
ಮದುವೆ ಸಂಬಂಧ ಮುರಿದರೆ ಅದರೊಂದಿಗೆ ಎಲ್ಲ ಸಂಬಂಧಗಳೂ ಮುಗಿದುಹೋಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಂದು ಬಾಂಧವ್ಯಗಳು ರಕ್ತಸಂಬಂಧಕ್ಕಿಂತಲೂ ಮಿಗಿಲಾಗಿರುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಚೀನಾದ ಮಹಿಳೆಯೊಬ್ಬರ ಹೃದಯಸ್ಪರ್ಶಿ ಕಥೆ. ವಿಚ್ಛೇದನವಾಗಿ ಬರೋಬ್ಬರಿ 12 ವರ್ಷಗಳಾದರೂ ಮಾಜಿ ಅತ್ತೆಯ ಮೇಲಿನ ಪ್ರೀತಿಯನ್ನು ಉಳಿಸಿಕೊಂಡಿರುವ ಈ ಮಹಿಳೆಯ ನಡೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಚೀನಾದ ಹೆನಾನ್ ಪ್ರಾಂತ್ಯದ ಲಿನ್ ಎಂಬ ಮಹಿಳೆ, ತನ್ನ ಮಾಜಿ ಅತ್ತೆಯನ್ನು ಕರೆದುಕೊಂಡು ಬರಲು ಸುಮಾರು 1,000 ಕಿಲೋಮೀಟರ್ ಪ್ರಯಾಣಿಸಿದ್ದಾರೆ. ಲಿನ್ ಅವರಿಗೆ 20ನೇ ವಯಸ್ಸಿನಲ್ಲಿ ಮದುವೆಯಾಗಿತ್ತು. ಐದು ವರ್ಷಗಳ ನಂತರ ಪತಿಯಿಂದ ವಿಚ್ಛೇದನ ಪಡೆದಿದ್ದರು. ಆದರೆ, ಪತಿಯ ಕುಟುಂಬದೊಂದಿಗಿನ ಆತ್ಮೀಯತೆ ಮಾತ್ರ ಹಾಗೆಯೇ ಉಳಿದಿತ್ತು.
ವಿಚ್ಛೇದನದ ಬಳಿಕ ದಂಪತಿಯ ಇಬ್ಬರು ಮಕ್ಕಳು ಸುಮಾರು ಹತ್ತು ವರ್ಷಗಳ ಕಾಲ ತಂದೆಯ ಜೊತೆಯಲ್ಲೇ ವಾಸವಾಗಿದ್ದರು. ಈ ಅವಧಿಯಲ್ಲಿ ಮಾಜಿ ಅತ್ತೆ ಲಿನ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಆಗಾಗ ಅವರ ಆರೋಗ್ಯ ಮತ್ತು ಜೀವನದ ಬಗ್ಗೆ ವಿಚಾರಿಸುತ್ತಿದ್ದರು. ಹೆಚ್ಚು ಕೆಲಸ ಮಾಡಬೇಡಿ, ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ ಎಂದು ಕಾಳಜಿ ತೋರಿಸುತ್ತಿದ್ದರು.
ಲಿನ್ ಅವರ ಮಾಜಿ ಮಾವ 2024ರಲ್ಲಿ ಅನಾರೋಗ್ಯದಿಂದ ನಿಧನರಾದರು. ನಂತರ ಕಳೆದ ವರ್ಷ ಮಾಜಿ ಪತಿಯೂ ಮೃತಪಟ್ಟರು. 70ರ ಹರೆಯದಲ್ಲಿರುವ ಮಾಜಿ ಅತ್ತೆ, ಇಷ್ಟು ದಿನ ಪತಿ ಮತ್ತು ಕುಟುಂಬದವರೊಂದಿಗೆ ವಾಸಿಸುತ್ತಿದ್ದ ಗ್ರಾಮದಲ್ಲೇ ಉಳಿದಿದ್ದರು.
ಅವರಿಗೆ ಐವರು ಮಕ್ಕಳು ಇದ್ದರೂ, ಅವರು ವಾಸಿಸುತ್ತಿದ್ದ ಮನೆಯಲ್ಲಿ ಒಂಟಿಯಾಗುವ ಪರಿಸ್ಥಿತಿ ಎದುರಾಗಿತ್ತು. ಇದನ್ನು ಕಂಡ ಲಿನ್, ಮಾಜಿ ಅತ್ತೆಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ನಿರ್ಧರಿಸಿದರು.
ಆರಂಭದಲ್ಲಿ ಮಾಜಿ ಅತ್ತೆ ಲಿನ್ ಅವರ ಆಹ್ವಾನವನ್ನು ನಿರಾಕರಿಸಿದ್ದರು. ಹೊಸ ಕುಟುಂಬಕ್ಕೆ ತಾನು ಹೊರೆಯಾಗಬಹುದು ಎಂಬ ಆತಂಕ ಅವರಲ್ಲಿತ್ತು. ಆದರೆ, ಲಿನ್ ಪ್ರೀತಿಯಿಂದ ಮನವೊಲಿಸಿ ತಮ್ಮ ಮನೆಗೆ ಕರೆತಂದರು.
"ವಿಚ್ಛೇದನ ಎಂದರೆ ಸಂಬಂಧ ಕಡಿದುಕೊಳ್ಳುವುದಲ್ಲ. ನನಗೆ ಸಿಕ್ಕ ಪ್ರೀತಿಯನ್ನು ಮರಳಿ ನೀಡುವುದು ನನ್ನ ಕರ್ತವ್ಯ" ಎಂಬುದು ಲಿನ್ ಅವರ ಮನದಾಳದ ಮಾತು.
ಲಿನ್ ಅವರ ಈಗಿನ ಪತಿಯೂ ಈ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಲಿನ್ ಅವರ ತಾಯಿಯೂ ಮಗಳ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಮಾಜಿ ಅತ್ತೆ ಮೊಮ್ಮಕ್ಕಳೊಂದಿಗೆ ಸಮಯ ಕಳೆಯುವ ಅವಕಾಶವನ್ನೂ ಪಡೆದಿದ್ದಾರೆ.
ಲಿನ್ ಅವರ ಈ ನಿರ್ಧಾರಕ್ಕೆ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಸಂಬಂಧಗಳು ಕೇವಲ ಮದುವೆ ಅಥವಾ ರಕ್ತಸಂಬಂಧದಿಂದ ಮಾತ್ರ ಉಳಿಯುವುದಿಲ್ಲ; ಪರಸ್ಪರ ತೋರಿಸುವ ಪ್ರೀತಿ, ಕಾಳಜಿ ಮತ್ತು ಗೌರವದಿಂದಲೂ ಉಳಿಯುತ್ತವೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆಯಾಗಿದೆ.
ಒಂದು ಮದುವೆ ಮುಗಿದರೂ, ಆ ಸಂಬಂಧದಲ್ಲಿ ಬೆಳೆದ ಪ್ರೀತಿ ಮತ್ತು ಮಾನವೀಯತೆ ಎಂದಿಗೂ ಮುಗಿಯಬೇಕಿಲ್ಲ ಎಂಬ ಸಂದೇಶವನ್ನು ಲಿನ್ ಅವರ ನಡೆ ಜಗತ್ತಿಗೆ ಸಾರಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.