ಸಮಸ್ಯೆ ಮೂಲದಿಂದ ಸಮಸ್ಯೆ ಪರಿಹಾರದವರೆಗೆ: ವಲಸಿಗರ ಕಂಪ್ಲೀಟ್ ಡಿಟೇಲ್ಸ್!

By Web DeskFirst Published Aug 1, 2018, 2:39 PM IST
Highlights

ಅಸ್ಸಾಂ ಅಕ್ರಮ ವಲಸಿಗರ ಫುಲ್ ಡಿಟೇಲ್ಸ್!  ಎನ್‌ಆರ್‌ಸಿ ಅಂದರೆ ಏನು? !  ಅಸ್ಸಾಂ ರಾಜ್ಯಕ್ಕೆ ಮಾತ್ರ ಏಕೆ ಈ ಪಟ್ಟಿ? ! ಯಾರು ನೈಜ ಅಸ್ಸಾಮಿಗಳು? ! ಅಕ್ರಮ ವಲಸಿಗರ ಸಮಸ್ಯೆ ಅಸ್ಸಾಂನಲ್ಲೇ ಅತೀ ಹೆಚ್ಚು !  ಎನ್‌ಆರ್‌ಸಿಯಲ್ಲಿ ಇಲ್ಲದವರು ಏನು ಮಾಡಬೇಕು? ! 1971 ಮಾರ್ಚ್ 24ರ ಗಡುವು ಏಕೆ? ! ವಲಸಿಗರ ಸಮಸ್ಯೆ ರಾಜಕೀಯ ದಾಳವೇ?

ಬೆಂಗಳೂರು(ಆ.1): ಅಸ್ಸಾಂನಲ್ಲಿ ನೆಲೆಸಿರುವ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ಕಾರ್ಯ ಅಂತಿಮ ಘಟ್ಟ ತಲುಪಿದೆ. ಸದ್ಯ ರಾಷ್ಟ್ರೀಯ ನಾಗರಿಕರ ನೋಂದಣಿಯ ಅಂತಿಮ ಕರಡು ಪಟ್ಟಿ ಬಿಡುಗಡೆಯಾಗಿದ್ದು, ಬರೋಬ್ಬರಿ 40 ಲಕ್ಷ ಜನರು ನೈಜ ಅಸ್ಸಾಮಿಗಳೆಂದು ಸಾಬೀತುಪಡಿಸಲು ವಿಫಲರಾಗಿದ್ದಾರೆ. ಅವರ ಕತೆ ಏನು? ಅವರು ಭಾರತೀಯರಲ್ಲವೇ? ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದವರನ್ನೆಲ್ಲ ಭಾರತ ಗಡೀಪಾರು ಮಾಡುತ್ತಾ? ಇದಕ್ಕೇಕೆ ಮಮತಾ ಬ್ಯಾನರ್ಜಿ ಮುಂತಾದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ? ಸಮಗ್ರ ಮಾಹಿತಿ ಇಲ್ಲಿದೆ. 

ಎನ್‌ಆರ್‌ಸಿ ಅಂದರೆ ಏನು?:

ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಪಟ್ಟಿ ಎಂಬ ವ್ಯವಸ್ಥೆ ಹೊಂದಿರುವ ಏಕೈಕ ರಾಜ್ಯ ಅಸ್ಸಾಂ. ಅಸ್ಸಾಂನಲ್ಲಿರುವ ನೈಜ ಅಸ್ಸಾಂ ಪ್ರಜೆಗಳ ನೋಂದಣಿಯೇ ರಾಷ್ಟ್ರೀಯ ನಾಗರಿಕ ರಿಜಿಸ್ಟ್ರಿ. 1951ರ ಗಣತಿಯಲ್ಲಿ ಮೊಟ್ಟಮೊದಲ ಬಾರಿಗೆ ಇದನ್ನು ಸಿದ್ಧಪಡಿಸಲಾಗಿದೆ. ನಾಗರಿಕರ ಹೆಸರು, ಕುಟುಂಬದವರ ಸಂಖ್ಯೆ, ಅವರ ಆಸ್ತಿ-ಪಾಸ್ತಿ ಮತ್ತಿತರ ದಾಖಲೆಗಳನ್ನು ಒಳಗೊಂಡ ಮಾಹಿತಿಯನ್ನು ಅದರಲ್ಲಿ ಸಂಗ್ರಹಿಸಿಡಲಾಗಿದೆ.

ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ಜಿಲ್ಲಾಧಿಕಾರಿ ಮತ್ತು ವಿಭಾಗೀಯ ಕಚೇರಿಯಲ್ಲಿ 1960ಕ್ಕೂ ಮೊದಲು ಇರಿಸಲಾಗುತ್ತಿತ್ತು. ಆದರೆ 1960ರ ನಂತರ ಪೊಲೀಸರಿಗೆ ವರ್ಗಾಯಿಸಲಾಯಿತು. ಅನಂತರ ಅದನ್ನು ಕಾಲಕಾಲಕ್ಕೆ ಪರಿಷ್ಕರಿಸುತ್ತಿರಬೇಕು ಎಂಬ ನಿಯಮವಿದೆ.

ಅಸ್ಸಾಂ ರಾಜ್ಯಕ್ಕೆ ಮಾತ್ರ ಏಕೆ ಈ ಪಟ್ಟಿ?:

ಅಸ್ಸಾಂನ ಸಾಂಸ್ಕೃತಿಕ, ಆರ್ಥಿಕ ಬಿಕ್ಕಟ್ಟು ಮತ್ತು ಬದಲಾವಣೆಗಳು ಅಲ್ಲಿನ ಜನರಲ್ಲಿ ಭೀತಿ ಹುಟ್ಟಿಸಿದ್ದವು. ಅಕ್ರಮವಾಗಿ ಬಾಂಗ್ಲಾದೇಶದಿಂದ ನುಸುಳುಕೋರರು ಅಸ್ಸಾಂಗೆ ಪ್ರವೇಶಿಸಿದ್ದಾರೆ ಎಂದು 1980ರಲ್ಲಿ ಸ್ಥಳೀಯ ಸಮುದಾಯಗಳು ಹೋರಾಟ ನಡೆಸಿ, ಎನ್‌ಆರ್‌ಸಿ ದತ್ತಾಂಶಗಳನ್ನು ಅಪ್ ಡೇಟ್ ಮಾಡಬೇಕೆಂದು ಒತ್ತಾಯಿಸಿದರು. ಇದು ಸುಪ್ರೀಂಕೋರ್ಟ್‌ವರೆಗೂ ಹೋಯಿತು.

ಅಂತಿಮವಾಗಿ 2014ರ ಡಿಸೆಂಬರ್ 17ರಂದು ಅಸ್ಸಾಂ ಎನ್ ಆರ್‌ಸಿ ದತ್ತಾಂಶಗಳನ್ನು ಪರಿಷ್ಕರಿಸಿ ಪ್ರಕಟಿಸಬೇಕೆಂದು ಸುಪ್ರಿಂಕೋರ್ಟ್ ತೀರ್ಪು ನೀಡಿತು. ಆ ತೀರ್ಪಿನ ಭಾಗವಾಗಿ ಜೂನ್ 30, 2018ರಂದು ಪಟ್ಟಿ ಪ್ರಕಟಿಸಲು ಸುಪ್ರೀಂಕೋರ್ಟ್ ಗಡುವು ನೀಡಿತ್ತು. ಆದರೆ ಅತಿವೃಷ್ಟಿಯಿಂದಾಗಿ ಎನ್‌ಆರ್‌ಸಿ ಪಟ್ಟಿ ಪ್ರಕಟಿಸುವುದನ್ನು ರಾಜ್ಯ ಸರ್ಕಾರ ಒಂದು ತಿಂಗಳು ಮುಂದೂಡಿತ್ತು. ಈಗ ಪ್ರಕಟಿಸಿದೆ.

