ವರದಿ: ಎಂ.ಅಫ್ರೋಜ್ ಖಾನ್
ರಾಮನಗರ (ಡಿ.17): ವಿಧಾನ ಪರಿಷತ್ ಚುನಾವಣೆ (MLC Election Result ) ಫಲಿತಾಂಶದ ಬೆನ್ನ ಹಿಂದೆಯೇ ಜಿಲ್ಲೆಯಲ್ಲಿ ಪಕ್ಷಾಂತರದ ಚರ್ಚೆ ಜೋರಾಗಿದ್ದು, ಬಿಜೆಪಿ (BJP) ಹಾಗೂ ಜೆಡಿಎಸ್ (JDS) ಪಕ್ಷಗಳ ಪ್ರಮುಖ ನಾಯಕರು ಕಾಂಗ್ರೆಸ್ (Congress) ಗೂಡಿಗೆ ಹಾರಲು ಸಿದ್ಧತೆ ನಡೆಸಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಬಹಿರಂಗವಾಗಿ ಪ್ರಚಾರಕ್ಕಿಳಿದು ಕಾರ್ಯತಂತ್ರ ರೂಪಿಸಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (HD Kumaraswamy) ತಮ್ಮ ಕರ್ಮ ಭೂಮಿಯಲ್ಲಿಯೇ ಹಿನ್ನಡೆ ಅನುಭವಿಸಿದರೆ, ಆಡಳಿತರೂಡ ಬಿಜೆಪಿ (BJP) ಮಕಾಡೆ ಮಲಗಿದೆ. ಇದರಿಂದ ಹೊಸ ಉಮೇದಿನಲ್ಲಿರುವ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಮತ್ತು ಅವರ ಸಹೋದರ ಸಂಸದ ಡಿ.ಕೆ.ಸುರೇಶ್ (DK Suresh) ವಿಧಾನಸಭೆ ಚುನಾವಣೆ ವೇಳೆಗೆ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟುಬಲಪಡಿಸಿ ಪಾರಮ್ಯ ಮೆರೆಯಲು ಮುಂದಾಗಿದ್ದಾರೆ.
undefined
ಕಳೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಹೊಸಕೋಟೆ (Hosakote) ಕ್ಷೇತ್ರದಿಂದ ಪಕ್ಷೇತರಾಗಿ ಆಯ್ಕೆಯಾದ ಶರತ್ ಬಚ್ಚೇಗೌಡ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಕಾಂಗ್ರೆಸ್ (Congress), ಬೆಂಗಳೂರು ಗ್ರಾಮಾಂತರ (Bengaluru Rural) ಮತ್ತು ರಾಮನಗರ (Ramanagar) ಜಿಲ್ಲೆಗಳ ಮತ್ತಷ್ಟು ಕ್ಷೇತ್ರಗಳಲ್ಲಿ ಬಿಜೆಪಿ (BJP) ಮತ್ತು ಜೆಡಿಎಸ್‌ನಿಂದ (JDS) ಮತ್ತಷ್ಟು ನಾಯಕರನ್ನು ತನ್ನತ್ತ ಸೆಳೆದುಕೊಳ್ಳಲು ಹವಣಿಸುತ್ತಿದೆ.
ಈಗ ಬಿಜೆಪಿ (BJP) ನಾಯಕ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (CP Yogeshwar) ಹಾಗೂ ಕೆಎಂಎಫ್ (KMF) ಮಾಜಿ ಅಧ್ಯಕ್ಷರಾದ ಜೆಡಿಎಸ್ (JDS) ಮುಖಂಡ ಪಿ.ನಾಗರಾಜು ಸೇರಿದಂತೆ ಕೆಲ ಪ್ರಮುಖರು ಕಾಂಗ್ರೆಸ್ ಸೇರ್ಪಡೆಯಾಗುವ ಚರ್ಚೆಗಳು ನಡೆಯುತ್ತಿದೆ. ಈ ಇಬ್ಬರು ನಾಯಕರಿಗೆ ಪಕ್ಷಾಂತರ ಹೊಸದೇನಲ್ಲ. ಆದರೂ, ಸೂಕ್ತ ಸಮಯಕ್ಕಾಗಿ ಕಾದು ಕುಳಿತಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ವೇಳೆಗೆ ಪಿ.ನಾಗರಾಜು ಕಾಂಗ್ರೆಸ್ ತೆರೆದು ಜೆಡಿಎಸ್ ಸೇರ್ಪಡೆಯಾಗಿದ್ದರು. ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ತಮ್ಮ ಅನುಕೂಲಕ್ಕೆ ತಕ್ಕಂತೆ ಪಕ್ಷಾಂತರ ಮಾಡುವುದನ್ನು ಹವ್ಯಾಸ ಮಾಡಿಕೊಂಡಿದ್ದಾರೆ. ಮೂರು ಪಕ್ಷಗಳಲ್ಲು ತಿರುಗಾಡಿ ಬಂದಿರುವ ಪಿ.ನಾಗರಾಜು ಸದ್ಯಕ್ಕೆ ಕೈ ಪಾಳಯ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ.
