ಅಪಹರಣಕ್ಕೊಳಗಾದ ಬಾಲಕ, ಹೆತ್ತಮ್ಮ ಬಂದರೂ ಅವರ ಬಳಿ ಹೋಗಲು ಒಪ್ಪದೇ ಕಿಡ್ನಾಪರ್ ಬಳಿಯೇ ಇರಲು ಹಠ ಮಾಡಿದ ವಿಡಿಯೋ ವೈರಲ್ ಆಗಿದೆ.
ಮಕ್ಕಳೆಂದರೆ ಹಾಗೇ ಅಲ್ವಾ? ಯಾರು ಹೆಚ್ಚು ಪ್ರೀತಿ ಮಾಡುತ್ತಾರೆಯೋ ಅವರ ಕಡೆ ಕಂದಮ್ಮಗಳು ವಾಲಿ ಬಿಡುತ್ತವೆ. ಪ್ರೀತಿಯ ಧಾರೆಯನ್ನೇ ಹರಿಸಿದವರಿಗೆ ಮಕ್ಕಳು ಆಪ್ತರಾಗಿಬಿಡುತ್ತಾರೆ. ಅದೇ ರೀತಿ ಮಕ್ಕಳ ಮುಗ್ಧ ಮುಖ ನೋಡಿದರೆ ಎಂಥ ಕಟುಕನಾದರೂ ಅವನ ಹೃದಯ ಒಂದು ಕ್ಷಣ ಆ ಮಗುವಿನತ್ತ ವಾಲುವುದು ಸಹಜವೇ. ಅಂಥದ್ದೇ ಒಂದು ಘಟನೆ ರಾಜಸ್ತಾನದಲ್ಲಿ ನಡೆದಿದ್ದು, ಕೆಲ ತಿಂಗಳ ಹಿಂದಿನ ಈ ವಿಡಿಯೋ ಪುನಃ ವೈರಲ್ ಆಗುತ್ತಿದೆ. ಕುಟುಂಬದ ಮೇಲಿನ ದ್ವೇಷಕ್ಕೆ 11 ತಿಂಗಳ ಬಾಲಕನನ್ನು ಅಪಹರಣ ಮಾಡಿದ್ದ ಅಪಹರಣಕಾರನ ಕಥೆ ಇದು. ಅಪಹರಣ ಮಾಡಿದ ಈ ಕಂದನನ್ನು ಆತ ಅದೆಷ್ಟು ಪ್ರೀತಿ ತೋರಿದ ಎಂದರೆ, 14 ತಿಂಗಳು ಆತನ ಜೊತೆ ಇದ್ದ ಬಾಲಕ, ತನ್ನ ಹೆತ್ತವರು ಬಂದರೂ, ಕೊನೆಗೂ ಅಮ್ಮ ಬಂದರೂ ಆಕೆಯ ಬಳಿ ಹೋಗಲಿಲ್ಲ. ಅಪ್ಪ ಕರೆದುಕೊಂಡು ಹೋಗಲು ಬಂದಾಗ ಬಾಲಕ ಅಳುತ್ತಾ ಹೋಗುತ್ತಿರುವ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ.
ಜೈಪುರದ 11 ತಿಂಗಳ ಬಾಲಕನ ಕಥೆ ಇದು. ಸುಮಾರು 14 ತಿಂಗಳ ಹಿಂದೆ ಈ ಮಗುವನ್ನು ಧನುಜ್ ಚಹರ್ ಎಂಬ ಉತ್ತರ ಪ್ರದೇಶದ ಆಗ್ರಾದವನು ಕಿಡ್ನಾಪ್ ಮಾಡಿದ್ದ. ಈತ ಬಾಲಕನ ಅಪ್ಪನ ಸಂಬಂಧಿ ಎನ್ನಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಗುವನ್ನು ಅಪಹರಿಸಿದ್ದ. ಮಗುವನ್ನು ಹುಡುಕಿ ಹುಡುಕಿ ಸುಸ್ತಾಗಿದ್ದ ಅಪ್ಪ-ಅಮ್ಮ ಜೈಪುರದಲ್ಲಿ ಕೇಸು ದಾಖಲಿಸಿದ್ದರು. ಪೊಲೀಸರು ಎಷ್ಟೇ ಹುಡುಕಿದ್ದರೂ ಮಗು ಪತ್ತೆಯಾಗಿರಲಿಲ್ಲ.
