ಬೆಳಗಾವಿ ಉತ್ತರದಲ್ಲಿ ಜಾತಿ ಲೆಕ್ಕಾಚಾರವೇ ಜೋರು: ಮತಗಳ ವಿಭಜನೆ, ಲಾಭದ ಭಜನೆ..!

By Kannadaprabha News  |  First Published Mar 25, 2023, 10:00 PM IST

ಮುಸ್ಲಿಂ, ಮರಾಠ ಮತ್ತು ಲಿಂಗಾಯತ ಮತಗಳು ಇಲ್ಲಿ ನಿರ್ಣಾಯಕ. ಯಾವುದೇ ಸಮುದಾಯವನ್ನು ಇಲ್ಲಿ ಕಡೆಗಣಿಸುವಂತಿಲ್ಲ. ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ. ಹಾಗಾಗಿ, ಇಲ್ಲಿ ಯಾರೂ ಗೆಲುವು ಸಾಧಿಸುತ್ತಾರೆ ಎಂಬುದನ್ನು ಸುಲಭವಾಗಿ ಹೇಳುವಂತಿಲ್ಲ. ಮತಗಳ ವಿಭಜನೆ ಯಾರಿಗೆ ಲಾಭವಾಗುತ್ತದೆ ಎಂಬುದು ತೀವ್ರ ಕುತೂಹಲ ಕೆರಳಿಸುವಂತೆ ಮಾಡಿದೆ.


ಶ್ರೀಶೈಲ ಮಠದ

ಬೆಳಗಾವಿ(ಮಾ.25):  ಜಿಲ್ಲೆಯಲ್ಲೇ ಅತೀ ಹೆಚ್ಚು ಸಾಕ್ಷರತೆ ಹೊಂದಿರುವ ಕ್ಷೇತ್ರ ಎಂಬ ಹೆಗ್ಗಳಿಕೆ ಹೊತ್ತಿರುವ ಬೆಳಗಾವಿ ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಆಕಾಂಕ್ಷಿಗಳ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ತನ್ನ ಅಭ್ಯರ್ಥಿ ಘೋಷಣೆಗೂ ಮೊದಲೇ ಬಿಜೆಪಿಗೆ ಜೆಡಿಎಸ್‌ ಶಾಕ್‌ ನೀಡಿದ್ದರೆ, ಕಾಂಗ್ರೆಸ್‌ಗೆ ಎಐಎಂಐಎಂ ಶಾಕ್‌ ಕೊಟ್ಟಿದೆ.

Latest Videos

undefined

ಸಾಕ್ಷರತೆ ಕ್ಷೇತ್ರವಾಗಿದ್ದರೂ ಇಲ್ಲಿ ಮತದಾನ ಪ್ರಮಾಣ ಕಡಿಮೆ. ಹಾಗಾಗಿ, ಇಲ್ಲಿ ಗೆಲುವು ಯಾರಿಗೂ ಸುಲಭವಲ್ಲ. ಬಿಜೆಪಿಯ ಅನಿಲ ಬೆನಕೆ ಹಾಲಿ ಶಾಸಕ. ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ನಿಲ್ಲಲ್ಲಿದ್ದಾರೆ. ಆದರೆ, ಬಿಜೆಪಿಯಲ್ಲೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಕಾಂಗ್ರೆಸ್‌ನಲ್ಲಿಯೂ ಆಕಾಂಕ್ಷಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಇಲ್ಲಿ ಧರ್ಮ, ಜಾತಿ ಆಧಾರದ ಮೇಲೆ ಚುನಾವಣೆ ನಡೆಯುತ್ತ ಬಂದಿದೆ. ಹಾಗಾಗಿ, ಈಗ ಜಾತಿ ಲೆಕ್ಕಾಚಾರವೇ ಇಲ್ಲಿ ಪ್ರಮುಖವಾಗಿದೆ. ಆದರೆ, ಪ್ರಮುಖ ಪಕ್ಷಗಳಲ್ಲಿನ ಅಭ್ಯರ್ಥಿಗಳು ಯಾರು ? ಎಂಬುದಕ್ಕೆ ಇನ್ನು ಉತ್ತರ ಸಿಕ್ಕಿಲ್ಲ. ಎಲ್ಲವೂ ಇನ್ನೂ ಅಸ್ಪಷ್ಟವಾಗಿದೆ.

