
ಪ್ರೇಮಿಯಿಂದ ಮೋಸಕ್ಕೊಳಗಾಗುವುದು ಬದುಕಿನಲ್ಲಿ ಬಹು ದೊಡ್ಡ ಆಘಾತ. ಅದಾದ ಬಳಿಕ ಒಳಗಾದ ಶಾಕ್‌ನಿಂದ ಹೊರ ಬರುವುದು ಸುಲಭದ ಮಾತಲ್ಲ. ಜೀವನದಲ್ಲಿ ಅತಿಯಾಗಿ ನಂಬಿದವರೇ ಸುಳ್ಳು ಹೇಳಿದರೆ, ವಂಚಿಸಿದರೆ ಇನ್ಯಾರ ಮೇಲಾದರೂ ನಂಬಿಕೆ ಬರಬಹುದೇ? ಹಾಗೆ ಒಮ್ಮೆ ಮೋಸ ಮಾಡಿದವರು ತಪ್ಪಿನ ಅರಿವಾಗಿ ಕ್ಷಮೆ ಕೋರಿ ಬಂದರೆ ಅವರನ್ನು ಕ್ಷಮಿಸಬಹುದೇ?
ಗೊತ್ತಿಲ್ಲದೆ ಗಂಡನನ್ನು ದೂರ ಮಾಡಿಕೊಳ್ಳುವ ಅಭ್ಯಾಸಗಳಿವು
ಆ ಬಳಿಕ ಎಲ್ಲವೂ ಮುಂಚಿನಂತಿರಲು ಸಾಧ್ಯವೇ? ಈ ಬಗ್ಗೆ ಅನುಭವದ ಮಾತುಗಳು ಏನೆನ್ನುತ್ತವೆ ಕೇಳೋಣ ಬನ್ನಿ. ಅಪ್ರಾಮಾಣಿಕ ಪ್ರೇಮಿಗೆ ಎರಡನೇ ಅವಕಾಶ ಕೊಟ್ಟ ನಂತರದಲ್ಲಿ ಈ ಆರು ಜನರ ಬದುಕಲ್ಲಿ ಏನೇನಾಯ್ತು ಇಲ್ಲಿವೆ ನೋಡಿ..,.
ಅಭದ್ರತೆ ಕಾಡತೊಡಗಿತು
"ಆರು ವರ್ಷಗಳ ಕಾಲ ಡೇಟಿಂಗ್ ಮಾಡಿ ಆ ನಂತರ ನನ್ನ ಬಾಯ್‌ಫ್ರೆಂಡ್ ನನಗೆ ಮೋಸ ಮಾಡಿದ. ಆತನಿಲ್ಲದೆ ಒಂದು ದಿನವನ್ನೂ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದುಕೊಂಡಿದ್ದ ನನಗಿದು ಬಹಳ ದೊಡ್ಡ ಶಾಕ್. ಆತನಿಗೆ ನಾನು ಮತ್ತೊಂದು ಚಾನ್ಸ್ ನೀಡಿದೆ. ಆದರೆ, ಈ ನಿರ್ಧಾರ ನನ್ನ ಮಾನಸಿಕ ಆರೋಗ್ಯದ ಮೇಲೆ ನೆಗೆಟಿವ್ ಪರಿಣಾಮ ಬೀರತೊಡಗಿತು. ಸದಾ ಆತ ನನಗೆ ಇನ್ನೊಮ್ಮೆ ಮೋಸ ಮಾಡಿದರೆ ಎಂಬ ಭಯದಲ್ಲೇ ನರಳುತ್ತಾ ಅಭದ್ರತೆ ಅನುಭವಿಸಿದೆ. ಆತ ನಮ್ಮ ಸಂಬಂಧಕ್ಕೆ ಎಸಗಿದ್ದ ಹಾನಿ ಮತ್ತೆ ಮೊದಲಿನಂತೆ ಸರಿಪಡಿಸಲಾಗದು ಎಂದು ಅರಿವಾಗುತ್ತಲೇ 3 ತಿಂಗಳ ಬಳಿಕ ಅವನೊಂದಿಗೆ ಸಂಬಂಧ ಮುರಿದುಕೊಂಡೆ. "
ಸೆಕ್ಸ್ ಥೆರಪಿ ಬಗ್ಗೆ ಕೇಳಿದ್ದೀರಾ? ಸೆಕ್ಸ್ ಥೆರಪಿಸ್ಟ್ ಏನ್ ಮಾಡ್ತಾರೆ?
