'ಮಹಾ'ಸಿಎಂ ಗಾದಿಗೆ ಠಾಕ್ರೆ, ಸಿದ್ದು ಏನಾದ್ರೂ ಹೇಳ್ತಾರೆ ಬಿಟ್ರೆ: ನ.28ರ ಪ್ರಮುಖ ಸುದ್ದಿ!

By Web DeskFirst Published Nov 28, 2019, 6:57 PM IST
Highlights

ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಹತ್ತು ಹಲವು ಘಟನಾವಳಿಗಳು| ಸುದ್ದಿಯ ಸಾರವರಿತು ಸುದ್ದಿಯ ವಿಶ್ಲೇಷಿಸುವ ನಿಮ್ಮ ಸುವರ್ಣನ್ಯೂಸ್.ಕಾಂ| ದಿನದ ಟಾಪ್ 10 ಸುದ್ದಿಗಳು ನಿಮಗಾಗಿ| ನ.28ರಂದು ನಡೆದ ವಿವಿಧ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ|

ಬೆಂಗಳೂರು(ಅ.21): ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ. ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ. ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.

1. 'ಮಹಾ'ದಲ್ಲಿ ಉದ್ಧವ್ ದರ್ಬಾರ್: ಅಸ್ತಿತ್ವಕ್ಕೆ ಬಂತು ಅಘಾಡಿ ಸರ್ಕಾರ!

ತಿಂಗಳಿಗೂ ಹೆಚ್ಚಿನ ಕಾಲದ ಹಗ್ಗ ಜಗ್ಗಾಟದ ಬಳಿಕ, ಕೊನೆಗೂ ಮಹಾರಾಷ್ಟ್ರದಲ್ಲಿ ಸಾಂವಿಧಾನಿಕ ಸರ್ಕಾರವೊಂದು ಅಸ್ತಿತ್ವಕ್ಕೆ ಬಂದಿದೆ. ಮುಂಬೈನ ಐತಿಹಾಸಿಕ ಛತ್ರಪತಿ ಶಿವಾಜಿ ಮಹಾರಾಜ್ ಪಾರ್ಕ್’ನಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಶಿವಾಜಿ ಪಾರ್ಕ್’ನಲ್ಲಿ ನಿರ್ಮಿಸಲಾಗಿದ್ದ ಭವ್ಯ ವಿಶಾಲ ವೇದಿಕೆಯಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನೂತನ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

2. ಮಾತು ಕೇಳದ ಪ್ರಜ್ಞಾಗಿಲ್ಲ ಪ್ರಜ್ಞೆ: ಪ್ರಧಾನಿ ಮೋದಿ ಕೊಟ್ಟರು ಶಿಕ್ಷೆಯ ಆಜ್ಞೆ!

ಪಕ್ಷದ ಎಚ್ಚರಿಕೆಯನ್ನು ಕಡೆಗಣಿಸಿ ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುತ್ತಿರುವ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಕೊನೆಗೂ ಮೋದಿ ಸರ್ಕಾರ ಛಾಟಿಯೇಟು ನೀಡಿದೆ. ಸಾಧ್ವಿ ಪ್ರಜ್ಞಾ ಅವರನ್ನು ರಕ್ಷಣಾ ಇಲಾಖೆಯ ಸಲಹಾ ಸಮಿತಿಯಿಂದ ಕೈಬಿಡಲಾಗಿದ್ದು, ಅಧಿವೇಶನದ ವೇಳೆ ಸಂಸದೀಯ ಪಕ್ಷದ ಸಭೆಯಲ್ಲಿ ಭಾಗವಹಿಸದಿರುವಂತೆ ಬಿಜೆಪಿ ಕಟ್ಟುನಿಟ್ಟಿನ ಆಜ್ಞೆ ಹೊರಡಿಸಿದೆ.

3. ರಾಕಿ ಭಾಯ್ ಸ್ಟೈಲ್ ಹಿಂದಿನ ರಹಸ್ಯ ರಿವೀಲ್..!