ಮುಸ್ಲಿಂ ಸಮುದಾಯದ ಪ್ರಗತಿಗಾಗಿ ಸಾಕಷ್ಟು ಶ್ರಮಿಸಿದ್ದೇನೆ: ಬಾಲಚಂದ್ರ ಜಾರಕಿಹೊಳಿ

ಹಾಲಿ ಬಿಜೆಪಿ ಶಾಸಕ ಅನಿಲ ಬೆನಕೆ ಮರಾಠ ಸಮುದಾಯಕ್ಕೆ ಸೇರಿದ್ದರೆ, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಫಿರೋಜ್‌ ಸೇಠ್‌, ಅವರ ಸಹೋದರ ಆಸೀಫ್‌ ಉರ್ಪ ರಾಜು ಸೇಠ್‌ ಪ್ರಮುಖ ಆಕಾಂಕ್ಷಿಗಳು. ಲಿಂಗಾಯತ ಮತಗಳು ಇಲ್ಲಿ ನಿರ್ಣಾಯಕ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಲಿಂಗಾಯತ ಸಮುದಾಯವನ್ನು ಕಡೆಗಣಿಸಿವೆ ಎನ್ನುವ ಆರೋಪ ಕೇಳಿಬರುತ್ತಿವೆ. ಲಿಂಗಾಯತ ಸಮುದಾಯದ ಮುಖಂಡರು ರಾಷ್ಟ್ರೀಯ ಪಕ್ಷಗಳೊಂದಿಗೆ ಮುನಿಸಿಕೊಂಡಿದ್ದಾರೆ. ಹಾಗಾಗಿ, ಲಿಂಗಾಯತ ಸಮುದಾಯದ ಲಾಭ ಪಡೆಯಲು ಜೆಡಿಎಸ್‌ ರಣತಂತ್ರ ಹೆಣದಿದೆ. ವೀರಶೈವ ಲಿಂಗಾಯತ ಸಮುದಾಯದ ರೈತ ಮುಖಂಡ ಶಿವಾನಂದ ಮುಗಳಿಹಾಳ ಅವರನ್ನು ಕಣಕ್ಕಿಳಿಸಲು ಜೆಡಿಎಸ್‌ ಪ್ಲಾನ್‌ ಮಾಡುವ ಮೂಲಕ ಬಿಜೆಪಿಗೆ ಶಾಕ್‌ ನೀಡಿದ್ದರೆ, ಎಐಎಂಐಎಂ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡುವ ಮೂಲಕ ಕಾಂಗ್ರೆಸ್‌ಗೆ ಶಾಕ್‌ ಕೊಟ್ಟಿದೆ. ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಲಿಂಗಾಯತ ಮತಗಳ ಓಲೈಕೆಗೆ ಜೆಡಿಎಸ್‌ ಮುಂದಾಗಿದೆ. ಬೆಳಗಾವಿ ಉತ್ತರದಲ್ಲಿ ಲಿಂಗಾಯತರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಮುಸ್ಲಿಂ ಮತ್ತು ಮರಾಠ ಸಮುದಾಯ ಎರಡನೇ ಸ್ಥಾನದಲ್ಲಿದೆ.

ರೈತ ಮುಖಂಡ, ಲಿಂಗಾಯತ ಸಮುದಾಯದ ಶಿವಾನಂದ ಮುಗಳಿಹಾಳ ಅಧಿಕೃತವಾಗಿ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಶಾಸಕ ಅನಿಲ ಬೆನಕೆ. ಮತ್ತೊಮ್ಮೆ ಚುನಾವಣಾ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಲಿಂಗಾಯತ ಸಮುದಾಯದ ಮುರಘೇಂದ್ರಗೌಡ ಪಾಟೀಲ, ಡಾ. ರವಿ ಪಾಟೀಲ, ಉದ್ಯಮಿ ವೀರೇಶ ಕಿವಡಸಣ್ಣವರ ಕೂಡ ಬಿಜೆಪಿ ಟಿಕೆಟ್‌ನ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯಲ್ಲಿ ಲಿಂಗಾಯತ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ. ಸ್ಥಳೀಯ ಚುನಾವಣೆಯಲ್ಲಿಯೂ ಲಿಂಗಾಯತ ಸಮುದಾಯವನ್ನು ನಿರ್ಲಕ್ಷಿಸಲಾಗಿದೆ. ಹಾಗಾಗಿ, ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕು ಎನ್ನುವ ಕೂಗುಕೇಳಿಬರುತ್ತಿದೆ. ಮುರಘೇಂದ್ರಗೌಡ ಪಾಟೀಲ ಅವರು ಕ್ಷೇತ್ರದ ರಾಜಕೀಯದಲ್ಲಿ ಸಕ್ರೀಯವಾಗಿದ್ದಾರೆ.

