ಮಕ್ಕಳೆಂದರೆ ನೆನಪಾಗುವವರು ಇವರು; ಹೀಗೆ ನೆನೆಸಿಕೊಂಡ್ರು ಸ್ಯಾಂಡಲ್‌ವುಡ್‌ನವ್ರು!

By Web DeskFirst Published Nov 14, 2019, 3:27 PM IST
Highlights

ಇಂದು ಮಕ್ಕಳ ದಿನಾಚರಣೆ. ಈ ಸುಸಂದರ್ಭದಲ್ಲಿ ಮಕ್ಕಳೆಂದರೆ ನಿಮಗೆ ನೆನಪಾಗುವವರು ಯಾರು ಎಂದು ಹಲವು ನಟನಟಿಯರನ್ನು ನಿರ್ದೇಶಕರನ್ನು ಕೇಳಿದಾಗ ಅವರು ಸೂಚಿಸಿದ ಮಕ್ಕಳು ಇಲ್ಲಿದ್ದಾರೆ. ಚಿತ್ರರಂಗ ಇಂಥ ಅಸಂಖ್ಯ ಪ್ರತಿಭಾವಂತರ ಸಂಗಮತಾಣ

ಪುಷ್ಪಕ ವಿಮಾನದ ಯುವಿನಾ ನನಗಿಷ್ಟ

ರಮೇಶ್ ಅರವಿಂದ್, ನಿರ್ದೇಶಕ

ಎವರ್ ಗ್ರೀನ್ ಬಾಲನಟಿ, ಎಲ್ಲರಿಗೂ ಗೊತ್ತಿರುವ ಮತ್ತು ನನಗೂ ಇಷ್ಟವಾಗಿರುವುದು ಬೇಬಿ ಶಾಮಿಲಿ. ಈ ಮಗುಗಾಗಿಯೇ ಆಗ ಸಿನಿಮಾ ನೋಡುವವರ ದೊಡ್ಡ ಸಂಖ್ಯೆಯೇ ಇತ್ತು. ಒಬ್ಬ ಬಾಲ ನಟಿ ಸಿನಿಮಾ ನೋಡುವಂತೆ ಮಾಡುವುದು ಇದೆಯಲ್ಲ, ಅದಕ್ಕಿಂತ ದೊಡ್ಡ ಪ್ರತಿಭೆ ಮತ್ತೊಂದು ಇಲ್ಲ. ಹಾಗೆ ಕಮಲ್ ಹಾಸನ್ ಹಾಗೂ ಶ್ರೀದೇವಿ. ಬಾಲ ಕಲಾವಿದರಾಗಿ ಬಂದು ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿವರು ಇವರು. ಅದರಲ್ಲೂ ಬಾಲ ನಟಿಯಾಗಿ ಬಂದವರು ದೊಡ್ಡ ಮಟ್ಟದಲ್ಲಿ ನಾಯಕಿ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು ಕಡಿಮೆ. ಅದನ್ನು ಬ್ರೇಕ್ ಮಾಡಿದ್ದು ನಟಿ ಶ್ರೀದೇವಿ. ಇನ್ನೂ ನಮ್ಮ ಇಬ್ಬರು ಕನ್ನಡದ ಪ್ರತಿಭಾವಂತ ಆಗಿನ ಮಕ್ಕಳು ಎಂದರೆ ಮಾ.ಆನಂದ್ ಹಾಗೂ ಮಾ. ಮಂಜುನಾಥ್. ನನ್ನ ಜತೆ ‘ಪುಷ್ಪಕ ವಿಮಾನ’ ಚಿತ್ರದಲ್ಲಿ ನಟಿಸಿದ ಯುವಿನಾ ಪೃಥ್ವಿ. ಬ್ರಿಲಿಯೆಂಟ್ ಮಗು ಇದು. ತುಂಬಾ ಮುದ್ದಾಗಿ ಕಾಣುತ್ತಿದ್ದವಳು. ಬಾಲ ಕಲಾವಿದರು ಎಂದಾಗ ನನಗೆ ಈ ಕ್ಷಣಕ್ಕೆ ನೆನಪಾಗುವ ಹೆಸರುಗಳು ಇವರದ್ದು.

