'ಕೊರೋನಾ ಅಕ್ರಮದ ಬಗ್ಗೆ ಪಿಎಸಿ ತನಿಖೆಯಿಂದ ಕಾಗೇರಿಗೇಕೆ ಗಾಬರಿ?'

By Kannadaprabha NewsFirst Published Jun 2, 2020, 10:21 AM IST
Highlights

ಕೊರೋನಾ ಅಕ್ರಮದ ಬಗ್ಗೆ ಪಿಎಸಿ ತನಿಖೆಯಿಂದ ಕಾಗೇರಿಗೇಕೆ ಗಾಬರಿ?| ಹಕ್ಕನ್ನು ಏಕಾಏಕಿ ಮೊಟಕುಗೊಳಿಸಲು ಹೇಗೆ ಸಾಧ್ಯ?| ಸ್ಪೀಕರ್‌ ಕಾಗೇರಿ ವಿರುದ್ಧ ಡಿಕೆಶಿ ವಾಗ್ದಾಳಿ

ಬೆಂಗಳೂರು(ಜೂ.02): ರಾಜ್ಯ ಸರ್ಕಾರ ಕೊರೋನಾ ಔಷಧ, ಪಿಪಿಇ ಕಿಟ್‌ ಹಾಗೂ ವೆಂಟಿಲೇಟರ್‌ ಖರೀದಿಯಲ್ಲಿ ನಡೆಸಿದೆ ಎನ್ನಲಾದ ಅಕ್ರಮದ ಬಗ್ಗೆ ವಿಧಾನಸಭೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಮುಂದಾದರೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಏಕೆ ಗಾಬರಿ ಆಗುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರಶ್ನೆ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರವು ಪಾರದರ್ಶಕ ಆಡಳಿತ ನಡೆಸುತ್ತಿದ್ದರೆ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್‌.ಕೆ. ಪಾಟೀಲ್‌ ಅವರ ಸಮಿತಿಯು ಪರಿಶೀಲನೆ ನಡೆಸಿದರೆ ತಪ್ಪಿಲ್ಲ. ಶಾಸಕಾಂಗದ ವ್ಯವಸ್ಥೆಯಲ್ಲಿ ಸರ್ಕಾರ ಹಾಗೂ ವಿಧಾನಸಭೆ ಸಭಾಧ್ಯಕ್ಷರೇ ಸಮಿತಿಗೆ ಪರಿಶೀಲನೆಗೆ ಹಕ್ಕು ನೀಡಿದ್ದಾರೆ. ಈ ಹಕ್ಕನ್ನು ಏಕಾಏಕಿ ಮೊಟಕುಗೊಳಿಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಹಕ್ಕುಚ್ಯುತಿ ಮಂಡಿಸುವ ಎಚ್‌.ಕೆ. ಪಾಟೀಲ್‌ ಚಿಂತನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸುತ್ತೇವೆ. ಎಚ್‌.ಕೆ. ಪಾಟೀಲ್‌ ಅವರು ಹಕ್ಕುಚ್ಯುತಿ ಮಂಡಿಸುವುದಾದರೆ ಅವರಿಗೆ ಅವಕಾಶವಿದೆ. ಈ ಬಗ್ಗೆ ನಮ್ಮೊಂದಿಗೆ ಚರ್ಚಿಸಿದರೆ ಹಕ್ಕುಚ್ಯುತಿ ಮಂಡಿಸಲು ಸಹ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಪಿಪಿಇ ಕಿಟ್‌ ಗುಣಮಟ್ಟ ಸರಿಯಿಲ್ಲ:

ರಾಜ್ಯ ಸರ್ಕಾರ ವೈದ್ಯರಿಗೆ ವಿತರಿಸಿರುವ ಪಿಪಿಇ ಕಿಟ್‌ಗಳ ಬಗ್ಗೆ ವೈದ್ಯರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಿಪಿಇ ಕಿಟ್‌ಗಳ ಗುಣಮುಟ್ಟದ ಬಗ್ಗೆ ಗೊತ್ತಿದೆ. ಸರ್ಕಾರ ಇಂತಹ ಸಮಯದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಕಿಡಿ ಕಾರಿದರು.

