ಉಳಿತಾಯ ಖಾತೆ ಬಡ್ಡಿ ದರ ಕಡಿಮೆಯಾಯಿತೆಂಬ ವ್ಯಥೆಯೇ? ಇಲ್ಲಿದೆ ನಿಮಗೆ ಪರ್ಯಾಯ ಮಾರ್ಗ

By Suvarna Web DeskFirst Published Sep 3, 2017, 9:37 PM IST
Highlights

ನಮ್ಮಲ್ಲಿ ಬಹಳಷ್ಟು ಜನರು ಈಗಲೂ ಕೂಡ ತಮ್ಮ ಹಣವನ್ನು ಬ್ಯಾಂಕ್ ಅಕೌಂಟ್’ಗಳಲ್ಲೇ ಇರಿಸಲು ಇಷ್ಟಪಡುತ್ತಾರೆ. ಇದಕ್ಕೆ ಕಾರಣ, ಬೇರೆಡೆ ಹಣ ಹೂಡಲು ಭಯವಿರಬಹುದು; ಬ್ಯಾಂಕ್’ನಲ್ಲಿದ್ದರೆ ಸುಲಭವಾಗಿ ಹಣ ಡ್ರಾ ಮಾಡಿಕೊಳ್ಳಬಹುದೆಂಬ ಭಾವನೆಯಿಂದಿರಬಹುದು; ಅಥವಾ ಹಣಕಾಸು ಕುರಿತು ಅರಿವು ಕಡಿಮೆಯಾದ್ದರಿಂದಿರಬಹುದು.

ದೇಶದ ಪ್ರಮುಖ ಬ್ಯಾಂಕೊಂದು ಇತ್ತೀಚೆಗೆ ತನ್ನ ಸೇವಿಂಗ್ಸ್ ಬ್ಯಾಂಕ್ ಅಕೌಂಟ್’ಗಳಿಗೆ ನೀಡುವ ಬಡ್ಡಿ ದರದಲ್ಲಿ ಪರಿಷ್ಕರಣೆ ಮಾಡಿತು. ಉಳಿತಾಯ ಖಾತೆಗಳಲ್ಲಿ ಒಂದು ಕೋಟಿ ರೂ.ವರೆಗಿನ ಠೇವಣಿಗಳ ಮೇಲಿನ ಬಡ್ಡಿದರದಲ್ಲಿ 50 ಮೂಲಾಂಕಗಳಷ್ಟು ಕಡಿಮೆ ಮಾಡಿದೆ. ಇದರಿಂದಾಗಿ ಉಳಿತಾಯ ಠೇವಣಿಗಳಿಗೆ ವಾರ್ಷಿಕವಾಗಿ ನೀಡುವ ಬಡ್ಡಿ ಪ್ರಮಾಣವು 4%ನಿಂದ 3.5%ಗೆ ಇಳಿಕೆಯಾದಂತಾಗಿದೆ. ಈ ಬೆಳವಣಿಗೆಯಾದ ಬೆನ್ನಲ್ಲೇ ಇತರ ಕೆಲ ಪ್ರಮುಖ ಬ್ಯಾಂಕುಗಳೂ ಕೂಡ ಇಂಥದ್ದೇ ನಿರ್ಧಾರ ಕೈಗೊಂಡವು.

ನಮ್ಮಲ್ಲಿ ಬಹಳಷ್ಟು ಜನರು ಈಗಲೂ ಕೂಡ ತಮ್ಮ ಹಣವನ್ನು ಬ್ಯಾಂಕ್ ಅಕೌಂಟ್’ಗಳಲ್ಲೇ ಇರಿಸಲು ಇಷ್ಟಪಡುತ್ತಾರೆ. ಇದಕ್ಕೆ ಕಾರಣ, ಬೇರೆಡೆ ಹಣ ಹೂಡಲು ಭಯವಿರಬಹುದು; ಬ್ಯಾಂಕ್’ನಲ್ಲಿದ್ದರೆ ಸುಲಭವಾಗಿ ಹಣ ಡ್ರಾ ಮಾಡಿಕೊಳ್ಳಬಹುದೆಂಬ ಭಾವನೆಯಿಂದಿರಬಹುದು; ಅಥವಾ ಹಣಕಾಸು ಕುರಿತು ಅರಿವು ಕಡಿಮೆಯಾದ್ದರಿಂದಿರಬಹುದು.