ಸಮೀರನ ಮರೆಯಲಾರೆ

* ಸತ್ಯ ಪ್ರಕಾಶ್, ನಿರ್ದೇಶಕ

ನನ್ನ ಇಷ್ಟದ ಬಾಲ ನಟ ಸದ್ಯದ ಮಟ್ಟಿಗೆ ನನ್ನದೇ ನಿರ್ದೇಶನದ ‘ಒಂದಲ್ಲಾ ಎರಡಲ್ಲಾ’ ಚಿತ್ರದಲ್ಲಿ ನಟಿಸಿದ ರೋಹಿತ್ ಪಾಂಡವಪುರ (ಸಮೀರಾ). ಅದ್ಭುತವಾದ ಪ್ರತಿಭಾವಂತ ಹುಡುಗ ಈತ. ನನ್ನ ಚಿತ್ರಕ್ಕೆ ಜೀವ ತುಂಬಿದವನು. ಇವರ ಹೊರತಾಗಿ ಬಾಲನಟರಾಗಿ ಬಂದು ಈಗ ದೊಡ್ಡವರಾಗಿ ರುವವರ ಪೈಕಿ ವಿಜಯ್ ರಾಘವೇಂದ್ರ, ಮಾ. ಮಂಜುನಾಥ್, ಮಾ.ಆನಂದ್ ಅವರು ನನಗೆ ಇಷ್ಟ. ಯಾಕೆಂದರೆ ಇವರನ್ನು ನೋಡಿದಾಗ ನನ್ನ ಬಾಲ್ಯ ನೆನಪಾಗುತ್ತದೆ. ನಮ್ಮ ಪ್ರತಿಯೊಬ್ಬರ ಬಾಲ್ಯವನ್ನು ನನೆಪಿಸುವಂತಹ ಅದ್ಭುತ ಕಲಾವಿದರು ಇವರು. ಇವರು ಯಾವಾಗಲೂ ನನ್ನ ಮನಸ್ಸಿನಲ್ಲಿ ಉಳಿಯುತ್ತಾ.

ಪುನೀತ್, ಮಮ್ಮೂಟಿ, ಪ್ರವೀಣ

* ರಿಷಬ್ ಶೆಟ್ಟಿ, ನಿರ್ದೇಶಕ

ಚಿತ್ರರಂಗಕ್ಕೆ ಬಾಲ ನಟನಾಗಿ ಬಂದು ಈಗ ಹೀರೋ ಆದವರ ಪೈಕಿ ನನಗೆ ಪುನೀತ್ ರಾಜ್‌ಕುಮಾರ್ ಎಂದರೆ ತುಂಬಾ ಇಷ್ಟ. ‘ಕಾಣದಂತೆ ಮಾಯವಾದನೋ ನಮ್ಮ ಶಿವ’ ಹಾಡು ಕೇಳಿದಾಗಲೆಲ್ಲ ಅದೇ ಪುಟ್ಟ ಮಗ ಪುನೀತ್ ರಾಜ್‌ಕುಮಾರ್ ನೆನಪಾಗುತ್ತಾರೆ. ಬೆಟ್ಟದ ಹೂವು, ಎರಡು ಕನಸು, ಚಲಿಸುವ ಮೋಡಗಳು ಈ ಚಿತ್ರಗಳನ್ನು ನೋಡಿದಾಗ ಪುನೀತ್ ಅವರ ಬಾಲ ಪ್ರತಿಭೆಯನ್ನು ಮರೆಯಲಾಗದು. ಈ ಜನರೇಷನ್‌ನ ಬಾಲ ನಟರು ಎಂದರೆ ನನ್ನದೇ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡುಗೆ ರಾಮಣ್ಣ ರೈ’ ಚಿತ್ರದಲ್ಲಿ ನಟಿಸಿದ ಸಂಪತ್ (ಮುಮ್ಮಟ್ಟಿ) ಹಾಗೂ ರಂಜನ್ (ಪ್ರವೀಣ). ಈ ಇಬ್ಬರು ನನಗೆ ಇಷ್ಟ. ಮಕ್ಕಳಲ್ಲಿ ಇರಬೇಕಾದ ಆ ಮುಗ್ಧತೆಯನ್ನು ಉಳಿಸಿಕೊಂಡಿರುವ, ಎಲ್ಲೇ ಇದ್ದರೂ ಮಕ್ಕಳಂತೆ ಇವವರು.