ಎಲ್ಲ ಮುಂಚಿನಂತಿರಲಿಲ್ಲ
"ನನ್ನ ಗರ್ಲ್‌ಫ್ರೆಂಡ್ ಜೊತೆ ಒಂದು ವರ್ಷದಿಂದ ಬಹಳ ಗಂಭೀರವಾದ ಸಂಬಂಧ ಹೊಂದಿದ್ದೆ. ಅವಳೊಂದಿಗೆ ಮದುವೆಯಾಗುವ ಕನಸು ಕಂಡಿದ್ದೆ. ಆದರೆ ಒಂದು ದಿನ ಆಕೆ ಕಳೆದೊಂದು ವರ್ಷದಿಂದ ಮತ್ತೊಬ್ಬನೊಂದಿಗೆ ಕೂಡಾ ಡೇಟ್ ಹೋಗುತ್ತಿರುವುದನ್ನು ಒಪ್ಪಿಕೊಂಡು ಕ್ಷಮೆ ಕೋರಿದಳು. ಮತ್ತೆ ಎಲ್ಲವನ್ನೂ ಆರಂಭದಿಂದ ಶುರು ಮಾಡೋಣ, ಇನ್ನು ತಪ್ಪು ಮಾಡೋಲ್ಲ ಎಂದಳು. ನಾನು ಕೂಡಾ ಹುಚ್ಚನಂತೆ ಅವಳನ್ನು ಪ್ರೀತಿಸುತ್ತಿದ್ದ ಕಾರಣ, ಎಲ್ಲ ಮರೆತು ಮುಂದೆ ಹೋಗೋಣ ಎಂದುಕೊಂಡೆ. ಆದರೆ, ಎಷ್ಟೇ ಪ್ರಯತ್ನಿಸಿದರೂ ಸಂಬಂಧ ಮುಂಚಿನಂತಾಗಲೇ ಇಲ್ಲ. ಆಕೆ ಎಲ್ಲವನ್ನು ಸರಿಪಡಿಸಲು ಸಿಕ್ಕಾಪಟ್ಟೆ ಪ್ರಯತ್ನ ಹಾಕಿದಳು. ಆದರೆ, ನನ್ನ ಮನಸ್ಸಿನ ಮೂಲೆಯಲ್ಲಿ ಅವಳ ಮೇಲಿದ್ದ ಗೌರವ ಭಾವನೆ ಅದಾಗಲೇ ಮುರಿದು ಬಿದ್ದಿತ್ತು. ಆದ್ದರಿಂದ ನಾವು ಬ್ರೇಕಪ್ ಆಗೋಣ ಎಂದು ನಿರ್ಧರಿಸಿದೆವು."
ಆತ ಮತ್ತೆ ಮೋಸ ಮಾಡಿದ
"ಭಾವನೆಗಳನ್ನೆಲ್ಲ ಬದಿಗಿಟ್ಟು ಸಂಬಂಧದಿಂದ ಹೊರ ನಡೆಯಲು ಬಹಳ ಸ್ಟ್ರಾಂಗ್ ಆಗಿರಬೇಕು. ದುರದೃಷ್ಟವೆಂದರೆ ನಾನು ಅಷ್ಟು ಸ್ಟ್ರಾಂಗ್ ಇರಲಿಲ್ಲ. ಹಾಗಾಗಿ, ಆತ ಮೋಸ ಮಾಡಿದರೂ ಬದಲಾಗಬಹುದೆಂದು ಮತ್ತೊಂದು ಅವಕಾಶವನ್ನು ಆತನಿಗೆ ಕೊಟ್ಟೆ. ಆದರೆ ಆತ ತನ್ನ ಫ್ಲರ್ಟಿಂಗ್ ಬುದ್ಧಿ ಬಿಡಲಿಲ್ಲ. ಮತ್ತೆ ಮೋಸ ಮಾಡಿದ. ಹಾಗಾಗಿ, ಆ ಸಂಬಂಧದಿಂದ ಹೊರಬಂದೆ."