ದೊಡ್ಡ ಮೊತ್ತವನ್ನು ಉಳಿತಾಯ ಖಾತೆಯಲ್ಲಿ ಇರಿಸದಿರಿ:
ಎಸ್’ಬಿ ಅಕೌಂಟ್’ನಲ್ಲಿರುವ ನಿಮ್ಮ ಹಣಕ್ಕೆ ವಾರ್ಷಿಕ 3.5% ಮಾತ್ರ ಬಡ್ಡಿ ಸಿಗುವ ಹಿನ್ನೆಲೆಯಲ್ಲಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ದೊಡ್ಡ ಮೊತ್ತ ಠೇವಣಿ ಇಡುವುದರಿಂದ ಹೆಚ್ಚು ಪ್ರಯೋಜನವಾಗುವುದಿಲ್ಲ. ಒಂದು ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಉಳಿತಾಯ ಬ್ಯಾಂಕ್ ಖಾತೆಗಳಲ್ಲಿ ಜಮಾವಣೆ ಮಾಡಿದವರಿಗೆ ಬಡ್ಡಿ ದರ ಇಳಿಕೆಯ ಬಿಸಿ ಇಲ್ಲ. ಆದರೆ, ಒಂದು ಕೋಟಿಗಿಂತ ಕಡಿಮೆ ಹಣ ಇಟ್ಟಿರುವವರು ತಮ್ಮ ಹಣವನ್ನು ಬೇರೆಡೆ ಹೂಡಿಕೆ ಮಾಡುವತ್ತ ಗಮನ ಹರಿಸುವುದು ಒಳ್ಳೆಯದು. ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್), ಮ್ಯುಚುವಲ್ ಫಂಡ್, ಡೆಬ್ಟ್ ಫಂಡ್ ಇತ್ಯಾದಿ ಆಯ್ಕೆಗಳು ನಿಮ್ಮ ಮುಂದಿವೆ. ನಿಮ್ಮ ಹಣಕಾಸು ಸ್ಥಿತಿ, ಅಗತ್ಯಕ್ಕೆ ತಕ್ಕಂತೆ ನೀವು ಆಯ್ಕೆ ಮಾಡಿಕೊಳ್ಳಿ.

ಒಳ್ಳೆಯ ಬಡ್ಡಿದರ ಕೊಡುವ ಬೇರೆ ಬ್ಯಾಂಕ್ ಹುಡುಕಿರಿ: 
ರಾಷ್ಟ್ರೀಕೃತ ಹಾಗೂ ದೊಡ್ಡ ಬ್ಯಾಂಕುಗಳು ಬಡ್ಡಿದರ ಕಡಿಮೆ ಮಾಡಿವೆ. ಆದರೆ, ಹೊಸದಾಗಿ ಪರವಾನಿಗೆ ಪಡೆದ ಖಾಸಗಿ ಬ್ಯಾಂಕ್’ಗಳು ಹಾಗೂ ಪ್ರಾದೇಶಿಕ ಬ್ಯಾಂಕುಗಳು ಜನರನ್ನು ಆಕರ್ಷಿಸುವ ಸಲುವಾಗಿ ತಮ್ಮ ಉಳಿತಾಯ ಖಾತೆಗಳ ಮೇಲೆ ಒಳ್ಳೆಯ ಬಡ್ಡಿ ನೀಡುತ್ತಿವೆ. ನೀವು ಅಂತಹ ಬ್ಯಾಂಕ್’ಗಳಲ್ಲಿ ಖಾತೆ ತೆರೆದು ನಿಮ್ಮ ಹಣವನ್ನು ಠೇವಣಿ ಇಡಬಹುದು.