ಯಾರು ನೈಜ ಅಸ್ಸಾಮಿಗಳು?:

ಅಕ್ರಮ ವಲಸಿಗರನ್ನು ಗುರುತಿಸಲು ಪ್ರತ್ಯೇಕ ರಿಜಿಸ್ಟ್ರಿ ರಚಿಸಲು ಸರ್ಕಾರ ನಿರ್ಧರಿಸಿದ ವೇಳೆ ಮಾಡಿಕೊಂಡ ಒಪ್ಪಂದದ ಅನ್ವಯ 1971ಕ್ಕೂ ಮುನ್ನ ಬಾಂಗ್ಲಾದೇಶದಿಂದ ಅಸ್ಸಾಂಗೆ ಬಂದವರನ್ನು ಸ್ಥಳೀಯರೆಂದು ಗುರುತಿಸಿ ಪೌರತ್ವ ನೀಡಲು ಒಪ್ಪಲಾಗಿತ್ತು. ಅದರನ್ವಯ ೨೦೧೫ರಲ್ಲಿ ಅರ್ಜಿ ಸ್ವೀಕಾರ ಆರಂಭವಾಗಿ ೨೦೧೭ರಲ್ಲಿ ಮೊದಲ ಪಟ್ಟಿ ಪ್ರಕಟಗೊಂಡಿತ್ತು. ಇದಕ್ಕಾಗಿ ಒಂದೋ ಅಲ್ಲಿನ ನಾಗರಿಕರ ಹೆಸರು 1951ರ ಎನ್‌ಆರ್‌ಸಿ ಪಟ್ಟಿಯಲ್ಲಿರಬೇಕು ಅಥವಾ 1971ರ ಮಾರ್ಚ್ 24ರ ಒಳಗಾಗಿ ಮತದಾರರ ಗುರುತಿನ ಚೀಟಿಯಲ್ಲಿ ಹೆಸರು ನೋಂದಣಿಯಾಗಿರಬೇಕು.

ಇಲ್ಲವಾದರೆ ಭೂಹಿಡುವಳಿ ದಾಖಲೆ, ಪಾಸ್‌ಪೋರ್ಟ್, ಶಾಶ್ವತ ವಾಸ್ತವ್ಯ ಪ್ರಮಾಣಪತ್ರ ಇವುಗಳಲ್ಲಿ ಯಾವುದಾದರೊಂದನ್ನು ಒದಗಿಸಿ ತಾವು ಅಕ್ರಮ ವಲಸಿಗರಲ್ಲ ಎಂದು ಸಾಬೀತು ಮಾಡಬೇಕಿತ್ತು. 2017ರಲ್ಲಿ ಮೊದಲ ಬಾರಿಗೆ ಎನ್‌ಆರ್‌ಸಿ ವರದಿ ಬಿಡುಗಡೆ ಮಾಡಿದಾಗ 1.9 ಕೋಟಿ ಜನರ ಹೆಸರು ರಿಜಿಸ್ಟ್ರಿಯಲ್ಲಿ ಸೇರಿತ್ತು. ಆಗ ಹೆಸರು ಸೇರದೇ ಇದ್ದವರಿಗೆ ಮತ್ತೊಂದು ಅವಕಾಶ ನೀಡಲಾಗಿತ್ತು. ಅದರನ್ವಯ 3.29 ಕೋಟಿ ಜನ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಸಂಬಂಧಿಸಿದ ಕರಡು ಪಟ್ಟಿ ಸೋಮವಾರ ಬಿಡುಗಡೆ ಆಗಿದೆ. ಇದರಲ್ಲಿ ಸೂಕ್ತ ದಾಖಲೆ ಸಲ್ಲಿಸದ 40 ಲಕ್ಷ ಜನರನ್ನು ಪಟ್ಟಿಯಿಂದ ಹೊರಗಿಡಲಾಗಿದೆ.

