ತಾಂಡಾ ನಿವಾಸಿಯೇ ಒಡೆಯ: ಸಿದ್ಧರಾಮಯ್ಯ ಸರ್ಕಾರದಿಂದ ಐತಿಹಾಸಿಕ ಭೂ ಸುಧಾರಣಾ ಕಾನೂನು

Published : Mar 25, 2017, 12:03 AM ISTUpdated : Apr 11, 2018, 12:39 PM IST
ತಾಂಡಾ ನಿವಾಸಿಯೇ ಒಡೆಯ: ಸಿದ್ಧರಾಮಯ್ಯ ಸರ್ಕಾರದಿಂದ ಐತಿಹಾಸಿಕ ಭೂ ಸುಧಾರಣಾ ಕಾನೂನು

ಸಾರಾಂಶ

ಸ್ವಾತಂತ್ರ್ಯಾನಂತರ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಬಂದ ನಂತರ ಇದೀಗ ನಮ್ಮ ಸರ್ಕಾರ ತಂದಿರುವ ಐತಿಹಾಸಿಕ ವಿಧೇಯಕದಿಂದ ಲಕ್ಷಾಂತರ ಬಡವರಿಗೆ ಅನುಕೂಲವಾಗಲಿದೆ. ನಾವು ಅಧಿಕಾರಕ್ಕೆ ಬರುವ ಮುಂಚೆ ನೀಡಿದ್ದ ಮಾತಿನಂತೆ ನಡೆದಿದೆ. ದಾಖಲೆಗಳಿಲ್ಲದೆಯೂ ಯಾರು ವಾಸ ಮಾಡುತ್ತಿದ್ದಾರೋ ಆ ವಸತಿಗೆ ಅವರೇ ಒಡೆಯರಾಗುತ್ತಾರೆ.

ಬೆಂಗಳೂರು(ಮಾ.25): ಸ್ವಾತಂತ್ರ್ಯಾನಂತರ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಬಂದ ನಂತರ ಇದೀಗ ನಮ್ಮ ಸರ್ಕಾರ ತಂದಿರುವ ಐತಿಹಾಸಿಕ ವಿಧೇಯಕದಿಂದ ಲಕ್ಷಾಂತರ ಬಡವರಿಗೆ ಅನುಕೂಲವಾಗಲಿದೆ. ನಾವು ಅಧಿಕಾರಕ್ಕೆ ಬರುವ ಮುಂಚೆ ನೀಡಿದ್ದ ಮಾತಿನಂತೆ ನಡೆದಿದೆ. ದಾಖಲೆಗಳಿಲ್ಲದೆಯೂ ಯಾರು ವಾಸ ಮಾಡುತ್ತಿದ್ದಾರೋ ಆ ವಸತಿಗೆ ಅವರೇ ಒಡೆಯರಾಗುತ್ತಾರೆ.

ರಾಜ್ಯದ ಸಾವಿರಾರು ತಾಂಡಾ, ಹಟ್ಟಿ, ದೊಡ್ಡಿ, ಪಾಳ್ಯ ಮತ್ತು ಕ್ಯಾಂಪ್‌ಗಳಂತಹ ದಾಖಲೆ ಇಲ್ಲದ ಜನವಸತಿ ಪ್ರದೇಶಗಳಲ್ಲಿ ವಾಸವಾಗಿರುವ ವಾಸದ ಮನೆಗಳನ್ನು ಇನ್ನುಮುಂದೆ ವಾಸವಾಗಿರುವವರ ಹೆಸರಿನಲ್ಲೇ ನೋಂದಣಿ ಮಾಡಿಕೊಳ್ಳುವ ಹಕ್ಕನ್ನು ನೀಡುವ ಮಹತ್ವದ ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಅಧಿನಿಯಮಕ್ಕೆ ವಿಧಾನಸಭೆ ಶುಕ್ರವಾರ ಒಪ್ಪಿಗೆ ನೀಡಿದೆ.

