
ಬೆಂಗಳೂರು : ಭಾರತೀಯ ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ (ಟ್ರಾಯ್) ಟೀವಿ ವಾಹಿನಿಗಳ (ಚಾನಲ್) ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಗ್ರಾಹಕರಿಗೆ ಕಲ್ಪಿಸಿ ರೂಪಿಸಲಾಗಿರುವ ಹೊಸ ನೀತಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಗ್ರಾಹಕರು ಕೇಬಲ್ ಟೀವಿ ಸಂಪರ್ಕ ಪಡೆಯಲು ಆಪರೇಟರ್‌ಗಳು ಕೇಳಿದಷ್ಟುಹಣ ನೀಡಿ ಅವರು ನೀಡಿದಷ್ಟುಚಾನಲ್‌ಗಳನ್ನು ನೋಡಬೇಕಾದ ಪರಿಸ್ಥಿತಿ ಇತ್ತು. ಈವರೆಗೆ ಗ್ರಾಮೀಣ ಪ್ರದೇಶದಲ್ಲಿ ಎಲ್ಲ ಚಾನಲ್‌ಗಳಿಗೆ ಕೇವಲ ಮಾಸಿಕ 120ರಿಂದ 150 ರು. ಹಾಗೂ ನಗರ ಭಾಗದಲ್ಲಿ ಮಾಸಿಕ 250ರಿಂದ 350 ರು. ಕೊಟ್ಟು ವೀಕ್ಷಣೆ ಮಾಡಬೇಕಾಗಿತ್ತು.
ಇದೀಗ ಕೇಂದ್ರ ಸರ್ಕಾರ ಟ್ರಾಯ್ ಮೂಲಕ ಜಾರಿಗೆ ತರುತ್ತಿರುವ ಹೊಸ ನೀತಿಯಿಂದ ಗ್ರಾಹಕ ತನಗೆ ಬೇಕಾದ ಚಾನಲ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆ ಹೊಂದಲಿದ್ದಾನೆ. ಆದರೆ, ಹೊಸ ನೀತಿ ಪ್ರಕಾರ ಗ್ರಾಹಕ ಸೇವಾ ಶುಲ್ಕದ ರೂಪದಲ್ಲಿ ಮಾಸಿಕ 130 ರು. ಮತ್ತು ಶೇ.18ರಷ್ಟುತೆರಿಗೆ ಪಾವತಿಸಬೇಕು. ಇದರಿಂದ ಸರ್ಕಾರಿ ಸ್ವಾಮ್ಯದ 26 ದೂರದರ್ಶನ ವಾಹಿನಿ ಸೇರಿ ಒಟ್ಟು 100 ಚಾನಲ್ ಉಚಿತವಾಗಿ ವೀಕ್ಷಿಸಬಹುದು. ಪೇ ಚಾನಲ್‌ಗಳು ಬೇಕಿದ್ದಲ್ಲಿ ನಿಗದಿತ ಶುಲ್ಕ ಪಾವತಿಸಬೇಕಿರುವುದರಿಂದ ಹೊಸ ನೀತಿ ತಮ್ಮ ಜೇಬಿಗೆ ಕತ್ತರಿ ಹಾಕಲಿದೆ ಎಂಬುದು ಗ್ರಾಹಕನ ಅಸಮಾಧಾನಕ್ಕೆ ಕಾರಣವಾಗಿದೆ.
ಟ್ರಾಯ್ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಕೇಬಲ್ ಟೀವಿ ಆಪರೇಟರ್‌ಗಳು ನೀಡುವ ಎಲ್ಲ ಚಾನೆಲ್‌ಗಳನ್ನು ಗ್ರಾಹಕ ನೋಡುವುದಿಲ್ಲ 15ರಿಂದ 20 ಚಾನಲ್‌ಗಳನ್ನು ಮಾತ್ರ ನೋಡುತ್ತಾನೆ. ಅದರಲ್ಲಿ ಶೇ.80ರಷ್ಟುಚಾನಲ್‌ಗಳು ಉಚಿತವಾಗಿ ಪ್ರಸಾರವಾಗುವ ಚಾನಲ್‌ಗಳಾಗಿರುತ್ತವೆ. ಉಳಿದ ಚಾನಲ್‌ಗಳಿಗೆ 40ರಿಂದ 70 ರು.ಗಳನ್ನು ಹೆಚ್ಚುವರಿಯಾಗಿ ಪಾವತಿಸಿ ನೋಡಬಹುದಾಗಿದೆ. ಇದರಿಂದ ಗ್ರಾಹಕರಿಗೆ ಉಳಿತಾಯವಾಗಲಿದೆ ಎನ್ನುತ್ತಾರೆ.
ಕೆಲವು ಆಪರೇಟರ್‌ಗಳು ವಾಹಿನಿಗಳನ್ನು ಗ್ರಾಹಕರಿಗೆ ಸರಿಯಾದ ರೀತಿಯಲ್ಲಿ ತಲುಪಿಸದ ಕಾರಣ ಗ್ರಾಹಕರಿಗೆ ಮತ್ತು ಚಾನಲ್‌ಗಳಿಗೆ ಉಂಟಾಗುತ್ತಿರುವ ಅನ್ಯಾಯ ತಪ್ಪಿಸಲು ಹೊಸ ನೀತಿ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಟ್ರಾಯ್ ಹೊಸ ನೀತಿ ಸೇವಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೇಬಲ್ ಟೀವಿ ಆಪರೇಟರ್‌ಗಳಿಗೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಉದ್ಯೋಗ ಸೃಷ್ಟಿಮಾಡಿಕೊಂಡಿರುವ ಸಣ್ಣ ಕೇಬಲ್ ಟೀವಿ ಉದ್ಯಮಿಗಳಿಗೆ ಮಾರಕವಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಮರು ಪರಿಶೀಲನೆ ಮಾಡಬೇಕು.