ರಾಕಿಂಗ್ ಸ್ಟಾರ್ ಯಶ್ ಸ್ಟೈಲ್ ಗೆ ಫಿದಾ ಆಗದವ್ರೇ ಇಲ್ಲ. ಲಾಂಗ್ ಹೇರ್, ಲಾಂಗ್ ಬಿಯರ್ಡ್ ಅನ್ನ ಕಂಡು ಅದೆಷ್ಟು ಹುಡುಗಿಯರು ಕಳೆದೇ ಹೋಗಿದ್ದಾರೆ. ದೇಶ-ವಿದೇಶದಲ್ಲೂ ಈ ರಾಕಿಯ ಸ್ಟೈಲ್ ನ ರಂಗಿದೆ ಗುಂಗಿದೆ.  ರಾಕಿಂಗ್ ಸ್ಟಾರ್ ಯಶ್  ಸ್ಟೈಲಿಶ್ ಹೀರೋ ಅಂತ ಎಲ್ಲರೂ ಒಪ್ಪಿಕೊಂಡಿದ್ದಾರೆ. ಲಾಂಗ್ ಬಿಯರ್ಡ್, ಲಾಂಗ್ ಹೇರ್ ಅಂತೂ ಈ ನಾಯಕನ ಖದರನ್ನೇ ಚೇಂಜ್ ಮಾಡಿದೆ. ಹಾಲಿವುಡ್  ನಟರ ಫೀಲ್ ಕೂಡ  ಬರುತ್ತದೆ. ರಾಕಿ ಈ ಲುಕ್ ಹಿಂದಿದ್ದಾರೆ ಇವರು. ಯಾರಿವರು? ಈ ಸುದ್ದಿ ನೋಡಿ.

4. 'ನಾವು ಬೆನ್ನಿಗೆ ಚೂರಿ ಹಾಕಿಲ್ಲ, ಅವರೇ ಎದೆಗೆ ಚಾಕು ಹಾಕಿದ್ರು'

ಅನರ್ಹ ಶಾಸಕ, ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ ಬೆನ್ನಲ್ಲೇ, ಅವರು ತಿರುಗಿಬಿದ್ದಿದ್ದಾರೆ.  ಸುವರ್ಣನ್ಯೂಸ್ ಜೊತೆ ಮಾತನಾಡಿದ ಬಿ.ಸಿ. ಪಾಟೀಲ್, ಸಿದ್ದರಾಮಯ್ಯ ನಮ್ಮ ಎದೆಗೆ ಚಾಕು ಹಾಕಿದ್ದಾರೆ ಎಂದು ಆರೋಪಿಸಿದರು. ಹಾವೇರಿ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕನಾಗಿದ್ದರೂ ಯಾವುದೇ ಸ್ಥಾನ ನೀಡದೇ ದ್ರೋಹ ಮಾಡಿದರು ಎಂದು ನೋವನ್ನು ತೋಡಿಕೊಂಡರು.

5. KPL ಮ್ಯಾಚ್ ಫಿಕ್ಸಿಂಗ್: ಪ್ರಮುಖ ಕ್ರಿಕೆಟಿಗರಿಗೆ ಗಂಡಾಂತರ..?

ಕರ್ನಾಟಕ ಪಿಮಿಯ್ ಲೀಗ್‌ ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಕರ್ನಾಟಕದ ಪ್ರಮುಖ ಆಟಗಾರರು ಈ ಪ್ರಕರಣದ ಸುಳಿಗೆ ಸಿಲುಕುವ ಸಾಧ್ಯತೆಯಿದೆ ಎಂದು ಸಿಸಿಬಿ ಮೂಲಗಳು ಸುವರ್ಣ ನ್ಯೂಸ್ ಗೆ ತಿಳಿಸಿವೆ. ಇದೀಗ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಬೆಂಗಳೂರಿನ ಸಿಸಿಬಿ ಅಧಿಕಾರಿಗಳು ಚುರುಕಿನ ಕಾರ್ಯಾಚರಣೆ ಮುಂದುವರೆಸಿದ್ದು, ಟೂರ್ನಿಯಲ್ಲಿ ಪಾಲ್ಗೊಂಡ 7 ತಂಡಗಳ ಪ್ರಮುಖ ಆಟಗಾರರು ಸೇರಿ ನೂರಕ್ಕೂ ಹೆಚ್ಚು ಆಟಗಾರರನ್ನು ವಿಚಾರಣೆಗೆ ಒಳಪಡಿಸಲು ಮುಂದಾಗಿದೆ.

