ಕಲ್ಪನೆಯ ರಾಜಕೀಯ ಚಿತ್ರಣ ಬಿಡಿಸಿಟ್ಟ ರಿಯಲ್ ಸ್ಟಾರ್ : ‘ಪ್ರಜಾ’ಕೀಯ ಪಕ್ಷದ ರೂಪರೇಷೆಗಳು ಹೇಗಿವೆ ಗೊತ್ತಾ?

By Suvarna Web DeskFirst Published Aug 12, 2017, 9:10 AM IST
Highlights

ಉಪೇಂದ್ರ ಅವರ ಹೊಸ ರಾಜಕೀಯ ಪಕ್ಷ ಮಾಮೂಲಿ ರಾಜಕೀಯ ಪಕ್ಷದಂತೆ ಅಲ್ಲ. ಇದರಲ್ಲಿ ರಾಜಕಾರಣದ ಅಮೂಲಾಗ್ರ ಹೊಸ ಕಲ್ಪನೆಗಳಿವೆ. ಹಾಗಾದರೆ, ಹೇಗಿದೆ ಉಪೇಂದ್ರ ಹೊಸ ರಾಜಕೀಯ ಪಕ್ಷ ಬನ್ನಿ ನೋಡೋಣ

ಬೆಂಗಳೂರು(ಆ.12): ನಟ ​ಉಪೇಂದ್ರ ರಾಜಕೀಯ ಪ್ರವೇಶ ಮಾಡೋದು ಪಕ್ಕಾ ಆಗಿದೆ. ಸುವರ್ಣನ್ಯೂಸ್​  ಮತ್ತು ಕನ್ನಡಪ್ರಭ  ಪತ್ರಿಕೆ  ಉಪ್ಪಿ  ಪೊಲಿಟಿಕಲ್​ ಎಂಟ್ರಿ ಸುದ್ದಿಯನ್ನು  ನಿನ್ನೆಯಷ್ಟೇ  ಬ್ರೇಕ್​ ಮಾಡಿತ್ತು. ಇದರ ಬೆನ್ನಲ್ಲೇ  ಉಪೇಂದ್ರ  ಆಡಿಯೋವೊಂದನ್ನು  ಬಿಡುಗಡೆ ಮಾಡಿ  ರಾಜಕೀಯ ಎಂಟ್ರಿ ಬಗ್ಗೆ  ಸುಳಿವು ನೀಡಿದ್ದಾರೆ. ಜೊತೆಗೆ ಒಂದಷ್ಟು  ಪ್ಲಾನ್​​ಗಳನ್ನು  ಮಾಡಿ  ರೂಪು ರೇಷೆಗಳನ್ನು  ರೆಡಿ ಮಾಡಿದ್ದಾರೆ.  

ಉಪ್ಪಿ ‘ಪ್ರಜಾ’ಕೀಯ ಪಕ್ಷದ ೭ ರೂಪರೇಷೆಗಳು

೧. ಕೀಲಿ ಕೈ ರಾಜರ ಬಳಿ ಇರಬಾರದು. ಪ್ರಜೆಗಳ ಬಳಿ ಕೀ ಇರಬೇಕು. ಆದ್ದರಿಂದ ರಾಜ‘ಕೀ’ಯ ಬೇಡ. ಪ್ರಜಾ‘ಕೀ’ಯ ಬೇಕು

೨. ರಾಜಕಾರಣಿಗಳು ನಾಯಕರೂ ಅಲ್ಲ. ಸಮಾಜ ಸೇವಕರೂ ಅಲ್ಲ. ಪ್ರಜೆಗಳ ನೌಕರರು. ಪ್ರಜೆಗಳಿಗೆ ಉತ್ತರಿಸಬೇಕಾದದ್ದು ಅವರ ಕರ್ತವ್ಯ

೩. ಮನೆಯ ನೌಕರರನ್ನು ನೇಮಿಸಿಕೊಳ್ಳುವ ರೀತಿಯಲ್ಲಿ  ಇಂಟರ್​ವ್ಯೂ ಹಾಗೂ ಪರೀಕ್ಷೆ ಮಾಡಿ ಚೆನ್ನಾಗಿ ಉತ್ತರ ಬರೆದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು.

೪. ಗೆದ್ದ ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲೇ ಇದ್ದು  ಸಮಸ್ಯೆಗಳನ್ನು ಬಗೆಹರಿಸಬೇಕು. ಆ ಮೂಲಕ  ವೆಬ್‌ಸೈಟ್ ,  ಸಾಮಾಜಿಕ ಜಾಲತಾಣಗಳಲ್ಲಿ ಪ್ರಜೆಗಳಿಗೆ ತಿಳಿಸಬೇಕು.

೫. ವಿಧಾನಸೌಧ ಒಂದು ಟಿವಿ ಸಂಸ್ಥೆಯಂತೆಯೂ, ಎಂಎಲ್‌ಎಗಳು ಅದರ ವರದಿಗಾರರಂತೆಯೂ ಕೆಲಸ ಮಾಡಬೇಕು.