ಅಕ್ರಮ ವಲಸಿಗರ ಸಮಸ್ಯೆ ಅಸ್ಸಾಂನಲ್ಲೇ ಅತೀ ಹೆಚ್ಚು:

ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡೇ ಇರುವ ಅಸ್ಸಾಂನಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರ ಸಮಸ್ಯೆ ಹೆಚ್ಚು. ಸ್ವಾತಂತ್ರ್ಯಾನಂತರ 1971ರಲ್ಲಿ ಪೂರ್ವ ಪಾಕಿಸ್ತಾನದಿಂದ ವಿಭಜನೆಯಾಗಿ ಬಾಂಗ್ಲಾದೇಶ ಸ್ಥಾಪನೆಯಾಗುವುದಕ್ಕೂ ಮೊದಲು ಹಾಗೂ ನಂತರ ವಲಸಿಗರು ಅಕ್ರಮವಾಗಿ ಅಸ್ಸಾಂಗೆ ದೊಡ್ಡ ಪ್ರಮಾಣದಲ್ಲಿ ನುಸುಳಿದ್ದರು.

1972 ಮಾರ್ಚ್ 19ರಂದು ಭಾರತ ಮತ್ತು ಬಾಂಗ್ಲಾ ನಡುವೆ ಶಾಂತಿ ಒಪ್ಪಂದ ಏರ್ಪಡುವವರೆಗೂ ಬಾಂಗ್ಲಾದಿಂದ ಭಾರತಕ್ಕೆ ವಲಸೆ ಬರುವುದು ಮುಂದುವರೆದಿತ್ತು. ಮಾಹಿತಿ ಪ್ರಕಾರ ಪ್ರಕಾರ 50 ಲಕ್ಷ ಅಕ್ರಮ ವಲಸಿಗರಿರಬಹುದೆಂದು ಅಂದಾಜಿಸಲಾಗಿದೆ. ಗಡಿಯಲ್ಲಿ ನುಸುಳಿ ಒಳಬರುವ ಬಾಂಗ್ಲಾದೇಶಿ ಅಕ್ರಮ ವಲಸಿಗರು ಬಲಾಢ್ಯರಾಗಿದ್ದಾರೆ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕವಾಗಿಯೂ ಬದಲಾವಣೆಗೆ ಕಾರಣರಾಗುತ್ತಿದ್ದಾರೆ. ಇದು ಮೂಲನಿವಾಸಿಗಳು ಹಾಗೂ ವಲಸಿಗರು ಎಂಬ ತಿಕ್ಕಾಟಕ್ಕೆ ಕಾರಣವಾಗಿತ್ತು.

ಸಾಕಷ್ಟು ಹಿಂಸಾಚಾರಗಳು ನಡೆದಿದ್ದವು. ಬಳಿಕ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಮನವಿ ಸಲ್ಲಿಸಲಾಯಿತು. ಇದರ ಫಲವಾಗಿ 1983ರಲ್ಲಿ ಅಕ್ರಮ ವಲಸಿಗರ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಜಾರಿಗೊಳಿಸಲಾಯಿತು. ಇದು ಕೇವಲ ಅಸ್ಸಾಂಗೆ ಮಾತ್ರ ಅನ್ವಯವಾಗುತ್ತದೆ. 

ಘರ್ಷಣೆಯಲ್ಲಿದೆ ಇದರ ಮೂಲ:

ಅಸ್ಸಾಂ ಸ್ಥಳೀಯರು ಮತ್ತು ವಲಸಿಗರ ನಡುವೆ ದಶಕಗಳಿಂದಲೂ ತಿಕ್ಕಾಟ ನಡೆಯುತ್ತಲೇ ಇದೆ. ೮೦ರ ದಶಕದಲ್ಲಿ ಅಸ್ಸಾಂನಲ್ಲಿ ಅಕ್ರಮ ನುಸುಳಕೋರರ ಸಂಖ್ಯೆ ಹೆಚ್ಚಾದಂತೆ ಅಲ್ಲಿನ ಸ್ಥಳೀಯರು ನುಸುಳುಕೋರರನ್ನು ಹೊರಗಟ್ಟುವಂತೆ ಆಂದೋಲನವನ್ನೇ ಪ್ರಾರಂಭಿಸಿದರು. ವಿದ್ಯಾರ್ಥಿ ಚಳವಳಿಗಳು ಪ್ರಾರಂಭವಾದವು. ಅಸ್ಸಾಂ ವಿದ್ಯಾರ್ಥಿ ಸಂಘಟನೆ ಮತ್ತು ಅಸ್ಸಾಂ ಗಣ ಸಂಗ್ರಾಮ ಪರಿಷತ್ ಹೀಗೆ ಎಲ್ಲ ಸಂಘಟನೆಗಳಿಗೂ ಆಂದೋಲನ ವಿಸ್ತರಿಸಿತು. ಈ ಚಳವಳಿಯ ಭಾಗವಾಗಿ 1985, ಅಗಸ್ಟ್ 15ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಧ್ಯೆ ಒಪ್ಪಂದವಾಯಿತು. ಅದರನ್ವಯ ಯಾರು ಅಸ್ಸಾಮಿಗಳೆಂದು ತೀರ್ಮಾನಿಸಲು ಕೆಲ ಪ್ರಸ್ತಾಪಗಳನ್ನು ಮುಂದಿಡಲಾಗಿತ್ತು.

ಎನ್‌ಆರ್‌ಸಿಯಲ್ಲಿಲ್ಲದವರು ಮುಂದೇನು ಮಾಡಬೇಕು?:

ಜುಲೈ 30, 2018ರಂದು ಪ್ರಕಟವಾಗಿರುವ ಎನ್‌ಆರ್‌ಸಿ ವರದಿಯೇ ಅಂತಿಮ ವರದಿಯಲ್ಲ. ಯಾರ ಹೆಸರು ಎನ್ ಸಿಆರ್ ಪಟ್ಟಿಯಲ್ಲಿ ನೋಂದಣಿಯಾಗಿಲ್ಲವೋ ಅವರು ಆ.30ರಿಂದ ಸೆ.28ರವರೆಗೂ ಆಕ್ಷೇಪ ಸಲ್ಲಿಸಬಹುದು. ಆದರೆ 2018ರ ಡಿಸೆಂಬರ್‌ನಲ್ಲಿ ಪ್ರಕಟವಾಗುವ ಅಂತಿಮ ವರದಿಯಲ್ಲಿಯೂ ಹೆಸರು ಸೇರಿಸಲಾಗದವರು ಮತದಾನದ ಹಕ್ಕು ಕಳೆದುಕೊಳ್ಳುತ್ತಾರೆ. ಅ ಪಟ್ಟಿಯನ್ನೂ ಆಕ್ಷೇಪಿಸಿ ಇದಕ್ಕೆಂದೇ ಸ್ಥಾಪಿಸಲಾಗಿರುವ ನ್ಯಾಯಾಧಿಕರಣದ ಮೊರೆಹೋಗಬಹುದು.

ಅಲ್ಲಿಯೂ ಆಕ್ಷೇಪವಿದ್ದಲ್ಲಿ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಮೆಟ್ಟಿಲೇರಬಹುದು. ಒಟ್ಟಿನಲ್ಲಿ ಯಾರ ಬಳಿ ತಾವು ಭಾರತೀಯರು ಅಥವಾ ಅಸ್ಸಾಮಿಗಳು ಎಂಬುದನ್ನು ಸಾಬೀತುಪಡಿಸಲು ದಾಖಲೆಯಿದೆಯೋ ಅಥವಾ ಯಾರು ಅಸ್ಸಾಂನಲ್ಲೇ ಹುಟ್ಟಿ ಬೆಳೆದಿದ್ದಾರೋ ಅವರಿಗೆಲ್ಲ ಈ ಪಟ್ಟಿಗೆ ಸೇರ್ಪಡೆಯಾಗಲು ಈಗಲೂ ಅವಕಾಶಗಳಿವೆ.