ಪಾರ್ಟ್ನರ್ ಜೊತೆ ಆಗಾಗ ಜಗಳವಾಡೋದು ಸಂಬಂಧಕ್ಕೆ ಒಳ್ಳೆಯದಂತೆ!
ನಮ್ಮ ಸಂಬಂಧ ಗಟ್ಟಿಯಾಯಿತು
"ನಾನಾಗ ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್‌ನಲ್ಲಿದ್ದೆ. ಒಂದು ರಾತ್ರಿ ನನ್ನ ಗರ್ಲ್‌ಫ್ರೆಂಡ್ ನನಗೆ ಫೋನ್ ಮಾಡಿ, ತಾನು ಕುಡಿದ ಮತ್ತಿನಲ್ಲಿ ಅಪರಿಚಿತನಿಗೆ ಮುತ್ತು ಕೊಟ್ಟೆ ಎಂದು ತಿಳಿಸಿ ಕ್ಷಮೆ ಕೋರಿದಳು. ನನಗಾಗ ಎಷ್ಟು ಕೋಪ ಬಂದಿತೆಂದರೆ 20 ದಿನಗಳ ಕಾಲ ನಾನು ಅವಳ ಬಳಿ ಮಾತು ಬಿಟ್ಟಿದ್ದೆ. ಆದರೆ ನಿಜವಾಗಿಯೂ ತನ್ನ ಕೃತ್ಯದ ಬಗ್ಗೆ ಬೇಸರಗೊಂಡಿದ್ದ ಆಕೆ ಪ್ರತಿ ದಿನ ಕರೆ ಮಾಡಿ ಇನ್ನೊಂದೇ ಒಂದು ಚಾನ್ಸ್‌ಗಾಗಿ ಯಾಚಿಸುತ್ತಿದ್ದಳು. ನಿಧಾನವಾಗಿ ನಾನು ಅವಳನ್ನು ಕ್ಷಮಿಸಿದೆ ಮತ್ತು ಎಲ್ಲ ಮುಂಚಿನಂತಾಯಿತು. ನಿಜ ಹೇಳಬೇಕೆಂದರೆ, ಈ ಘಟನೆಯಿಂದ ಆಕೆ ನಮ್ಮ ಸಂಬಂಧಕ್ಕೆ ಇನ್ನೂ ಹೆಚ್ಚಿನ ಬೆಲೆ ಕೊಡತೊಡಗಿದಳು ಹಾಗೂ ಪ್ರಾಮಾಣಿಕ ಪಾರ್ಟ್ನರ್ ಆದಳು. ಇದಾಗಿ ಎರಡು ವರ್ಷಗಳು ಕಳೆದಿವೆ. ನಮ್ಮಿಬ್ಬರ ಬಂಧ ಎಂದಿಗಿಂತ ಹೆಚ್ಚು ಗಟ್ಟಿಯಾಗಿದೆ."