ಸೇವಿಂಗ್ ಅಕೌಂಟನ್ನು ಸ್ವೀಪ್ ಅಕೌಂಟಾಗಿ ಮಾರ್ಪಡಿಸಿ:
ಬಡ್ಡಿದರ ಕಡಿಮೆ ಇದೆ ಎಂಬ ಒಂದೇ ಕಾರಣಕ್ಕೆ ನಿಮ್ಮ ಉಳಿತಾಯ ಖಾತೆಯನ್ನು ಕೈಬಿಡಲು ಮನಸ್ಸಾಗುತ್ತಿಲ್ಲವಾ? ಹಾಗಿದ್ದರೆ, ನೀವು ನಿಮ್ಮ ಸೇವಿಂಗ್ಸ್ ಬ್ಯಾಂಕ್ ಅಕೌಂಟ್’ನಲ್ಲಿ ಸ್ವಲ್ಪ ಮಾರ್ಪಾಡು ತರಲು ಯತ್ನಿಸಿ. ನಿಮ್ಮ ಖಾತೆಗೆ ಸ್ವೀಪ್-ಇನ್ ಸೌಲಭ್ಯ ಸೇರಿಸಿರಿ. ಹೀಗೆ ಮಾಡಿದಾಗ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವು ನಿಶ್ಚಿತ ಠೇವಣಿಯಾಗಿ ಪರಿವರ್ತಿವಾಗುತ್ತವೆ. ಖಾತೆಯಿಂದ ಹಣ ಡ್ರಾ ಮಾಡಬಯಸಿದಾಗ ನೀವು ಯಾವಾಗ ಬೇಕಾದರೂ ಈ ಫಿಕ್ಸೆಡ್ ಡೆಪಾಸಿಟನ್ನು ನಿಲ್ಲಿಸಬಹುದು. ಇಂತಹ ಸ್ವೀಪ್-ಇನ್ ಬ್ಯಾಂಕ್ ಅಕೌಂಟ್’ಗಳಿಂದ ಒಂದೇ ತೊಂದರೆ ಎಂದರೆ ನಿಮಗೆ ಸಿಗುವ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ.

ಡೆಬ್ಟ್ ಫಂಡ್’ನಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಿ:
ಡೆಬ್ಟ್ ಫಂಡ್'ನಲ್ಲಿ ಸಿಗುವ ಲಾಭಕ್ಕೂ ಬಡ್ಡಿ ದರಕ್ಕೂ 'ವಿರುದ್ಧ ಅನುಪಾತ' (Inversly proportional) ಇರುತ್ತದೆ. ಹೀಗಿರುವಾಗ ನಿಮಗೆ ಸಿಗುವ ಬಡ್ಡಿ ದರವು ಕಡಿಮೆಯಾಗಿದ್ದರೆ ಡೆಬ್ಟ್ ಫಂಡ್'ನಲ್ಲಿ ನಿಮ್ಮ ಹಣ ಹೂಡಿಕೆ ಮಾಡಲು ಪ್ರಶಸ್ತಿ ಸಮಯವಾಗಿರುತ್ತದೆ. ದೀರ್ಘಕಾಲದ ಹೂಡಿಕೆ ಮಾಡಲು ನಿಮಗೆ ಇಷ್ಟವಿಲ್ಲದಿದ್ದರೆ 91 ದಿನಗಳವರೆಗೆ ಸರಾಸರಿ ಮೆಚೂರಿಟಿ ಅವಧಿ ಇರುವ ಡೆಬ್ಟ್ ಫಂಡ್'ಗಳನ್ನು ನೀವು ಉಪಯೋಗಿಸಬಹುದು.

ಉಳಿತಾಯ ಖಾತೆ ಠೇವಣಿ ದರದ ಇಳಿಕೆಯನ್ನು ನೀವು ಇಂತಹ ಪರ್ಯಾಯ ಹೂಡಿಕೆಗಳ ಮೂಲಕ ಸರಿದೂಗಿಸಬಹುದು. ಇದರಿಂದ ನಿಮ್ಮ ಉಳಿತಾಯ ಖಾತೆಯಲ್ಲಿ ಹೆಚ್ಚು ಹಣ ನಿರುಪಯುಕ್ತವಾಗಿ ಬೀಳುವುದನ್ನು ತಪ್ಪಿಸಬಹುದು.

- ಅಧಿಲ್ ಶೆಟ್ಟಿ, ಸಿಇಒ, ಬ್ಯಾಂಕ್ ಬಜಾರ್ ಡಾಟ್ ಕಾಮ್

click me!