ಕೇಂದ್ರವೇ ಹೊಣೆ- ಖರ್ಗೆ:

ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಲಾಕ್‌ಡೌನ್‌ ಅವಧಿಯಲ್ಲಿ 560 ಮಂದಿ ಹಸಿವು ಮತ್ತಿತರ ಕಾರಣದಿಂದ ಮೃತಪಟ್ಟಿದ್ದಾರೆ. ಲಕ್ಷಾಂತರ ಮಂದಿ ವಲಸಿಗರು ಹಾಗೂ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಇದಕ್ಕೆಲ್ಲಾ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ದೂರಿದರು. ಕೊರೋನಾದಿಂದ ಇಡೀ ದೇಶ ಅಲ್ಲೋಲ ಕಲ್ಲೋಲವಾಗಿದೆ. ದೇಶದಲ್ಲಿ ಕಡಿಮೆ ಸೋಂಕು ಇದ್ದಾಗ ಲಾಕ್‌ಡೌನ್‌ ಮಾಡಿ ಸೋಂಕು ತೀವ್ರವಾಗಿ ಹರಡಿದ ಬಳಿಕ ಲಾಕ್‌ಡೌನ್‌ ತೆರವು ಮಾಡಿದ್ದಾರೆ. ದೇಶದಲ್ಲಿ 13 ಸಾವಿರ ಪ್ಯಾಸೆಂಜರ್‌ ರೈಲುಗಳಿದ್ದು 2.30 ಕೋಟಿ ಮಂದಿ ನಿತ್ಯ ಸಂಚರಿಸುತ್ತಿದ್ದರು. ದೇಶದ ವಿವಿದೆಡೆ ಸಿಲುಕಿದ್ದ 5-6 ಕೋಟಿ ಜನ ವಲಸಿಗರನ್ನು ಪ್ಯಾಸೆಂಜರ್‌ ರೈಲಿನಲ್ಲಿ ನಾಲ್ಕೇ ದಿನದಲ್ಲಿ ಅವರವರ ಊರು ತಲುಪಿಸಬಹುದಿತ್ತು. ಲಾಕ್‌ಡೌನ್‌ಗೆ ಮೊದಲು ಅವರನ್ನು ಅವರ ಸ್ಥಳಗಳಿಗೆ ತಲಪಿಸಬೇಕಿತ್ತು. ಆ ರೀತಿ ಮಾಡದೆ ಬೀದಿ-ಬೀದಿಯಲ್ಲಿ ಜನ ಸಾಯುವಂತೆ ಮಾಡಿದ್ದಾರೆ. ರಸ್ತೆಗಳಲ್ಲಿ ಹೆರಿಗೆ ಆಗುವುದು, ರೈಲ್ವೆ ಹಳಿಗಳ ಮೇಲೆ ಮಲಗಿ ಸಾಯುವುದು. ಅನ್ನ ಹಾಗೂ ನೀರಿಲ್ಲದೆ ಸಾಯುವುದನ್ನು ಕೇಂದ್ರ ತಪ್ಪಿಸಬಹುದಿತ್ತು ಎಂದು ಹೇಳಿದರು.

ರೈಲ್ವೆ ಸಚಿವರ ರಾಜೀನಾಮೆಗೆ ಆಗ್ರಹ:

ಮುಂಬೈನಿಂದ ಲಕ್ನೋಗೆ ಹೋಗಬೇಕಿದ್ದ ಶ್ರಮಿಕ್‌ ರೈಲು ಬಿಹಾರಕ್ಕೆ ಹೋಗುತ್ತದೆ. 30 ಗಂಟೆ ಪ್ರಯಾಣ 72 ಗಂಟೆಕ್ಕೆ ಹೆಚ್ಚಾಗಿ ಊಟ, ನೀರು ಇಲ್ಲದೆ ಪ್ರಯಾಣಿಕರು ಸತ್ತಿದ್ದಾರೆ. ಶ್ರಮಿಕ್‌ ರೈಲಿನಲ್ಲಿನ ಅವ್ಯವಸ್ಥೆ ಹಾಗೂ ಸೂಕ್ತ ಸಮಯಕ್ಕೆ ವಲಸಿಗರನ್ನು ಅವರ ಊರುಗಳಿಗೆ ಸೇರಿಸಲು ನಿರ್ಲಕ್ಷ್ಯ ವಹಿಸಿದ ಕೇಂದ್ರ ರೈಲ್ವೆ ಸಚಿವ ಪಿಯೂಶ್‌ ಗೋಯಲ್‌ ರಾಜೀನಾಮೆ ನೀಡಬೇಕು ಎಂದು ಖರ್ಗೆ ಒತ್ತಾಯಿಸಿದರು.

click me!