ಇದರಿಂದ ರಾಜ್ಯದ ಸಾವಿರಾರು ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕರ ಹಟ್ಟಿ, ಮಜಾರೆ ಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್‌, ಕಾಲೋನಿಗಳಂತಹ ದಾಖಲೆಯಲ್ಲಿಲ್ಲದ ಜನವಸತಿಗಳಲ್ಲಿ ವಾಸಿಸುತ್ತಿರುವ ವಾಸದ ಮನೆಗಳನ್ನು, ಅದರಲ್ಲಿ ವಾಸಿಸುತ್ತಿರುವವರು ನಿವೇಶನ ಸಹಿತವಾಗಿ ನೋಂದಣಿ ಮಾಡಿಕೊಳ್ಳುವ ಹಕ್ಕು ಪಡೆಯುತ್ತಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಈ ವಿಧೇಯಕವನ್ನು ಮಂಡಿಸಿ ದರು. ಇದಕ್ಕೆ ಪಕ್ಷಭೇದ ಮರೆತು ಎಲ್ಲ ಪಕ್ಷ ಶಾಸಕರು ಸರ್ವಾನುಮತದ ಒಪ್ಪಿಗೆ ನೀಡಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿ, ಸ್ವಾತಂತ್ರ್ಯಾನಂತರ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಬಂದ ನಂತರ ಇದೀಗ ನಮ್ಮ ಸರ್ಕಾರ ತಂದಿರುವ ಐತಿಹಾಸಿಕ ವಿಧೇಯಕ ದಿಂದ ಲಕ್ಷಾಂತರ ಬಡವರಿಗೆ ಅನುಕೂಲವಾಗಲಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ನೀಡಿದ್ದ ಮಾತಿನಂತೆ ನಡೆದಿದೆ. ದಾಖಲೆಗಳಿಲ್ಲ ದೆಯೂ ಯಾರು ವಾಸ ಮಾಡುತ್ತಿದ್ದಾರೋ ಆ ವಸತಿಗೆ ಅವರೇ ಒಡೆಯರಾಗುತ್ತಾರೆ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಈ ತಿದ್ದುಪಡಿಯನ್ನು ತರಲು ಶಾಸಕ ಶಿವಮೂರ್ತಿ ನಾಯಕ್‌ ಮತ್ತಿತರರು ಒತ್ತಾಯ ಮಾಡುತ್ತಲೇ ಇದ್ದರು. ಹೀಗಾಗಿ ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಗಳಾದ ನರಸಿಂಹಯ್ಯ ಅಧ್ಯಕ್ಷತೆಯಲ್ಲಿ ಕಾನೂನು ಇಲಾಖೆಯ ನಿವೃತ್ತ ಕಾರ್ಯ ದರ್ಶಿಗಳಾದ ಎಂ.ಆರ್‌. ಹೆಗ್ಗಡೆ, ನಿವೃತ್ತ ಜಂಟಿ ನಿರ್ದೇಶಕ ಅನಂತ ರಾಮಯ್ಯ, ಕಾನೂನು ಸಚಿವರ ನ್ನೊಳಗೊಂಡ ಸಮಿತಿ ರಚಿಸಿ, ವರದಿ ಪಡೆದು, ಹೈಕೋರ್ಟ್‌ ನ್ಯಾಯಾಧೀಶರ ಜೊತೆ ಚರ್ಚಿಸಿ ಲಾಯಿತು. ಬಳಿಕ ವಾಸ ಮಾಡುತ್ತಿರುವವರೇ ವಾರಸುದಾರರಾ ಗುತ್ತಾರೆ ಎಂಬ ಕಾಯ್ದೆ ತರಲಾಗಿದೆ ಎಂದು ವಿವರಿಸಿದರು.

ಇದೊಂದು ಅತ್ಯಂತ ಕ್ರಾಂತಿಕಾರಕ , ಪ್ರಗತಿ ದಾಯಕ ವಿಧೇಯಕವಾಗಿದ್ದು, ಸುವರ್ಣಾಕ್ಷರದಲ್ಲಿ ಬರೆದಿಡುವಂತ ಹದ್ದು. ಸ್ಪೀಕರ್‌ ಇಂತಹ ವಿಧೇಯಕ ಸ್ವೀಕಾರ ಮಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ಹಾಗೂ ಸದನದಲ್ಲಿ ವಿರೋಧಪಕ್ಷದ ನಾಯಕರು, ಸದಸ್ಯರು, ಜೆಡಿಎಸ್‌ ನಾಯಕರು, ಎಲ್ಲ ಸದಸ್ಯರು ಒಕ್ಕೊರಲಿನಿಂದ ಒಪ್ಪಿಗೆ ಕೊಟ್ಟಿದ್ದಕ್ಕಾಗಿ ಅವರೆಲ್ಲರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು.
ಸ್ಪೀಕರ್‌ ಕೋಳಿವಾಡ, ಸ್ಪೀಕರ್‌ ಪೀಠದಲ್ಲಿ ನಾನಿರುವಾಗಲೇ ವಾಸ ಮಾಡುವವನೇ ಆ ಮನೆಯ ಒಡೆಯ ಎನ್ನುವಂತಹ ಕಾಯ್ದೆ ಜಾರಿಯಾಗಿರುವುದು ನನ್ನ ಪುಣ್ಯ. ಇದಕ್ಕೆ ಒಕ್ಕೊರಲಿನಿಂದ ಒಪ್ಪಿಗೆ ಕೊಟ್ಟಸದನಕ್ಕೆ ನಾನು ವಂದಿಸುತ್ತೇನೆ ಎಂದರು.

ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಮಾತನಾಡಿ, ವಾಸಿಸುವವರೇ ಮನೆ ವಾರಸುದಾರರು ಎಂಬುದನ್ನು ಘೋಷಿಸಲು ತಂದಿರುವ ವಿಧೇಯಕ ಅತ್ಯುತ್ತಮವಾಗಿದೆ. ಕೆಳವರ್ಗದ, ಸಮಾಜದಲ್ಲಿ ಗುರುತಿಸಿಕೊಂಡಿರದ ಅನೇಕ ಸಮುದಾಯಗಳಿಗೆ ಇದರಿಂದ ಉಪಯೋಗವಾಗಿದೆ. ಅನೇಕ ವರ್ಷಗಳಿಂದ ನಾವು ಇದನ್ನು ತರಬೇಕೆಂದು ಬೆಂಬಲಿಸುತ್ತಲೇ ಬಂದಿದ್ದೆವು. ಇದರಲ್ಲಿ ಇನ್ನೂ ಯಾವುದಾದರೂ ಸಣ್ಣ-ಪುಟ್ಟಕಾನೂನು ತೊಡಕು ಗಳಿದ್ದಲ್ಲಿ ಸರಿಪಡಿಸಿ ತಕ್ಷಣದಿಂದ ಜಾರಿಯಾಗಲು ಜಿಲ್ಲಾಧಿಕಾರಿಗಳಿಗೆ ಸ್ಪಷ್ಟಆದೇಶ ನೀಡಬೇಕು. ಆ ಮೂಲಕ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ಅದರ ಫಲ ಸಿಗುವಂತಾಗಬೇಕು. ವಿಧೇಯಕವನ್ನು ಎಲ್ಲರೂ ಪಕ್ಷಭೇದ ಮರೆತು ಜಾರಿಗೆ ತಂದಿದ್ದು, ಇದೊಂದು ಉತ್ತಮ ಕೆಲಸ ಎಂದು ಹೇಳಿದರು. ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆ ತರುವಾಗ ತಮ್ಮ ಹೋರಾಟದ ದಿನಗಳನ್ನು ನೆನೆಸಿಕೊಂಡರು.

ವಾಸಿಸುವವರಿಗೆ ಮಾಲೀಕತ್ವ ನೀಡುವ ಮೂಲಕ ಇಂದು ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದೇವೆ. ಇಂತಹ ಸನ್ನಿವೇಶದಲ್ಲಿ ನಾನಿರುವುದು ನಮ್ಮ ಪುಣ್ಯ, ಇದೊಂದು ಇತಿಹಾಸ ಸೃಷ್ಟಿಮಾಡುವ ಕೆಲಸ ಎಂದು ಹೇಳಿದರು. 
ಸಚಿವ ಆಂಜನೇಯ, ಶಾಸಕ ಶಿವಮೂರ್ತಿ ನಾಯಕ್‌, ಮಾಜಿ ಸಚಿವರಾದ ಪಿ.ಟಿ.ಪರಮೇಶ್ವರ್‌ ನಾಯಕ್‌, ಶಿವರಾಜ್‌ ತಂಗಡಗಿ, ಶಾಸಕರಾದ ಮಾನಪ್ಪ ವಜ್ಜಲ್‌, ಬಿ.ಬಿ.ನಿಂಗಯ್ಯ ಮತ್ತಿತರರು ಮಾತನಾಡಿ, ಅನೇಕ ತಳ ವರ್ಗದ ವಸತಿಹೀನ ಜನಾಂಗಕ್ಕೆ ಕಂದಾಯ ಗ್ರಾಮ, ಗ್ರಾಮ ಮಾನ್ಯತೆಯನ್ನು ಸರ್ಕಾರ ಕಲ್ಪಿಸಿಕೊಟ್ಟಿದೆ. ಧ್ವನಿ ಇಲ್ಲದವರಿಗೆ ಧ್ವನಿ ನೀಡಿದೆ. ಇದು ಯುಗಾದಿಯ ಹೊಸವರ್ಷಕ್ಕೆ ಸರ್ಕಾರ ಕೊಟ್ಟಉಡುಗೊರೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಇಂತಹ ಉತ್ತಮ ವಿಧೇಯಕವನ್ನು ತಂದ ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇವೆ ಎಂದು ಹೇಳಿದರು.