ಮುದ್ದು ಹುಡುಗಿ ಶಾಮಿಲಿ

ತಾರಾ, ನಟಿ

ನಾಯಕಿ ಆಗಿ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾಗ ಬೇಬಿ ಶಾಮಿಲಿ ಅಂದ್ರೆ ನಂಗೆ ತುಂಬಾ ಇಷ್ಟವಾದ ಹುಡುಗಿ. ತುಂಬಾ ಮುದ್ದಾಗಿ, ಗುಂಡು ಗುಂಡಾಗಿ ಕಾಣುತ್ತಿದ್ದ ಹುಡುಗಿ, ನಟನೆಯಲ್ಲೂ ಅಷ್ಟೇ ಮುದ್ದಾಗಿ ಅಭಿನಯಿಸುತ್ತಿದ್ದಳು. ಆಕೆ ಜತೆಗೆ ಒಂದೆರೆಡು ಸಿನಿಮಾಗಳಲ್ಲಿ ನಾನು ಅಭಿನಯಿಸಿದ್ದೆ. ಆ ಕಾಲಕ್ಕೆ ಆಕೆ ಸಿಂಗಲ್ ಟೇಕ್ ಹುಡುಗಿ. ನಿರ್ದೇಶಕರು ಒಂದ್ಸಲ ಹೀಗಲ್ಲ, ಹಾಗೆ ಅಭಿನಯಿಸಬೇಕು ಅಂತ ಹೇಳಿದ್ರೆ ಸಾಕು ಒಬ್ಬ ಪ್ರಬುದ್ಧ ನಟಿ ಅಭಿನಯಿಸಿದ ಹಾಗಿರುತ್ತಿತ್ತು ಆಕೆಯ ಅಭಿನಯ. ಆಕೆ ಕಂಡ್ರೆ ನಂಗೆ ತುಂಬಾನೆ ಇಷ್ಟವಾಗುತ್ತಿತ್ತು. ಚೈಲ್ಡ್ ಆರ್ಟಿಸ್ಟ್ ಅಂದಾಕ್ಷಣ ತಕ್ಷಣವೇ ನನಗೆ ನೆನಪಾಗುವುದು ಬೇಬಿ ಶಾಮಿಲಿ. ಇನ್ನು ಹಾಡು ಮತ್ತು ನೃತ್ಯ ಅಂತ ಬಂದಾಗ ಪುನೀತ್ ರಾಜ್ ಕುಮಾರ್. ‘ಗುರಿ’ಸಿನಿಮಾದಲ್ಲಿ ನಾನು ಅಭಿನಯಿಸುತ್ತಿದ್ದಾಗ ಸೆಟ್‌ಗೆ ಬರುತ್ತಿದ್ದ. ಆದಾಗಲೇ ಸಿನಿಮಾಗಳಲ್ಲಿ ಅಭಿನಯಿಸಿದ್ದ. ನಟನೆಯ ಜತೆಗೆ ಡಾನ್ಸ್ ಹಾಗೂ ಹಾಡು ತುಂಬಾನೆ ಮುದ್ದಾಗಿದ್ದವು.

'ಮಕ್ಕಳ ದಿನಾಚರಣೆ' ಗೂಗಲ್ ಡೂಡಲ್ ವಿಶ್; ಮಕ್ಕಳು ಫುಲ್ ಖುಷ್!

ವಿಶ್ವಾಸ ಹೊನ್ನಾವರ ಅತಿ ಸುಂದರ

* ಜಯತೀರ್ಥ, ನಿರ್ದೇಶಕ

ಹೊಸದಾಗಿ ಬರುವ ಮಕ್ಕಳು ತಮ್ಮ ಸಹಜವಾದ ಅಭಿನಯದ ಮೂಲಕ ಎಲ್ಲರ ಮೆಚ್ಚುಗೆಗೆ ಕಾರಣವಾಗುತ್ತಿದ್ದಾರೆ. ನನ್ನದೇ ನಿರ್ದೇಶನದ ‘ಬೆಲ್ ಬಾಟಮ್’ ಚಿತ್ರದಲ್ಲಿನ ಬಾಲ ದಿವಾಕರ್ ಆಗಿ ಅಭಿನಯಿಸಿದ ವಿಶ್ವಾಸ ಹೊನ್ನಾವರನ ನಟನೆ ನೋಡಿದಾಗ ನಿಜಕ್ಕೂ ಅಚ್ಚರಿ ಎನಿಸಿತು. ಆತ ಗ್ರಾಮೀಣ ಹಿನ್ನೆಲೆಯಿಂದ ಬಂದವನು. ನಟನೆ, ಡಾನ್ಸ್, ಹಾಡು ಅಂತೆಲ್ಲ ಯಾವುದೇ ತರಬೇತಿ ಪಡೆದವನಲ್ಲ. ಅದಷ್ಟು ಸಹಜಕೆ ಇರಲಿ ಅಂತ ಆ ಪಾತ್ರಕ್ಕೆ ಆತನನ್ನು ಆಯ್ಕೆ ಮಾಡಿಕೊಂಡಿದ್ದೆ. ತಂದು ಕ್ಯಾಮರಾ ಮುಂದೆ ನಿಲ್ಲಿಸಿದಾಗ ಆತ ಅಭಿನಯಿಸಿದ ರೀತಿಗೆ ನಾನೇ ಆತನಿಗೆ ಅಭಿಮಾನಿ ಆಗಿ ಬಿಟ್ಟೆ.ಎಂಥದ್ದೇ ಪಾತ್ರ ಕೊಟ್ಟರು ಆತ ಅಭಿನಯಿಸಬಲ್ಲ. ಮಕ್ಕಳಲ್ಲಿ ಅಂತಹ ಸಹಜತೆ ಇದ್ದಾಗ ನಟನೆಯಲ್ಲೂ ಸಹಜತೆ ಕಾಣಲು ಸಾಧ್ಯ.