6. ಮಾ ಸಾಹೇಬ್, ಬಾಳಾ ಸಾಹೇಬ್ ಇರಬೇಕಿತ್ತು: ಸುಪ್ರಿಯಾ ಎಮೋಶನಲ್ ಟ್ವಿಟ್‌ನಲ್ಲೇನಿತ್ತು?

ಉದ್ಧವ್ ಠಾಕ್ರೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ, ಭಾವನಾತ್ಮಕ ಟ್ವಿಟ್ ಮಾಡಿರುವ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ, ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಮಾ ಸಾಹೇಬ್(ಉದ್ಧವ್ ತಾಯಿ ಮೀನಾತಾಯಿ) ಬಾಳಾ ಸಾಹೇಬ್(ಉದ್ಧವ್ ತಂದೆ ಬಾಳ್ ಠಾಕ್ರೆ) ಇರಬೇಕಿತ್ತು ಎಂದು ಹೇಳಿದ್ದಾರೆ. ಮಾ ಸಾಹೇಬ್ ಹಾಗೂ ಬಾಳಾ ಸಾಹೇಬ್ ತಮ್ಮನ್ನು ಮಗಳಂತೆ ಕಾಣುತ್ತಿದ್ದರು ಎಂದಿರುವ ಸುಪ್ರಿಯಾ, ಈ ದಿನ ಅವರಿಬ್ಬರು ಇದ್ದಿದ್ದರೆ ಉದ್ಧವ್ ಠಾಕ್ರೆ ಹಾಗೂ ನಮಗೆಲ್ಲರಿಗೂ ಆಶೀರ್ವಾದ ದೊರಕುತ್ತಿತ್ತು ಎಂದು ಹೇಳಿದ್ದಾರೆ.

7.ತಾಯಿಯಾದ ನಂತರ ಗುರುತೇ ಸಿಗದಷ್ಟು ಬದಲಾಗಿದ್ದಾರೆ 'ಅಗ್ನಿಸಾಕ್ಷಿ' ಚಂದ್ರಿಕಾ?

ಕಲರ್ಸ್‌ ಕನ್ನಡ ಟಾಪ್‌ ರೇಟೆಡ್‌ ಧಾರಾವಾಹಿ 'ಅಗ್ನಿಸಾಕ್ಷಿ' ಪಾತ್ರಧಾರಿ ಚಂದ್ರಿಕಾ ಅಲಿಯಾಸ್‌ ರಾಜೇಶ್ವರಿ ಕೃಷ್ಣನ್‌ ವೈಯಕ್ತಿಕ ಜೀವನಕ್ಕೆ ಸಮಯ ಕೊಡಬೇಕೆಂದು ನಟನೆಗೆ ಬ್ರೇಕ್‌ ಹಾಕಿ ಪತಿ ಮತ್ತು ಮಗಳೊಂದಿಗೆ ಜಾಲಿ ಮೂಡ್‌ನಲ್ಲಿ ಇರುವ ಫೋಟೋ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

8. ಆರದ ಸಂ'ದೀಪ': ನಿಮ್ಮ ನೆನಪೆಂಬ ಹೆಮ್ಮೆಯೇ ನಮ್ಮ ಭವಿಷ್ಯಕ್ಕೆ ದಾರಿದೀಪ!