ಇದರಿಂದ ಯಾರಿಗೆ ಲಾಭ? ಯಾರಿಗೆ ನಷ್ಟ?

 ತಿದ್ದುಪಡಿಯಿಂದಾಗಿ ಖಾಸಗಿ ಜಮೀನು ಮತ್ತು ಸರ್ಕಾರಿ ಗೋಮಾಳ ಸೇರಿದಂತೆ ದಾಖಲೆಗಳಿಲ್ಲದ ಜನವಸತಿ ಪ್ರದೇಶದಲ್ಲಿರುವ ಮನೆಗಳು ಈಗ ವಾಸಿಸುತ್ತಿರುವವರ ಹೆಸರಿನಲ್ಲೇ ನೋಂದಣಿ ಆಗುತ್ತವೆ. ಹಿಂದೆ ಉಳುವವನೇ ಒಡೆಯ ನೀತಿಯ ಮಾದರಿಯಲ್ಲೇ ಈಗ ತನ್ನದಲ್ಲದ ಜಮೀನಿನಲ್ಲಿ ತಲೆಮಾರುಗಳಿಂದ ವಾಸಿಸುತ್ತಿರುವವನೇ ಆ ಮನೆ ಹಾಗೂ ಜಾಗಕ್ಕೆ ಮಾಲೀಕನಾಗುತ್ತಾನೆ. ಸುಮಾರು 1 ಸಾವಿರದಿಂದ 5 ಸಾವಿರ ಜನರು ವಾಸಿಸುವ ದಾಖಲೆ ಇಲ್ಲದ ರಾಜ್ಯದಲ್ಲಿ 58 ಸಾವಿರ ಜನವಸತಿಗಳು ಇವೆ. ಈ ಪೈಕಿ ಕೆಲವು ಖಾಸಗಿ ಜಮೀನುಗಳಲ್ಲೂ, ಕೆಲವು ಆಯಾ ಗ್ರಾಮದ ಬಳಕೆಗೆ ಬಿಟ್ಟಿರುವ ಜಮೀನುಗಳಲ್ಲೂ, ಕೆಲವೆಡೆ ಕೈಗಾರಿಕಾ ವಸಾಹತುಗಳ ಅಂಚಿನಲ್ಲೂ ಇವೆ. ಆದರೆ ಈ ಎಲ್ಲಾ ಜನವಸತಿಗಳಿಗೆ ದಾಖಲೆಗಳಿಲ್ಲ ಎಂಬುದು ಗಮನಾರ್ಹ. ಹಾಗಂತ ನಗರ ಪ್ರದೇಶದ ಅಕ್ರಮ ಮನೆಗಳು ಈ ಕಾಯ್ದೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎನ್ನುತ್ತಾರೆ ವಿಧೇಯಕ ಮಂಡನೆಗೆ ಕಾರಣರಾದ ಮಾಯಕೊಂಡ ಶಾಸಕ ಕೆ. ಶಿವಮೂರ್ತಿ ನಾಯಕ್‌

ವರದಿ: ಕನ್ನಡ ಪ್ರಭ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೌದು ನಾನು ಟಿ ಮಾರಾಟಗಾರ, ಕಾಂಗ್ರೆಸ್ AI ವಿಡಿಯೋಗೆ ಸೂಕ್ತ ಸ್ಥಳದಲ್ಲಿ ತಿರುಗೇಟು ಕೊಟ್ಟ ಮೋದಿ
ದುರ್ಗೆಯ ಜಾಗೋ ಮಾ ಸಾಕು ಜಾತ್ಯಾತೀತ ಗೀತೆ ಹಾಡಿ: ಪಶ್ಚಿಮ ಬಂಗಾಳದಲ್ಲಿ ಗಾಯಕಿಗೆ ಕಿರುಕುಳ: ಬಂಧನ