ಸಿಸಿಂಧ್ರಿ ಸಿನಿಮಾದ ಅಖಿಲ್ ಪ್ರತಿಭಾವಂತ

ಹರಿಪ್ರಿಯಾ, ನಟಿ

ಬಾಲ್ಯದಲ್ಲಿ ನನ್ನೊಳಗೆ ಸಿನಿಮಾ ಕನಸು ಬಿತ್ತಿದವರ ಪೈಕಿ ಬೇಬಿ ಶಾಮಿಲಿ ಕೂಡ ಒಬ್ಬರು. ನಾವು ಚಿಕ್ಕವರಿದ್ದಾಗ ಬೇಬಿ ಶಾಮಿಲಿ ಬಹುಬೇಡಿಕೆಯ ಬಾಲ ನಟಿ ಎನಿಸಿಕೊಂಡವರು. ಆಗ ಬರುತ್ತಿದ್ದ ಸಾಕಷ್ಟು ಸಿನಿಮಾಗಳಲ್ಲಿ ಅವರಿದ್ದರು. ಮುದ್ದಾದ ಅವರು ಅವರ ನೋಟ, ಗಮನ ಸೆಳೆಯುವ ಅವರ ನಟನೆ, ಧೈರ್ಯದಿಂದಲೇ ಪ್ರಾಣಿಗಳ ಜತೆಗೆ ಕಾಣಿಸಿಕೊಳ್ಳುತ್ತಿದ್ದ ರೀತಿ ಕಂಡಾಗ ನಾವು ಆ ರೀತಿ ಕಾಣಿಸಿಕೊಳ್ಳಬೇಕೆಂದು ಹುಚ್ಚು ಹತ್ತಿಸಿದವರು. ರಾಜ್ಯದ ಯಾವುದೇ ಊರಿಗೆ ಹೋದರು ಬೇಬಿ ಶಾಮಿಲಿ ಪರಿಚಯ ಇದ್ದರು. ಸಿನಿಮಾದ ಮೂಲಕ ಅಷ್ಟು ಜನಪ್ರಿಯತೆ ಆಗಲೇ ಅವರಿಗೆ ಸಿಕ್ಕಿತ್ತು . ಗೊತ್ತಿಲ್ಲದೆಯೇ ಅವರು ನನ್ನೊಳಗೂ ಸಿನಿಮಾ ನಟಿಯಾಗುವ ಕನಸು ಬಿತ್ತಿದ್ದರು. ಅದೇ ರೀತಿ ತೆಲುಗಿನಲ್ಲಿ ನಾಗಾರ್ಜುನ್ ಅವರ ಪುತ್ರ ಅಖಿಲ್ ಕೂಡ ಬಾಲ ನಟರಾಗಿ ಸಿನಿ ಪ್ರೇಕ್ಷಕರ ಮನ ಗೆದ್ದವರು. ‘ಸಿಸಿಂಧ್ರಿ’ ಸಿನಿಮಾದಲ್ಲಿ ಬಾಲ ನಟನಾಗಿ ಅಖಿಲ್‌ಗೆ ಸಾಕಷ್ಟು ಜನಪ್ರಿಯತೆ ಕೊಟ್ಟಿತ್ತು. ಆ ಸಿನಿಮಾ ನೆನಪಾದ್ರೆ ನನಗೆ ತಕ್ಷಣಕ್ಕೆ ನೆನಪಾಗುವುದು ಅಖಿಲ್ ಅಭಿನಯ.

 

 

 

 

 

 

click me!