ಮೇಜರ್​​ ಸಂದೀಪ್​​ ಉನ್ನಿಕೃಷ್ಣನ್​ ಎಂದರೆ ಯಾರಿಗೆ ಗೊತ್ತಿಲ್ಲ? ಈ ಹುತಾತ್ಮ ಯೋಧನ ಹೆಸರು ಕೇಳಿದ ಕೂಡಲೇ ದೇಶದ ಪ್ರತಿಯೊಬ್ಬ ಭಾರತೀಯನ ಮೈಯೆಲ್ಲಾ ರೋಮಾಂಚನ ಆಗುತ್ತದೆ. ದುರಂತ ಅಂದರೆ, 2008ರಲ್ಲಿ ಮುಂಬೈನ ತಾಜ್​​ ಹೋಟೆಲ್​​​ ಮೇಲೆ ಉಗ್ರರು ದಾಳಿ ನಡೆಸಿದಾಗ ಎದೆಗುಂದದೇ ಎದುರಾಳಿಗಳನ್ನು ನೆಲಕ್ಕೆ ಹೊಡೆದುರುಳಿಸಿದ ಸಂದೀಪ್​​ ಉನ್ನಿಕೃಷ್ಣನ್​ ಅದೇ ಕಾರ್ಯಾಚರಣೆಯಲ್ಲಿ ಉಗ್ರರ ಗುಂಡಿಗೆ ಬಲಿಯಾಗಿ, ಹುತಾತ್ಮರಾದರು. ಇಂದು ನವೆಂಬರ್ 8 ಮೇಜರ್​​ ಸಂದೀಪ್​​ ಉನ್ನಿಕೃಷ್ಣನ್​ ಪುಣ್ಯತಿಥಿ. ಹೀಗಿರುವಾಗ ಅವರ ಕುರಿತು ಗೊತ್ತಿರದ ಕೆಲ ವಿಚಾರಗಳು ಇಲ್ಲಿವೆ.

9. 'ನಂಗೆ ಡಿಕೆಶಿ ಸರ್ಟಿಫಿಕೇಟ್ ಬೇಕಾಗಿಲ್ಲ, ಅವ್ರೇನು ಎಂದು ದೇಶವೇ ನೋಡ್ತಿದೆ'

ಡಿ. ಕೆ. ಶಿವಕುಮಾರ್ ಏನು ಎಂಬುದನ್ನು ದೇಶವೇ ನೋಡುತ್ತಿದೆ. ನನಗೆ ಅವರ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಹೇಳಿದ್ದಾರೆ. ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆಶಿಗೆ ಸುಧಾಕರ್ ಟಾಂಗ್ ಕೊಟ್ಟಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಡಿ. ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಡಿಕೆ ಶಿವಕುಮಾರ್ ಏನು ಅಂತಾ ಇಡೀ ದೇಶವೇ ನೋಡುತ್ತಿದೆ. ಡಿಕೆಶಿ ಬಗ್ಗೆ ದೇಶದ ಸಂಸ್ಥೆಗಳಿಗೆ, ವ್ಯವಸ್ಥೆಗೆ ಗೊತ್ತಿದೆ ಎಂದು ತಿರುಗೇಟು ಕೊಟ್ಟಿದ್ದಾರೆ.

10. 41,020 ಅಂಕಗಳಲ್ಲಿ ಮುಕ್ತಾಯ: ಸೆನ್ಸೆಕ್ಸ್‌ ಹೊಸ ದಾಖಲೆ ನಿರ್ಮಾಣ

ಮಂಗಳವಾರ ಮೊದಲ ಬಾರಿ 41000 ಅಂಕಗಳ ಗಡಿ ದಾಟಿ ದಾಖಲೆ ನಿರ್ಮಿಸಿದ್ದ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಬುಧವಾರ ಮತ್ತೆ 199 ಅಂಕ ಏರಿಕೆ ಕಂಡು 41,020ಕ್ಕೆ ತನ್ನ ದಿನದ ವಹಿವಾಟು ಮುಗಿಸಿದೆ. ಸೆನ್ಸೆಕ್ಸ್‌ 41000 ಅಂಕಗಳ ಮೇಲೇ ಮುಕ್ತಾಯವಾಗಿದ್ದು ಹೊಸ ದಾಖಲೆಯಾಗಿದೆ. ಇನ್ನು ರಾಷ್ಟ್ರೀಯ ಷೇರುಪೇಟೆ (ನಿಫ್ಟಿ) ಕೂಡ 63 ಅಂಕ ಏರಿಕೆ ಕಂಡು 12,100ರ ದಾಖಲೆಯ ಅಂಕಗಳಿಗೆ ದಿನ ಮುಗಿಸಿತು.

click me!