ನನ್ನನ್ನೇ ನಾನು ದೂರಿಕೊಳ್ಳತೊಡಗಿದೆ
"ಒಮ್ಮೆ ಪ್ರೇಮಿಯು ನಮಗೆ ಮೋಸ ಮಾಡಿದನೆಂದರೆ, ಆತ ಮತ್ತೆ ಮೋಸ ಮಾಡುತ್ತಾನೆಂಬ ಭಯ ನಿರಂತರವಾಗಿ ಕಾಡುವ ಜೊತೆಗೆ, ನನ್ನಿಂದಲೇ ಏನೋ ಕೊರತೆಯಾಗಿ ಹೀಗೆ ಮಾಡಿದನೇನೋ ಎಂದು ನಮ್ಮನ್ನೇ ನಾವು ದೂರಿಕೊಳ್ಳಲಾರಂಭಿಸುತ್ತೇವೆ. ನಾನು ಈ ಹಂತಕ್ಕೆ ಹೋಗಿ, ನಾನು ಆಸಕ್ತಿಕರವಾಗಿಲ್ಲವೇನೋ, ಸರಿಯಾಗಿ ಕಾಳಜಿ ಪ್ರೀತಿ ತೋರಲು ನನಗೆ ಬರುವುದಿಲ್ಲವೇನೋ, ಬೋರಿಂಗ್ ಆಗಿದ್ದೀನೇನೋ ಎಂದು ನನ್ನನ್ನೇ ನಾನು ದೂರಿಕೊಂಡು ಕೀಳರಿಮೆಯಿಂದ ಬಳಲಿದೆ. ಆದರೆ, ತಪ್ಪು ಮಾಡಿದ ಅವನಿಗೆ ಮಾತ್ರ ಆ ಬಗ್ಗೆ ಪಶ್ಚಾತ್ತಾಪವೇ ಇರಲಿಲ್ಲ. ನಾಲ್ಕು ತಿಂಗಳಾದ ಬಳಿಕ ನನ್ನ ಯೋಚನಾ ಕ್ರಮ ಸರಿ ಇಲ್ಲ ಎಂಬುದು ನನಗೆ ಅರಿವಾಯಿತು. ಇಂಥದೊಂದು ಸಂಬಂಧದಲ್ಲಿ ಇರಲು ಇಷ್ಟವಿಲ್ಲದೆ ಹೊರಬಂದೆ. ನಾನು ಆತನನ್ನು ನಿಜವಾಗಿಯೂ ಬಹಳ ಪ್ರೀತಿಸಿದ್ದೆ. ಆದರೆ ಆತ ನನ್ನ ಪ್ರೀತಿಗೆ ಅರ್ಹನಿರಲಿಲ್ಲ."
ನಿಮ್ಮದು ಒನ್ ಸೈಡ್ ಲವ್ವಾ? ಅದರಿಂದ ಈಚೆ ಬರಲು ಹೀಗ್ಮಾಡಿ!
ಆತ ಮತ್ತೆ ತಪ್ಪನ್ನು ಪುನರಾವರ್ತಿಸಲಿಲ್ಲ
"ಮದುವೆಯಾಗಿ 9 ವರ್ಷಗಳಾದ ನಂತರ ಪತಿ ನನಗೆ ಮೋಸ ಮಾಡಿದ್ದ. ಆಗ ನಮಗೆ 8 ವರ್ಷಗಳ ಮಗನಿದ್ದ. ಇಂಥ ಸಂದರ್ಭದಲ್ಲಿ ಆ ಸಂಬಂಧವನ್ನು ಬಿಟ್ಟುಬಿಡು, ಬೇರೆ ಮನೆಗೆ ಹೋಗು, ಡೈವೋರ್ಸ್ ಮಾಡು ಎಂದು ಹೇಳುವುದೆಲ್ಲ ಸುಲಭ. ಆದರೆ, ನಮಗೇ ಆದಾಗ ಅಂಥದೊಂದು ದೊಡ್ಡ ನಿರ್ಧಾರವನ್ನು ಕೆಲವೇ ದಿನಗಳ ಸಮಯದಲ್ಲಿ ತೆಗೆದುಕೊಳ್ಳುವುದು ಸುಲಭದ ಮಾತಲ್ಲ. ನಾನು, ನನ್ನ ಪತಿ ಈ ಬಗ್ಗೆ ಮಾತನಾಡಿಕೊಂಡೆವು. ಕೌನ್ಸೆಲರ್ ಸಹಾಯ ಪಡೆದೆವು. 9 ತಿಂಗಳ ಕಾಲ ಎಲ್ಲ ಸರಿಯಿರುವಂತೆ ನಟಿಸಿದೆವು. ನಿಧಾನವಾಗಿ ನಿಜವಾಗಿಯೂ ಎಲ್ಲ ಸರಿಯಾಯಿತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.