೬. ದುಡ್ಡು , ಪಾರ್ಟಿ ಫಂಡ್‌ಗಳಿಂದ  ಭ್ರಷ್ಟಾಚಾರ ಆರಂಭವಾಗುತ್ತೆ. ಅದಕ್ಕೆ, ಅಭ್ಯರ್ಥಿಗಳು ಕ್ಷೇತ್ರದಲ್ಲಿ ನೇರ ಸಂಚಾರದ ಮೂಲಕ ಹಾಗೂ ಸೋಷಿಯಲ್ ಮೀಡಿಯಾ ಮೂಲಕ ಖರ್ಚಿಲ್ಲದೇ ಪ್ರಚಾರ ಮಾಡಬೇಕು.

೭. ಇವೆಲ್ಲ ಯಶಸ್ವಿಯಾಗಬಹುದೇ? ಎಂಬ ಸಂದೇಹ ಸಹಜ. ಆದರೆ, ನಿರಾಶಾವಾದಿಗಳಿಗೆ ಒಂದೂ ಸಲಹೆ ಕೊಡಲು ಸಾಧ್ಯವಿಲ್ಲ. ಆದರೆ, ಆಶಾವಾದಿಗಳಿಗೆ ನೂರು ಸಲಹೆ ಕೊಡಬಹುದು.

ಉಪ್ಪಿ ಪಕ್ಷದ ೬ ಮೂಲತತ್ವ

೧. ರಾಜಕೀಯ ನಾಯಕರ ಹುದ್ದೆಗೆ ಹೊಸ ವ್ಯಾಖ್ಯಾನ. ಅವರು ನಾಯಕರೂ ಅಲ್ಲ. ಸಮಾಜ ಸೇವಕರೂ ಅಲ್ಲ. ಅವರು ಪ್ರಜೆಗಳ ತೆರಿಗೆಯಿಂದ ಸಂಬಳ ಪಡೆಯುವ ನೌಕರರು

೨. ಅಭ್ಯರ್ಥಿಗಳ ಆಯ್ಕೆಗೆ ಪರೀಕ್ಷೆಯಿರುತ್ತದೆ. ಅವರು ಬರೆದ ಉತ್ತರ ಪತ್ರಿಕೆಯೇ ಸ್ಥಳೀಯ ಚುನಾವಣಾ ಪ್ರಣಾಳಿಕೆಯಾಗುತ್ತದೆ. ಆದ್ದರಿಂದ ಅಭ್ಯರ್ಥಿಯ ಆಯ್ಕೆ ವಿಧಾನವೇ ಬೇರೆ

೩. ಹಣವೇ ಭ್ರಷ್ಟಾಚಾರದ ಮೂಲ. ಆದ್ದರಿಂದ ಪಾರ್ಟಿ ಫಂಡ್ ಇಲ್ಲ. ಪ್ರಚಾರಕ್ಕೆ ದುಡ್ಡು ಖರ್ಚಿಲ್ಲ. ನೇರ ಸಂಚಾರ ಹಾಗೂ ಸಾಮಾಜಿಕ ತಾಣಗಳು ಮತ್ತು ಮೊಬೈಲ್ ಮೂಲಕವೇ ಪ್ರಚಾರ

೪. ತಂತ್ರಜ್ಞಾನ ಎಲ್ಲ ಸಮಸ್ಯೆಗಳಿಗೂ ಉತ್ತರ. ಚುನಾವಣೆ ಪ್ರಚಾರ, ಗೆದ್ದ ಅಭ್ಯರ್ಥಿಗಳ ಕೆಲಸ ನಿರ್ವಹಣೆ, ಸರ್ಕಾರಿ ಕಾರ್ಯಕಲಾಪಗಳಿಗೆ, ವಿಡಿಯೋ ಕಾನ್ಫರೆನ್ಸ್, ಇಂಟರ್‌ನೆಟ್, ಮೊಬೈಲ್ ಹಾಗೂ ತಂತ್ರಜ್ಞಾನದ ವ್ಯಾಪಕ ಬಳಕೆ

೫. ವಿಧಾನಸೌಧ ಹಾಗೂ ಸ್ಥಳೀಯ ಶಾಸಕರ ನಡುವೆ ಟೀವಿ ಸ್ಟುಡಿಯೋ ಹಾಗೂ ಸ್ಥಳೀಯ ವರದಿಗಾರರ ರೀತಿಯ ಕಾರ್ಯನಿರ್ವಹಣೆ

೬. ಇದೊಂದು ರಾಜಕೀಯ ಪಕ್ಷಕ್ಕಿಂತ ಹೆಚ್ಚಾಗಿ ಒಂದು ಹೊಸ ರಾಜಕೀಯ ಹಾಗೂ ಆಡಳಿತಾತ್ಮಕ ವ್ಯವಸ್ಥೆ ಎನ್ನಬಹುದು.

ಹೀಗೆ  ತಮ್ಮ  ಕಲ್ಪನೆಯ ರಾಜಕೀಯ ಚಿತ್ರಣವನ್ನು  ನಟ ಉಪೇಂದ್ರ  ಬಿಡಿಸಿಟ್ಟಿದ್ದಾರೆ. ಇನ್ನು  ಇದೇ ವಿಚಾರಚಾಗಿ  ಇಂದು  ಉಪೇಂದ್ರ ಸುದ್ದಿಗೋಷ್ಠಿ ನಡೆಸಲಿದ್ದು  , ಅಲ್ಲಿ  ತಮ್ಮ  ರಾಜಕೀಯ  ಹೆಜ್ಜೆ ಬಗ್ಗೆ  ವಿವರಣೆ ನೀಡಲಿದ್ದಾರೆ. 

click me!