1971 ಮಾರ್ಚ್ 24ರ ಗಡುವು ಏಕೆ?:

ಎನ್‌ಆರ್‌ಸಿಯಲ್ಲಿ 1971ರ ಮಾ.24ಕ್ಕೂ ಮುನ್ನ ಅಸ್ಸಾಂನಲ್ಲಿದ್ದವರನ್ನು ಹಾಗೂ ಅವರ ವಂಶಜರನ್ನುಮಾತ್ರ ಅಸ್ಸಾಮಿಗಳೆಂದು ಪರಿಗಣಿಸಲು ನಿರ್ಧರಿಸಲಾಗಿದೆ. ಕಾರಣ ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ಇದ್ದಾಗ, 1971ರ ಮಾರ್ಚ್ 25ರಂದು ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಯಿತು. ಅಂತಿಮವಾಗಿ 1971ರ ಡಿಸೆಂಬರ್ 6ರಂದು ಪಾಕಿಸ್ತಾನದಿಂದ ಪ್ರತ್ಯೇಕಗೊಂಡು ಬಾಂಗ್ಲಾದೇಶ ಸ್ವತಂತ್ರವಾಯಿತು.

ಆ ಸಂದರ್ಭದಲ್ಲಿ ವಲಸಿಗರು ಅಕ್ರಮವಾಗಿ ಅಸ್ಸಾಂಗೆ ಬಂದು ನೆಲೆಸಿದ್ದರು. ಅಲ್ಲದೆ ಅಸ್ಸಾಂ ವಿದ್ಯಾರ್ಥಿ ಸಂಘಟನೆಗಳೊಂದಿಗೆ 1985ರ ಆಗಸ್ಟ್ 15ರಂದು ನಡೆದ ಒಪ್ಪಂದದ ಅನ್ವಯ ಕೆಲವೊಂದು ಮಾರ್ಗಸೂಚಿಗಳನ್ನು ರಚಿಸಿಕೊಳ್ಳಲಾ ಗಿತ್ತು. ಅದರಲ್ಲಿ, 1971ರ ಮಾರ್ಚ್ 24ರ ಒಳಗೆ ಅಸ್ಸಾಂ ಪ್ರವೇಶಿಸಿದವರು ಮಾತ್ರ ನೈಜ ಅಸ್ಸಾಮಿಗಳು ಎಂದು ಪ್ರಸ್ತಾಪಿಸಲಾಗಿದೆ.

ಇದರ ಹಿಂದಿದೆಯೇ ರಾಜಕೀಯ?:

ಎನ್‌ಆರ್‌ಸಿ ಪರಿಷ್ಕರಣೆಗೆ 1980ರಿಂದಲೇ ಹೋರಾಟಗಳು ಪ್ರಾರಂಭವಾಗಿದ್ದರೂ ಕೂಡ ಅಲ್ಲಿನ ಸ್ಥಳೀಯರ ಹೋರಾಟಕ್ಕೆ ರಾಜಕಾರಣಿಗಳ ಬೆಂಬಲ ಇರಲಿಲ್ಲ. 1985ರ ಒಪ್ಪಂದ ಅನ್ವಯ 1971ರ ನಂತರ ಅಸ್ಸಾಂ ಪ್ರವೇಶಿಸಿದವರು ವಲಸಿಗರು ಎಂದು ಗುರುತಿಸಲು ನಿರ್ಧರಿಸಿ, ಎನ್ ಸಿಆರ್ ಪರಿಷ್ಕರಣೆಗೆ 7 ಬಾರಿ ಪ್ರಯತ್ನಿಸಿದ್ದರೂ ಪರಿಷ್ಕರಣೆ ಸಾಧ್ಯವಾಗಿರಲಿಲ್ಲ.

ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಬಳಿಕ ಪರಿಷ್ಕರಣೆಗೆ ಸುಪ್ರೀಂಕೋರ್ಟ್ ಗಡುವು ನಿಗದಿ ಮಾಡಿತ್ತು. ಒಂದೊಮ್ಮೆ ಅಕ್ರಮ ವಲಸಿಗರೆಂದು ಅವರ ಮತದಾನದ ಹಕ್ಕನ್ನು ತೆಗೆದುಹಾಕಿದಲ್ಲಿ ಲಕ್ಷಾಂತರ ಜನರು ಮತ ಕಳೆದುಕೊಳ್ಳಬೇಕಾಗುತ್ತದೆ. ಇವರಲ್ಲಿ ಬಾಂಗ್ಲಾದಿಂದ ಬಂದ ಮುಸ್ಲಿಂ ವಲಸಿಗರ ಸಂಖ್ಯೆಯೇ ಹೆಚ್ಚಿರುತ್ತದೆ. ಹೀಗಾಗಿ ಎನ್‌ಆರ್‌ಸಿ ಪಟ್ಟಿ ಪರಿಷ್ಕರಣೆಗೆ ರಾಜಕೀಯ ಪಕ್ಷಗಳಲ್ಲಿ ಭಿನ್ನಮತವಿತ್ತು. ಇದೀಗ ಪ್ರಕಟವಾದ ಪಟ್ಟಿಗೆ ಮಮತಾ ಬ್ಯಾನರ್ಜಿ ಮುಂತಾದವರಿಂದ ವಿರೋಧ ವ್ಯಕ್ತವಾಗಲೂ ಸಹ ಇದೇ ಕಾರಣ ಎನ್ನಲಾಗುತ್ತಿದೆ

ದೇಶದಿಂದ ಹೊರಕ್ಕೆ ದಬ್ಬುತ್ತಾರಾ?:

2018ರ ಡಿಸೆಂಬರ್‌ನಲ್ಲಿ ಅಂತಿಮ ಪಟ್ಟಿಯಲ್ಲಿ ಹೆಸರು ಬಾರದಿದ್ದ ನಾಗರಿಕರನ್ನು ಸದ್ಯಕ್ಕೆ ದೇಶದಿಂದ ಹೊರಹಾಕುವುದಿಲ್ಲ. ಎನ್‌ಆರ್‌ಸಿ ಪಟ್ಟಿಯಲ್ಲಿ ಹೆಸರಿಲ್ಲದವರಿಗೆ ಕೇಂದ್ರ ಸರ್ಕಾರ ದೀರ್ಘಾವಧಿ ವರ್ಕ್ ಪರ್ಮಿಟ್ ನೀಡುವ ಸಾಧ್ಯತೆಯನ್ನು ಪರಿಶೀಲಿಸಬಹುದು. ಮತದಾನ, ಆಸ್ತಿ ಖರೀದಿ ಇನ್ನಿತರ ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿ ಅವರಿಗೆ ರಾಜ್ಯದಲ್ಲಿ ಆಶ್ರಯ ನೀಡಬಹುದು.

ಮುಂದಿನ 10-20 ವರ್ಷದಲ್ಲಿ ಅವರಿಗೆ ಭಾರತೀಯ ಪೌರತ್ವ ನೀಡಬಹುದು. ಅಕ್ರಮ ವಲಸಿಗರನ್ನು ಅವರ ದೇಶಕ್ಕೇ ವಾಪಸ್ ಕಳುಹಿಸುವ ವ್ಯವಸ್ಥೆ ಮಾಡಬಹುದು. ಆದರೆ ಆ ದೇಶಗಳು ತಮ್ಮ ಪ್ರಜೆಗಳೆಂದು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ. ಬಾಂಗ್ಲಾ ಎಂದಿಗೂ ಭಾರತದಲ್ಲಿ ತನ್ನ ಪ್ರಜೆಗಳಿದ್ದಾರೆ ಎಂಬುದನ್ನು ಒಪ್ಪಿಕೊಂಡಿಲ್ಲ. ಕೆಲ ದೇಶಗಳು ನಿರಾಶ್ರಿತರ ನೆರವಿಗೆ ಬರಬಹುದು. ನಿರ್ಗತಿಕರ ಕೇಂದ್ರಗಳಲ್ಲಿಇವರಿಗೆ ಆಶ್ರಯ ನೀಡಬಹುದು. ವಿಶ್ವಸಂಸ್ಥೆ ಇವರ ನೆರವಿಗೆ ಧಾವಿಸಬಹುದು.

click me!