-ಬಸವರಾಜ ಎಸ್.ಜವಳಿ, ಅಧ್ಯಕ್ಷ. ಕರ್ನಾಟಕ ಸಣ್ಣ ಕೈಗಾರಿಕಾ ಸಂಘ.
ಟ್ರಾಯ್‌ನ ಹೊಸ ನೀತಿಯಿಂದ ಗ್ರಾಹಕರಿಗೆ ಹೊರೆಯಾಗಲಿದೆ ಎಂಬುದು ಕೇಂದ್ರ ಸರ್ಕಾರಕ್ಕೂ ಗೊತ್ತಿದೆ. ಹಾಗಾಗಿ, ಭಾರತೀಯ ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ ಹೊಸ ನೀತಿ ಕುರಿತು ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೆ ಗ್ರಾಹಕರನ್ನು ಗೊಂದಲಕ್ಕೆ ನೂಕಿದೆ.
-ಪ್ಯಾಟ್ರಿಕ್ ರಾಜು, ಅಧ್ಯಕ್ಷ, ಕರ್ನಾಟಕ ರಾಜ್ಯ ಕೇಬಲ್ ಟವಿ ಆಪರೇಟರ್ ಸಂಘ.
ಕೇಬಲ್ ಟಿವಿ ಆಪರೇಟರ್ ಇಲ್ಲದಿದ್ದರೆ ಕಿರುತೆರೆ ಇಷ್ಟುದೊಡ್ಡ ಮಟ್ಟಕ್ಕೆ ಬೆಳವಣಿಯಾಗುತ್ತಿರಲಿಲ್ಲ. ಗ್ರಾಹಕರು ಮತ್ತು ಆಪರೇಟರ್‌ಗಳ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಕನ್ನಡ ಕಿರುತೆರೆ ಕಲಾವಿದ ಸಂಪೂರ್ಣ ಬೆಂಬಲ ಕೇಬಲ್ ಟೀವಿ ಆಪರೇಟರ್‌ಗಳಿಗೆ ನೀಡುತ್ತೇವೆ.
-ರವಿಕಿರಣ್, ಅಧ್ಯಕ್ಷ. ಕನ್ನಡ ಕಿರುತೆರೆ ಕಲಾವಿದರ ಸಂಘ.
ಗ್ರಾಹಕರ ದೃಷ್ಟಿಕೋನದಲ್ಲಿ ನೋಡುವುದಾದರೆ ತುಂಬಾ ಹೊರೆಯಾಗಲಿದೆ. ಎಲ್ಲರೂ ಎಲ್ಲ ವಾಹಿನಿಗಳನ್ನು ಹಣ ಕೊಟ್ಟು ನೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಕೇಂದ್ರ ಸರ್ಕಾರ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಕ್ರಮಕೈಗೊಂಡರೆ ಒಳ್ಳೆಯದು.
-ಪವನ್ ಕುಮಾರ್. ಕಿರುತೆರೆ ಕಲಾವಿದ.
ಇಷ್ಟುದಿನ ಗ್ರಾಮೀಣ ಪ್ರದೇಶದಲ್ಲಿ ಜನ ಕೇವಲ .120ರಿಂದ .150ಕ್ಕೆ ಎಲ್ಲ ಚಾನಲ್‌ಗಳನ್ನು ವೀಕ್ಷಣೆ ಮಾಡುತ್ತಿದ್ದರು, ಹೊಸ ನೀತಿಯಿಂದ ಸೇವಾ ಶುಲ್ಕವೇ .150 ದಾಟಲಿದೆ. ಇದರಿಂದ ಗ್ರಾಮೀಣ ಜನರಿಗೆ ಹೊರೆಯಾಗಲಿದೆ.
-ಎಸ್.ಕೆ.ಮಂಜುನಾಥ್, ಗುತ್ತಿಗೆ ನೌಕರ, ಅರಣ್ಯ ಇಲಾಖೆ.
- ಟ್ರಾಯ್ ಹೊಸ ನೀತಿ ಜಾರಿಯ ಜೊತೆಗೆ ಗ್ರಾಹಕರ ಮತ್ತು ಇಷ್ಟುವರ್ಷ ಲಕ್ಷಾಂತರ ರುಪಾಯಿ ಬಂಡವಾಳ ಹಾಕಿ ಕೇಬಲ್ ಟೀವಿ ಉದ್ಯಮ ನಡೆಸಿಕೊಂಡು ಬಂದ ಆಪರೇಟರ್‌ಗಳ ಹಿತ ಕಾಯಬೇಕಾಗುತ್ತದೆ.
-ವಾಟಾಳ್ ನಾಗರಾಜ್, ಕನ್ನಡ ಪರ ಹೋರಾಟಗಾರ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.