ್‌ನವರು ಅಲ್ಲಿಗೆ ಭೇಟಿ ನೀಡಿ, ಅಪ್ಪ-ಅಮ್ಮನ ಮಾಹಿತಿ ಕಲೆಹಾಕಿದ್ದಾರೆ.
ಬಳಿಕ ಅವರ ಫೋನ್ ನಂಬರ್ ಕಲೆಕ್ಟ್ ಮಾಡಿ ಮಗನ ಬಗ್ಗೆ ತಿಳಿಸಿದ್ದಾರೆ. ತಮ್ಮ ಕಣ್ಣು-ಕಿವಿ ಯಾವುದನ್ನೂ ನಂಬುವ ಸ್ಥಿತಿಯಲ್ಲಿ ಇರಲಿಲ್ಲ ಅಪ್ಪ-ಅಮ್ಮ. ಕೊನೆಗೆ ಟ್ರಸ್ಟ್ಗೆ ಬಂದು, ಎಲ್ಲಾ ವಿವರ ಹೇಳಿ ಮಗನನ್ನು ಕರೆದುಕೊಂಡು ಹೋಗಿದ್ದಾರೆ. ಇತ್ತ ಹೆತ್ತವರ ಆನಂದಕ್ಕೆ ಕೊನೆಯೇ ಇಲ್ಲದಾಗ, ಅತ್ತ ಇಷ್ಟು ವರ್ಷ ಸಾಕಿದ್ದ ದೀಪಾ ವೆಂಕಟ್ ಅವರು ಒಂದು ಕ್ಷಣ ಸಂಕಟ ಪಟ್ಟಿದ್ದಂತೂ ನಿಜ. ಎಷ್ಟೆಂದರೂ ಅಮ್ಮನ ಕರುಳಲ್ಲವೆ?
ಮಗನ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ವಿಜಯ ರಾಘವೇಂದ್ರ: ಸ್ಪಂದನಾ ಫೋಟೋಗೆ ಅಭಿಮಾನಿಗಳ ಕಣ್ಣೀರು!