ಆನ್ಲೈನ್ನಲ್ಲಿ ಮೊಬೈಲ್ ರೀಚಾರ್ಜ್ ಮಾಡ್ತೀರಾ? ಈ ಹೊಸ ವಂಚನೆ ಬಗ್ಗೆ ಇರಲಿ ಎಚ್ಚರ!
ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ಅಪಹರಣಕಾರ ಧನುಜ್ ಪೊಲೀಸ್ ಮೀಸಲು ಪಡೆಯಲ್ಲಿ ಮುಖ್ಯ ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸಿದಾತ. ಅದಕ್ಕೆ ಆತನಿಗೆ ಪೊಲೀಸರಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂದು ಚೆನ್ನಾಗಿ ಗೊತ್ತಿತ್ತು. ಮಗು ಪೊಲೀಸರ ಕೈಗೆ ಸಿಗಬಾರದು ಎನ್ನುವ ಕಾರಣದಿಂದ ಆತ ಮಗುವನ್ನು ತೆಗೆದುಕೊಂಡು ಬೇರೆ ಬೇರೆ ಶಿಫ್ಟ್ ಆಗುತ್ತಿದ್ದ. ಮೊಬೈಲ್‌ನಿಂದ ಸಿಕ್ಕಿಬೀಳುವ ಭಯ ಇದ್ದುದರಿಂದ ಅದನ್ನೂ ಬಳಸುತ್ತಿರಲಿಲ್ಲ. ಆದ್ದರಿಂದ 14 ತಿಂಗಳು ಆತ ತಲೆ ಮರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಆದರೆ ಮಗುವನ್ನು ಮಾತ್ರ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ.
ಹದಿನಾಲ್ಕು ತಿಂಗಳ ಸತತ ಪರಿಶ್ರಮದ ಬಳಿಕ ಕೊನೆಗೂ, ಪೊಲೀಸರಿಗೆ ಮಗು ಸಿಕ್ಕಿತು. ಧನುಜ್‌ನೇ ಮಗುವಿನ ಅಪಹರಣ ಮಾಡಿರುವುದು ತಿಳಿಯುತ್ತಿದ್ದಂತೆಯೇ ಪೊಲೀಸರು ಜಾಲ ಬೀಸಿದರು. ಕೊನೆಗೆ ಆತ ಇರುವಲ್ಲಿಗೆ ಹೋಗಿ ಅರೆಸ್ಟ್ ಮಾಡಿದರು. ಮಗುವನ್ನು ಕರೆದುಕೊಂಡು ಬರಲು ಅಪ್ಪ-ಅಮ್ಮನನ್ನು ಕರೆದುಕೊಂಡು ಹೋಗಿದ್ದರು. ಆದರೆ ಆ ಬಾಲಕ ಅಪ್ಪ-ಅಮ್ಮನನ್ನು ಮರೆತೇ ಬಿಟ್ಟಿದ್ದ. ಆದ್ದರಿಂದ ಅವರು ಕರೆದರೆ ಹೋಗಲೇ ಇಲ್ಲ. ಕಿಡ್ನಾಪರ್‌ನಿಂದ ಮಗುವನ್ನು ಕಸಿದುಕೊಳ್ಳುವಷ್ಟರ ಮಟ್ಟಿಗೆ ಸ್ಥಿತಿ ನಿರ್ಮಾಣವಾಯಿತು. ಮಗುವನ್ನು ಅಪ್ಪ-ಅಮ್ಮ ಬಲವಂತವಾಗಿ ಕರೆದುಕೊಂಡು ಹೋದಾಗ ಆ ಮಗು ಅಳುವುದನ್ನು ನೋಡಿದರೆ ಎಂಥವರಿಗೂ ಕರುಳುಕಿತ್ತು ಬರುವುದು ಉಂಟು. ಆ ಮಗು ತನ್ನಿಂದ ದೂರವಾಗುವುದುನ್ನು ಅಪಹರಣಕಾರ ಧನುಜ್‌ಗೂ ಸಹಿಸಿಕೊಳ್ಳಲು ಆಗದೇ ಕಣ್ಣೀರು ಹಾಕಿದ್ದಾನೆ. ಸದ್ಯ ಆತನನ್ನ ಬಂಧಿಸಿ, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
28 ಮಕ್ಕಳ ತಂದೆಗೆ 50ರ ಗುರಿ! ಮಕ್ಕಳಿಂದಲೇ ಅಪ್ಪನಿಗೆ ಇನ್ನೊಂದು ಮದ್ವೆ- ಕಾರಣನೂ ಅವರ ಬಾಯಲ್ಲೇ ಕೇಳಿ!