ಸಿಪಿವೈ ಕೈ ಸೇರ್ಪಡೆ ಸುಳಿವು:
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಚುನಾಯಿತರಾದ ವಿಧಾನ ಪರಿಷತ್ (Council) ಸದಸ್ಯ ಎಸ್ .ರವಿರವರು ಮುಂದಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್ (DK Shivakumar) ನೇತೃತ್ವದಲ್ಲಿ ಬೀದರ್‌ನಿಂದ ಮಡಿಕೇರಿವರೆಗೂ ಸಾಕಷ್ಟುಮಂದಿ ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆ ಎನ್ನುವ ಸುಳಿವು ನೀಡಿದರು. ಈ ವೇಳೆ ಹಾಲಿ ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್ ಜೆಡಿಎಸ್‌ಗೆ (JDS) ವಿರೋಧಿಯಾಗಿರುವುದರಿಂದ ನಮಗೆ ಬೆಂಬಲ ನೀಡಿರಬಹುದು ಎನ್ನುವ ರವಿಯವರ ತೇಲಿಕೆ ಮಾತು ಈಗ ಯೋಗೇಶ್ವರ್ ಕಾಂಗ್ರೆಸ್ಸಿನತ್ತ ಮುಖ ಮಾಡಿದ್ದಾರೆಯೇ ಎನ್ನುವ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಇದಕ್ಕೆ ಕಾರಣವಾಗಿರುವುದು ಚನ್ನಪಟ್ಟಣದಲ್ಲಿ 150ಕ್ಕೂ ಹೆಚ್ಚು ಮಂದಿ ಸ್ಥಳೀಯ ಸಂಸ್ಥೆಗಳಿಂದ ಬಿಜೆಪಿ ಬೆಂಬಲಿತರಾಗಿ ಆಯ್ಕೆಯಾಗಿದ್ದರೂ ಒಟ್ಟಾರೆ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿಗೆ ಇಡೀ ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಬಿದ್ದಿರುವ ಮತಗಳ ಸಂಖ್ಯೆ 54 ಮಾತ್ರ. ಬದಲಿಗೆ ಈ ಮತಗಳು ಕಾಂಗ್ರೆಸ್ ಗೆ ವರ್ಗಾವಣೆಯಾಗಿವೆ. ಸ್ವತಃ ರವಿಯಯವರೇ ನನಗೆ ಚನ್ನಪಟ್ಟಣದಲ್ಲಿ ಬೆಜೆಪಿ ಸದಸ್ಯರು ಮತ ಹಾಕಿದ್ದಾರೆ ಎಂದು ಹೇಳಿರುವುದು ಇದಕ್ಕೆ ಮತ್ತಷ್ಟುಪುರಾವೆ ಒದಗಿಸಿದಂತಾಗಿದೆ.
ಸೈನಿಕನ ಜಾಣ ಮೌನ: ಬದಲಾದ ರಾಜಕೀಯ ಸನ್ನಿವೇಶದಲ್ಲಿ ಯಡಿಯೂರಪ್ಪ (Yediyurappa) ಅಧಿಕಾರದಿಂದ ಕೆಳಕ್ಕಿಳಿದು ಬಸವರಾಜ ಬೊಮ್ಮಾಯಿ (Basavaraj Bommai) ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಆದರೆ, ಯಡಿಯೂರಪ್ಪ ಅವರ ಅವಕೃಪೆಗೆ ಒಳಗಾದ ಯೋಗೇಶ್ವರ್ ಗೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ. ಅಲ್ಲಿಯವರೆಗೂ ಕುಮಾರಸ್ವಾಮಿ ಮತ್ತು ಡಿಕೆಶಿ ಬ್ರದರ್ಸ್ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದರು. ಆದರೀಗ ಯೋಗೇಶ್ವರ್ ರವರು ಕುಮಾರಸ್ವಾಮಿ ಮೇಲೆ ವಾಗ್ದಾಳಿ ಮುಂದೂವರೆಸಿದರು ಡಿಕೆ ಸಹೋದರರ ವಿರುದ್ಧ ಮಾತನಾಡುವಾಗ ಮೆದುವಾಗಿದ್ದಾರೆ ಎನ್ನುವ ಮಾತುಗಳು ಕ್ಷೇತ್ರ ವ್ಯಾಪ್ತಿಯಲ್ಲಿ ಕೇಳಿ ಬರುತ್ತಿದೆ.