ಕಾಂಗ್ರೆಸ್‌ ಟಿಕೆಟ್‌ಗಾಗಿ ಮಾಜಿ ಶಾಸಕ ಫಿರೋಜ್‌ ಸೇಠ್‌, ಅವರ ಸಹೋದರ ಆಸೀಫ್‌ ಉರ್ಪ ರಾಜು ಸೇಠ್‌, ಸತೀಶಜಾರಕಿಹೊಳಿ ಅವರ ಆಪ್ತ ಅಜೀಮ್‌ ಪಟವೇಗಾರ, ಸಿದ್ಧಿಕ್ಕಿ ಅಂಕಲಗಿ ಹಾಗೂ ಕಾಂಗ್ರೆಸ್‌ ಕಮೀಟಿ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿಹಾಗೂ ಮಾಜಿ ಸಚಿವ ಎ.ಬಿ.ಪಾಟೀಲ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಕಾಂಗ್ರೆಸ್‌ ಟಿಕೆಟ್‌ ಬಹುತೇಕ ಖಚಿತವಾಗಿದೆ. ಆದರೆ, ಎಐಎಂಐಎಂ ಮಾಜಿ ನಗರ ಸೇವಕ ಲತೀಫ್‌ಖಾನ್‌ ಪಠಾಣ ಅವರಿಗೆ ಟಿಕೆಟ್‌ ನೀಡುವ ಮೂಲಕ ಕಾಂಗ್ರೆಸ್‌ಗೆ ಶಾಕ್‌ ಕೊಟ್ಟಿದೆ. ಬಿಜೆಪಿಯಿಂದ ಹಾಲಿ ಶಾಸಕ ಅನಿಲ ಬೆನಕೆ ಅವರಿಗೆ ಟಿಕೆಟ್‌ ಸಿಗುವುದು ಪಕ್ಕಾ ಆಗಿದೆ. ಹಾಗಾಗಿ, ಇಲ್ಲಿ ಲಿಂಗಾಯತ ಟ್ರಂಪ್‌ ಕಾರ್ಡ ಬಳಸಲು ಜೆಡಿಎಸ್‌ ಮುಂದಾಗಿದೆ. ಈಗಾಗಲೇ ಜೆಡಿಎಸ್‌ ರೈತ ಸಂಘಟನೆಗಳು ಬೆಂಬಲವನ್ನು ಕೇಳಿದೆ. ಕನ್ನಡ ಪರ ಸಂಘಟನೆಗಳ ಮುಖಂಡರ ವಿಶ್ವಾಸಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದೆ.

ಮುಸ್ಲಿಂ, ಮರಾಠ ಮತ್ತು ಲಿಂಗಾಯತ ಮತಗಳು ಇಲ್ಲಿ ನಿರ್ಣಾಯಕ. ಯಾವುದೇ ಸಮುದಾಯವನ್ನು ಇಲ್ಲಿ ಕಡೆಗಣಿಸುವಂತಿಲ್ಲ. ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ. ಹಾಗಾಗಿ, ಇಲ್ಲಿ ಯಾರೂ ಗೆಲುವು ಸಾಧಿಸುತ್ತಾರೆ ಎಂಬುದನ್ನು ಸುಲಭವಾಗಿ ಹೇಳುವಂತಿಲ್ಲ. ಮತಗಳ ವಿಭಜನೆ ಯಾರಿಗೆ ಲಾಭವಾಗುತ್ತದೆ ಎಂಬುದು ತೀವ್ರ ಕುತೂಹಲ ಕೆರಳಿಸುವಂತೆ ಮಾಡಿದೆ.

ಈ ಚುನಾವಣೆ ನನ್ನ ಕೊನೆಯ ಎಲೆಕ್ಷನ್‌ ಎಂದ ಬಿಜೆಪಿ ನಾಯಕ..!

ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ನಡೆಯಲಿದ್ದು, ಎಂಇಎಸ್‌ ಮತ್ತೆ ಮುನ್ನೆಲೆಗೆ ಬಂದಿದೆ. ಎಂಇಎಸ್‌ ಬೆಂಬಲಿತ ಅಭ್ಯರ್ಥಿಯಾಗಿ ಶುಭಂ ಶೆಳಕೆ ಸ್ಪರ್ಧಿಸುವ ಸಾಧ್ಯತೆ ಇದೆ. ಆಮ್‌ ಆದ್ಮಿ ಪಾರ್ಟಿಯಿಂದ ರಾಜಕುಮಾರ ಟೋಪಣ್ಣವರ ಕಣಕ್ಕಿಳಿಯಲಿದ್ದಾರೆ.

ಕ್ಷೇತ್ರದ ಇತಿಹಾಸ:

1957 ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಬೆಳಗಾವಿ ನಗರ ಕ್ಷೇತ್ರದ 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಬೆಳಗಾವಿ ಉತ್ತರ ಕ್ಷೇತ್ರವಾಗಿ ಮಾರ್ಪಟ್ಟಿದೆ. ಈ ಕ್ಷೇತ್ರದ ಮೇಲೆ ಮಹಾರಾಷ್ಟ್ರ ಏಕೀಕರಣ ಸಮಿತಿ ( ಎಂಇಎಸ್‌) ಹಿಡಿತದಲ್ಲಿತ್ತು. ಉತ್ತರ ಕ್ಷೇತ್ರದಲ್ಲಿ 1999ರಲ್ಲಿ ರಮೇಶ ಕುಡಚಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ ಬಾವುಟ ಹಾರಿಸಿದ್ದರು. 4 ಬಾರಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದರೆ, 8 ಬಾರಿ ಎಂಇಎಸ್‌ ಗೆಲುವು ಸಾಧಿಸಿತ್ತು. ಒಂದು ಬಾರಿ ಬಿಜೆಪಿ ಗೆಲುವು ಸಾಧಿಸಿದೆ.

ಜಾತಿ ಲೆಕ್ಕಾಚಾರ

ಲಿಂಗಾಯತ 40,000
ಮರಾಠ 48000
ಮುಸ್ಲಿಂ 30,000
ಎಸ್‌ಸಿ 25,000
ಕುರುಬ 3000

click me!